Monday, December 15, 2008

ಹಲೋ ಗೆಳೆಯರೇ, ತುಂಬಾ ದಿನಗಳಾಗಿದ್ವು ನನ್ನ ಬ್ಲಾಗ್ ಅಪ್ಡೇಟ್ ಮಾಡಿ, thank god ಕಡೆಗೂ ಈಗ ಸಮಯ ಸಿಕ್ಕಿದೆ. ಕೆಲ ದಿನಗಳಿಂದ ಒಂದು ಮಾತು ಮನಸಲ್ಲಿ ಉತ್ತರ ಸಿಗದೆ ಗೊಂದಲದ ಗೂಡಾಗಿದೆ ರೀ. ಈ ಸಾರಿ ಏನು ಬರೆಯೋದು ಅಂತಾನೆ ಗೊತ್ತಾಗ್ತಿರ್ಲಿಲ್ಲ, ಆದ್ರೆ ಒಂದ್ ವಿಷ್ಯ ನಿಮ್ ಹತ್ರ ಹೇಳಲೇ ಬೇಕು. ಎನ್.ಡಿಟಿವಿ ಇಮ್ಯಾಜಿನ್ ನಲ್ಲಿ 'ಜಸುಬೇನ್ ಜಯಂತಿ ಲಾಲ್ ಜೋಷಿ ಕಿ ಜಾಯಿಂಟ್ ಫ್ಯಾಮಿಲಿ' ಅನ್ನೋ ಧಾರಾವಾಹಿ ಪ್ರಸಾರವಾಗುತ್ತೆ. ಅದೊಂದು ತುಂಬು ಕುಟುಂಬದ ಸುತ್ತ ಸುತ್ತುವ ಕಥೆ. ಈಗಲೂ ಅವಿಭಕ್ತ ಕುಟುಂಬಗಳಿವೆ ಅನ್ನೋದನ್ನ, ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನೋದನ್ನ ಪದೇ ಪದೇ ನಿರ್ದೇಶಕರು ಪ್ರೂವ್ ಮಾಡ್ತಾನೆ ಇರ್ತಾರೆ. ಕೆಲವೊಮ್ಮೆ ತೀರಾ ಅತಿ ಅನ್ನಿಸಿದ್ರೂ 'ಜಸುಬೇನ್...' ತನ್ನ ಲವಲವಿಕೆಯಿಂದ ನೋಡುಗರಿಗೆ ಇಷ್ಟ ಆಗುತ್ತೆ.
ಪೀಠಿಕೆ ಜಾಸ್ತಿ ಆಯ್ತೇನೋ, ಆದ್ರೆ ಹೇಳ್ತೀನಿ ಕೇಳಿ.

ಇತ್ತೀಚಿನ ಎಪಿಸೋಡ್ ಗಳಲ್ಲಿ ಇದರಲ್ಲಿ ಬರುವ ನಂದಿನಿ ಪಾತ್ರಧಾರಿಗೆ ಆಕೆಯ ಲಂಗ್ಸ್ ಶೇ೯೫ ರಷ್ಟು ಫೇಲ್ ಆಗುತ್ತೆ. ಆಕೆ ಬದುಕುವ ಸಂಭವ ತೀರಾ ಕಮ್ಮಿ ಅಂತಾರೆ ವೈದ್ಯರು. ಇದನ್ನೇ ಸುಮಾರು ೨-೩ ವಾರ ಎಳೆದು ಎಳೆದು ಅಂತು ದೇವರ ದಯೆಯಿಂದ ಆಕೆ ಹುಶಾರಾಗೆ ಬಿಡ್ತಾಳೆ. ಇದೆ ಕಾರಣಕ್ಕೆ ಮುರಿದು ಬೀಳಲಿದ್ದ ಮದುವೇನು ಸಾಂಗವಾಗಿ ನೆರವೇರುತ್ತೆ. ನಿನ್ನೆಯಂತೂ ಇದೆಲ್ಲ ವಾಸ್ತವ ಆಗಿದ್ರೆ ಎಷ್ಟು ಚೆನ್ನ ಆಲ್ವಾ ಅನ್ನಿಸ್ತಿತ್ತು. ಯಾಕೆ ಅಂತೀರಾ? ಸುಮಾರು ೨ ವಾರಗಳ ಹಿಂದಷ್ಟೇ ನಮ್ಮ ಮನೆಗೆ ಸಿಬಿಲ್ ಅನ್ನೋ ಹುಡುಗಿ ಬಂದಿದ್ದಳು. ನಮ್ಮ ಪಿಜಿ ಮಾಲೀಕರ ಸಂಬಂಧಿ. ನೋಡೋಕೆ ಅದೆಷ್ಟು ಚೆನ್ನ ಅವಳು. ಚೆನ್ನಾಗಿ ಭರತ ನಾಟ್ಯ ಮಾಡ್ತಾಳೆ, ನರ್ಸಿಂಗ್ ಮಾಡಿದ್ದಾಳೆ. ಒಳ್ಳೆ ಕಡೆ ಕೆಲಸ ಸಿಕ್ಕರೆ ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೊಳೋ ಆಸೆ ಜವಾಬ್ದಾರಿ ಈಡೇರುತ್ತೆ ಅಂತ ಹೇಳ್ತಾ ಇದ್ಲು. ಅವಳ ಮುಖದಲ್ಲಿದ್ದ ಮುಗ್ಧತೆ ನಂಗೆ ತುಂಬಾ ಇಷ್ಟ ಆಯ್ತು. ಆದ್ರೆ ಈ ವಿಧಿ ಅನ್ನೋದಿದ್ಯಲ್ಲ? ಅದು ತುಂಬಾ ಕೆಟ್ಟದ್ದು. ಯಾವಾಗಲೂ ಒಳ್ಳೆವ್ರಂದ್ರೆ ಅದಕ್ಕೆ ತುಂಬಾ ಇಷ್ಟ ಇರ್ಬೇಕು. ಮೊನ್ನೆ ಮೊನ್ನೆ ತಾನೆ ನೋಡಿದ್ದ ಈ ಮುದ್ದು ಹುಡುಗಿ ಮಲೇರಿಯಾ ಬಂದು ಆಸ್ಪತ್ರೆ ಸೇರಿದಳು. ಅಲ್ಲಿ ೩ ದಿನ ಕಳೆದ ಮೇಲೆ ಗೊತ್ತಾಯ್ತು ಅದು ಬರೀ ಮಲೇರಿಯಾ ಅಲ್ಲ, ಡೆಂಗ್ಯೂ, ಮತ್ತು ನ್ಯುಮೋನಿಯಾ ಕೂಡ ಆ ದೇಹವನ್ನು ಕಿತ್ತು ತಿನ್ನ ತೊಡಗಿವೆ ಅಂತಾ. ಅಬ್ಬಾ, ವೈದ್ಯರು ಬದುಕುವ ಸಂಭವ ಕಮ್ಮಿ ಅಂದ್ರು.

ಅಕ್ಷರಶಃ ಬೆಳದಿಂಗಳ ಬಾಲೆಯ ಹಾಗಿದ್ದ ಆಕೆ ಈಗ ಹೇಗಿದ್ದಾಳೆ ಗೊತ್ತಾ? ನಮಗೆಲ್ಲ ಉಳಿದಿದ್ದ ಒಂದೇ ದಾರಿ ಆ ದೇವ್ರು. ಒಂದು ಕ್ಷಣ ಬಿಡದೆ ಪ್ರಾರ್ಥನೆ ಮಾಡಿದ್ವಿ. ಸಿಕ್ಕ ಸಿಕ್ಕವರಿಗೆಲ್ಲ ದೇವರಲ್ಲಿ ಬೇಡಿ ಅಂತ ಎಸ್ಸೆಮ್ಮೆಸ್ಸು ಕಳಿಸ್ದೆ ನಾನು. ಕೆಲವು ಸಹೃದಯಿಗಳು ಅದಕ್ಕೆ ಸ್ಪಂದಿಸಿದರು ಕೂಡ. ಆಗ ನನ್ನ ಮನಸ್ಸಿಗೆ ಇದೆ ನಂದಿನಿ ಬಂದಳು. ಇನ್ನೇನು ಸಾವಿನ ಮನೆ ಕದ ತಟ್ಟಿ ನಿಂತವಳು ಅದೆಷ್ಟು ಚೆನ್ನಾಗಿ ಗುಣವಾದಳು? ಸಿಬಿಲ್ ಗೂ ಹಾಗೆ ಆದ್ರೆ? ಛೆ! ತಿಳಿದು ತಿಳಿದು ನಾನ್ಯಾಕೆ ಒಳ್ಳೆ ಫಿಲ್ಮಿ ಆಗಿ ಯೋಚಿಸ್ತಿದ್ದಿನಿ? ವಾಸ್ತವ ಬೇರೆ ತಾನೆ? ಹೇಳಿ ಕೇಳಿ ಆಕೆ ನನ್ನ ಹತ್ತಿರದ ಗೆಳತಿಯಲ್ಲ, ನನ್ನ ಸಂಬಂಧಿಯಲ್ಲ. ಆದ್ರೆ ಅದೊಂದು ಜೀವ ತಾನೆ? ಅದನ್ನು ನಂಬಿ ಕುಳಿತ ಮತ್ತಿಬ್ಬರು ಅಮಾಯಕರು ಕೈಲಿ ಜಪ ಸರ ಹಿಡಿದು ಹಗಲು ರಾತ್ರಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ ( ಆಕೆಯ ತಂದೆ ತಾಯಿ). ದೇವರ ದಯೆ ನಮ್ಮ ಕಡೆ ಇದ್ಯೇನೋ ಆಕೆ ಆಶ್ಚರ್ಯವೆಂಬಂತೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಇದೊಂದು ಮಾತು ನಮ್ಮಲ್ಲಿ ಉತ್ಸಾಹ ಮೊಡಿಸಿದೆ. ಸಿನಿಮಾ ಸೀರಿಯಲ್ ಗಳಲ್ಲಿ ಡೈರೆಕ್ಟರುತನಗೆ ಬೇಕಾದ ಹಾಗೆ ಪಾತ್ರಗಳನ್ನು ಸಾಯಿಸಿ ಮತ್ತೆ ಬದುಕಿಸುವುದು ಅವರಿಗೆ ರೀಲ್ ಕತ್ತರಿಸಿದಷ್ಟೇ ಸುಲಭ. ಆದ್ರೆ ರಿಯಲ್ ಲೈಫ್ ಹಾಗಲ್ಲವಲ್ಲ? ಎಲ್ಲಕ್ಕೂ ಸೂತ್ರಧಾರ ಅವನೇ ತಾನೆ? ಸದ್ಯ ದೇವರ ಕೃಪೆಯಿಂದ ಎಲ್ಲಾ ಒಳ್ಳೆದಾಗಲಿ ಅನ್ನೋದು ನಮ್ಮೆಲ್ಲರ ಆಶಯ. ನೀವು ಈ ಲೇಖನ ನೋಡಿದ್ರೆ ಆ ಜೀವಕ್ಕಾಗಿ ಒಂದೇ ಒಂದು ಶುಭ ಹಾರೈಕೆಯನ್ನ ಕೊಡ್ತಿರಾ. ಅದಕ್ಕೆ ಕಾಸು ಖರ್ಚು ಮಾಡಬೇಕಿಲ್ಲ. ಮನಸ್ಸು ಮಾಡಬೇಕು ಅಷ್ಟೆ.