Monday, December 15, 2008

ಹಲೋ ಗೆಳೆಯರೇ, ತುಂಬಾ ದಿನಗಳಾಗಿದ್ವು ನನ್ನ ಬ್ಲಾಗ್ ಅಪ್ಡೇಟ್ ಮಾಡಿ, thank god ಕಡೆಗೂ ಈಗ ಸಮಯ ಸಿಕ್ಕಿದೆ. ಕೆಲ ದಿನಗಳಿಂದ ಒಂದು ಮಾತು ಮನಸಲ್ಲಿ ಉತ್ತರ ಸಿಗದೆ ಗೊಂದಲದ ಗೂಡಾಗಿದೆ ರೀ. ಈ ಸಾರಿ ಏನು ಬರೆಯೋದು ಅಂತಾನೆ ಗೊತ್ತಾಗ್ತಿರ್ಲಿಲ್ಲ, ಆದ್ರೆ ಒಂದ್ ವಿಷ್ಯ ನಿಮ್ ಹತ್ರ ಹೇಳಲೇ ಬೇಕು. ಎನ್.ಡಿಟಿವಿ ಇಮ್ಯಾಜಿನ್ ನಲ್ಲಿ 'ಜಸುಬೇನ್ ಜಯಂತಿ ಲಾಲ್ ಜೋಷಿ ಕಿ ಜಾಯಿಂಟ್ ಫ್ಯಾಮಿಲಿ' ಅನ್ನೋ ಧಾರಾವಾಹಿ ಪ್ರಸಾರವಾಗುತ್ತೆ. ಅದೊಂದು ತುಂಬು ಕುಟುಂಬದ ಸುತ್ತ ಸುತ್ತುವ ಕಥೆ. ಈಗಲೂ ಅವಿಭಕ್ತ ಕುಟುಂಬಗಳಿವೆ ಅನ್ನೋದನ್ನ, ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನೋದನ್ನ ಪದೇ ಪದೇ ನಿರ್ದೇಶಕರು ಪ್ರೂವ್ ಮಾಡ್ತಾನೆ ಇರ್ತಾರೆ. ಕೆಲವೊಮ್ಮೆ ತೀರಾ ಅತಿ ಅನ್ನಿಸಿದ್ರೂ 'ಜಸುಬೇನ್...' ತನ್ನ ಲವಲವಿಕೆಯಿಂದ ನೋಡುಗರಿಗೆ ಇಷ್ಟ ಆಗುತ್ತೆ.
ಪೀಠಿಕೆ ಜಾಸ್ತಿ ಆಯ್ತೇನೋ, ಆದ್ರೆ ಹೇಳ್ತೀನಿ ಕೇಳಿ.

ಇತ್ತೀಚಿನ ಎಪಿಸೋಡ್ ಗಳಲ್ಲಿ ಇದರಲ್ಲಿ ಬರುವ ನಂದಿನಿ ಪಾತ್ರಧಾರಿಗೆ ಆಕೆಯ ಲಂಗ್ಸ್ ಶೇ೯೫ ರಷ್ಟು ಫೇಲ್ ಆಗುತ್ತೆ. ಆಕೆ ಬದುಕುವ ಸಂಭವ ತೀರಾ ಕಮ್ಮಿ ಅಂತಾರೆ ವೈದ್ಯರು. ಇದನ್ನೇ ಸುಮಾರು ೨-೩ ವಾರ ಎಳೆದು ಎಳೆದು ಅಂತು ದೇವರ ದಯೆಯಿಂದ ಆಕೆ ಹುಶಾರಾಗೆ ಬಿಡ್ತಾಳೆ. ಇದೆ ಕಾರಣಕ್ಕೆ ಮುರಿದು ಬೀಳಲಿದ್ದ ಮದುವೇನು ಸಾಂಗವಾಗಿ ನೆರವೇರುತ್ತೆ. ನಿನ್ನೆಯಂತೂ ಇದೆಲ್ಲ ವಾಸ್ತವ ಆಗಿದ್ರೆ ಎಷ್ಟು ಚೆನ್ನ ಆಲ್ವಾ ಅನ್ನಿಸ್ತಿತ್ತು. ಯಾಕೆ ಅಂತೀರಾ? ಸುಮಾರು ೨ ವಾರಗಳ ಹಿಂದಷ್ಟೇ ನಮ್ಮ ಮನೆಗೆ ಸಿಬಿಲ್ ಅನ್ನೋ ಹುಡುಗಿ ಬಂದಿದ್ದಳು. ನಮ್ಮ ಪಿಜಿ ಮಾಲೀಕರ ಸಂಬಂಧಿ. ನೋಡೋಕೆ ಅದೆಷ್ಟು ಚೆನ್ನ ಅವಳು. ಚೆನ್ನಾಗಿ ಭರತ ನಾಟ್ಯ ಮಾಡ್ತಾಳೆ, ನರ್ಸಿಂಗ್ ಮಾಡಿದ್ದಾಳೆ. ಒಳ್ಳೆ ಕಡೆ ಕೆಲಸ ಸಿಕ್ಕರೆ ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೊಳೋ ಆಸೆ ಜವಾಬ್ದಾರಿ ಈಡೇರುತ್ತೆ ಅಂತ ಹೇಳ್ತಾ ಇದ್ಲು. ಅವಳ ಮುಖದಲ್ಲಿದ್ದ ಮುಗ್ಧತೆ ನಂಗೆ ತುಂಬಾ ಇಷ್ಟ ಆಯ್ತು. ಆದ್ರೆ ಈ ವಿಧಿ ಅನ್ನೋದಿದ್ಯಲ್ಲ? ಅದು ತುಂಬಾ ಕೆಟ್ಟದ್ದು. ಯಾವಾಗಲೂ ಒಳ್ಳೆವ್ರಂದ್ರೆ ಅದಕ್ಕೆ ತುಂಬಾ ಇಷ್ಟ ಇರ್ಬೇಕು. ಮೊನ್ನೆ ಮೊನ್ನೆ ತಾನೆ ನೋಡಿದ್ದ ಈ ಮುದ್ದು ಹುಡುಗಿ ಮಲೇರಿಯಾ ಬಂದು ಆಸ್ಪತ್ರೆ ಸೇರಿದಳು. ಅಲ್ಲಿ ೩ ದಿನ ಕಳೆದ ಮೇಲೆ ಗೊತ್ತಾಯ್ತು ಅದು ಬರೀ ಮಲೇರಿಯಾ ಅಲ್ಲ, ಡೆಂಗ್ಯೂ, ಮತ್ತು ನ್ಯುಮೋನಿಯಾ ಕೂಡ ಆ ದೇಹವನ್ನು ಕಿತ್ತು ತಿನ್ನ ತೊಡಗಿವೆ ಅಂತಾ. ಅಬ್ಬಾ, ವೈದ್ಯರು ಬದುಕುವ ಸಂಭವ ಕಮ್ಮಿ ಅಂದ್ರು.

ಅಕ್ಷರಶಃ ಬೆಳದಿಂಗಳ ಬಾಲೆಯ ಹಾಗಿದ್ದ ಆಕೆ ಈಗ ಹೇಗಿದ್ದಾಳೆ ಗೊತ್ತಾ? ನಮಗೆಲ್ಲ ಉಳಿದಿದ್ದ ಒಂದೇ ದಾರಿ ಆ ದೇವ್ರು. ಒಂದು ಕ್ಷಣ ಬಿಡದೆ ಪ್ರಾರ್ಥನೆ ಮಾಡಿದ್ವಿ. ಸಿಕ್ಕ ಸಿಕ್ಕವರಿಗೆಲ್ಲ ದೇವರಲ್ಲಿ ಬೇಡಿ ಅಂತ ಎಸ್ಸೆಮ್ಮೆಸ್ಸು ಕಳಿಸ್ದೆ ನಾನು. ಕೆಲವು ಸಹೃದಯಿಗಳು ಅದಕ್ಕೆ ಸ್ಪಂದಿಸಿದರು ಕೂಡ. ಆಗ ನನ್ನ ಮನಸ್ಸಿಗೆ ಇದೆ ನಂದಿನಿ ಬಂದಳು. ಇನ್ನೇನು ಸಾವಿನ ಮನೆ ಕದ ತಟ್ಟಿ ನಿಂತವಳು ಅದೆಷ್ಟು ಚೆನ್ನಾಗಿ ಗುಣವಾದಳು? ಸಿಬಿಲ್ ಗೂ ಹಾಗೆ ಆದ್ರೆ? ಛೆ! ತಿಳಿದು ತಿಳಿದು ನಾನ್ಯಾಕೆ ಒಳ್ಳೆ ಫಿಲ್ಮಿ ಆಗಿ ಯೋಚಿಸ್ತಿದ್ದಿನಿ? ವಾಸ್ತವ ಬೇರೆ ತಾನೆ? ಹೇಳಿ ಕೇಳಿ ಆಕೆ ನನ್ನ ಹತ್ತಿರದ ಗೆಳತಿಯಲ್ಲ, ನನ್ನ ಸಂಬಂಧಿಯಲ್ಲ. ಆದ್ರೆ ಅದೊಂದು ಜೀವ ತಾನೆ? ಅದನ್ನು ನಂಬಿ ಕುಳಿತ ಮತ್ತಿಬ್ಬರು ಅಮಾಯಕರು ಕೈಲಿ ಜಪ ಸರ ಹಿಡಿದು ಹಗಲು ರಾತ್ರಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ ( ಆಕೆಯ ತಂದೆ ತಾಯಿ). ದೇವರ ದಯೆ ನಮ್ಮ ಕಡೆ ಇದ್ಯೇನೋ ಆಕೆ ಆಶ್ಚರ್ಯವೆಂಬಂತೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಇದೊಂದು ಮಾತು ನಮ್ಮಲ್ಲಿ ಉತ್ಸಾಹ ಮೊಡಿಸಿದೆ. ಸಿನಿಮಾ ಸೀರಿಯಲ್ ಗಳಲ್ಲಿ ಡೈರೆಕ್ಟರುತನಗೆ ಬೇಕಾದ ಹಾಗೆ ಪಾತ್ರಗಳನ್ನು ಸಾಯಿಸಿ ಮತ್ತೆ ಬದುಕಿಸುವುದು ಅವರಿಗೆ ರೀಲ್ ಕತ್ತರಿಸಿದಷ್ಟೇ ಸುಲಭ. ಆದ್ರೆ ರಿಯಲ್ ಲೈಫ್ ಹಾಗಲ್ಲವಲ್ಲ? ಎಲ್ಲಕ್ಕೂ ಸೂತ್ರಧಾರ ಅವನೇ ತಾನೆ? ಸದ್ಯ ದೇವರ ಕೃಪೆಯಿಂದ ಎಲ್ಲಾ ಒಳ್ಳೆದಾಗಲಿ ಅನ್ನೋದು ನಮ್ಮೆಲ್ಲರ ಆಶಯ. ನೀವು ಈ ಲೇಖನ ನೋಡಿದ್ರೆ ಆ ಜೀವಕ್ಕಾಗಿ ಒಂದೇ ಒಂದು ಶುಭ ಹಾರೈಕೆಯನ್ನ ಕೊಡ್ತಿರಾ. ಅದಕ್ಕೆ ಕಾಸು ಖರ್ಚು ಮಾಡಬೇಕಿಲ್ಲ. ಮನಸ್ಸು ಮಾಡಬೇಕು ಅಷ್ಟೆ.

Friday, November 7, 2008

ಅತ್ತೆಗೊಂದು ಕಾಲ...ಸೊಸೆಗೊಂದು ಕಾಲ

ದೇನೇ ವಾಲಾ ಜಬ್ಬೀ ದೇತಾ, ದೇತಾ ಚಪ್ಪಡ್ ಫಾಡ್ ಕೇ ಅಂತಾರೆ. ಈ ಮಾತನ್ನ ನೀವೂ ಬಹಳಷ್ಟು ಸಾರಿ ಕೇಳಿರ್ತೀರಿ. ದೇವರು ವರವನು ಕೊಡೋದೇ ಹಾಗೆ, ನೋಡೋರ ಹೊಟ್ಟೆಯಲ್ಲೊಮ್ಮೆ ಕಿಚ್ಚು ಹೊತ್ತಿಕೊಳ್ಳಬೇಕು ಹಾಗಿರುತ್ತೆ ಅವನು ಕೊಡುವ ವರ. ನಮ್ಮ 'ಸೀರಿಯಲ್ ಕ್ವೀನ್' ಏಕ್ತಾ ಕಪೂರ್ ಳನ್ನೇ ನೋಡಿ. ಯಾವ ಚಾನೆಲ್ ಹಾಕಿದ್ರೂ ಬರೀ K ಸೀರಿಯಲ್ ಗಳದ್ದೇ ದರ್ಬಾರು. ಅದರಲ್ಲೂ ಕಳೆದ ೮ ವರ್ಷಗಳಿಂದ ಪ್ರಸಾರವಾಗುತ್ತಾ ಟೆಲಿವಿಷನ್ ಪ್ರಪಂಚದಲ್ಲೇ ಇತಿಹಾಸ ಬರೆದ 'ಕ್ಯೂಂ ಕೀ ಸಾಸ್ ಭೀ ಕಭೀ ಬಹೂ ಥೀ' ಒಂದು ಕಾಲದಲ್ಲಿ ಗಳಿಸಿದ ಜನಪ್ರಿಯತೆ ನಿಮಗೇ ಗೊತ್ತುಂಟು. ಇದಷ್ಟೇ ಅಲ್ಲ, ಹೆಚ್ಚು ಕಡಿಮೆ ಏಕ್ತಾಳ ಎಲ್ಲಾ ಸೀರಿಯಲ್ ಗಳೂ ಜನಪ್ರಿಯತೆ ಪಡೆದಿವೆ. ಆದ್ರೆ ಕ್ಯೂ ಕೀಯನ್ನು ಕಣ್ಣಿಗೆ ಎಣ್ಣೆ ಬಿಟ್ಟು ನೋಡುತ್ತಿದ್ದ ಅತ್ತೆ ಸೊಸೆಯರು ಈಗೇನಾದ್ರು? ಟಿಆರ್ ಪಿ ಗ್ರಾಫ್ ಇನ್ನಿಲ್ಲದಂತೆ ಏರಿಸಿಕೊಂಡ ಧಾರಾವಾಹಿ ಹೀಗೆ ನೆಲ ಕಚ್ಚಲು ಕಾರಣ ಆದ್ರೂ ಏನು? ಏನು? ಏನು!

ಅಬ್ಬಬ್ಬಾ! ನನ್ನ ಈ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸೋದಕ್ಕಿಂತ ಆ soap much better ಅಂತೀರಾ? ಖಂಡಿತ ಇಲ್ಲ. ಯಾಕೆ ಗೊತ್ತಾ? ಈ ಸಿನಿಮಾ ಸೀರಿಯಲ್ ಅನ್ನೋ ಮಾಯಾ ಪ್ರಪಂಚವೇ ಹಾಗೆ ರೀ. ಇಲ್ಲಿ ಖ್ಯಾತಿ, ಯಶಸ್ಸು ಯಾರಪ್ಪನ ಸೊತ್ತೂ ಅಲ್ಲ. ಪ್ರತಿಭೆ ಮತ್ತು ನಸೀಬು ಚೆನ್ನಾಗಿದ್ರೆ ಸಾಕು ಅಷ್ಟೇ. ಇದಕ್ಕೆ ಸರಿಯಾದ ಸದ್ಯದ ಉದಾಹರಣೆ ಬೇಕಂದ್ರೆ colours channel ನ ಒಮ್ಮೆ ತಿರುಗಿಸಿ. ರಾತ್ರಿ ೮ ಗಂಟೆಗೆ ಪ್ರಸಾರವಾಗೋ 'ಬಾಲಿಕಾ ವಧು' ಸೀರಿಯಲ್ ನ ಒಮ್ಮೆ ನೋಡಿ. ರಾಜಸ್ಥಾನದಲ್ಲಿ ಸಾಮಾನ್ಯವಾದ ಬಾಲ್ಯ ವಿವಾಹ ಈ ಧಾರಾವಾಹಿಯ ಕಥಾವಸ್ತು.

ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ಬರುವ ಆನಂದಿ( ಅವಿಕಾ ಘೋರ್) ಪಾತ್ರಧಾರಿಯನ್ನೊಮ್ಮೆ ನೋಡ್ರಿ. ಯಾಕಂತೀರಾ? ಈ ಮುದ್ದು ಹುಡುಗಿಯ ಅಭಿನಯ ಬರೀ ಎಲ್ಲರ ಮನಗೆದ್ದಿರೋದಷ್ಟೇ ಅಲ್ಲ, ಏಕ್ತಾಳ ಕ್ಯೂಂ ಕೀಗೆ ಫುಲ್ ಸ್ಟಾಪ್ ಬೀಳಲು ಬಾಲಿಕ ವಧು ಸೀರಿಯಲ್ ಒಂದು ಕಾರಣ ಅನ್ನುತ್ತೆ ಒಂದು ಮೂಲ. ವಯಸ್ಸು ಅಬ್ಬಬ್ಬಾ ಅಂದ್ರೆ ೧೨-೧೩ ಇರಬಹುದು. ತನ್ನ ಅಭಿನಯದಿಂದ ಎಲ್ಲರನ್ನೂ ಕಟ್ಟಿ ಹಾಕಿಬಿಡ್ತಾಳೆ ಈ ಪೋರಿ. ಆನಂದಿ ನಕ್ಕರೆ ಅದೇ ನಮ್ಮೂರ ಕೆರೆಗಳಲ್ಲಿ ನೋಡಿರ್ತೀವಲ್ಲಾ? ಪುಟ್ಟ ಪುಟ್ಟ ಕೆಂದಾವರೆಗಳು ಹಾಗೇ ಕಾಣ್ತಾಳೆ. ಅತ್ತರಂತೂ ನಮಗೂ ಬೇಜಾರು, ಆದ್ರೂ ನೋಡೋಕೆ ಮುದ್ದು ಮುದ್ದು. ಇನ್ನು ಅವಳ ಮಾತುಗಳೋ ಮರಿ ಹಕ್ಕಿಗಳು ಕಿಚಿಪಿಚಿಗುಟ್ಟುತ್ತವಲ್ಲ ಅಷ್ಟು ಮಧುರ. ಆದ್ರೆ ವಿಪರ್ಯಾಸ ನೋಡಿ ಶಾಲೆಗೆ ಹೋಗಿ ಅಕ್ಷರ ತಿದ್ದುವ ವಯಸ್ಸಲ್ಲಿ ಸೌಟು ಹಿಡಿಯಬೇಕಾದ ಪರಿಸ್ಥಿತಿ. ಇದು ಕೇವಲ ಆನಂದಿಯ ಕಥೆ ಮಾತ್ರ ಅಲ್ಲ. ಅಂತಹ ಅದೆಷ್ಟು ಲಕ್ಷ ಲಕ್ಷ ಆನಂದಿಯರ ಕಣ್ಣೀರ ಧಾರೆ ರಾಜಸ್ಥಾನದ ಮರಳು ಭೂಮಿಯ ತಹತಹಿಸುವ ಈ ಬಾಲ್ಯ ವಿವಾಹವೆಂಬ ಪಿಡುಗಿನ ದಾಹವನ್ನು ತಣಿಸುತ್ತಿದೆಯೋ? ಈ ವ್ಯವಸ್ಥೆ ಹೀಗೇ ಇರುವುದಾದರೆ ಕಣ್ಣೀರ ಕೋಡಿ ಹರಿಸುತ್ತಲೇ ಇರುವ ಆನಂದಿಯರು ಇನ್ನು ಮುಂದೆಯೂ ಇರುತ್ತಾರೆ. ಇನ್ನು ಈ ಸೀರಿಯಲ್ ನಲ್ಲಿ ಬರುವ ಪ್ರತಿಯೊಬ್ಬ ಪಾತ್ರಧಾರಿಯೂ ಇಷ್ಟ ಆಗ್ತಾರೆ. ಸಂಪ್ರದಾಯದ ಭೂತ, ಶ್ರೀಮಂತಿಕೆಯ ಸೊಕ್ಕು ಹೊಕ್ಕ ದಾದಿ ಅಂತೂ ಅಬ್ಬಬ್ಬಾ...ಒಟ್ಟಿನಲ್ಲಿ ಮಿಸ್ ಮಾಡದೆ ಈ ಧಾರಾವಾಹಿ ನೋಡಿ. ಮಣಭಾರದ ಆಭರಣ, ಡಿಸೈನರ್ ಉಡುಗೆ ತೊಟ್ಟ ಅತ್ತೆ ಸೊಸೆಯರ ಕಾದಾಟಕ್ಕಿಂತ ಇದು ನಿಮ್ಮ ಮನಮೆಚ್ಚದಿದ್ದರೆ ಕೇಳಿ.

Wednesday, October 22, 2008

ಝಣ ಝಣ ಕಾಂಚಾಣ...

ಚಿಕ್ಕವರಿದ್ದಾಗ ಸಿನಿಮಾ ನಟರನ್ನ ನೋಡೋದಂದ್ರೆ ಅಬ್ಬಬ್ಬಾ ಅದೇನ್ ಖುಷಿ ಅದೇನ್ ಕಥೆ? ರಾಜ್ ಕುಮಾರ್ ಬರ್ತಾರಂತೆ! ಅವ್ರು ಹಾಡ್ ಹಾಡಿ ಹೆಜ್ಜೇನೂ ಹಾಕ್ತಾರಂತೆ? ಇಂತಹ ಪ್ರಶ್ನೆಗಳೇ ಸಾಕಿದ್ದವು, ಸಿನಿಮಾ ನಟರ ಬಗೆಗಿನ ಹುಚ್ಚು ಅದೆಷ್ಟಿತ್ತು ಅನ್ನೋದನ್ನ ಹೇಳೋದಕ್ಕೆ. ನಾನೊಮ್ಮೆ ಪುಟ್ಟವಳಿದ್ದಾಗ ಮನೆಯವ್ರ ಜೊತೆಗೆ ಜಾತ್ರೆಗೆ ಹೋದಾಗ ಅಲ್ಲಿಗೆ ಅಂದಿನ ಖ್ಯಾತ ತಾರಾ ಜೋಡಿ ಮಾಲಾಶ್ರೀ ಮತ್ತು ಶಶಿ ಕುಮಾರ್ ಬಂದಿದ್ದ ನೆನಪು. ಅದೆಷ್ಟು ಜನ ಸೇರಿದ್ದರು? ಮತ್ಯಾವಾಗಲೋ ಡಾ.ರಾಜ್ ಕುಮಾರ್ ಅವರನ್ನು ಕಂಡಿದ್ದ ನೆನಪಿದೆ. ಆಗೆಲ್ಲಾ ಎಷ್ಟು ಥ್ರಿಲ್ ಆಗಿದ್ದೆ? ಮಾರನೆ ದಿನ ಕ್ಲಾಸಿಗೆ ಹೋಗಿ "ನೀನೂ ಬಂದಿದ್ದೇನೇ ನಿನ್ನೆ? ನಾನಂತೂ ಹೋಗಿದ್ನಪ್ಪಾ!" ಅಂತ ಜಂಭ ಕೊಚ್ಚಿಕೊಳ್ತಿದ್ದು ನೆನಪಾದ್ರೆ ಈಗ ನಗು ಬರುತ್ತೆ.

ಆದ್ರೀಗ ಪರಿಸ್ಥಿತಿ ತೀರಾ ಭಿನ್ನ. ನಮಗ್ಯಾವ ಸಿನಿಮಾ ತಾರೆ ಬೇಕೋ ಅವರೇ ಖುದ್ದು ಮನೆಗೆ ಬರಬಹುದು! ಮತ್ತೆ ನಾನು ರಿಯಾಲಿಟಿ ಶೋಗಳ ಬಗ್ಗೆ ಬರೀತಿದ್ದೀನಿ ಅಂತ ಕೋಪ ಮಾಡ್ಕೋಬೇಡಿ. ವಿಷಯಕ್ಕೆ ಬರ್ತೀನಿ. ಹಾಂ, ಎಲ್ಲಿದ್ದೆ? ಅದೇ ಸ್ಟಾರ್ ಗಳು ನಮ್ಮ ಮನೆಗ್ ಬರೋ ವಿಷಯ ತಾನೇ? ಕಾರಣ ಈ ರಿಯಾಲಿಟಿ ಶೋಗಳೇ ನೋಡಿ. ಯಾವ ವಾಹಿನಿಯೇ ಆಗಲೀ ಅದರಲ್ಲಿ ರಿಯಾಲಿಟಿ ಶೋ ಇಲ್ಲದಿರುವ ಮಾತೇ ಇಲ್ಲ. ಹಾಗಂತ ಜನ ಸುಮ್ನೆ ಆ ಕಾರ್ಯಕ್ರಮಗಳನ್ನ ನೋಡ್ತಾರ? ಅದಕ್ಕಾಗೇ ದೊಡ್ಡ ದೊಡ್ಡ ಸಿನಿಮಾ ತಾರೆಯರನ್ನು ತೆಕ್ಕೆಗೆ ಹಾಕಿಕೊಂಡು ಅವರಿಗೆ ಲಕ್ಷಾಂತರ ರೂಪಾಯಿಗಳನ್ನ ತೆತ್ತು ಆಯೋಜಕರು ಈ ಶೋಗಳನ್ನು ನಡೆಸುತ್ತಾರೆ.

ಟ್ರೆಂಡ್ ಹುಟ್ಟಿದ್ದು ಸ್ಟಾರ್ ಪ್ಲಸ್ ಚಾನೆಲ್ ನ ಕೌನ್ ಬನೇಗಾ ಕರೋಡ್ ಪತಿಗಾಗಿ ಅಮಿತಾಬ್ ಬಚ್ಚನ್ ಹಾಟ್ ಸೀಟ್ ನಲ್ಲಿ ಕುಳಿತಾಗ. ಹೌದು, ಬಿಗ್ ಸ್ಕ್ರೀನ್ ನಲ್ಲಿ ಮೆರೆದಾಡಿದ ಮೇರು ನಟನೊಬ್ಬ ಟೆಲಿವಿಶನ್ ನ ಪುಟ್ಟ ಪರದೆ ಮೇಲೆ ಬಂದು ಜನ ಮನ ಗೆಲ್ಲೋದು ಚಿಕ್ಕ ಸಂಗತಿಯೇನಲ್ಲ. ಆದ್ರೆ ಅಮಿತಾಬ್ ಸಿನಿಮಾಗಳು ಮೇಲಿಂದ ಮೇಲೆ ತೋಪೆದ್ದು ಕೈ ಖಾಲೀ ಇದ್ದಾಗ ಕೈ ಹಿಡಿದು ಕಾಪಾಡಿದ್ದು ಕೆಬಿಸಿ ಕಾರ್ಯಕ್ರಮ. ಕ್ರಮೇಣ ಇದೊಂಥರ ಸಾಮೂಹಿಕ ಸನ್ನಿಯ ಹಾಗೆ ಹಬ್ಬತೊಡಗಿತು. ನಂತರ ಸೋನಿ ಟೆಲಿವಿಶನ್ ನಲ್ಲಿ ಪ್ರಸಾರವಾದ ಜಿತೋ ಚಪ್ಪಡ್ ಫಾಡ್ ಕೆ ಗಾಗಿ ನಟ ಗೋವಿಂದ ಬಂದರು. ನಮ್ಮ ನೃತ್ಯ ಚತುರೆ ಮಾಧುರಿ ದೀಕ್ಷಿತ್ ಅಂತು ಒಂದ್ ಹೆಜ್ಜೆ ಮುಂದೆ ಹೋಗಿ ಅವಿವಾಹಿತ ವಧು ವರರಿಗೆ ಟಿವಿ ಯಲ್ಲಿ ಸಂದರ್ಶನ ಮಾಡಿಸಿ ಮದುವೆ ಮಾಡಿಸುವ ಕೆಲಸಾನು ಮಾಡಿದ್ದಾಯ್ತು. ಆಗೆಲ್ಲಾ ಇದು ಹೊಸತು ಅನ್ನಿಸಿದ್ದಕ್ಕೋ ಏನೋ ಜನಕ್ಕೂ ಟಿವಿಯಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡೋಕೆ ಇಷ್ಟವು ಆಗ್ತಿತ್ತು.


ಆದರೀಗ ನೋಡಿ ಯಾವ ಸ್ಥಿತಿ ಬಂದಿದೆ ಅಂತ. ಅಂತ ಎಲ್ಲೆಲ್ಲು ನಾವೇ ಎಲ್ಲೆಲ್ಲು ನಾವೇ ಅಂತ ಟೀವಿ ತುಂಬಾ ಬರೀ ಸಿನಿಮಾ ಸ್ಟಾರ್ ಗಳೇ ತುಂಬಿ ಹೋಗಿದ್ದಾರೆ. ಈ ಕಾರ್ಯಕ್ರಮಗಳ ಪಟ್ಟಿಯನ್ನೇ ನೋಡಿ. ಬಾದ್ ಷಾ ಶಾರುಖ್ ಖಾನ್ ( ಕ್ಯಾ ಆಪ್ ಪಾನ್ಚ್ವಿ ಪಾಸ್ ಸೆ ತೇಜ್ ಹೇ) , ಉರ್ಮಿಳಾ ಮಾತೊಂದ್ಕರ್ (ವಾರ್ ಪರಿವಾರ್ ) , ಅಕ್ಷಯ್ ಕುಮಾರ್ ( ಖಾತ್ರೊಂ ಕೆ ಖಿಲಾಡಿ) , ಹೃತಿಕ್ ರೋಶನ್ ( ಜುನೂನ್ ಕುಚ್ ಕರ್ ದಿಖಾನೇ ಕಾ) , ಸೊನಾಲಿ ಬೇಂದ್ರೆ (ಇಂಡಿಯನ್ ಐಡಲ್), ಕಾಜೋಲ್-ಅಜಯ್ ದೇವಗನ್ (ರಾಕ್ ಎನ್ ರೋಲ್ - ಫ್ಯಾಮಿಲಿ) ,ಸುಷ್ಮಿತಾ ಸೇನ್ ( ಏಕ್ ಆಗಿದ್ದೆ ಏಕ ಹಸೀನಾ) , ಶೆಟ್ಟಿ ( ಬಿಗ್ ಬಾಸ್ ) ಹೀಗೆ ಪಟ್ಟಿ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಹೋಗುತ್ತೆ.

ಅದೆಲ್ಲಾ ಬಿಡಿ, ಇಲ್ಲಿ ಕೇಳಿ...ಈ ಕಾರ್ಯಕ್ರಮಗಳನ್ನೆಲ್ಲಾ ನೋಡಿ ಚೆನ್ನಾಗಿದ್ರೆ ಓಕೆ, ಇಲ್ದಿದ್ರೆ ಹಿಗ್ಗಾ ಮುಗ್ಗಾ ಉಗೀತಿವಲ್ಲಾ? ಇವುಗಳಿಗೆ ಕಾರ್ಯಕ್ರಮದ ಆಯೋಜಕರು ಎಷ್ಟೆಲ್ಲ ಕಸರತ್ತು ಮಾಡ್ತಾರೆ ಗೊತ್ತಾ? (ಅಯ್ಯೋ ಹಾಗಂತ ಕಾರ್ಯಕ್ರಮ ಚೆನ್ನಾಗಿಲ್ದಿದ್ರೆ ಉಗೀಬೇಡಿ ಅಂತ ನಾನ್ ಹೇಳ್ತಿಲ್ಲಪ್ಪಾ!) ಸೋನಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ 'ದಸ್ ಕಾ ದಮ್' ನ ಪ್ರತಿ ಕಂತಿಗೆ ಆಯೋಜಕರು ಖರ್ಚು ಮಾಡುವ ಹಣ ೧.೨ರಿಂದ ೧.೫ ಕೋಟಿ. ಒಟ್ಟು ೩೬ ಕಂತುಗಳನ್ನು ಪ್ರಸಾರ ಮಾಡುವ ಗುರಿ ಸೋನಿ ಸಂಸ್ಥೆಯದ್ದು. ಲಂಡನ್ನಿನಲ್ಲಿ ಜನಪ್ರಿಯವಾಗಿರುವ 'ಬಿಗ್ ಬ್ರದರ್' ಈಗ ಭಾರತದಲ್ಲಿ 'ಬಿಗ್ ಬಾಸ್' ಆಗಿದೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವ ನಟಿ ಶಿಲ್ಪಾ ಶೆಟ್ಟಿ ಒಂದು ಎಪಿಸೋಡ್ ಗೆ ಪಡೆಯೋ ಸಂಭಾವನೆ ೮೦ ಲಕ್ಷ. ಇದರರ್ಥ ಜನರು ಟಿವಿ ನೋಡಲೇ ಬೇಕು ಅಂದ್ರೆ ಯಾವುದು ಅವರನ್ನು ಥಟ್ ಅಂತ ಆಕರ್ಷಿಸುತ್ತೋ ಅದನ್ನೇ ಈ ಶೋಗಳು ನೀಡಲು ತಯಾರಿರುತ್ತವೆ ಅಂದಾಯ್ತು. ಅಷ್ಟೇ ಅಲ್ಲ, ತನ್ನ ಪ್ರತಿ ಸ್ಪರ್ಧಿ ಚಾನೆಲ್ ಗಿಂತ ಒಂದು ಹೆಜ್ಜೆ ಮುಂದೆ ಇರ್ಬೇಕು ಅನ್ನೋ ಉದ್ದೇಶ, ಕಾರ್ಯಕ್ರಮದ ಕ್ವಾಲಿಟಿ ಹೆಚ್ಚಿರಬೇಕೆಂಬ ಹಂಬಲ ಖರ್ಚು ಹೆಚ್ಚುವಂತೆ ಮಾಡುತ್ತೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಪ್ರತಿ ಚಾನೆಲ್ ನ ಅಜೆಂಡಾ ಕೂಡಾ ಆಗಿದೆ. ಬಿಗ್ ಬಿ ನಂತರ ಹಾಟ್ ಸೀಟ್ ಅಲಂಕರಿಸಿದ ಶಾರೂಖ್ ಪಡೆಯುತ್ತಿದ್ದ ಸಂಭಾವನೆ ಪ್ರತಿ ಎಪಿಸೋಡ್ ಗೆ ೭೫ ಲಕ್ಷ. ಆದ್ರೆ 'ಕ್ಯಾ ಆಪ್ ಪಾಂಚ್ ವೀ ಪಾಸ್ ಸೇ ತೇಝ್ ಹೇ' ಗೆ ಪಡೆದದ್ದು ೧ ಕೋಟಿ. ಆದ್ರೆ ಕೆಬಿಸಿ ೩ ಮತ್ತು ಈ ಕಾರ್ಯಕ್ರಮಗಳು ತೀರಾ ಹೀನಾಯ ಪ್ರತಿಕ್ರಿಯೆ ಪಡೆದದ್ದು ವಿಪರ್ಯಾಸ.

ದಸ್ ಕಾ ದಮ್ ಕಾರ್ಯಕ್ರಮ ನಿರೂಪಿಸುವ ಸಲ್ಲೂ ಶಾರೂಖ್ ಗಿಂತ ಕಡಿಮೆ ಸಂಭಾವನೆ ಪಡೆಯಲು ಸುತಾರಾಂ ಒಪ್ಪುವುದಿಲ್ಲ ಅನ್ನೋ ಮಾತುಗಳಿವೆ. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಪ್ರತಿ ಎಪಿಸೋಡ್ ಗೆ ೮೦ ಲಕ್ಷ ಪಡೆಯುತ್ತಾರಂತೆ. (ಅಂದ್ರೆ ಶಾರೂಖ್ ಕೆಬಿಸಿ ಗೆ ಪಡೆದಷ್ಟು. ಎಲ್ಲಾ ಬಿಡಿ ಮಾತೆತ್ತಿದರೆ ಮೂಗು ತುದಿಯಲ್ಲಿ ಕೋಪ ಮಾಡಿಕೊಳ್ಳೋ ಈ ಪುಣ್ಯಾತ್ಮ {ಸಲ್ಮಾನ್} ರಿಯಾಲಿಟಿ ಶೋವೊಂದನ್ನು ಯಶಸ್ವಿಯಾಗಿ ನಿಭಾಯಿಸ್ತಿರೋದೇ ದೊಡ್ಡ ವಿಷಯ ಅನ್ಸುತ್ತೆ)


ನೀವು ಕಲರ್ಸ್ ನಲ್ಲಿ fear factor ಖತ್ರೋಂ ಕಿ ಖಿಲಾಡಿ ನೋಡಿರ್ತೀರಾ, ೧೩ ಮಂದಿ ಸುಂದರಾತಿ ಸುಂದರಿಯರಿಗೆ ನಮ್ಮ ಖಿಲಾಡಿಯೋಂ ಕಾ ಖಿಲಾಡಿ ಅಕ್ಕಿ ಭಯಾನಕ actionಗಳನ್ನ ಮಾಡಿಸಿ ಜನರಿಗೆ ಥ್ರಿಲ್ ಮಾಡಿಸಿ ತಾನೂ ಮಜಾ ತಗೊಂಡಿದ್ದು ಬೇರೆ ವಿಷಯ ಬಿಡಿ. ಇದು ಒಟ್ಟು ಪ್ರಸಾರವಾಗಿದ್ದು ೧೬ ಎಪಿಸೋಡ್ ಗಳು. South Africaದಲ್ಲಿ ಚಿತ್ರೀಕರಿಸಲ್ಪಟ್ಟ ಈ ಶೋನ ಪ್ರತಿ ಎಪಿಸೋಡ್ ಗೆ ಅಕ್ಷಯ್ ಪಡೆದದ್ದು ೧.೫ ಕೋಟಿ. ಒಂದು ಎಪಿಸೋಡ್ ನ ಖರ್ಚು ಕಡಿಮೆ ಅಂದ್ರೂ ೨.೨ಕೋಟಿ. ಏನು? ಕೇಳಿ ಬೇಸ್ತು ಬಿದ್ರಾ? ಸ್ವಲ್ಪ ಸುಧಾರಿಸಿಕೊಳ್ಳಿ. ಇದು ಬಿಗ್ ಬಿ ತಮ್ಮ ಮೊದಲ ಕರೋಡ್ ಪತಿ ಶೋಗೆ ಪಡೆದ ಸಂಭಾವನೆಗಿಂತ ೩ ಪಟ್ಟು ಹೆಚ್ಚು. ಈ ಮಾತು ಸುಳ್ಳಾಗಿದ್ರೆ ಆ ರಿಯಾಲಿಟಿ ಶೋ ಮೇಲಾಣೆ!
ಇದೆಲ್ಲಾ ದೊಡ್ಡ ದೊಡ್ಡ ಸ್ಟಾರ್ ಗಳ ದುನಿಯಾ ಆಯ್ತು. ಮಿನಿ ಮಾಥುರ್ ಗೊತ್ತಿರ್ಬೇಕಲ್ಲಾ? ಅದೇ ಸೋನಿ ಚಾನೆಲ್ ನಲ್ಲಿ ಇಂಡಿಯನ್ ಐಡಲ್ ೧ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ್ದ ಬೆಡಗಿ (ಕ್ಷಮಿಸಿ ಈಕೆಗೆ ಮದುವೆ ಆಗಿ ಮಗುವಿದೆ, ನಿಮಗೆ ಆಕೆ ಬೆಡಗಿ ಅನ್ನಿಸ್ತಾರೋ ಇಲ್ವೋ, ಆದ್ರೂ ನೋಡೋಕೆ ಮಿನಿ ಚೆಂದಾನೇ) ಪ್ರತಿ ಕಂತಿಗೆ ೪೦=೫೦ಸಾವಿರ ಪಡೆಯುತ್ತಿದ್ದವಳು ಇಂಡಿಯನ್ ಐಡಲ್-೨ಗೆ ಏಕಾಏಕಿ ತನ್ನ ಸಂಭಾವನೆ ಏರಿಸಿದ್ದು (ಪಡೆದದ್ದು) ೧.೫ ಲಕ್ಷ . ಝೀಯಲ್ಲಿ ಪ್ರಸಾರವಾಗುವ ಸಾ ರೆ ಗ ಮ ಗೆ ಗಾಯಕ ಶಾನ್ ೧.೫ ಲಕ್ಷ ತೆಗೆದೊಕೊಳ್ಳೋರು. ಆದ್ರೆ ಏಕಾಏಕಿ ೨.೫ ಲಕ್ಷ ಕೊಡಲು ಮುಂದೆ ಬಂದ ಸ್ಟಾರ್ ಚಾನೆಲ್ ಗೆ ಜಿಗಿದ್ರು ಶಾನ್. ಇದೇ ಝೀಯಲ್ಲಿ ಪ್ರಸಾರವಾದ ಫ್ಯಾಮಿಲಿ ಶೋ ರಾಕ್ n ರೋಲ್ ಫ್ಯಾಮಿಲಿ ಕಾರ್ಯಕ್ರಮಕ್ಕೆ ಕಾಜೋಲ್ ಅಜಯ್ ದೇವಗನ್ ದಂಪತಿ ಎಷ್ಟು ಸಂಭಾವನೆ ಪಡೆಯುತ್ತಿದ್ರೋ ಗೊತ್ತಿಲ್ಲ. ಆದ್ರೆ ಕಾರ್ಯಕ್ರಮ ಪಲ್ಟಿ ಹೊಡೆದಿದ್ದಂತೂ ಗೊತ್ತು.

ರಿಯಾಲಿಟಿ ಶೋಗಳ ಭೂತ ಪ್ರಾದೇಶಿಕ ಚಾನೆಲ್ ಗಳನ್ನೂ ಬಿಟ್ಟಿಲ್ಲ. ಕನ್ನಡದಲ್ಲೇ ನೋಡಿ, ನಟಿ ಅನುಪ್ರಭಾಕರ್,ತಾರಾ, ಸುಧಾರಾಣಿ, ವಿಜಯ ಲಕ್ಷ್ಮಿ ಎಲ್ಲರೂ ಸಿನಿಮಾದ ದೊಡ್ಡ ಪರದೆ ಬಿಟ್ಟು ಹೆಂಗಳೆಯರ ಮನಕ್ಕೆ ರಿಯಾಲಿಟಿ ಶೋಗಳ ಮೂಲಕ ಲಗ್ಗೆ ಇಡಲು ಒಂದು ಕೈ ನೋಡಿದವ್ರೇ. ಕಾಗೆ ಹಾರಿಸಿ ಜಗ್ಗೇಶ್, ಪ್ರೀತಿಯಿಂದಲೇ ವೀಕ್ಷಕರ ಪ್ರೀತಿ ಗಳಿಸಿದ ರಮೇಶ್ ಕೂಡ ಇದರಿಂದ ಹೊರತಲ್ಲ. ಗಾಯನ ಪ್ರತಿಭೆಗಳಿಗೆ ಗಾಳ ಹಾಕುವ ಕಾರ್ಯಕ್ರಮವನ್ನು ಎಸ್ಪಿಬಿ ಎದೆ ತುಂಬಿ ಹಾಡಿದಂದಿನಿಂದ ಇಂದಿಗೂ ಎಲ್ಲಾ ಚಾನೆಲ್ ಗಳೂ ದಿನಚರಿಯಂತೆ ಪಾಲಿಸುತ್ತಿವೆ.



(ನೆನಪಿರಲಿ ಇಂತಹ ಕಾರ್ಯಕ್ರಮಗಳಿಂದ ಎಷ್ಟೋ ಕಾರ್ಮಿಕರ ಜೇಬಿಗೆ ಕಾಸು ಬೀಳುತ್ತಿದೆ. ಇಲ್ಲಿ ಲೈಟ್ ಬಾಯ್, ಮೇಕಪ್ ಕಲಾವಿದರು, ಸಹಾಯಕರು, ಸಂಕಲನಕಾರರು ಹೀಗೆ ಸಾವಿರಾರು ಮಂದಿಯ ಶ್ರಮ ಇಂತಹ ರಂಗು ರಂಗಿನ ಕಾರ್ಯಕ್ರಮಗಳ ಹಿಂದೆ ಇರುತ್ತದೆ. ಅವರೆಲ್ಲಿ ಬಹುತೇಕರಿಗೆ ಈ ಕಾರ್ಯಕ್ರಮಗಳೇ ಹೊಟ್ಟೆಹೊರೆಯುವ ಮೂಲ)



ಹಾಗಂತ ಇವರೆಲ್ಲ ಸಿನಿಮಾದ ದೊಡ್ಡ ಪರದೆ ಬಿಟ್ಟು ಹೀಗೆ ಟೆಲಿವಿಶನ್ ಗೆ ಯಾಕೆ ಲಗ್ಗೆ ಇಟ್ರು ಅಂತ ಅನ್ನಿಸೋದು ಸಹಜ. ತಿಂಗಳಾನುಗಟ್ಟಲೆ ಒಂದು ಸಿನಿಮಾ ಮಾಡಿ ಗಳಿಸುವ ಹಣವನ್ನು ಕೆಲವೇ episodeಗಳಲ್ಲಿ ರಿಯಾಲಿಟಿ ಶೋಗಳು ಕೊಟ್ರೆ ಯಾರ್ ತಾನೇ ಬೇಡ ಅಂತಾರೆ? ಹೇಳಿ ಕೇಳಿ ಇದು computer ಯುಗ. ಎಲ್ಲಾ ಥಟ್ ಅಂತ ಆಗೋ ಮತ್ತು ಬಯಸೋ ಜಾಯಮಾನ ನಮ್ಮ ಜನರದ್ದು. ಎಲ್ಲಕ್ಕೂ ಮಿಗಿಲಾಗಿ ಈ ಸ್ಟಾರ್ ಗಳನ್ನ ನೋಡೋಕೆ ಜನ ಕಾಸು ಕೊಟ್ಟು ಥಿಯೇಟರ್ ಗೆ ಹೋಗ್ಬೇಕು. ಆದ್ರೆ ವೇಗವಾಗಿ ಅಂದ್ರೆ ready to eat ಅನ್ನೋ ಹಾಗೆ ಪುಟ್ಟ ಪರದೆಯಲ್ಲೇ ಇವರನ್ನು ನೋಡೋ ಮತ್ತು ಈ ಸ್ಟಾರ್ ಗಳು ವೀಕ್ಷಕರನ್ನು ಇಷ್ಟೂ ಸುಲಭವಾಗಿ ತಲುಪೋ ಅವಕಾಶವನ್ನು ಯಾಕ್ ತಾನೇ ಬಿಡ್ತಾರೆ? ಚಾನೆಲ್ ಗಳು ಕೋಟಿ ಕೋಟಿ ಸುರಿದು ಕೋಟಿ ಕೋಟಿ ಬಾಚಿಕೊಳ್ಳೋ ತರಾತುರಿಯಲ್ಲಿವೆ. ಒಟ್ಟಾರೆ ಇದೆಲ್ಲಾ ನೋಡಿದ್ರೆ ಜನ ಮರುಳೋ ಜಾತ್ರೆ ಮರುಳೋ ಎಂಬಂತಾಗಿದೆ.

Friday, October 17, 2008

ಎಷ್ಟು ರಿಯಲ್...? ಎಷ್ಟು ರೀಲ್...?

ಸಮೂಹ ಮಾಧ್ಯಮಗಳಲ್ಲಿ ದೂರದರ್ಶನಕ್ಕಿರುವ ಸ್ಥಾನ ಬಹುದೊಡ್ಡದು. ಹಿಂದೆಲ್ಲಾ ರಾಮಾಯಣ, ಮಹಾಭಾರತಗಳಂತಹ ಸಭ್ಯ ಸದಭಿರುಚಿಯ ಕಾರ್ಯಕ್ರಮಗಳಿಂದ ದೂರದರ್ಶನ ಮನೆಮನ ಸೂರೆಗೊಂಡಿತ್ತು. ಆದ್ರೆ ಟಿವಿ ಯಲ್ಲಿ ಬರುವ ಈಗಿನ ಕಾರ್ಯಕ್ರಮಗಳ ಬಗ್ಗೆ ಮಾತಾಡೋದು ಸ್ವಲ್ಪ ಅಲ್ಲ, ತುಂಬಾನೇ ಕಷ್ಟ ಅನ್ನಬಹುದು. ಮನರಂಜನೆ, ಮ್ಯೂಸಿಕ್, ಸ್ಪೋರ್ಟ್ಸ್, ನ್ಯೂಸ್, ಫ್ಯಾಷನ್, ಕಾರ್ಟೂನ್, ಕಾಮಿಡಿ, ಬಿಸಿನೆಸ್ ನಿಂದ ಹಿಡಿದು ದೇವರಿಗೆ ಅಂತಲೇ ಪ್ರತ್ಯೇಕ ಚಾನೆಲ್ ಇರುವವರೆಗೆ ಹಬ್ಬಿದೆ ಈ ಮಾಯಾಜಾಲ. ಒಂದು ಚಾನೆಲ್ ಯಶಸ್ವಿ ಆಗಬೇಕಂದ್ರೆ ಅದರಲ್ಲಿ ಪ್ರಸಾರ ಆಗೋ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಬೇಕು. ಇದರಿಂದ ಕಾರ್ಯಕ್ರಮದ ಟಿಆರ್ ಪಿ ರೇಟಿಂಗ್ ಏರಬೇಕು, ಜೊತೆಗೆ ಹಣದ ಹೊಳೆ ಹರಿದು ಬರಬೇಕು.

ಇಷ್ಟೆಲ್ಲಾ ನಾನು ಹೇಳಬೇಕಾಗಿ ಬಂದ ಕಾರಣ ಅಂದ್ರೆ ರಿಯಾಲಿಟಿ ಶೋ ಎಂಬ ಮಾಯಾಬಜಾರು. ಯಾವ ಚಾನೆಲ್ ಹಾಕಿದ್ರೂ ಅಲ್ಲಿ ರಿಯಾಲಿಟಿ ಶೋಗಳದ್ದೇ ದರ್ಬಾರು. ಇಂತಹ ಕಾರ್ಯಕ್ರಮಗಳಿಲ್ಲದಿದ್ರೆ ಚಾನೆಲ್ ನಡೆಯೋದೇ ಇಲ್ಲ ಎಂಬಷ್ಟು ನಡೆದಿದೆ ಅವುಗಳ ಕಾರುಬಾರು. ರಿಯಾಲಿಟಿ ಹೆಸರಲ್ಲಿ ಟಿ.ವಿ ನೋಡುವ ಮಂದಿ ಮಂಡೆ ಬಿಸಿ ಆಗಿ ಮೂರ್ಖರ ಪೆಟ್ಟಿಗೆ ಆಗದಿರಲಿ ಚೂರು ಚೂರು!
ಈ ರಿಯಾಲಿಟಿ ಶೋಗಳು ಎಷ್ಟರ ಮಟ್ಟಿಗೆ ಜನರ ತಲೆ ಹೊಕ್ಕಿವೆ ಅಂದ್ರೆ ಆ ಕಾರ್ಯಕ್ರಮಗಳಲ್ಲಿ ಪ್ರಸಾರವಾಗುವುದೆಲ್ಲಾ ಕಟು ಸತ್ಯ ಎಂದು ಜನ ನಂಬುವಷ್ಟು . ಕೆಲದಿನಗಳಿಂದ ಖಾಸಗಿ ವಾಹಿನಿ ಕಲರ್ಸ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್-೨ ವನ್ನೇ ತಗೊಳ್ಳಿ. ಹೊರಜಗತ್ತಿನೊಡನೆ ಯಾವುದೇ ಸಂಪರ್ಕವಿಲ್ಲದೆ ಸ್ಪಧಿಗಳು 2-3 ತಿಂಗಳು ಬಿಗ್ ಬಾಸ್ ಮನೆಯಲ್ಲಿರಬೇಕು. ಈ ಅವಧಿಯಲ್ಲಿ ಮೇಲ್ನೋಟಕ್ಕೆ ಜೊಳ್ಳು ಕಾಳು ಗಟ್ಟಿ ಕಾಳು ಸ್ಪರ್ಧೆ ನಡೆದ್ರೂ ಅಲ್ಲಿ ನಡೆಯುವ ಘಟನೆಗಳು ಚಿತ್ರ ವಿಚಿತ್ರ . ಹೇಳಿ ಕೇಳಿ ಅಲ್ಲಿ ಬರಿ ಸೆಲಿಬ್ರಿಟಿಗಳದ್ದೆ ಪಾರುಪತ್ಯ . ಆರಂಭದಲ್ಲಿ ದೋಸ್ತಿಗಳಾಗಿದ್ದವ್ರು ದಿನೇ ದಿನೇ ದಿನೇ ದುಶ್ಮನ್ಗಳಾಗೋದು ಇಲ್ಲಿ ಕಾಮನ್. ಸುತ್ತಲೂ ಹದ್ದಿನ ಕಣ್ಣಿನಂತೆ ಕ್ಯಾಮೆರಾಗಳಿದ್ರೂ ಅವರ ಅಬ್ಬರದ ಆಟೋಪ, ಕೋಪ-ತಾಪ, ಪ್ರೀತಿ-ಸಲ್ಲಾಪ, ಆರೋಪ-ಪ್ರತ್ಯಾರೋಪ, ಕಣ್ಣೀರು-ಸಂತಾಪಗಳಿಗೆ ಬರವಿರೋದಿಲ್ಲ। ವಾರದ ಆರಂಭದಲ್ಲಿ ನಡೆಯೋ nomination ಪ್ರಕ್ರಿಯೆ ಮತ್ತು ವಾರಾಂತ್ಯದಲ್ಲಿ ನಡೆಯೋ elimination ಪ್ರಕ್ರಿಯೆ ಬಿಗ್ ಬಾಸ್ ಮನೆಯಲ್ಲಿರೋರ ಬಣ್ಣ ಬಯಲು ಮಾಡೋ ರಂಗ ಮಂದಿರ. ಇಷ್ಟೆಲ್ಲ ಆದ್ರೂ ವೀಕ್ಷಕರಿಗೆ ಮಾತ್ರ ಇದೊಂಥರ ರಸಗವಳ, ಚಾನೆಲ್ ನವರಿಗೆ TRP ಕಾ ಮಾಮ್ಲಾ, ಒಟ್ಟಾರೆ ಪೈಸೆ ಕೇ ಲಿಯೇ ಕುಛ್ ಭೀ ಕರೇಗಾ...!
ಇನ್ನು ಸಿನಿಮಾ, ಧಾರಾವಾಹಿಗಳ ಕಲಾವಿದರನ್ನು ವೇದಿಕೆ ಹತ್ತಿಸಿ ಹೆಜ್ಜೆ ಹಾಕಿಸೋ ಕಾರ್ಯಕ್ರಮಗಳಿಗಂತೂ ಲೆಕ್ಕವೇ ಇಲ್ಲ. ಒಂದಷ್ಟು ಮಸ್ತಿ, ಮತ್ತಷ್ಟು ಕುಸ್ತಿ ಮಾಡಿಸಿ ( pre planned ಮನಸ್ತಾಪ!) TRP ಹೆಚ್ಚಿಸಿಕೊಳ್ಳೋ ತಂತ್ರಗಳಂತೂ ದೇವರಿಗೇ ಪ್ರೀತಿ.
ರಿಯಾಲಿಟಿ ಶೋ ಅನ್ನೋ ಮಾಯಾಬಜಾರ್ ಕಥೆ ಇಷ್ಟಕ್ಕೇ ಮುಗಿಯಲ್ಲ. ಖ್ಯಾತ ಚಿತ್ರ ನಟ ನಟಿಯರಿಂದ ಕ್ವಿಝ್ಝೋ, ಗೇಮ್ ಶೋವನ್ನೋ ಮಾಡಿಸುವ ಪರಿಪಾಠ ನಿಲ್ಲುವ ಸೂಚವೆ ಸದ್ಯಕ್ಕಂತೂ ಇಲ್ಲ. ಉದಯೋನ್ಮುಖ ಗಾಯಕ-ಗಾಯಕಿಯರ ಶೋಧದ ಹೆಸರಲ್ಲೂ ಈ 'ವ್ಯಾಪಾರ' ಜನಪ್ರಿಯ. ಇಲ್ಲಿ ಕಾಲೇಜು ಹುಡುಗ ಹುಡುಗಿಯರೊಂದಿಗೆ ಮುಗ್ಧ ಮನಸ್ಸಿನ ಮಕ್ಕಳೂ ಸರಕಾಗುತ್ತಿರೋದು ವಿಷಾದನೀಯ. ಜೊತೆಗೆ ಪೋಷಕರ 'ಅಭೂತಪೂರ್ವ' ಬೆಂಬಲ. ಇವೆಲ್ಲದರ ಜೊತೆಗೆ ಮಹಿಳಾ ಮಣಿಗಳಿಗೆ ಸೀರೆ, ಚಿನ್ನ, ವಿದೇಶ ಪ್ರವಾಸದ ಆಸೆ ತೋರಿಸಿ TRP ಹೆಚ್ಚಿಸಿಕೊಳ್ಳುವ ಶೋಗಳೂ ಬಹಳಷ್ಟು ಸಿಕ್ತವೆ.
ಾಗಂತ ರಿಯಾಲಿಟಿ ಶೋಗಳು ಮಾಡೋದೆಲ್ಲಾ ಬರೀ TRP ಗಾಗಿ, ಮತ್ತು ಅವುಗಳ ಕಾರ್ಯಕ್ರಮದ ರೀತಿ ರಿವಾಜುಗಳೆಲ್ಲಾ ತಪ್ಪು ಅನ್ನೋದು ಸ್ವಲ್ಪ ಮಟ್ಟಿಗೆ ತಪ್ಪು. ಹ್ಹಾಂ, ಖಂಡಿತ ಇವುಗಳಿಂದ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ. ಆದ್ರೆ ರಿಯಾಲಿಟಿ ಹೆಸರಲ್ಲಿ ಶೋ ನಾಟಕೀಯ ಆಗದಿದ್ರೆ ಅದು ಚೆನ್ನ. ಮತ್ತೊಂದು ದೃಷ್ಟಿಯಲ್ಲಿ ನೋಡಿದ್ರೆ ತೀರ್ಪುಗಾರರ ಟೀಕೆಗಳಿಂದ ಎಷ್ಟೋ ಪ್ರತಿಭಾವಂತ ಮತ್ತು ಮಹತ್ವಾಕಾಂಕ್ಷಿಗಳು ಇರುವ ಅಲ್ಪ ಉತ್ಸಾಹವನ್ನು ಕಳೆದುಕೊಳ್ಳುವ ಸಂಭವವೂ ಇದೆ. ಪ್ರತಿಷ್ಟಿತ ಚಾನೆಲ್ ಒಂದರ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡ ಬೆಂಗಾಲಿ ಹುಡುಗಿ ಶಿಂಜಿನಿ ಇದಕ್ಕೆ ಪ್ರತ್ಯಕ್ಷ ಉದಾಹರಣೆ. ಆದ್ರೆ ಇದಕ್ಕೆ ತದ್ವಿರುದ್ಧ ಜೈಪುರದ ಭಾನು ಪ್ರತಾಪ್ ಸಿಂಗ್. ಇಂಡಿಯನ್ ಐಡಲ್ ನಲ್ಲಿ ಭಾಗವಹಿಸಬೇಕೆಂಬ ಅದಮ್ಯ ಆಸೆ ಚಿಗುರುವ ಮುನ್ನವೇ ಅದಕ್ಕೆ ಕೊಡ್ಲಿ ಪೆಟ್ಟು ಪಡೆದಾತ ಇವ. ೩ ಬಾರಿ ಸತತವಾಗಿ ಸ್ಪರ್ಧೆಯ ಮೊದಲ ಸುತ್ತಿನಲ್ಲೆ ಹೊರ ನಡೆದ ಭಾನು ಎದೆಗುಂದದೆ ಈಗ ಯಶಸ್ಸಿನ ಪಯಣದತ್ತ ಮುಖ ಮಾಡಿ ಹೊರಟಿದ್ದಾನೆ. ಇಂತಹ ಪ್ರಕರಣಗಳಿಗೆ ತೀರ್ಪುಗಾರರನ್ನು ನೇರಹೊಣೆ ಮಾಡುವವರೂ ಇದ್ದಾರೆ, ಅದನ್ನು ಸಮರ್ಥಿಸಿಕೊಳ್ಳುವವರೂ ಸಿಕ್ತಾರೆ. ಒಟ್ಟಾರೆ ಇವೆಲ್ಲಾ ರಿಯಾಲಿಟಿ ಶೋಗಳ ರಿಯಾಲಿಟಿ ಅಷ್ಟೇ.

ಪ್ಪು ಒಪ್ಪುಗಳೇನೇ ಇದ್ರೂ ನಮ್ಮ ಜನ ಮಾತ್ರ ಇವುಗಾಳ ಮಾಯಾಜಾಲದಲ್ಲಿ ಬಂಧಿಗಳಾಗಿರೋದಂತೂ ಸತ್ಯ, ಸತ್ಯ, ಸತ್ಯ. ಇನ್ನು ಈ ಶೋಗಳು ವಾರಾಂತ್ಯದಲ್ಲಿ ಮಾಡುವ ಎಲಿಮಿನೇಷನ್ ಮತ್ತು ನಾಮಿನೇಷನ್ ಗಳ ಎಸ್ಸೆಮ್ಮೆಸ್ ಪ್ರಕ್ರಿಯೆಯಿಂದಂತೂ ಹಣದ ಹೊಳೆಯೇ ಹರಿದು ಬರುತ್ತೆ. ಆದ್ರೆ ಮನರಂಜನೆಯ ಹೆಸರಲ್ಲಿ ಹಣ ಹೊಡಿಯೋ, ಮುಗ್ಧ ಮನಸ್ಸುಗಳನ್ನು ಮುರಿಯೋ ರಿಯಾಲಿಟಿ ಶೋಗಳಲ್ಲಿ ಎಷ್ಟು ರಿಯಲ್? ಎಷ್ಟು ರೀಲ್? ಇದಕ್ಕೆ ಉತ್ತರ ಹೇಳೋರ್ಯಾರು?

Sunday, September 7, 2008

" ಫೂಂಕ್".....

ಹಲೋ ಸ್ನೇಹಿತರೇ.....

ಬಹಳ ದಿನಗಳ ನಂತರ ನನ್ನ ಬ್ಲಾಗ್ ಅನ್ನ update ಮಾಡ್ತಿದ್ದೀನಿ. ತುಂಬಾ ದಿನದಿಂದ ನನ್ ತಲೆಲಿ ಒಂದು ವಿಷಯ ಕೊರಿತಾ ಇತ್ತು. ಅದು ನಿರ್ದೇಶಕ ರಾಂ ಗೋಪಾಲ್ ವರ್ಮಾ ಇತ್ತೀಚೆಗೆ ತಾನೇ release ಮಾಡಿದ್ರಲ್ಲಾ ಆ ಸಿನಿಮಾ. ಅದೇ ರೀ "ಫೂಂಕ್".

ವರ್ಮಾ ಸಾಹೇಬ್ರೇನೋ ಸಿನಿಮಾಗೆ ಚೆನ್ನಾಗೇ ಬಿಲ್ಡಪ್ ಕೊಟ್ಟು release ಮಾಡಿದ್ರು. ಯಾರಿಗಾದ್ರು ತಾಕತ್ತಿದ್ರೆ ಒಂಟಿಯಾಗಿ ಥಿಯೇಟರಲ್ಲಿ ಕೂತು ಸಿನಿಮಾ ನೋಡಿದ್ರೆ ೫ಲಕ್ಷ ಬಹುಮಾನ ಕೊಡ್ತೀನಿ ಅಂತ ಬೇರೆ ಘೋಷಿಸಿದ್ರು. ಅದಕ್ಕೆ ನಮ್ಮ ಕೊಡಗಿನ ಕುವರ ಪವಿನ್ ಎಂಟೆದೆ ಭಂಟನಂತೆ ಸಿನಿಮಾ ನೋಡೋಕೆ ರೆಡಿನೂ ಆದ್ರು. ಆದ್ರೆ aapka samai khatam hua ಅಂತ್ ಹೇಳಿದ್ರು ವರ್ಮಾ. ಯಾಕಂದ್ರೆ allready ಯಾರೋ ಇಬ್ಬರು ಶೂರರು ಈ (ತಾಕತ್ತಿನ) ಗೇಮ್ ಗೆ ಆಯ್ಕೆಯಾಗಿದ್ರು. ಆದ್ರೂ ಛಲ ಬಿಡದೆ ಪವಿನ್ ಇಡೀ ಥೀಯೆಟರ್ ನ ಟಿಕೆಟ್ ಗಳನ್ನ ಖರೀದಿಸಿ ಸಿನಿಮಾ ನೋಡೇ ಬಂದ್ರು.


ಇದನ್ನೆಲ್ಲಾ ನೋಡ್ತಾ ನಂಗೂ ನನ್ friendsಗೂ ಕುತೂಹಲ ಸ್ವಲ್ಪ ಜಾಸ್ತೀನೇ ಆಯ್ತು. ಅಂತೂ ಇಂತೂ ಹರ ಸಾಹಸ ಮಾಡಿ "ಫೂಂಕ್" ಸಿನಿಮಾದ ಸಿಡಿ ನಂಮ್ ಕಂಪ್ಯೂಟರ್ ಒಳಹೊಕ್ಕಿತ್ತು. ಗಣೇಶನ ಹಬ್ಬದ ದಿನ ಮುಹೂರ್ತ ಫಿಕ್ಸೂ ಆಯ್ತು. ಅದೇನಪ್ಪಾ ಅದು ಈ ಸಿನಿಮಾದಲ್ಲಿ ಭಯದಿಂದ ಥರಗುಟ್ಟುವಂತೆ ಮಾಡೋದಿರೋದು ಅಂತ ಅಂದು ರಾತ್ರಿ ನೋಡೋಕೆ ಕೂತ್ವಿ. ನನ್ನ ಗೆಳತಿ ಅಂಜಲಿ ಅನ್ನೋ ಚಿನಕುರಳಿ light ಬೇರೆ off ಮಾಡಿ ಥಿಯೇಟರ್ effect ಕೊಟ್ಲು.

ನಮ್ಮ ಸುದೀಪ್ ಅಂತೂ ಬಿಡಿ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಭಿನಯದಲ್ಲಿ ಎಲ್ಲರಿಗೂ full marks. camera work ಸೂಪರ್. ಆದ್ರೆ ಎಲ್ಲಾ ಓಕೆ ಭಯ ಆಗಲ್ಲ ಯಾಕೆ ಆನ್ನೋ ಪ್ರಶ್ನೆ ಈಗ್ಲೂ ಕಾಡ್ತ ಇದೆ. ಮೊದಲಾರ್ಧ ಮುಗಿದ ಮೇಲಾದ್ರು ಹಣೆ ಮೇಲೆ ಬೆವರ ಹನಿ ಮೂಡುತ್ತೆ ಅಂತ ಕಾದಿದ್ದೇ ಬಂತು. ಮಧ್ಯ ಮಧ್ಯ ಅಂಜಲಿ ಕಿರ್ರೋ ಅಂತ ಕಿರುಚಿ ನಮ್ಮನ್ನೆಲ್ಲಾ ಬೆಚ್ಚಿ ಬೀಳಿಸುವಲ್ಲಿ "ಯಶಸ್ವಿ"ಯಾದಳು ಅನ್ನಬಹುದು. ಆದ್ರೆ ವರ್ಮಾಜೀ ಮಾತ್ರ ದೇವರ ಬಗ್ಗೆ ನಂಬಿಕೆ ಮೂಢನಂಬಿಕೆಗಳ ಸುಳಿಯಲ್ಲಿ ನಮ್ಮನ್ನೆಲ್ಲಾ ಸುತ್ತಿಸಿ ಸುತ್ತಿಸಿ ಬೇಸರ ಮೂಡಿಸಿದ್ದಾರಷ್ಟೆ.

ಸಿನಿಮಾ ಬಗ್ಗೆ ಮೊದಲೇ ಭಯ ಇದ್ದದ್ದಕ್ಕೋ ಏನೋ ವರ್ಮಾರ ಒಬ್ಬ candidate ೪೫ ನಿಮಿಷ ಸಿನಿಮಾ ನೋಡೋ ತಾಕತ್ತೂ ಇಲ್ಲದೆ ಹೊರಬಂದ. ಈಗ ಹೊಸ ಸುದ್ದಿ ಅಂದ್ರೆ ವರ್ಮಾ ಸಿನಿಮಾ financier ಭರತ್ ಷಾಗೆ ಹಳೇ ಬಾಕಿಯನ್ನ ಕೊಡದೇ ಸತಾಯಿಸ್ತಾ ಇದ್ದಾರೆ ಅಂತ ಷಾ Indian Motion Pictures Producers’ Association (IMPPA) ಮೊರೆ ಹೊಕ್ಕಿದ್ದಾರಂತೆ. ಒಟ್ಟಾರೆ ವರ್ಮಾರ ಮಾಯಾ ಮಂತ್ರದ "ಫೂಂಕ್" ಅವ್ರಿಗೇ ತಿರುಗುಬಾಣ ಆಗ್ದಿರ್ಲಿ ಅಲ್ವಾ?

Wednesday, August 13, 2008

ಪ್ಯಾರೆ ಭಯ್ಯಾ....ಸಲ್ಲೂ....



ಶ್ರಾವಣ ಬಂತು ಅಂದ್ರೆ ಸಾಕು ಹಬ್ಬಗಳೋ ಹಬ್ಬಗಳು. ಅದ್ರಲ್ಲೂ ಅಣ್ಣ ತಂಗಿಯರ ಬಾಂಧವ್ಯದ ಸಂಕೇತವಾದ ರಕ್ಷಾಬಂಧನವಂತೂ ಇತರೆ ಹಬ್ಬಗಳಂತೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಅರೆರೇ ಇದೆಲ್ಲಾ ಗೊತ್ತಿರೋ ವಿಚಾರಾನೇ ಹೊಸತೇನಾದ್ರೂ ಹೇಳ್ಬಾರ್ದಾ ಅಂತ ಕೇಳ್ಬೇಡಿ. ಯಾಕಂದ್ರೆ ವಿಷಯ ಇರೋದೇ ಅಲ್ಲಿ. ಕೆಲ ಸಮಯದ ಹಿಂದೆ ಸಭಾ ಮತ್ತು ಫರ್ಹಾ ಅನ್ನೋ ಸಯಾಮಿ ಅವಳಿಗಳ ಬಗ್ಗೆ ಕೇಳಿದ್ದು ನೆನಪಿದೆಯಾ? ಹುಟ್ಟುತ್ತಲೇ ಬೆಸೆದುಕೊಂಡ ದೇಹ ಹೊತ್ತು ಒಬ್ಬರ ಮುಖವನ್ನು ಮತ್ತೊಬ್ಬರು ನೋಡಲಾಗದೆ ತಳಮಳಿಸುತ್ತಿದ್ದ ಈ ಸಯಾಮಿ ಅವಳಿಗಳಿಗೆ ಅಂದು ಕರುಣೆಯ ಮಹಾಪೂರವೇ ಹರಿದು ಬಂದಿತ್ತು. ಅಬುದಾಬಿಯ ದೊರೆಯಂತೂ ಈ ಸಯಾಮಿ ಅವಳಿಗಳನ್ನು ಬೇರ್ಪಡಿಸಲು ತಗಲುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಗಂಟಾಘೋಷವಾಗಿ ಹೇಳಿದ್ದೇ ಬಂತು.

ಇದೆಲ್ಲಾ ಹಳೇ ಕಥೆ....

ಈ ಸಯಾಮಿ ಅವಳಿ ಸಹೋದರಿಯರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಂದ್ರೆ ಅಚ್ಚು ಮೆಚ್ಚು, ಪಂಚ ಪ್ರಾಣ. ಹೇಗಾದ್ರೂ ಮಾಡಿ ಸಲ್ಲೂ ಮಿಯಾನ meet ಮಾಡ್ಲೇಬೇಕು ಅಂತ ಈ ಸಯಾಮಿ ಸಹೋದರಿಯರು ರಚ್ಚೆ ಹಿಡಿದು ಕೂತಿದ್ದಾರಂತೆ. ಆದ್ರೆ ತುತ್ತು ಕೂಳಿಗೂ ಆಕಾಶ ನೋಡೋ ಅಪ್ಪ ಮಾಡೋದಾದ್ರೂ ಏನು?

ಆದ್ರೆ ಹೊರಗಿನ ಮಂದಿಗೆ ಗೊತ್ತಾಗದಂತೆ publicity gimic ಮಾಡದೆ ಸಹಾಯ ಮಾಡೋದ್ರಲ್ಲಿ ಸಲ್ಲು ಒಂದು ಹೆಜ್ಜೆ ಮುಂದು ಅನ್ನೋ ಮಾತು ಬಾಲಿವುಡ್ ನಲ್ಲಿ ಜನಜನಿತ. ಈಗ ಸಲ್ಮಾನ್ ಬರಲಿರುವ ರಕ್ಷಾಬಂಧನದಂದು ತನಗೆ ರಾಖಿ ಕಟ್ಟಲು ತುದಿಗಾಲಲ್ಲಿ ನಿಂತಿರುವ ಈ ಸಭಾ ಮತ್ತು ಫರ್ಹಾರನ್ನ ಭೇಟಿ ಮಾಡೇ ತೀರುವ ಸಂಕಲ್ಪ ಮಾಡಿದ್ದಾರಂತೆ. ಜೊತೆಗೆ ಸಲ್ಲುವನ್ನು ಭೇಟಿ ಮಾಡೋಕೆ ವಿಮಾನದಲ್ಲಿ ಬರುವ ಸುಯೋಗ ಈ ಸಹೋದರಿಯರಿಗೆ ಸಿಕ್ಕಿದೆ. ಈ ವ್ಯವಸ್ಥೆಯನ್ನೂ ಖುದ್ದು ಸಲ್ಮಾನ್ ಮಾಡಿದ್ದಾರೆ.

ಬೇರೆಯವರಿಗೆ ಸಹಾಯ ಹಸ್ತ ಚಾಚೋದಂದ್ರೆ ಮಾರು ದೂರ ಹಾರೋ ಎಷ್ಟೋ ಸಿರಿವಂತರ ಮುಂದೆ ಸಲ್ಮಾನ್ ನಿಜಕ್ಕೂ great ಅನ್ನಿಸ್ತಾರೆ ಅಲ್ವಾ? ಹುಟ್ಟಿನಿಂದ ಈವರೆಗೂ ಒಬ್ಬರ ಮುಖ ಮತ್ತೊಬ್ಬರು ನೋಡದೆ ಸನ್ಮಾನ್ ಮುಖ ನೋಡಲು ಕಾತರಿಸುತ್ತಿರುವ ಸಯಾಮಿ ಸಹೋದರಿಯರಿಗೆ ರಕ್ಷಾ ಬಂಧನದ ಮೂಲಕ ಸೋದರ ಪ್ರೇಮ ತೋರ ಹೊರಟಿರುವ ಸಲ್ಲು ನಿನಗೊಂದು ಸಲಾಮ್...

Wednesday, August 6, 2008

ಆಮೀರ್ ಹೊಸ ಅವತಾರ....ಅವಾಂತರ....!



ನಟ ಆಮೀರ್ ಖಾನ್ ಸಿನಿಮಾ ಅಂದ್ರೆ ಅಲ್ಲೇನೋ ಭಾರೀ ವಿಶೇಷತೆ ಇದೆ ಅಂತಾನೇ ತಿಳ್ಕೊಬೇಕು. ವರ್ಷಕ್ಕೊಂದೇ ಸಿನಿಮಾ ಆದ್ರೂ ಸರಿ, that shoud be best ಅನ್ನೋದು ಆಮೀರ್ ಸಿದ್ಧಾಂತ. ಸದ್ಯ ತಮಿಳಿನ ರಿಮೇಕ್ ಆದ ತನ್ನ ಘಜಿನಿ ಚಿತ್ರದ promotion ನಲ್ಲಿ busy ಆಗಿರುವ ಆಮೀರ್ ಹೊಸ ಗಿಮಿಕ್ ಗಳಿಂದ ಅಭಿಮಾನಿಗಳನ್ನು ಸೆಳೆಯೋದು ಹೊಸತೇನಲ್ಲ.
ಘಜಿನಿಗಾಗಿ ಆಮೀರ್ ತನ್ನ hair style ಆನ್ನು different ಆಗಿ ಮಾಡಿಕೊಂಡಿರೋದು ಗೊತ್ತೇ ಇದೆ. ತಮಿಳಿನ ಬಹು ಬೇಡಿಕೆಯ ತಾರೆ ಆಸೀನ್ ಳನ್ನು ಬಾಲಿವುಡ್ ಗೆ ಪರಿಚಯಿಸುತ್ತಿರುವ ಆಮೀರ್ ಈ ಸಿನಿಮಾಗಾಗಿ ಬಹಳಷ್ಟು ಶ್ರಮವಹಿಸಿ ಈ ಕೇಶ ವಿನ್ಯಾಸ ಮಾಡಿಸಿದ್ದಾರಂತೆ. ಈಗ ಈ hair style ನಮ್ಮ ಬೆಂಗಳೂರಿನ ಕಾಲೇಜುಗಳಲ್ಲಿ ಭಾರೀ ಫೇಮಸ್ಸು! ಅದೆಷ್ಟರ ಮಟ್ಟಿಗೆ ಅಂದ್ರೆ ಎಷ್ಟೋ ಕಾಲೇಜುಗಳ ಆಡಳಿತ ಮಂಡಳಿ ಈ ಘಜಿನಿ hair styleನಲ್ಲಿ ಬರೋ ವಿದ್ಯಾರ್ಥಿಗಳಿಗೆ ಕಾಲೇಜಿನೊಳಗೆ ಪ್ರವೇಶವಿಲ್ಲ ಅನ್ನೋ ಕಾನೂನು ಮಾಡುವಷ್ಟು ಕಂಗೆಟ್ಟಿವೆ ಅನ್ನೋ ಸುದ್ದಿಯುಂಟು.
ಆದ್ರೆ ಇದಕ್ಕೆ ಆಮೀರ್ ಕೊಡೋ ಸಮರ್ಥನೆನೇ ಬೇರೆ. ಕ್ಲಾಸಿಗೆ ಸರಿಯಾಗಿ students ಬರೋದಷ್ಟೆ ಮುಖ್ಯ ಹೊರತು ಇದಲ್ಲ ಅಂತಾರೆ. ಅಷ್ಟೇ ಅಲ್ಲ, ಮುಂಬಯಿಯ ತನ್ನ ಬಾಂದ್ರಾ ನಿವಾಸದ ಬಳಿ ಪಡ್ಡೆಗಳು ಘಜಿನಿ hair styleನಲ್ಲಿ ತಿರುಗುತ್ತಿದ್ದದ್ದು ಆಮೀರ್ ಸಾಹೇಬರಿಗೆ ಭಾರೀ ಖುಷಿ ತಂದಿದೆಯಂತೆ.










ತನ್ನ ಸಿನಿಮಾವನ್ನು ಯಾವ ರೀತಿ ಜನರತ್ತ ತಲ್ಘಿಸಬೇಕು ಅನ್ನೋದು ಬಹುಶಃ ಆಮೀರ್ ಗೆ ಬಹಳ ಚೆನ್ನಾಗೇ ಗೊತ್ತಿದೆ ಅಂತಾಯ್ತು. ಅದೇನೇ ಇರ್ಲಿ ಸದಾ ಹೊಸತನ್ನೇ ಕೊಡ ಬಯಸುವ ಆಮೀರ್ ಗೆ ಘಜಿನಿ ಯಶಸ್ಸು ತರ್ಲಿ ಅಂತ ಆಶಿಸೋಣ.

Tuesday, August 5, 2008

ಮತ್ತೆ ಕಿಶೋರ್ ದಾ....

ನಾನು ಮೊದ್ಲೇ ಹೇಳಿದ್ದೆ,

ಮುಂದಿನ್ ಸಲ ಒಂದ್ ಜಬರ್ದಸ್ತ್ ವಿಷಯ ಇದೆ ಅಂತ.... ಅದೇನ್ ಗೊತ್ತಾ? ನಮ್ ಕಿಶೋರ್ ಕುಮಾರ್ ಅವ್ರು ಗೊತ್ತಲ್ಲಾ? ಅದೇ ರೀ...ಭಾರತ ಸಿನಿಮಾ ಲೋಕದ ದಂತಕತೆ...ಕಿಶೋರ್ ದಾ ಇಹಲೋಕ ತ್ಯಜಿಸಿ ೨೦ ವರ್ಷಗಳೇ ಕಳೆದ್ವು. ಆದ್ರೂ ಆ ಮಹಾನ್ ಕಲಾವಿದನನ್ನು ಮರೆಯೋಕೆ ಸಾದ್ಯವೇ ಇಲ್ಲ. ಕಿಶೋರ್ ದಾ ಕೆಲಸ ಮತ್ತು ವಯಕ್ತಿಕ ಜೀವನ ಎರಡೂ ಒಂದು ರೀತಿಯಲ್ಲಿ ರಂಜನೀಯ ಅಂತಾನೇ ಹೇಳಬಹುದು. ಅವ್ರ ಜೀವನವೇ ಒಂದು ಸಿನಿಮಾ ಆಗುತ್ತೆ ಅಂತ ಬಹಳಷ್ಟು ಮಂದಿಗೆ ಅನ್ಸಿತ್ತನ್ತೆ. ಆದ್ರೆ ಕಿಶೋರ್ ದಾ ಮನೆಯವ್ರಿಗೆ ಅಂತಿಂತಾ ಚಿಕ್ಕ ಪುಟ್ಟ ಸಿನಿಮಾ ಮಾಡೋರ್ಗೆ ಹಕ್ಕು ಕೊಡೋಕೆ ಇಷ್ಟ ಇರ್ಲಿಲ್ಲ. ಹಾಗಾಗಿ ತಾವೇ ಖುದ್ದು ಸ್ವಂತ ಪ್ರೊಡಕ್ಷನ್ ನಲ್ಲಿ ಕಿಶೋರ್ ದಾ ಬಗ್ಗೆ ಸಿನಿಮಾ ಮಾಡ್ತಿದ್ದಾರೆ.
ಕಿಶೋರ್ ದಾರ ನಾಲ್ಕನೇ ಪತ್ನಿ ಲೀನಾ ಚೆಂದಾವರ್ಕರ್ ಸುಮಾರು ೫೦-೬೦ ಕೋ ವೆಚ್ಚದಲ್ಲಿ ಕಿಶೋರ್ ದಾರ ೭೯ನೇ ಜನ್ಮ ದಿನದ ನೆನಪಿನಲ್ಲಿ ಸಿನಿಮಾ ಮಾಡಹೊರಟಿದ್ದಾರೆ. ರಂಗ್ ದೇ ಬಸಂತಿಯಂತಹ ಉತ್ತಮ ಸಿನಿಮಾಗೆ ಕತೆ ಬರೆದಿದ್ದ ರೆನ್ಝಿಲ್ ಡಿಸೋಜ ಕಿಶೋರ್ ದಾ ಸಿನಿಮಾಗೂ ಕತೆ ಬರೆಯಲಿದ್ದಾರಂತೆ. ರುಮಾ ದೇವಿ, ಮದುಬಾಲಾ, ಯೋಗಿತಾ ಬಾಲಿ, ಮತ್ತು ಲೀನಾ ಚೆಂದಾವರ್ಕರ್ ರಂತಹ ಸುಂದರಿಯರನ್ನು ವಿವಾಹವಾಗಿದ್ದ ಕಿಶೋರ್ ದಾ ಕೇವಲ ನಟರಷ್ಟೇ ಅಲ್ಲ, ಗೀತ ರಚನೆಕಾರ, ನಿರ್ಮಾಪಕ, ನಿರ್ದೇಶಕ, ಕತೆಗಾರರಾಗಿ ಹೆಸರು ಮಾಡಿದವರು. ಈಗ ಲೀನಾ ಚೆಂದಾವರ್ಕರ್ ಖುದ್ದು ಆಸಕ್ತಿ ವಹಿಸಿ ಕಿಶೋರ್ ದಾ ಬಗ್ಗೆ ಸಿನಿಮಾ ಮಾಡ ಹೊರಟಿದ್ದಾರೆ. ಅಲ್ಲದೆ ತಮ್ಮ ಮಕ್ಕಳಾದ ಅಮಿತ್ ಮತ್ತು ಪುನೀತ್ ಕೂಡ ಈ ಕಾರ್ಯದಲ್ಲಿ ಸಹಕರಿಸಲಿದ್ದಾರೆ ಅನ್ನೋದು ಚೆಂದಾವರ್ಕರ್ ಗೆ ಮತ್ತಷ್ಟು ಖುಷಿ. ಅಲ್ಲದೆ ಚೆಂದಾವರ್ಕರ್ ಜೊತೆ ಅಮಿತ್ ಪುನಿತ್ ತೆರೆಯ ಮೇಲೆ ಬರ್ತಾ ಇರೋದು ಮತ್ತೊಂದು ವಿಶೇಷ.
ಆದ್ರೆ ರುಮಾ ದೇವಿ ಹಾಗೂ ಸದ್ಯ ನಟ ಮಿತುನ್ ಚಕ್ರವರ್ತಿಯ ಪತ್ನಿಯಾಗಿರುವ ಯೋಗಿತಾ ಬಾಲಿ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ ಇಲ್ವಾ ಅನ್ನೋದು ಸದ್ಯಕ್ಕೆ ರಹಸ್ಯ.

ಅಂತೂ ಬಾಲಿವುಡ್ ದಂತಕತೆ ಕಿಶೋರ್ ದಾ ಸಿನಿಚಾ ರೂಪದಲ್ಲಿ ಆದಷ್ಟು ಬೇಗ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿ ಅನ್ನೋದು ಎಲ್ಲರ ಆಸೆ. ಹಾಗಂತ ಕಿಶೋರ್ ದಾರ ಪತ್ನಿಯರಲ್ಲೆ ಅತಿ ಸುಂದರಿಯಾಗಿದ್ದ ಲೀನಾ ಚೆಂದಾವರ್ಕರ್ ಪಾತ್ರದಲ್ಲಿ ಮಿಂಚಲಿರುವ ಮೀಂಚುಳ್ಳಿ ಇದೇ ಚೆಲುವೆ.



ಸರಿ ಗೆಳೆಯರೇ ಸುದ್ದಿ ಇಷ್ಟ ಆದ್ರೆ ಹೇಳಿ, ಇಷ್ಟ ಆಗ್ದಿದ್ರೂ ಹೇಳಿ
ಕಾಯ್ತಾ ಇರ್ತೀನಿ........ಮತ್ತೆ ಸಿಗೋಣ್ವಾ.......?

Wednesday, July 30, 2008

ನನ್ನ ಮೊದಲ ಮಾತು....

ಎಲ್ಲ ಪರಿಚಿತ ಮತ್ತು ಅಪರಿಚಿತ ಬ್ಲಾಗ್ ಗೆಳೆಯರಿಗೆ ಹಾಯ್....


ಸ್ನೇಹಿತರೇ ನಾನು ಸ್ವಪ್ನ.....ಈ ಬ್ಲಾಗು ಅದರಲ್ಲಿ ಬರೆಯೋದು ಎಲ್ಲವೂ ನನ್ಗೆ ಹೊಸತು...ನನ್ನ ಮೊದಲ ಬರಹ ಏನಾಗಿರಬೇಕು ಅನ್ನೋದೆ ದೊಡ್ಡ ತಲೆನೋವಾಗಿತ್ತು ನೋಡಿ...ಏನಾದ್ರು ತು೦ಬಾ ಚೆನ್ನಾಗಿರೊದ್ನ ಬರಿಬೇಕು ಅ೦ತ ಕಾದು ಕಾದು ಸಾಕಾಯ್ತು... ನನ್ನ ಹಾಗಾಗಿ ಮೊದಲ ಬರಹ ಈಗ ನಿಮ್ಮ್ ಮುಂದಿದೆ.

ಸವಿಗನಸು...ಅ0ದ್ರೆ sweet dream ಅ0ತ. ಹಾ0...ಪ್ರತಿಯೊಬ್ಬರೂ ಬಯಸೋದು ಅದನ್ನೇ. ಕನಸು ಯಾವಾಗಲೂ ಸವಿಯಾಗಿರಲಿ ಅ0ತ. ಅದು ಹಗಲುಗನಸೇ ಇರ್ಲಿ ಅಥವಾ ರಾತ್ರಿ ನಿದ್ರೆಯಲ್ಲಿ ಬರೋ ಇರುಳಗನಸೇ ಇರ್ಲಿ. ಅದು ಸವಿಗನಸಾದ್ರೆನೇ ಮನಕ್ಕೊ0ಥರಾ ಹಿತ. ನನ್ನ ಬ್ಲಾಗ್ ಗೆ ಸವಿಗನಸು ಅನ್ನೋ ಸಿಹಿಯಾದ ಹೆಸರಿಟ್ಟು ನನ್ನ ಮನದಾಳದ ಒ0ದಷ್ಟು ಸವಿ ಮಾತು, ಸವಿ ಕನಸನ್ನ್ಗುಇಲ್ಲಿ ಬಿಚ್ಚಿಡಬೇಕು ಅನ್ನೋದು ನನ್ನ ಬಯಕೆ. ಎಷ್ಟೋ ಸಂಗತಿಗಳು ಕೆಲವೊಮ್ಮೆ ಮನದ ಪಟಲದಲ್ಲಿ ಮೂಡಿ ಯಾರಿಗೂ ಹೇಳಲಾಗದೆ ಹಾಗೇ ಅಳಿಸಿಹೋಗುತ್ತೆ. ಇನ್ಮುಂದೆ ಎಲ್ಲಾ ಬ್ಲಾಗ್ ಸ್ನೇಹಿತ್ರೊಂದಿಗೆ ಅದನ್ನು ಅಕ್ಷರ ರೂಪದಲ್ಲಿ ಹಂಚಿಕೊಳ್ಳುವ ಭಾಗ್ಯ ನನಗೆ ಸಿಕ್ಕಿದೆ.

ಸರಿ ಹಾಗಿದ್ರೆ, ಮುಂದಿನ ಸಲ ನನ್ನ ಸವಿಗನಸು ಏನನ್ನ್ನು ಹೊತ್ತ್ಗ್ ತರುತ್ತೆ ಅನ್ನೋದನ್ನ ನೋಡೋಕೆ ಮರೀಬೇಡಿ ಸ್ನೇಹಿತರೇ...

ಸವಿಗನಸು.....