Monday, November 9, 2009

ಜೆ.ಕೆ.ರೋಲಿಂಗ್ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

Sunday, October 18, 2009

ಹ್ಯಾರಿ ಪಾಟರ್ ಜಾದೂ ಜಗತ್ತಿಗೆ ಸ್ವಾಗತ...

ಮನುಷ್ಯ ಕಲ್ಪನಾಜೀವಿ. ಅವನ ಕಲ್ಪನೆಗಳಿಗೆ ಇತಿಮಿತಿಯೇ ಇಲ್ಲ. ಕಲ್ಪಿಸಿಕೊಂಡಷ್ಟೂ ಹೊಸತನ್ನು ಸೃಷ್ಟಿಸುತ್ತದೆ. ಯಾಕಂದ್ರೆ ಕಲ್ಪನೆ ಎಂಬುದೇ ಹಾಗೆ. ಇಲ್ಲಿ ಸುಂದರವಾದ ಕನಸಿನ ಲೋಕ, ಮಾಯಾ ಕಿನ್ನರಿ, ಊಹೆಗೂ ನಿಲುಕದಂತಹ ವಿಚಿತ್ರ ಮಾದರಿಯ ಜೀವಿಗಳು, ಹಾರುವ, ತೇಲುವ ಗಗನ ನೌಕೆಗಳು, ಮ್ಯಾಜಿಕ್ ಮಹಾಪೂರಗಳಿಂದ ಹಿಡಿದು ಭಯಾನಕ ಸನ್ನಿವೇಶಗಳು, ವಿಷಕಾರುವ ಹಾವುಗಳು, ಕಣ್ಣ ಮುಂದೆ ಕಾಡುವ ರಕ್ಕಸನ ಪ್ರಾಣವನ್ನು ಹಿಡಿದು ಮತ್ತೆಲ್ಲೋ ಅವಿತು ಕೂತ ಹಕ್ಕಿ ಹೀಗೆ ಹರಿಯುವ ಬಗೆಬಗೆಯ ಕಲ್ಪನಾ ಲಹರಿಗೆ ಕೊನೆಮೊದಲಿಲ್ಲ. ಇಂತಹ ಬಹಳಷ್ಟು ಕಥೆಗಳನ್ನು ಎಲ್ಲರೂ ಓದಿರ್ತೀವಿ, ಕೇಳಿರ್ತೀವಿ. ಇವುಗಳನ್ನು ಓದಿದಷ್ಟು ಸರಾಗವಾಗಿ ದೃಶ್ಯರೂಪದಲ್ಲಿ ನಿರೂಪಿಸಿ ಗೆಲ್ಲುವುದು ಸುಲಭವಲ್ಲ. ಆದ್ರೆ ಅದನ್ನು ಕಣ್ಣಿಗೆ ಕಟ್ಟುವಂತೆ ಅಕ್ಷರಗಳಲ್ಲಿ ಸೃಷ್ಟಿಸಿದ್ದನ್ನು ದೃಶ್ಯೀಕರಿಸಿ ಗೆದ್ದು ಮನೆಮಾತಾದ ಸಿನಿಮಾಗಳಲ್ಲಿ ಹ್ಯಾರಿ ಪಾಟರ್ ಗೆ ಅಗ್ರಸ್ಥಾನ. ಮೂಲತಃ ಪುಸ್ತಕ ರೂಪದಲ್ಲಿದ್ದ ಹ್ಯಾರಿ ಪಾಟರ್ ಕಾದಂಬರಿಯನ್ನು, ಅದು ಗಳಿಸಿದ ಜನಪ್ರಿಯತೆಯಿಂದ ದೃಶ್ಯರೂಪಕ್ಕೆ ತರಲಾಯಿತು. ನಿಜ ಹೇಳಬೇಕಂದ್ರೆ ಹ್ಯಾರಿ ಪಾಟರ್ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನ ಪಾತ್ರ.


ಹ್ಯಾರಿ ಪಾಟರ್ ಮೇಲೆ ಅಭಿಮಾನಿಗಳ ಪ್ರೀತಿಯನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟವೇ. ನನಗೂ ಹ್ಯಾರಿ ಪಾಟರ್ ಬಗ್ಗೆ ತಿಳಿಯುವ ಕುತೂಹಲ ಉಂಟಾಗಿದ್ದು ತೀರಾ ಇತ್ತೀಚೆಗೆ. ಇದಕ್ಕೂ ಮುನ್ನ ಸುದ್ದಿಗಾಗಿ ಸ್ಕ್ರಿಪ್ಟ್ ಬರೆಯಬೇಕೆಂಬ ಕಾರಣಕ್ಕಾಗಿ ಅದೊಂದು ಹಾಲಿವುಡ್ ಮೂವಿ ಅಂತ ಅಲ್ಪಸ್ವಲ್ಪ ತಿಳಿದುಕೊಂಡಿದ್ದೆ. ಆದ್ರೆ ಹ್ಯಾರಿ ಪಾಟರ್ ಎಂಬ ಜಗದ್ವಿಖ್ಯಾತ ಮಾಯಾಲೋಕದ ಬಗ್ಗೆ ನನ್ನ ಜ್ಞಾನ ಅತ್ಯಲ್ಪ ಅಂತ ಗೊತ್ತಾದದ್ದೇ ಆ ಸಿನಿಮಾ ನೋಡಿದ ಮೇಲೆ, ಪ್ರತಿಯೊಂದು ಪಾತ್ರವನ್ನು ಅದರ ಹಿನ್ನೆಲೆಯನ್ನು ತಿಳಿದ ಮೇಲೆ. ಅರೇ ಎರಡೂವರೆ ಗಂಟೆಯ ಸಿನಿಮಾ ವಿಷಯ, ಜ್ಞಾನದವರೆಗೂ ಬಂತಲ್ಲ! ಅದೇನು ಅಷ್ಟೊಂದು ಪ್ರಾಮುಖ್ಯತೆ ಅದಕ್ಕೆ ಅಂತ ನೀವು ಹುಬ್ಬೇರಿಸಬಹುದು. ಆದ್ರೆ ಈ ಹ್ಯಾರಿ ಪಾಟರ್ ಅನ್ನೋ ಕಾದಂಬರಿ/ಸಿನಿಮಾವನ್ನು, ಓದಿದ/ನೋಡಿದ ಮೇಲೆ ನಿಮಗೇ ತಿಳಿಯುತ್ತೆ ಅದೆಂತಹ ಮಾಯಾಲೋಕ ಅಂತ. ಯಾಕಂದ್ರೆ ಇದು ಬರೀ ಎಂಡೂವರೆ ಗಂಟೆ ನೋಡಿ ಎದ್ದು ಹೋಗುವ ಸಿನಿಮಾ ರೀತಿ ಅಲ್ಲ. ನಿಮ್ಮನ್ನು ತನ್ನೊಂದಿಗೇ ಆ ಲೋಕದೊಳಕ್ಕೆ ವಿಹರಿಸುವಂತೆ ಮಾಡುವ ಯಕ್ಷಲೋಕ. ಅಲ್ಲೊಮ್ಮೆ ಹೊಕ್ಕರೆ ಆ ಮಜವೇ ಬೇರೆ ಬಿಡಿ!

ಹ್ಯಾರಿ ಪಾಟರ್ ಬಗ್ಗೆ ಅಂತರ್ಜಾಲದಲ್ಲಿ ಒಮ್ಮೆ ಜಾಲಾಡಿದರೆ ಸುಸ್ತಾಗುವಷ್ಟು ಮಾಹಿತಿ ಮಹಾಪೂರವೇ ನಿಮ್ಮ ಮುಂದೆ ತಡವಿ ಬೀಳುತ್ತವೆ. ಆದ್ರೆ ಎಲ್ಲಾ ಇಂಗ್ಲಿಷ್ ನಲ್ಲೇ ಇರೋದ್ರಿಂದ ಕನ್ನಡದಲ್ಲಿ ತಿಳಿಯಲಿಚ್ಛಿಸುವವರಿಗೆ ಸ್ವಲ್ಪ ನಿರಾಶೆ ಖಂಡಿತ, ಆ ನಿರಾಶೆ ನನಗೆ ಸಾಕಷ್ಟು ಸಲ ಆಗಿದ್ದಕ್ಕೇ ಹೀಗೆ ಬರೆಯಲು ಮನಸ್ಸಾಯಿತು. ನಿಜವಾಗಿ ಹ್ಯಾರಿ ಪಾಟರ್ ಬಗ್ಗೆ ಏನಾದರೂ ಬರೆಯಬೇಕೆಂದು ತುಂಬಾ ಅನ್ನಿಸಿದ್ದು ಇದುವರೆಗೂ ಕನ್ನಡದಲ್ಲಿ ಹೆಚ್ಚಿನವರ್ಯಾರು ಆ ಪ್ರಯತ್ನ ಮಾಡದಿದ್ದದ್ದು. ಬರೆಯೋಕೆ ಇನ್ನೂ ಅತಿಮುಖ್ಯ ಸಂಗತಿಗಳು ಜಗತ್ತಿನಲ್ಲಿ ಸಾಕಷ್ಟಿವೆಯಲ್ಲ ಅನ್ನಿಸಿದ್ರೂ, ಹ್ಯಾರಿ ಪಾಟರ್ ಬಗ್ಗೆಯೂ ತಿಳಿಸುವ ಹಂಬಲ ನನ್ನ ಬ್ಲಾಗ್ ನಲ್ಲಿ ಈಡೇರುತ್ತಿದೆ ಅನ್ನೋ ಖುಷಿ ನನಗುಂಟು. ಈ ಮೂಲಕ ಹ್ಯಾರಿ ಮತ್ತು ಗೆಳೆಯರ ಮಾಯಾಪ್ರಪಂಚವನ್ನು ನಾನು ಅಕ್ಷರ ರೂಪದಲ್ಲಿ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.

ಈ ಹ್ಯಾರಿ ಪಾಟರ್ ಹುಟ್ಟು ಒಂದು ಕುತೂಹಲಕಾರಿ ಕಥೆ. ನೇರವಾಗಿ ಹ್ಯಾರಿ ಬಗ್ಗೆ ಹೇಳುವ ಮುನ್ನ ಲೇಖಕಿಯ ಬಗ್ಗೆ ಮೊದಲು ತಿಳಿಸುತ್ತೇನೆ. ಬ್ರಿಟನ್ ಮೂಲದ ಜೆ.ಕೆ.ರೋಲಿಂಗ್ ಕನಸಿನ ಕೂಸು ಹ್ಯಾರಿ ಪಾಟರ್. ಜೋನ್ ಜೋ ಮುರ್ರೀ ಇವರ ಪೂರ್ಣ ಹೆಸರು. ಆದ್ರೆ ಎಲ್ರಿಗೂ ಜೆ.ಕೆ.ರೋಲಿಂಗ್ ಅಂತಲೇ ಪರಿಚಿತರು. ರೋಲಿಂಗ್ ಜನಿಸಿದ್ದು 1965ರ ಜುಲೈ 31ರಂದು ಇಂಗ್ಲೆಂಡ್ ನ ಗ್ಲೌಸ್ಟರ್ ಶೈರ್ ಬಳಿಯ ಯೇಟ್ ನಲ್ಲಿ. ಪೀಟರ್ ಜೇಮ್ಸ್ ರೋಲಿಂಗ್ ಮತ್ತು ಆನಿ ರೋಲಿಂಗ್ ಇವರ ತಂದೆ ತಾಯಿ. ಡ್ಯಾನಿ ಎಂಬ ಓರ್ವ ತಂಗಿಯಿದ್ದು ರೋಲಿಂಗ್ ಅವರ ಪ್ರೈಮರಿ ಶಿಕ್ಷಣ ಸೆಂಟ್ ಮೈಕೆಲ್ಸ್ ಪ್ರೈಮರಿ ಶಾಲೆಯಲ್ಲಾಯ್ತು. ಪ್ರೌಢಶಿಕ್ಷಣ ವೀಡೀನ್ ಸ್ಕೂಲ್ ಆಂಡ್ ಕಾಲೇಜ್ ನಲ್ಲಾಯಿತು. ಎಕ್ಸೆಟರ್ ಯೂನಿವರ್ಸಿಟಿಯಲ್ಲಿ ಫ್ರೆಂಚ್ ಮತ್ತು ಸಾಹಿತ್ಯದಲ್ಲಿ ಬಿ.ಎ ಮಾಡಿದರು.Friday, August 28, 2009

ಮತ್ತೆ ಬಂದ ಗಣೇಶ ...

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ, ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ...ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ, ಮಂಗಳವಾ ತರುತಲಿರುವ ಶುಭದ ಚತುರ್ಥಿ... ಹೌದು, ಮತ್ತೆ ಗಣೇಶ ಚತುರ್ಥಿ ಬಂದಿದೆ. ಗಣೇಶನ ಹಬ್ಬ ಅಂದ್ರೆ ಎಲ್ಲರಿಗೂ ಖುಷಿ ಕೊಡುವ ಹಬ್ಬ. ಹಿರಿಯರಿಂದ ಹಿಡಿದು ಮನೆಯ ಪುಟ್ಟ ಪುಟ್ಟ ಮಕ್ಕಳೂ ಗಣೇಶನ ಹಬ್ಬ ಬಂತೂಂದ್ರೆ ಸಂಭ್ರಮಿಸುತ್ತಾರೆ. ತಮ್ಮ ಮನೆಗೆ ಗಣಪನ ಮೂರ್ತಿ ತರುವುದೇ ಅವರಿಗೆ ಅತಿ ಸಂತಸದ ಸಂಗತಿ. Even ನಂಗೂ ಗಣೇಶನ ಹಬ್ಬ ಅಂದ್ರೆ ತುಂಬಾ ಇಷ್ಟ. ಈಸಲ ಅಂತೂ ನಾನು ಮನೆಯನ್ನು ತುಂಬಾ ಮಿಸ್ ಮಾಡ್ಕೊತಿದೀನಿ. ಬೇರೆ ಹಬ್ಬಗಳಿಗೆ ರಜೆ ಸಿಗದಿದ್ರೆ ಸ್ವಲ್ಪ ಬೇಜಾರಾದ್ರೂ ಸುಮ್ಮನಾಗ್ತಿದ್ದೆ. ಆದ್ರೆ ಈ ಸಲ ಗೌರಿ-ಗಣೇಶ ಹಬ್ಬಕ್ಕೆ ಮನೆಗೆ ಹೋಗೋ ಅವಕಾಶ ಸಿಗದಿದ್ದಕ್ಕೆ ತುಂಬಾ ಫೀಲ್ ಆಗ್ತಿದೆ. ಹಬ್ಬದ ದಿನದಂದು ಬಿಕೋ ಅನ್ನೋ ಆಫೀಸಿನ ವಾತಾವರಣದಲ್ಲಿ ಕೆಲಸ ಮಾಡೋ ಸಂಕಟ ನನಗೆ ಚೆನ್ನಾಗಿ ಗೊತ್ತು.

ಇತರೆ ಎಲ್ಲಾ ಹಬ್ಬಗಳಿಗೂ ಹೋಲಿಸಿದರೆ ಗಣೇಶನ ಹಬ್ಬದ ಖದರ್ರೇ ಬೇರೆ ಬಿಡಿ. ಊರಲ್ಲಂತೂ ಗಣೇಶ ಚತುರ್ಥಿ ಬರಲು ಇನ್ನೂ 15 ದಿನಗಳಿವೆ ಎಂಬಂತೇ ನಮ್ಮ ಏರಿಯಾ ಹುಡುಗರ ತಂಡಗಳು ಸಿದ್ಧತೆಯಲ್ಲಿ ತೊಡಗುತ್ತಿದ್ದವು. ಮನೆ ಮನೆಗಳಿಗೂ ಹೋಗಿ ಗಣೇಶನನ್ನು ಕೂರಿಸಲು ಚಂದಾ ಎತ್ತುತ್ತಿದ್ದರು. ಅಲ್ಲೂ ಪೈಪೋಟಿ. ಯಾಕಂದ್ರೆ ಏರಿಯಾಗೊಂದೇ ಗಣಪತಿ ಆದ್ರೆ ಓಕೆ, ಇಲ್ಲಿ ಹಾಗಲ್ಲವಲ್ಲ. ಏರಿಯಾಗೆ 2ರಿಂದ 3 ಕಡೆ ಗಣೇಶನನ್ನು ಕೂರಿಸ್ತಿದ್ರು. ಎಲ್ಲರಿಗೂ ಚಂದಾ ಕೊಟ್ಟು ಕೊಟ್ಟು ಸಾಕಾಗಿ ಎಷ್ಟೋ ಮನೆಗಳಲ್ಲಿ ಇವರ ಗ್ಯಾಂಗುಗಳು ಬರ್ತಿವೆ ಅಂದ್ರೆ ಸಾಕು ಮಕ್ಕಳ ಹತ್ರ ಮನೇಲಿ ಯಾರೂ ದೊಡ್ಡೋರು ಇಲ್ಲ ಅಂತ ಹೇಳಿಸೋ ಪರಿಪಾಠ ಶುರುವಾಗಿಬಿಡ್ತು! ನಮ್ಮ ಮನೆಯಲ್ಲೂ ಅಪ್ಪ ಇಲ್ಲದ ಸಮಯದಲ್ಲಿ ಇದೇ ಡೈಲಾಗು! ಆದ್ರೆ ನಮಗೆ ಹೀಗೆಲ್ಲಾ ಹೇಳೋಕೋ ಮುಜುಗರ. ಅದಕ್ಕೇ ಅಪ್ಪನಿಗೆ ದಬಾಯಿಸಿ ಮಾಮೂಲಾಗಿ ಚಂದಾ ಕೇಳಲು ಬರ್ತಿದ್ದ ಗುಂಪಿನವರಿಗೆ ಬೆಳಗ್ಗೆಯೇ ವಸೂಲಿ ಮಾಡಿಟ್ಟುಕೊಂಡು ಸಂಜೆ ಬಂದಾಗ ಅವರಿಗೆ ಕೊಡ್ತಿದ್ದೆವು. ಹೀಗೆ ಶುರುವಾಗ್ತಿತ್ತು ಗಣೇಶನ ಹಬ್ಬದ ಅಬ್ಬರ. ನಮಗಂತೂ ಗೌರಿ ಹಬ್ಬದಂದು ಹೊಸ ಬಟ್ಟೆ, ಬಳೆ ತೊಟ್ಟು ಸಂಭ್ರಮಿಸೋದೇ ಖುಷಿ. ನಾನಂತೂ ಅವತ್ತು ಬೆಳ್ಳಂಬೆಳಗೆ ಅಮ್ಮನ ಕೂಗಿಗೆ ಎದ್ದರೆ, ಸ್ನಾನ ಮಾಡಿ ಮಡಿಯುಟ್ಟು ಮಾಡಬೇಕಿದ್ದ ಮೊದಲ ಕಾರ್ಯ ಮನೆ ಮುಂದೆ ರಂಗುರಂಗಿನ ರಂಗೋಲಿ ಬಿಡಿಸೋದು. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಹಬ್ಬದ ದಿನ ನಾನು ಬಿಡಿಸುತ್ತಿದ್ದ ರಂಗೋಲಿ ಯಾವುದು ಹೇಗೆ ಕಲರ್ ತುಂಬಿಸಿದ್ದೇನೆ ಅಂತ ನೋಡೋಕೆ ಬೆಳಗ್ಗೆ 8ರ ಹೊತ್ತಿಗೆ ನನ್ನ ಗೆಳೆಯರು ಮನೆ ಮುಂದೆ ಜಮಾಯಿಸುತ್ತಿದ್ರು!

ಇನ್ನು ಮನೆಯೊಳಗಿನ ಕೆಲಸದಲ್ಲಿ ಪೂಜೆ ಪುನಸ್ಕಾರವೆಲ್ಲಾ ಅಮ್ಮನ ವಿಭಾಗ. ಅಪ್ಪ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿದ್ರೆ, ಅಡುಗೆ ಮನೆಯಲ್ಲಿ ಹೂರಣ ರುಬ್ಬಿ ಹೋಳಿಗೆ ಬೇಯಿಸುವುದು ನನ್ನ ಪಾಲು. ನನ್ನ ತಂಗಿಯೂ ಬೇಯಿಸುವುದು ಕಲಿಯಲಿ ಅಂತ ಕೂರಿಸಿದ್ರೆ ಅವಳು ಕೈಯಿಟ್ರೆ ಹೋಳಿಗೆಗಳು ಹರಿದು ಚಿಂದಿ ಚಿಂದಿ ಆಗ್ತಿದ್ವು! ಮತ್ತೆ ಆ ಕೆಲಸ ನನ್ನ ತಲೆಗೇ ಬರ್ತಿತ್ತು. ಅಬ್ಬಾ ಹೋಳಿಗೆ, ಕಾಯಿಹಾಲು, ನಿಂಬೆಹಣ್ಣಿನ ಚಿತ್ರಾನ್ನ, ಪಲ್ಯ, ಹೋಳಿಗೆ ಸಾರು, ನೆನಪಾದ್ರೆ ಬಾಯಲ್ಲಿ ನೀರೂರುತ್ತೆ, ಜೊತೆಗೆ ಕಣ್ಣಲ್ಲೂ ಕೂಡ. ಯಾಕಂದ್ರೆ ಹಬ್ಬದ ದಿನ ನನ್ನ ಪಾಲಿಗೆ ಆಫೀಸೇ ಗತಿ. ಗಣೇಶನ ಹಬ್ಬದಂದು ಚಿಕ್ಕವರಿದ್ದಾಗ ಬಟ್ಟಲಲ್ಲಿ ಅಕ್ಷತೆ ತೆಗೆದುಕೊಂಡು ಮನೆ ಮನೆಗಳಿಗೂ ಹೋಗಿ ನಿಮ್ ಮನೇಲಿ ಗಣಪತಿ ಇಟ್ಟಿದ್ದೀರಾ? ‘ ಅಂತ ಕೇಳಿ ಕೇಳಿ ಅಕ್ಷತೆ ಹಾಕಿ ಬರ್ತಿದ್ವಿ. ಆದ್ರೆ ಮನೆ ಬದಲಾಯಿಸಿ ಹೊಸ ಏರಿಯಾಗೆ ಬಂದ್ಮೇಲೆ ಈ ಕೆಲಸಕ್ಕೆ ಪೂರ್ಣ ವಿರಾಮ ಬಿತ್ತು. ಗಣೇಶ ಚತುರ್ಥಿಯಂದು ನಾನು ನಮ್ಮ ಮನೆ ಮುಂದೆ ಪ್ರತಿವರ್ಷವೂ ಭಿನ್ನ ಭಿನ್ನ ಮಾದರಿಯ ಗಜಮುಖನನ್ನು ರಂಗೋಲಿಯಲ್ಲಿ ಬಿಡಿಸುತ್ತಿದ್ದುದು ನೆನಪು. ಗಣೇಶನ ಹೆಸರಲ್ಲಿ ರುಚಿಯಾದ ಕಾಯಿ ಕಡುಬು, ಪಾಯಸ ಚಪ್ಪರಿಸದ್ದಂತೂ ಮರೆಯೋ ಹಾಗೇ ಇಲ್ಲ. ಇನ್ನು ನಾವಂತೂ ಕಾತರದಿಂದ ಕಾಯ್ತಿದ್ದದ್ದು ಸಂಜೆಗೆ. ಸಂಜೆ ನಮ್ಮೆಲ್ಲರ ಮನೆಗಳಿಗೆ ಬಂದು ಚಂದಾ ಕೇಳ್ತಿದ್ದ ಹುಡುಗರೆಲ್ಲಾ ಸಖತ್ ಗ್ರಾಂಡ್ ಆಗಿ ಗಣೇಶನನ್ನು ಕೂರಿಸಿ 3 ದಿನ ವೈಭವಯುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಮಾರುತಿ ಯುವಕರ ಸಂಘ ಅಂದ್ರೆ ನಮ್ಮ ಏರಿಯಾದಲ್ಲಿ ಫೇಮಸ್ಸು. ಚಂದಾ ಪಡೆದು ಎಲ್ಲಿ ಗಣೇಶನನ್ನು ಕೂರಿಸ್ತಿದ್ದೀವಿ ಅಂತ ಹೇಳದೇ ಮಾಯವಾಗ್ತಿದ್ದ ಹುಡುಗರಂತಲ್ಲ ಅವ್ರೆಲ್ಲಾ. ಹಿರಿಯರು ಕಿರಿಯರಿಗೆಲ್ಲಾ ವಿಭಿನ್ನವಾದ ಸ್ಪರ್ಧೆಗಳನ್ನು ಆಯೋಜಿಸಿ ಮೆಚ್ಚುಗೆ ಪಡೆಯುತ್ತಿದ್ರು. ಒಂದಿನ ಮುಂಚೆಯೇ ಬಂದು ಪಾಂಪ್ಲೆಟ್ ಗಳನ್ನು ಹಂಚಿ ಹೋಗ್ತಿದ್ರು. ನಾವು ಯಾವ್ಯಾವ ಕಾಂಪಿಟೇಷನ್ ಗಳಲ್ಲಿ ಭಾಗವಹಿಸೋದು ಅಂತ ಸ್ಕೆಚ್ ಹಾಕ್ತಾ ಕೂರ್ತಿದ್ವಿ. ಪ್ರತಿ ವರ್ಷ ರಂಗೋಲಿ ಕಾಂಪಿಟೇಶನ್ ನಲ್ಲಿ ನನಗೊಂದು ಬಹುಮಾನ ಗ್ಯಾರಂಟಿ. ಇನ್ನು ಹಾಡು, ನೃತ್ಯ, pick n speak ಅಂತೆಲ್ಲಾ ಬೇರೆ ಬೇರೆ ವಿಭಾಗಗಳಲ್ಲೂ ಬಹುಮಾನಗಳು ಬರ್ತಿದ್ವು. ಮೊದಲ ವರ್ಷವಂತೂ ನನ್ನದೂ ತಂಗಿಯದ್ದೂ ಸೇರಿ 8 ಬಹುಮಾನಗಳು ಬಂದಿದ್ದವು. ನನ್ನದೇ 5 ಇದ್ದವು. ಎಲ್ಲರದ್ದೂ ಒಂದೇ ಕಂಪ್ಲೇಂಟು. ನಾವೂ ಚಂದಾ ಕೊಟ್ಟಿರ್ಲಿಲ್ವಾ ನಮ್ಮ ಮಕ್ಕಳಿಗೂ ಪ್ರೈಜ್ ಕೊಡಿ ಅಂತ. ಕಡೆಗೆ ಬರುವ ವರ್ಷದಿಂದ ಒಬ್ಬರಿಗೆ ಮ್ಯಾಕ್ಸಿಮಮ್ ಮೂರೇ ಬಹುಮಾನಗಳು ಅಂತ ಕಾನೂನು ಜಾರಿಯಾಯ್ತು!

ಗಣೇಶನನ್ನು ಬಿಡುವ ಕೊನೆಯ ದಿನವಂತೂ ಇಡೀ ಏರಿಯಾದಲ್ಲಿ ಮೆರವಣಿಗೆ ಮಾಡ್ತಿದ್ದದನ್ನು ನೋಡೋಕೆ ಕಾದು ನಿಲ್ತಿದ್ವಿ. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಗಣೇಶನನ್ನು ಹೂವುಗಳಿಂದ ಅಲಂಕರಿಸಿ ಜಯಘೋಷಗಳೊಂದಿಗೆ ಮೆರವಣಿಗೆ ಮಾಡ್ತಿದ್ರು. ನಾವು ಶಾಲೆಗೆ ಹೋಗಿ ನಿಮ್ ಏರಿಯಾದಲ್ಲಿ ಎಷ್ಟ್ ದೊಡ್ಡ ಗಣಪತಿ ಕೂರ್ಸಿದ್ರು ಅಂತ ಕೇಳಿಕೊಂಡು ಕಡೆಗೆ ನಮ್ಮ ಏರಿಯಾದೇ ದೊಡ್ದು ಅಂತ ಸಾಬೀತು ಮಾಡಿಕೊಳ್ತಿದ್ವಿ! ಈಗ ಈ ನೆನಪುಗಳನ್ನೆಲ್ಲಾ ಆ ದಿನಗಳು ಪ್ರತಿಕ್ಷಣ ನನ್ನ ಒಳಗೆ, ಹಸಿರಾಗಿದೆ.... ಅಂತ ಮೆಲುಕು ಹಾಕಬೇಕು ಅಷ್ಟೇ. ಆಫೀಸಿನಲ್ಲಿ ಹಬ್ಬದ ದಿನ ಅಂತ ಸೀರೆಯುಟ್ಟು ಕೈತುಂಬಾ ಬಳೆ ತೊಟ್ಟು ಸಂಭ್ರಮಿಸಿದ್ರೆ ಅಲ್ಲಿಗೆ ಹಬ್ಬ ಮುಗೀತು. ಮನೆಯಿಂದ as usual ಒಂದು ಫೋನ್ ಕಾಲ್ ಬರುತ್ತೆ. ನಿನ್ನನ್ನ ಮಿಸ್ ಮಾಡ್ಕೊತಿದೀವಿ ಅಂತಾರೆ. ಏನೇನು ಅಡಿಗೆ ಅಂತ ಹೇಳಿ ಒಂದಷ್ಟು ಹೊಟ್ಟೆ ಉರಿಸಿ ಫೋನ್ ಇಟ್ರೆ, ಇಲ್ಲಿ ನನ್ನ ಸಂಕಟ ಅವರಿಗೆಲ್ಲಿ ಅರ್ಥವಾಗ್ಬೇಕು?

ಗಣೇಶನ ಹಬ್ಬದ ಹಿಂದಿನ ರಾತ್ರಿ ಕುಳಿತು ಈ ಎಲ್ಲಾ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತ ಈ ಲೇಖನವನ್ನು ಬರಿತಿದ್ದೀನಿ. ವಾಹ್ ಹಬ್ಬಗಳಂದ್ರೆ ಎಷ್ಟು ಚೆನ್ನ ಅಲ್ವಾ? ನನ್ನ ಪಿಜಿ ಹಿಂದಿನ ರಸ್ತೆಯೇ ಸಣ್ಣ ಮಾರ್ಕೆಟ್ ಆಗ್ಬಿಟ್ಟಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ರಸ್ತೆ ತುಂಬಾ ತುಂಬಿ ಹೋಗಿವೆ. ಅಲ್ಲಿ ಕಾಲಿಟ್ರೆ ಹೂಗಳ ಘಮ ಮನಸ್ಸಿಗೆ ಆಹ್ಲಾದ ನೀಡುತ್ತೆ. ನೂರು ರೂಪಾಯಿ ಗಡಿದಾಟಿರೋ ಹೂಮಾಲೆಗಳು ನಮ್ಮೂರಲ್ಲಿ ಎಷ್ಟು ಕಮ್ಮಿ ಅಲ್ವಾ ಅನ್ಸುತ್ತೆ. ಹಸಿರು ತೋರಣಕ್ಕಿಟ್ಟ ಮಾವಿನ ಎಲೆಗಳು ಮನೆಯಲ್ಲಿ ಅಪ್ಪ ತೋರಣ ಕಟ್ಟುವ ದೃಶ್ಯ ಕಣ್ಮುಂದೆ ತರಿಸುತ್ತವೆ. ಎಲ್ಲಾ ನೆನಪಾದ್ರೆ ಕಣ್ಣಂಚಲ್ಲೊಮ್ಮೆ ನೀರಾಡುವಂತೆ ಮಾಡಿಬಿಡ್ತವೆ. ಅದೇ ನಮ್ಮ ಮನೆಯ ಹಬ್ಬದ ಸೊಬಗಿನಲ್ಲಿರೋ ಸಂಭ್ರಮ ಕಣ್ರೀ. ಯಾರ್ಯಾರು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸಿದ್ರೋ ನೀವೇ ಅದೃಷ್ಟವಂತರು ಬಿಡಿ. ನನ್ನ ಅದೃಷ್ಟಕ್ಕೆ ನಮ್ಮ ಪಿಜಿಯಲ್ಲಿ ಕಡೇಪಕ್ಷ ಊಟಕ್ಕೆ ಹೋಳಿಗೆ ಮಾಡಿದ್ರೆ ಹೆಚ್ಚು. ಇಲ್ದಿದ್ರೆ ಇದ್ದೇ ಇದ್ಯಲ್ಲಾ? ಊರಿಂದ ಬರೋವಾಗ ನನ್ನ ಗೆಳತಿ ಅನುಷಾಳ ಅಮ್ಮ ಮರೆಯದೇ ನನಗೋಸ್ಕರ ಸಿಹಿತಿಂಡಿ ಮರೆಯದೇ ಕಳಿಸಿರ್ತಾರೆ. ಅದನ್ನೇ ಚಪ್ಪರಿಸೋದು.

ಬೆನಕ ಬೆನಕ ಏಕದಂತ, ಪಚ್ಚೆ ಕಲ್ಲು ಪಾಣಿ ಮೆಟ್ಲು, ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ, ಗುಡ್ಡಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಘ್ನೇಶ ದೇವನಿಗೆ 21 ನಮಸ್ಕಾರಗಳನ್ನು ಅರ್ಪಿಸುತ್ತಾ ನನ್ನ ಗಣೇಶನ ಹಬ್ಬದ ನೆನಪಿನ ಬುತ್ತಿಯನ್ನು ಪೂರ್ಣಗೊಳಿಸುತ್ತಿದ್ದೇನೆ. ಗಣೇಶ ನಿಮಗೆ ಶುಭವನ್ನೇ ಮಾಡಲಿ ಅಂತ ಹಾರೈಸುತ್ತೇನೆ.

ವೀಕೆಂಡ್ ಮಸ್ತಿ...

ವೀಕೆಂಡ್ ಮಸ್ತಿಯ ಅಸಲಿತನ ಗೊತ್ತಾಗಬೇಕಂದ್ರೆ ಬೆಂಗಳೂರಿಗೇ ಬರ್ಬೇಕು. ವಾರಾಂತ್ಯ ಆರಂಭವಾಗುವ ಮುನ್ನವೇ ಅದನ್ನು ಹೇಗೆ ಕಳೆಯಬೇಕೆಂದು ಪ್ಲಾನ್ ಮಾಡುವ ನೂರಾರು ಜನ ಇಲ್ಲಿದ್ದಾರೆ. ಅದರಲ್ಲೂ ವಾರವಿಡೀ ಪರರಾಷ್ಟ್ರಗಳಿಗಾಗಿ ಬೆವರು ಹರಿಸುವ ಐಟಿ ಉದ್ಯೋಗಿಗಳೇ ಹೆಚ್ಚು. ಹಾಗಾಗಿ ಇವರ ದೃಷ್ಟಿಯಲ್ಲಿ ಶನಿವಾರ ಮತ್ತು ಭಾನುವಾರಗಳಿಗೆ ಇನ್ನಿಲ್ಲದ ಮಹತ್ವ. ಇನ್ನು ಇತರೆ ಜನರೂ ಇದರಿಂದ ಹೊರತಲ್ಲ. ವಿಶೇಷವಾಗಿ ಬೆಂಗಳೂರಿನ ಎಂ.ಜಿ ರಸ್ತೆ, ಬ್ರಿಗೇಡ್ ಮತ್ತು ಕಮರ್ಷಿಯಲ್ ರಸ್ತೆಗಳು ವೀಕೆಂಡ್ ಸಂಭ್ರಮಕ್ಕೆ ಕೈಬೀಸಿ ಕರೆ ನೀಡುತ್ತವೆ. ನನಗೆ ಬೆಂಗಳೂರಿನ ವೀಕೆಂಡ್ ಪ್ರಪಂಚ ಮೊದಮೊದಲು ಇದೇನಪ್ಪಾ ಹೀಗೆ ಅನ್ನಿಸುತ್ತಿದ್ದಾದ್ರೂ ಈಗ ಮಾಮೂಲು ಅನ್ನಿಸಿಬಿಟ್ಟಿದೆ. ಆದ್ರೆ ಮುಂಚಿನಂತೆ ಪ್ರತಿ ವಾರಾಂತ್ಯದಲ್ಲೂ ಬೆಂಗಳೂರು ಅಲೆಯುವ ಭಾಗ್ಯ ನನಗಿಲ್ಲ. ನಮ್ಮ ಕಚೇರಿಯ ಅವಧಿ ಬೇರೆ ರೀತಿ ಇರುತ್ತಾದ್ದರಿಂದ ನಾನು ಸಾಮಾನ್ಯವಾಗಿ ಭಾನುವಾರ ಮತ್ತು ಶನಿವಾರಗಳಂದೂ ವಾರದ ದಿನದಂತೆ ಕೆಲಸ ಮಾಡಬೇಕಿರುತ್ತದೆ. ಆದ್ರೆ ರಾತ್ರಿ ಪಾಳಿ ಮಾಡಿಬಿಟ್ಟರೆ ವಾರಾಂತ್ಯದಲ್ಲಿ ರಜೆ ಖಾಯಂ.

ಈಸಲವೂ ಅಷ್ಟೇ ಅದೆಷ್ಟೋ ದಿನಗಳ ನಂತರ ನನಗೆ ಭಾನುವಾರ ರಜೆಯಿತ್ತು. ನನ್ನ ರೂಂ ಮೇಟ್ ಅನುಷಾ ಕೂಡ ಅಂದು ಆರಾಮಾಗಿದ್ದಳು. ಮನೆಗೆ ಅನುಷಾಳ ಲ್ಯಾಪ್ ಟಾಪ್ ಬಂದ ಮೇಲಂತೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಬಹಳ ದಿನಗಳಾಗಿದ್ದವು. ಸರಿ ಇಬ್ರೂ ಸೇರಿ ಕೆಲ ವಾರಗಳ ಹಿಂದಷ್ಟೇ ತೆರೆಕಂಡಿದ್ದ ಹ್ಯಾರಿ ಪಾಟರ್ ಅಂಡ್ ದ ಹಾಫ್ ಬ್ಲಡ್ ಪ್ರಿನ್ಸ್ನೋಡೋಣ ಅಂತಂದುಕೊಂಡ್ವಿ. ಮೊದಲು ಇದ್ದದ್ದರಲ್ಲಿ ಸ್ವಲ್ಪ ಹತ್ತಿರವಿದ್ದ ಪಿವಿಅರ್ ಮಲ್ಟಿಪ್ಲೆಕ್ಸ್ ಗೆ ಹೋದ್ರೆ ಅಲ್ಲಿ ಬೇಕಂದ್ರೂ ಒಂದೇ ಒಂದು ಟಿಕೇಟು ಬಾಕಿಯಿರಲಿಲ್ಲ. ನಾವೆಷ್ಟು ಎಕ್ಸೈಟ್ ಆಗಿದ್ವಿ ಅಂದ್ರೆ ಇವತ್ತು ಹ್ಯಾರಿ ಪಾಟರ್ ನೋಡೇಬಿಟ್ವಿ ಅಂದ್ಕೊಂಡು ಬಂದವ್ರಿಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಮತ್ಯಾವ್ಯಾವ ಥಿಯೇಟರ್ ಗಳಲ್ಲಿ ಸಿನಿಮಾ ಇದೆ ಅನ್ನೋದೂ ಗೊತ್ತಿಲ್ಲ. ಸ್ನೇಹಿತರಿಗೆ ಫೋನಾಯಿಸಿ ವಿಚಾರಿಸಿದಾಗ ಜಯನಗರದ ಗರುಡಾ ಸ್ವಾಗತ್ ನಲ್ಲಿ 2.30ಕ್ಕೆ ಶೋ ಇದೆ ಅಂತ ತಿಳಿಯಿತು. ತಕ್ಷಣ ಅತ್ತ ದೌಡಾಯಿಸಿದ್ವಿ. ಅಲ್ಲಿ ನಾನು ಗಾಡಿ ಪಾರ್ಕ್ ಮಾಡಿಬರೋವಷ್ಟರಲ್ಲಿ ಟಿಕೇಟ್ ತಗೊಂಡ್ರೆ ಸರಿ, ಅಲ್ಲೂ ಸೋಲ್ಡ್ ಔಟ್ ಆದ್ರೆ ಕಷ್ಟ ಅಂತ ಅನುಷಾ ನನ್ನನ್ನು ಬಿಟ್ಟು ಟಿಕೇಟ್ ಕೌಂಟರ್ ತಲುಪಿದ್ಲು. ಆದ್ರೆ ಪಾಪಿ ಸಮುದ್ರಕ್ಕೆ ಹೋದ್ರೂ ಮೊಳಕಾಲಷ್ಟು ನೀರು ಅನ್ನೋ ಹಾಗೆ ಅಲ್ಲಿ 2.30ಕ್ಕೆ ಹ್ಯಾರಿ ಪಾಟರ್ ನ ಯಾವ್ದೇ ಶೋ ಇರ್ಲಿಲ್ಲ. ಮಾಹಿತಿ ಕೊಟ್ಟ ಪುಣ್ಯಾತ್ಮನಿಗೆ ಫೋನ್ ಮಾಡಿ ಬಾಯಿ ತುಂಬಾ ಬೈಗುಳ ಕೊಟ್ಟಿದ್ದೂ ಆಯ್ತು. ಪಾಪ! ಬೆಂಗಳೂರು ಟೈಮ್ಸ್ ನವರು ಮುದ್ರಿಸಿದ ತಪ್ಪು ಮಾಹಿತಿಗದೆ ಅವರೇನು ತಾನೇ ಮಾಡಿಯಾರು?

ಈಗಾಗ್ಲೇ ಎರಡು ಥಿಯೇಟರ್ ಗಳಿಗೆ ಅಲೆದು ಸಾಕಾಗಿತ್ತು. ಕಡೆಯದಾಗಿ ಫೇಮ್ ಲಿಡೋ ನಲ್ಲಿ 3.30ರ ಶೋ ಇದೆ ಅಂತ ಗೊತ್ತಾಯ್ತು. ಕಡೆಯದಾಗಿ ಅಲ್ಲಿ ಚೆಕ್ ಮಾಡೋಣ ಅಂತ ದೇವರ ಜಪ ಮಾಡುತ್ತಲೇ ಅಲ್ಲಿ ಹೋದ್ವಿ. ನಿಜ ಹೇಳಬೇಕಂದ್ರೆ ಅವತ್ತು ಬೇರೆ ಕೌಂಟರ್ ಗಳಲ್ಲಿ ಟಿಕೇಟ್ ಖರೀದಿ ಮಾಡುತ್ತಿದ್ದವರೆಲ್ಲಾ ಹ್ಯಾರಿ ಪಾಟರ್ ಗಾಗೇ ನಿಂತಂತೆ ನಮಗನ್ನಿಸ್ತಿತ್ತು. ದೇವರೇ ಇಲ್ಲೂ ನಿರಾಸೆ ಮಾಡಬೇಡಪ್ಪಾ ಅಂತ ಬೇಡಿಕೊಂಡೇ ನಮ್ಮ ಸರದಿಗಾಗಿ ಕಾದ್ವಿ. ಅಲ್ಲೋ ನಮ್ಮ ಮುಂದೆ ನಿಂತಿದ್ದ ಹುಡುಗಿಯೂ ಅದೇ ಸಿನಿಮಾಗೆ ಟಿಕೇಟ್ ಖರೀದಿಸುತ್ತಿದ್ದಳೇನೋ, ಸೀಟಿಂಗ್ ವ್ಯವಸ್ಥೆ ಹೊಂದಿಕೆಯಾಗದೇ ಮುಖ ಬಾಡಿಸಿಕೊಂಡು ಹೋದ್ಳು. ಸರಿ ನಾವು ವಿಚಾರಿಸಿದಾಗ 3.30ರ ಶೋಗೂ ಎಳ್ಳುನೀರು ಬಿಡಬೇಕಾಯ್ತು. ಬಾಕಿಯಿದ್ದದ್ದು 6.15ರ ಶೋ. ಅದರಲ್ಲಿ ಮಿಕ್ಕಿದ್ದು ಕೇವಲ ನಾಲ್ಕೇ ಸೀಟುಗಳು. ಅವೂ ನಾಲ್ಕೂ ಒಂದೊಂದು ದಿಕ್ಕಿಗೆ! ವಿಧಿಬರಹ ಘೋರವಾದ್ರೂ ಇಲ್ಲಿ ಪರವಾಗಿಲ್ಲ ಅನ್ನಿಸ್ತು. ಮೊದಲ ಸಾಲಿನಲ್ಲಿ ಎಡ ಮತ್ತು ಬಲಭಾಗದ ಕೊನೆಗಿದ್ದ 2 ಟಿಕೇಟುಗಳೇ ಬೆಸ್ಟು ಅನ್ನಿಸಿ ಖರೀದಿ ಮಾಡಿದ್ವಿ. Atleast ಪಕ್ಕ ಕುಳಿತವರನ್ನು ಜರುಗಲು ಹೇಳಿ adjudst ಮಾಡಿಕೊಳ್ಳಬಹುದೆಂದು ಯೋಚಿಸಿದ್ವಿ.

ಆದ್ರೆ ಶೋ ಇದ್ದದ್ದು ಸಂಜೆ 6.15ಕ್ಕೆ. ಅಲ್ಲಿ ತನಕ ಏನು ಮಾಡೋದು? ಸರಿ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಸೆಂಟ್ರಲ್ ನತ್ತ ಹೋದ್ವಿ. ಅಲ್ಲಿ ಫುಲ್ ಫ್ರೆಂಡ್ ಶಿಪ್ ಡೇ ಫೀವರ್. ಹರೆಯದ ಹೃದಯಗಳು ಗೆಳೆಯರ ಬಳಗದೊಂದಿಗೆ ಸಂಭ್ರಮಿಸುತ್ತಿದ್ದವು. ಸಾಲದಕ್ಕೆ ಮಾಲ್ ನಲ್ಲಿ ಸಖತ್ ಆಫರ್ ಗಳು ಬೇರೆ. ಇತ್ತ ನಮ್ಮ ಹೊಟ್ಟೆ ಚುರುಗುಟ್ಟಲು ಶುರುಮಾಡಿ ಅದ್ಯಾವುದೋ ಕಾಲವಾಗಿತ್ತು. ಮಾಲ್ ಒಳಗಿದ್ದ ಭರ್ಜರಿ ಫುಡ್ ಕೋರ್ಟ್ ನಲ್ಲಿ ನಮ್ಮ ಹೊಟ್ಟೆಗೆ ಇಷ್ಟದ ತಿಂಡಿಗಳ್ಯಾವೂ ಕಾಣಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅಲ್ಲಿದ್ದ ಕ್ಯೂ ನೋಡಿದ್ರೆ ಕಾಯುವಷ್ಟು ತಾಳ್ಮೆ ನಮಗಿರ್ಲಿಲ್ಲ. ಸರಿ ಮಾಲ್ ಹೊರಗಿದ್ದ ಕ್ಯಾಂಟಿನ್ ಗಳತ್ತ ಬಂದ್ವಿ. ಅಲ್ಲಿ ತಿಂದ ಬಿಸಿಬಿಸಿ ಜಿಲೇಬಿ, ಆಹ್! ನಿಜಾರೀ ಸಖತ್ತಾಗಿತ್ತು. ಬೆಲೆ ಕೊಂಚ ಜಾಸ್ತಿ. ಒಂದ್ ಪ್ಲೇಟ್ ಗೆ ಬರೀ 25ರೂ! ಆದ್ರೆ ರುಚಿ ಮಾತ್ರ ಸೂಪರ್. ಆಗ ತಾನೇ ಸಕ್ಕರೆ ಪಾಕದಿಂದ ಅದ್ದಿ ತೆಗೆದ ಜಿಲೇಬಿಯನ್ನು ಕುರುಕುರು ಅಂತ ಕ್ಷಣಮಾತ್ರದಲ್ಲಿ ಗುಳುಂ ಮಾಡಬಹುದು. ಊಟ ಮುಗಿಸಿ ಅಲ್ಲೇ ನಡೆಸುತ್ತಿದ್ದ ಗೇಮ್ ನೋಡ್ತಾ ನಿಂತಿದ್ವಿ. ಫ್ರೆಂಡ್ ಶಿಪ್ ಡೇ ಆದ್ದರಿಂದ ಇಬ್ಬರು ಫ್ರೆಂಡ್ಸ್ ಒಬ್ಬರಿಗೊಬ್ರು ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಆಟ ಆಡಿಸ್ತಿದ್ರು. ಸಮೀಪದಲ್ಲೇ ನಿಂತಿದ್ದ ನಮ್ಮನ್ನೂ ಭಾಗವಹಿಸಲು ನಿರೂಪಕ ಆಹ್ವಾನಿಸಿದ. ಸರಿ, ಅನು ಒಲ್ಲೇ ಅನ್ನುತ್ತಲೇ ಬಂದ್ಲು. 30 ಸೆಕಂಡುಗಳಲ್ಲಿ ಎರಡೆರಡು ಬ್ಯಾಂಡ್ ಕಟ್ಟುವಷ್ಟಕ್ಕೇ ತೃಪ್ತಿಪಟ್ವಿ.

ಇನ್ನೇನು ಸಿನಿಮಾಗೆ ಸಮಯವಾಯ್ತು ಅಂತ ಲಿಡೋ ಮಾಲ್ ನತ್ತ ಹೆಜ್ಜೆ ಹಾಕಿದ್ವಿ. ಸಿನಿಮಾ ಆರಂಭವಾದ್ರೂ ಅನುಷಾಗೆ ಚಡಪಡಿಕೆ. ಯಾಕಂದ್ರೆ ನಮ್ಮ ಸಾಲಿನಲ್ಲಿ ಇನ್ನೆರಡು ಸೀಟುಗಳು ಖಾಲಿ ಇದ್ವು. ಅದೂ ಎಲ್ಲೆಲ್ಲೋ ಮಧ್ಯದಲ್ಲಿ. ಆ ಸೀಟಿಗೆ ಬರಬೇಕಿದ್ದವರು ನಾಪತ್ತೆ. ಮಿಕ್ಕ ಆ ಎರಡು ಸೀಟಿನವರು ಕನ್ಫ್ಯೂಸ್ ಆದ್ರೆ ಅಂತ ಅನ್ಕೊಳ್ಳೋವಷ್ಟರಲ್ಲೇ ಅವರ ಆಗಮನವೂ ಆಯ್ತು. ಸರಿ ಕುಳಿತಿದ್ದವರಿಗೆಲ್ಲಾ ಸ್ವಲ್ಪ ಪಕ್ಕದ ಸೀಟಿಗೆ ಜರುಗಲು ರಿಕ್ವೆಸ್ಟ್ ಮಾಡಿ ಅಂತೂ ಇಂತೂ ನೆಮ್ಮದಿಯಾಗಿ ಸಿನಿಮಾ ನೋಡಲು ಕೂತ್ವಿ. ಹ್ಯಾರಿ ಪಾಟರ್ ಸಿನಿಮಾಗಳು ಒಂದಕ್ಕೊಂದು ಮುಂದುವರಿಕೆ ಇರುತ್ತವಾದ್ದರಿಂದ ನಾವು ನೋಡಿದ ಭಾಗ ತೀರಾ ಕೌತುಕವಲ್ಲದ್ದಿದ್ರೂ ಮುಂದಿನ ಸಿನಿಮಾಗೆ ಲಿಂಕ್ ಕೊಡುವಂತಿತ್ತು. ಹೇಗೋ ವೀಕೆಂಡ್ ನಲ್ಲಿ ಹರಸಾಹಸ ಮಾಡಿ ಒಂದು ಸಿನಿಮಾ ನೋಡೋಹಾಗಾಯ್ತು. ಇಡೀ ದಿನ ಪಟ್ಟ ಅವಸ್ಥೆಗಳನ್ನು ಮೆಲುಕು ಹಾಕುತ್ತಾ ಇಬ್ರೂ ಮನೆ ಸೇರಿದ್ವಿ.

Wednesday, June 17, 2009

ಬಿಸಿಲೆ...ನಿನ್ನ ಸೊಬಗಿಗೆ ನೀನೆ ಸಾಟಿ!

ಅದೆಷ್ಟೋ ದಿನಗಳಿಂದ ನಮ್ಮ ಗ್ಯಾಂಗು ಎಲ್ಲಾದ್ರೂ ಹೊರಗೆ, ಈ ಬೆಂಗಳೂರಿನ ಗಡಿಬಿಡಿ ಪರಿಸರದಿಂದ ದೂರ ಹೋಗಿ ನಿಸರ್ಗದ ಮಡಿಲಲ್ಲಿ ತುಸು ಹೊತ್ತು ವಿರಮಿಸಲು ಹಾತೊರೆಯುತ್ತಿತ್ತು. ಆದ್ರೆ ಎಲ್ಲರಿಗು ಒಂದೇ ದಿನ ರಜೆ ಸಿಗದೇ ನಮ್ಮ ಪ್ಲಾನ್ ಮುಂದಕ್ಕೆ ಹೋಗ್ತಾನೇ ಇತ್ತು. ಆದ್ರೆ ಈ ಸಲ ಯಾರಾದ್ರು ಬರಲಿ ಬಿಡ್ಲಿ ಹೋಗೆ ಹೋಗ್ಬೇಕು ಅನ್ನೋ ಹಠ ಎಲ್ರಿಗೂ ಇದ್ದದಕ್ಕೋ ಏನೋ ಜಾಗ ಹಾಸನ ಸುಬ್ರಹ್ಮಣ್ಯ ವದುವೆ ಸಿಗುವ ಬಿಸಿಲೆ ಫಾರೆಸ್ಟ್ ಅಂತ ಫೈನಲ್ ಆಗಿದ್ದೇ ತಡ ನಮ್ಮ ಮನಸ್ಸಲ್ಲಿ ಆಗಲೇ ಬಿಸಿಲೆಯ ಅದ್ಭುತ ನಿಸರ್ಗ ಸಿರಿ ಕಣ್ಣಮುಂದೆ ಸುಳಿದಾಡಲು ಶುರುವಾಗಿತ್ತು. ಆದ್ರೆ ಆರಂಭದಿಂದಲೂ ನನ್ದೊಂದೇ ಕಿರಿಕ್ಕು. ಬಿಸಿಲೆ ಬೇಡ ಅಲ್ಲಿ ಮಳೆ ಜಾಸ್ತಿ ಇದೆ , ಹಾಗಾಗಿ ಜಿಗಣೆಗಳ ಕಾಟ ಅಂತ. ಆದ್ರೆ ನೀತು ಮತ್ತು ಅನುಷ ಲೇ ಅದೇನೂ ಅಷ್ಟೊಂದು ಕೆಟ್ಟ ಜೀವಿ ಅಲ್ಲ ಅಂತೆಲ್ಲ ಹೇಳಿ ಒಪ್ಪಿಸಿದರು. ಕಾಡು ಹೊಕ್ಕ ಮೇಲೇನೆ ಗೊತ್ತಾಗಿದ್ದು ಅಸಲಿಯತ್ತು ಏನು, ನನ್ನ ಅಚ್ಚು ಮೆಚ್ಚಿನ ಗೆಳತಿಯರು ಟ್ರೆಕ್ಕಿಂಗ್ ಹೋಗೋ ಜೋಶ್ನಲ್ಲಿ ನನ್ನ ಎಷ್ಟ್ ಚನ್ನಾಗಿ ಯಾಮಾರ್ಸಿದ್ರು ಅಂತ!
ಅವತ್ತು ರಾತ್ರಿ ೧೦ ಗಂಟೆಗೆ ಮೆಜೆಸ್ಟಿಕ್ ನಲ್ಲಿ ಎಲ್ರು ಸೇರಿದ್ವಿ. ನಮ್ಮ ಟ್ರೆಕ್ಕಿಂಗ್ ಅನ್ನು ಅರೆಂಜ್ ಮಾಡಿದ್ದ ದೇವ್ ಬಾಲಾಜಿ ನಮಗಿಂತ ತಡವಾಗಿ ಬಂದು ಸೇರಿಕೊಂಡರು! ಅವರ ಜೊತೆಗೆ ಬಂದಿದ್ದ ದಿನೇಶ್ ಓವರ್ ಲೋಡ್ ಆಗಿದ್ದ ನಮ್ಮ ಲಗೇಜುಗಳನ್ನು ನೋಡಿ ಮುಸಿ ಮುಸಿ ನಗುತ್ತಿದ್ರೆ ನಾವೆಲ್ಲ ಇವನ್ಯಾರೋ ಪೊರ್ಕಿ ಅಂತ ಕಮೆಂಟು ಕೊಟ್ಟು ಸುಮ್ಮನಾದ್ವಿ. ನಂತರ ಶುರುವಾದದ್ದೇ ನಮ್ಮ ನಿಸರ್ಗದತ್ತ ಪಯಣ . ಈ ಬೆಂಗಳೂರಿನ ಟ್ರಾಫಿಕ್ ದಾಟಿ ಮುಂದೆ ಸಾಗುವುದೇ ದೊಡ್ಡ ಸವಾಲು ಅನ್ನಿಸಿಬಿಡ್ತು. ಬೆಳಗ್ಗೆ ತುಂಬ ನಡೆಯಬೇಕು ಅಂತ ನಾನು ಕುಳಿತಲ್ಲೇ ನಿದ್ರಿಸಲು ಯತ್ನಿಸಿದೆ. ಆದ್ರೆ ಅಡಗೋಲಜ್ಜಿಗಳಂತೆ ನೀತು ಮತ್ತೆ ಛಬ್ಬಿ ಏನೇನೋ ಮಾತಾಡುತ್ತ ಕುಳಿತ್ತಿದ್ದರು. ಹಿಂದಿನ ಸೀಟಲ್ಲಿ ಕುಳಿತಿದ್ದ ಅನುಷ , ಗಾಯನ , ಶ್ವೇತ ತಣ್ಣಗೆ ಕುಳಿತು ಹಾಗೆ ನಿದ್ರೆಗೆ ಜಾರಿದ್ದರು. ಆದ್ರೆ ಸುಬ್ರಹ್ಮಣ್ಯ ಬರುವವರೆಗೂ ನಮ್ಮ ಅಜ್ಜಿಗಳ ಚರ್ಚೆ ನಡೆದೇ ಇತ್ತು. ಆಗ ಮುಂಜಾವು ೫ರ ಸಮಯ. ತುಂತುರು ಮಳೆ, ಚುಮುಚುಮು ಚಳಿ ನಮ್ಮನ್ನು ಸ್ವಾಗತಿಸಲೆಂದೇ ಕಾದಂತೆ ಭಾಸವಾಗುತ್ತಿತ್ತು.
ಫ್ರೆಶ್ ಆಗಲು ದೇವ್ ಬಾಲಾಜಿ ಲಾಡ್ಜ್ ಗಳಲ್ಲಿ ರೂಂ ಸಿಗದೇ ಪಬ್ಲಿಕ್ ಟಾಯ್ಲೆಟ್ ನಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳಿ ಅಂದಾಗ ನಂಗೆ ಬಂದ ಕೋಪ ಅಷ್ಟಿಷ್ಟಲ್ಲ. ಆ ಕೋಪಕ್ಕೆ ನಾನು ಚಬ್ಬಿ ಯಾವ್ದಾದ್ರು ರೂಂ ಸಿಗಬಹುದ ಅಂತ ಪ್ರಯತ್ನಿಸಿ ಜೋಲು ಮುಖ ಹೊತ್ತು ವಾಪಸ್ಸಾದೆವು. ನಂತರ ಬೆಳಗಿನ ಉಪಹಾರಕ್ಕೆ ನಾನು ಅನುಷ ಮೊದಲೇ ಅಂದುಕೊಂಡಂತೆ ರುಚಿಕಟ್ಟಾದ ಅವಲಕ್ಕಿ ಮೊಸರು ಮತ್ತು ಬನ್ಸ್ ಸವಿದರೆ ಅದರ ಮಜಾ ಗೊತ್ತಿಲ್ಲದ ಚಬ್ಬಿ ಮಾಮೂಲಿ ಇಡ್ಲಿ ವಡೆಗೆ ತೃಪ್ತಿ ಪಟ್ಟಳು. ನಂತರ ಶುರುವಾದದ್ದೇ ಆಪರೇಶನ್ ಜಿಗಣೆ ! ಹೇಗಾದರು ಮಾಡಿ ಜಿಗಣೆಗಳಿಗೆ ಬ್ರಹ್ಮಾಸ್ತ್ರ ರೆಡಿ ಮಾಡಬೇಕೆಂದು ೧ಕೆಜಿ ಉಪ್ಪು ಖರೀದಿಸಿದ್ದು ಆಯ್ತು. ನಂತರ ಫಾರೆಸ್ಟ್ ರೇಂಜರ್ ಗೆ ಮೀಸಲಾದ ಸಣ್ಣ ಮನೆಯಲ್ಲಿ ಟ್ರೆಕ್ಕಿಂಗ್ ಗೆ ಅಣಿಯಾದೆವು. ಆದರೆ ಅದಕ್ಕೂ ಮುನ್ನ ಪಯಣಿಸಿದ ೨೦-೨೫ ನಿಮಿಷಗಳ ಪ್ರಯಾಣ ಅದೆಷ್ಟು ಹಿತಕರವಾಗಿತ್ತಂದ್ರೆ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲೂ ಹಬ್ಬಿದ್ದ ಹಸಿರ ರಾಶಿ ಕಣ್ಣಿಗೆ ಹಬ್ಬ ತರುತ್ತಿತ್ತು. ಇನ್ನು ನನಗೆ ,ಛಬ್ಬಿ ,ಕಡ್ಡಿ ತಲೆ ತುಂಬ ಕೊರಿತಿದ್ದ ಹುಳ ಅಂದ್ರೆ ಈ ಜಿಗಣೆಗಳನ್ನು ಹೇಗೆ ನಿಭಾಯಿಸೋದು ಅಂತ.
ಕಾಡಿನೆಡೆಗೆ ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದ್ದ ನಮಗೆ ಆರಂಭದಲ್ಲೇ ಕಾಡಲು ಶುರು ಮಾಡಿದವು ನೋಡಿ ಈ ಜಿಗಣೆಗಳು ನಮಗಂತೂ ಆ ಕ್ಷಣದ ಮಟ್ಟಿಗೆ ಪ್ರಪಂಚದಲ್ಲಿರುವ ಏಕೈಕ ಶತ್ರುಗಳು ಇವೆ ಇರಬೇಕು ಅನ್ನಿಸಲು ಶುರುವಾಯಿತು . ಕಣ್ಣು ಮಿಟುಕಿಸುವಷ್ಟರಲ್ಲಿ ಅದೆಲ್ಲಿಂದಲೋ ಬಂದು ರಕ್ತ ಹೀರಲು ಶುರು ಮಾಡುತ್ತಿದ್ದವು. ಹಿಂದಿನ ದಿನ ಬಿದ್ದ ಮಳೆಗೆ ತುಂಬಿ ಹರಿಯುತ್ತಿದ್ದ ನದಿ ದಾಟಲು ಎಲ್ಲರು ದೇವ್ ಬಾಲಾಜಿ ಒದಗಿಸಿದ ರೋಪ್ ಸಹಾಯದೊಂದಿಗೆ ನೀರಿಗಿಳಿದೆವು. ನಮ್ಮೆಲ್ಲರಿಗಿಂತ ಸಕತ್ ಹುರುಪಿನಲ್ಲಿದ್ದ ನೀತು ಅದ್ಯಾಕೋ ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದದ್ದೇ ಬಂತು. ಹಿಂದೆ ಇದ್ದ ನಾನು ಗಾಯನ ನೀರು ಪಾಲು! ಅಂತು ಇಂತೂ ನದಿ ದಾಟಿ ಕಿನಾರೆ ಮುಟ್ಟಿದಾಗಲೇ ಅರಿವಾದದ್ದು ನಮ್ಮ ಮೊಬೈಲುಗಳು ನೀರಿನಲ್ಲಿ ಮುಳುಗಿ ಸತ್ತಿವೆ ಅಂತ! ಮತ್ತೆ ಶುರು ಕಾಡಿನೊಳಗಿನ ಯಾನ....
ಎಲ್ಲರು ಯುದ್ದಕ್ಕೆ ಹೊರಟ ಸೇನಾನಿಗಳಂತೆ ಕಾಲಿಗೆ ಹರಳೆಣ್ಣೆ ನಶ್ಯ ಪುಡಿ ಲೇಪಿಸಿಕೊಂಡು ಜಿಗಣೆಗಳನ್ನು ಶಪಿಸುತ್ತ ಮುನ್ನಡೆದೆವು. ಕಾಡಿನೊಳಗಿನ ಆ ಪ್ರಶಾಂತತೆ ಮನಸ್ಸಿಗೆ ಖುಷಿ ಕೊಟ್ಟರೆ ಹಕ್ಕಿಗಳು ಅಗೋ ಯಾರೋ ಬರ್ತಿದ್ದಾರೆ ಅಂತ ತಮ್ಮಲ್ಲೇ ಚಿಲಿಪಿಲಿ ಮೂಲಕ ಸಂದೇಶ ರವಾನಿಸುತ್ತಿದ್ದವು. ಮಾರ್ಗ ಮಧ್ಯೆ ಅಲ್ಲಲ್ಲಿ ಸಿಗುತ್ತಿದ್ದ ಆನೆಯ ಲದ್ದಿ ನೋಡಿ ಸದ್ಯ ಹಳೆಯದ್ದು ಅಂತ ನಿಟ್ಟುಸಿರು ಬಿಡುತ್ತಿದ್ದೆವು. ಮೊದಲೇ ಮಳೆ ಬಿದ್ದದ್ದಕ್ಕೋ ಏನೋ ಕಾಲಿಟ್ಟ ಕಡೆಯೆಲ್ಲ ಬರೀ ಜಿಗಣೆಗಳು! ಅವನ್ನು ಮೊದಲು ನಾನು ನೋಡಿರದ ಕಾರಣ ನನ್ನ ಶೂಗಳ ಮೇಲೆ ಅವು ಹತ್ತುತ್ತಿದ್ರೆ ಕಿಟಾರನೆ ಕಿರುಚಿ ಸಹಾಯಕ್ಕಾಗಿ ಕೈಲಿದ್ದ ಕೋಲಿಂದ ಅವನ್ನು kittuvudakke ವಿಫಲ ಯತ್ನ ನಡೆಸುತ್ತಿದ್ದೆ. ಆರಂಭದಿಂದಲೂ ನನಗೆ ಜಿಗಣೆ ಹತ್ತಿದಾಗ ನೆರವಿಗೆ ಬರ್ತಿದ್ದ ದಿನೇಶ್ ಗೆ ಅದೆಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿ . ಈ ಜಿಗಣೆಗಳು ಬಿಸಿಲೆಯ ಆ ಅದಮ್ಯ ನಿಸರ್ಗ ಸಿರಿಯನ್ನು ಸವಿಯಲು ಬಿಡದೆ ಅದೆಷ್ಟು ಕಾಟ ನೀಡಿದವೆಂದ್ರೆ ರಾತ್ರಿ ಕನಸಲ್ಲೂ ಅವುಗಳದ್ದೇ ಕಾರುಬಾರು! ಮದ್ಯಾಹ್ನ ೧೨ರ ಹೊತ್ತಿಗೆ ನಾವು ಕಾಡಿನ ನಡುವೆ ವಿಶ್ರಮಿಸಲು ಇದ್ದ ಹಳೆಯ ಪುಟ್ಟ ಕಟ್ಟಡವನ್ನು ಹೊಕ್ಕೆವು. ಅಲ್ಲಿ ಮದ್ಯಾಹ್ನದ ಊಟ ಮುಗಿಸಿದೆವು. ಅಷ್ಟರಲ್ಲೇ ಶುರುವಾಯ್ತು ಜಡಿ ಮಳೆ. ನದಿ ದಾಟಿದರೆ ಜಿಗಣೆ ಕಾಟ ಕಮ್ಮಿ ಅಂತ ದೇವ್ ಅಂದಾಗ ಅದಕ್ಕೆ ಸಮ್ಮತಿಸಿದ್ದ ನಮಗೆ ಮಳೆ ಅಡ್ಡಿಪಡಿಸಿತು. ಹಾಗಾಗಿ ಮತ್ತೊಮ್ಮೆ ಕಾಡಿನ ನಡುವೆ ಹೆಜ್ಜೆ ಹಾಕಲೇ ಬೇಕಾಯಿತು.
ಬಿಸಿಲೆಯ ವೈಶಿಷ್ಟ್ಯ ಅಂದ್ರೆ ಇಲ್ಲಿನ ಗಗನ ಚುಂಬಿ ಮರಗಳು. ದಿನಕರನ ಅಷ್ಟೂ ಬಿಸಿಲನ್ನು ಹೊಟ್ಟೆ ಬಾಕಗಳಂತೆ ಹೀರಿಕೊಂಡು ಬಾನೆತ್ತರಕ್ಕೆ ಬೆಳೆಯುತ್ತವೆ ಇಲ್ಲಿನ ಮರಗಳು. ಪಶ್ಚಿಮ ಘಟ್ಟಕ್ಕೆ ಸೇರುವ ಈ ಕಾಡಿನ ಮರಗಳ ಕಾಂಡ ಬೃಹತ್ ಗಾತ್ರದವು. ಕಾಲಿಟ್ಟ ಕಡೆಯೆಲ್ಲ ಕಾಡುವ ಜಿಗಣೆಗಳು ಒಂದೆಡೆಯಾದರೆ ಬಣ್ಣ ಬಣ್ಣದ ಕ್ರ್ಯಾಬ್ ಗಳು ಅಚ್ಚರಿ ಹುಟ್ಟಿಸುತ್ತಿದ್ದವು. ಮತ್ತೆ ನಮ್ಮ ಪಯಣ ಮಳೆಯ ನಡುವೆಯೇ ಶುರುವಾಯಿತು. ತಗ್ಗಿನಿಂದ ಎತ್ತರ ಪ್ರದೇಶಕ್ಕೆ ಸಾಗುತ್ತಿದ್ದುದರಿಂದ ಮಳೆ ನೀರು ಸಣ್ಣ ಜಲಪಾತದಂತೆ ನಮ್ಮ ಎದುರು ಹರಿದು ಬರುತ್ತಿತ್ತು. ಪುಟ್ಟ ಝರಿಯ ಮೇಲೆ ಹೆಜ್ಜೆ ಹಾಕುತ್ತ ೩ ಗಂಟೆ ಪ್ರಯಾಣ ಮಾಡಿದ್ದು ಅರಿವಿಗೆ ಬರಲಿಲ್ಲ. ಅದರಲ್ಲೂ ಮಳೆಗೆ ಹೊಮ್ಮುವ ಮಣ್ಣಿನ ಘಮ, ಕಾಡಿನ ತಂಪಾದ ಪರಿಸರದಲ್ಲಿ ನಾವೆಲ್ಲ ಅಕ್ಷರಶಃ ಸ್ವರ್ಗ ಸುಖ ಅನುಭವಿಸುತ್ತಿದ್ದೆವು! ಕಾಡಿನಿಂದ ರಸ್ತೆಯ ಮಾರ್ಗ ಸಿಕ್ಕಾಗ ಎಲ್ಲರು ಕೊಂಚ ಸುಸ್ತಾಗಿದ್ದೆವು.. ದೇವ್ ಕೊಟ್ಟ ಕಡ್ಲೆ ಮಿಠಾಯಿ ತಿಂದು ಅಲ್ಲೇ ಪಕ್ಕದಲ್ಲೇ ಹರಿಯುತ್ತಿದ್ದ ನೈಸರ್ಗಿಕ ಜರಿಯೊಂದರಿಂದ ಕುಡಿದ ನೀರಿನ ಆ ಸ್ವಾದವನ್ನು ಹೇಗೆ ವರ್ಣಿಸಲಿ? ಅಂದು ಸಂಜೆ ಬಿಸಿಲೆ ಚೆಕ್ಪೋಸ್ಟ್ ನಲ್ಲಿನ ಹೋಟೆಲೊಂದರಲ್ಲಿ ಬಂದಿಳಿದೆವು. ಮೊದಲೇ ಮಳೆಯಲ್ಲಿ ನೆಂದು ನಡುಗುತ್ತಿದ್ದ ನಮಗೆ ಅಲ್ಲಿ ಸಿಕ್ಕ ಬಿಸಿಬಿಸಿ ಕಾಫಿ ಮತ್ತು ಆಮ್ಲೆಟ್ ಕೊಂಚ ನೆಮ್ಮದಿ ತಂದವು. ಆದ್ರೆ ಬಿಡದೆ ಸುರಿಯುತ್ತಿದ್ದ ಮಳೆಯಿಂದ ಟೆಂಟ್ ಹಾಕಿ ಮಲಗುವ ಯೋಜನೆ ಕ್ಯಾನ್ಸಲ್ ಆಗಿ ಎಲ್ಲರಿಗು ಬೇಸರ ತಂದಿತ್ತು. ಅಂದು ರಾತ್ರಿ ನಾವು ತಂಗಿದ ಮನೆಯೊಡತಿ ರುಚಿಯಾದ ಅನ್ನ ಬೆಳೆ ಸಾರು ಮಾಡಿದ್ದರು. ಬಿಸಿನೀರಿನ ಸ್ನಾನ ಮುಗಿಸಿ ನಾವೆಲ್ಲ ಹರಟೆಯಲ್ಲಿ ತೊಡಗಿದರೆ ದೇವ್ ಬಾಲಾಜಿ ಸ್ಲೀಪಿಂಗ್ ಬ್ಯಾಗ್ ಒಳಹೊಕ್ಕಿ ನಿದ್ರಿಸುತ್ತಿದ್ದರು! ಜೊತೆಗಿದ್ದ ದಿನೇಶ್ ತನ್ನ ಟ್ರೆಕ್ಕಿಂಗ್, ಫೋಟೋಗ್ರಫಿ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡಿದ. ಅವನ ನಾಲೆಡ್ಜ್ ಕಂಡ ನಮಗಂತೂ ಅಚ್ಚರಿ. ನಿಜಕ್ಕೂ ದಿನೇಶ್ ನಮ್ಮ ಟ್ರೆಕ್ಕಿಂಗ್ ನಲ್ಲಿ ಬೇಸರವಾಗದಂತೆ ಮಾಹಿತಿ ಜೊತೆಗೆ ತನ್ನ ಎಕ್ಸಲೆಂಟ್ ಫೋಟೋಗ್ರಫಿಯಿಂದ ಆಶ್ಚರ್ಯ ಮೂಡಿಸಿದ್ದು ಸುಳ್ಳಲ್ಲ. ಅಂದು ರಾತ್ರಿ ಗೂಡು ಹೊಕ್ಕ ಮರಿಗಳಂತೆ ಸ್ಲೀಪಿಂಗ್ ಬ್ಯಾಗ್ ನೊಳಗೆ ಮಲಗಿದ್ದಾಯಿತು.
ಮರುದಿನ ಮುಂಜಾನೆ ಮೈ ನಡುಗಿಸುವ ಚಳಿ ಜೊತೆಗೆ ದಾರಿ ಕಾಣದಷ್ಟು ಗಾಢವಾದ ಮಂಜು ಕಣ್ಣಿಗೆ ಮನಸ್ಸಿಗೆ ಹಬ್ಬ ತಂದಿತ್ತು. ಬೆಳಗ್ಗೆ ನಾವು ತಂಗಿದ್ದ ಮನೆಯ ಆಂಟಿ ಮಾಡಿದ್ದ ಬಿಸಿಬಿಸಿ ಕೈ ರೊಟ್ಟಿ ಕಾಯಿ ಚಟ್ನಿ ರುಚಿ ಸೂಪರ್ ! ನಂತರ ಬೆಚ್ಚನೆ ಜಾಕೆಟ್ ಶೂಗಳೊಂದಿಗೆ ಬ್ಯೂಟಿ ಸ್ಪಾಟ್ ನತ್ತ ಪಯಣ! ಅಲ್ಲಂತೂ ಮುಂಜಾನೆಯ ಮಂಜು ಗಿರಿ ಶಿಖರಗಳನ್ನು ಅದ್ಯಾವ ಪರಿ ಆವರಿಸಿತ್ತಂದ್ರೆ ಅದರ ಬಣ್ಣನೆ ಅಕ್ಷರಗಳಲ್ಲಿ ಅಸಾಧ್ಯ ! ಮಳೆ ಬರಲಿ ಮಂಜೂ ಇರಲಿ ಅನ್ನೋ ಹಾಗೆ ಇತ್ತು ಅಲ್ಲಿನ ವಾತಾವರಣ. ಬಳಿಕ ಮಂಜರಬಾದ್ ಕೋಟೆಯತ್ತ ಚಿತ್ತ ನೆಟ್ಟ ನಾವು ಬಿಸಿಲೆಯ ಚೆಲುವನ್ನು ಬಿಟ್ಟು ಬರಲು ಅನುಭಬಿಸಿದ ಸಂಕಟ ನಮಗೆ ಗೊತ್ತು! ಕೋಟೆಯನ್ನು ನೋಡಿ ಬರಲು ೧ ಗಂಟೆ ಸಮಯ ಅಷ್ಟೆ ಅಂತ ದೇವ್ ಹೇಳಿದರು ನಾವು ಗಂಟೆ ಕಾಲ ಅಲ್ಲಿ ಕಳೆದೆವು. ಸಕತ್ ಫೋಟೋ ಸೆಶನ್ ಕೂಡ ಮಾಡಿದೆವು. ಸವಾರಿ ಸಿನೆಮಾದಲ್ಲಿ ಶೂಟ್ ಮಾಡಿರುವ ಜಾಗಗಳಲ್ಲೇ ಫೋಟೋ ತೆಗೆದು ಖುಷಿ ಪಟ್ಟೆವು! ಬಳಿಕ ಸಕಲೇಶಪುರದ ಹೋಟೆಲೊಂದರಲ್ಲಿ ಅಕ್ಕಿ ರೊಟ್ಟಿ ಊಟ ಮಾಡಿ ಬೆಂಗಳೂರಿನತ್ತ ಪಯಣ ಬೆಳೆಸಿದೆವು. ಅಯ್ಯೋ ವೀಕೆಂಡ್ ಮೋಜು ಇಷ್ಟೇ ,ಮತ್ತೆ ಬೆಂಗಳೂರಿನ ಗಿಜಿ ಬಿಜಿ ಜೊತೆಗೆ ಆಫೀಸಿಗೆ ಹೋಗಬೇಕಾದನ್ನು ನೆನೆದು ಆಗುತ್ತಿದ್ದ ಸಂಕಟ ಹೇಳತೀರದು . ಆದ್ರೆ ಬೆಂಗಳೂರಿಗೆ ಬರುವ ದಾರಿಯಲ್ಲಿ ಮಾಡಿದ ಸಕ್ಕತ್ ಕೀಟಲೆ ಕಿತ್ತಾಟಗಳನ್ನೂ ಮರೆಯಲು ಸಾದ್ಯವೇ ಇಲ್ಲ.
ರಾತ್ರಿ ೯-೩೦ಕ್ಕೆ ಬೆಂಗಳೂರು ತಲುಪಿದೆವು. ಒಬ್ಬರಿಗೊಬ್ಬರು ವಿದಾಯ ಹೇಳಲು ಸಂಕಟ. ಬೇಸರದೊಂದಿಗೆ ಬಿಸಿಲೆಯ ಸವಿಸವಿ ನೆನಪನ್ನು ಮನಸಲ್ಲೇ ಚಪ್ಪರಿಸುತ್ತ ಮನೆಯತ್ತ ಹೆಜ್ಜೆ ಹಾಕಿದೆವು. ಅಂದು ರಾತ್ರಿ ಪಾಳಿ ಇದ್ದ ಕಾರಣ ನನ್ನ ದಾರಿ ಆಫೀಸಿನ ಕಡೆ. ಅನುಷ , ನೀತು, ಛಬ್ಬಿ, ಗಾಯನ, ಕಡ್ಡಿ ವಾವ್ ! ಎಷ್ಟ್ ಮಜಾ ಇತ್ತಲ್ವ ಟ್ರೆಕ್ಕಿಂಗ್? ನಾವೆಲ್ಲ ಹಿಡಿ ಶಾಪ ಹಾಕಿ ಕಚ್ಚಿಸಿಕೊಂಡ ಜಿಗಣೆ ಕಡಿತ ಈಗಲೂ ಬಿಸಿಲೆಯ ಸುಂದರ ಪ್ರಕೃತಿಯ ಗಿಫ್ಟು ಅಂದುಕೊಂಡು ಕುಶಿ ಪಡುತ್ತೇವೆ! ಅದೇ ನಿಸರ್ಗದ ಅಸಲಿ ಮಜಾ!!!

Monday, February 16, 2009

ಸಿಕ್ಕಿ ಬಿದ್ದ ಕಳ್ಳ...!

ಅಬ್ಬ ಮತ್ತೆ ಬ್ಲಾಗ್ ಅಪ್ ಡೇಟ್ ಮಾಡುವ ಸವಿಘಳಿಗೆ ಬಂದಿದೆ ನಂಗೆ! ಮೊನ್ನೆ ಮೊನ್ನೆ ನಡೆದ ಒಂದು ಘಟನೆಯನ್ನ ನಿಮ್ ಜೊತೆ ಹಂಚಿಕೊಳ್ಳಲೇಬೇಕು ಗೆಳೆಯರೇ. ನಮ್ಮನೇಲಿ ಈ ವೊಡಾಫೋನ್ ಗ್ರಾಹಕರು ತುಂಬ ಪರದಾಡೋ ಸ್ಥಿತಿ ರೀ. ಸರ್ಯಾಗ್ ನೆಟ್ವರ್ಕ್ ಸಿಗಲ್ಲ. ಅದಕ್ಕೆ ನಡುಮನೆಯಲ್ಲಿ ಕಿಟಕಿ ಹತ್ತಿರ ನೆಟ್ವರ್ಕ್ ಸಿಗುತ್ತೆ ಅನ್ನೋ ಕಾರಣಕ್ಕೆ ಅಲ್ಲಿ ತಮ್ಮ ಮೊಬೈಲ್ ಫೋನ್ ಇಡ್ತಾರೆ. ಹಾಗೇ ಅವತ್ತು ಆಯ್ತು. ಮನೆ ಬಳಿ ಯಾರೋ ಇಬ್ಬರು ಮಲೆಯಾಳಿಗಳು ಬಂದು ಏನೂ ಕೇಳಿದ್ರು. ನಂಗೆ ಆ ಭಾಷೆ ಅರ್ಥವಾಗದೆ ನಮ್ಮ ಆಂಟಿಯನ್ನು ಕರೆದು ಟಿವಿ ನೋಡೋದ್ರಲ್ಲಿ ಮಗ್ನಳಾದೆ. ನನಗೆ night shift ಇತ್ತಾದ್ರಿಂದ ಟಿವಿ ನೋಡಿದ್ಮೇಲೆ ಮಲಗೋ plan ನನ್ನದಾಗಿತ್ತು. ಅಷ್ಟರಲ್ಲಿ ಮತ್ಯಾರೋ ಬಂದು ಅದೇ ಅರ್ಥವಾಗದ ಭಾಷೆಯಲ್ಲಿ ಏನೇನೋ ಮಾತಾಡಿದ. ನಾನು ಕಳೆದ ಬಾರಿ ಮಾಡಿದ ಕೆಲಸವನ್ನೇ ಈ ಸಲವೂ ಮಾಡಿದೆ. ಮಾತಿನ ಮಧ್ಯೆ Tom ಅಂತ ಅಂದದ್ದು ಮಾತ್ರ ನೆನಪು. ಕೆಲಸ ಕೇಳುವ ನೆಪದಲ್ಲಿ ಬಂದಿದ್ದ ಆ ಭೂಪ ಏನೂ ಗಿಟ್ಟದೆ ಜಾಗ ಖಾಲಿ ಮಾಡಿದ.

ನನ್ನ ಗೆಳತಿ ಅಂಜಲಿ ಅವತ್ತು ಆಫೀಸಿಗೆ ಭಾರಿ ಆತುರದಲ್ಲಿ ರೆಡಿ ಆಗ್ತಿದ್ಲು. ಎಷ್ಟೊತ್ತಾದ್ರು ಆಫೀಸಿನ ಕ್ಯಾಬ್ ನವ್ನ ಕರೆ ಬಂದೇ ಇಲ್ವಲ್ಲಾ ಅಂತ ಕಂಗಾಲಾಗಿದ್ಲು. ಫೋನಿಗಾಗಿ ಹುಡುಕಿ ಹುಡುಕಿ ಸಾಕಾಗಿ ಎಲ್ಲರನ್ನೂ ಕಾಡಿ ಬೇಡಿದ್ರೂ ಫೋನಿನ ತಂಟೆಗೆ ಯಾರೂ ಹೋಗಿಲ್ಲ ಅನ್ನೋದು ಖಾತರಿಯಾಯ್ತು. ೨ನೇ ಸಲ ಬಂದವನೇನಾದ್ರು ಫೋನ್ ಕದ್ದನಾ ಅನ್ನೋ ಅನುಮಾನ ಕಾಡಲು ಶುರುವಾಯ್ತು. ನನಗಲ್ಲ ಅಂಜಲಿಗೆ...! ಯಾಕಂದ್ರೆ ನಾನ್ ಅವಾಗ ಟಿವಿಯೊಳಗೆ ಮುಳುಗಿದ್ದೆ. ಕೋಪದಲ್ಲಿ ಕಿಡಿಕಿಡಿಯಾಗಿದ್ದ ಅಂಜಲಿ ನನ್ನ ಮೇಲೆ ರೇಗಿದಾಗಲೇ ನಾನು ಅವಳ ಮೊಬೈಲ್ ಹುಡುಕಲು ಮನಸ್ಸು ಮಾಡಿದ್ದು. ಮನೆಯಲ್ಲಂತು ಅದರ ಪತ್ತೆ ಇಲ್ಲ. ಕರೆ ಮಾಡಿದ್ರೆ no respnse. ಇನ್ನು ಕದ್ದ ಮಹಾಶಯ ಸಿಗುತ್ತಾನೆಂಬ ನಂಬಿಕೆ ಹೊಂದದಿರುವುದೇ ಲೇಸು ಅನಿಸಿತು. ಆದ್ರು ಅಂಜಲಿ ಬಲವಂತಕ್ಕೆ ಮಟ ಮಟ 12ರ ಹೊತ್ತಲ್ಲಿ ಹೊರಗೆ ಬಂದವರೇ ಅವನು ಸ್ವಲ್ಪ ಕುಡಿದು ಬಂದಿದ್ದ ಅನ್ನೊ ಆಂಟಿಯ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ನಮ್ಮ ಏರಿಯಾದ ೨-೩ ವೈನ್ ಶಾಪ್ ಗಳಿಗೆ ಹೋಗಿ "ಯಾರಾದ್ರು ಮೊಬೈಲ್ ಮಾರಲು ಕಪ್ಪು ಜಾಕೆಟ್ ತೊಟ್ಟು ಬಂದಿದ್ದರೇ? ಅಥವಾ ಬಂದ್ರೆ ತಿಳಿಸಿ" ಅಂತ ಮನವಿ ಮಾಡಿ ಬಂದದ್ದಾಯ್ತು. ಸಾಲದಕ್ಕೆ "ಅಂತಹವರನ್ನೇಕೆ ಮನೆಯೊಳಗೆ ಬಿಟ್ಟದ್ದೆಂಬ" ಪ್ರಶ್ನೆಗೆ ಉತ್ತರಿಸಬೇಕಾಯ್ತು. ಹೀಗೆ ಒಂದು ಸುತ್ತು ಬರುವಷ್ಟರಲ್ಲಿ ಅವನನ್ನು ಹಿಡಿಯಲೇ ಬೇಕೆಂಬ ಸಂಕಲ್ಪ ಮಾಡಿದ್ದೆ. ಅದೂ ಸಿಕ್ಕರೇ ತಾನೇ ಹಿಡಿಯೋದು?

ಹಾಗಂತ ಬರುವಾಗಲೇ ನಮ್ಮನೆಗೆ ಬಂದವನ ಥರಾನೇ ಒಬ್ಬನನ್ನು ನೋಡಿದ ಹಾಗಾಯ್ತು. ಆ ವ್ಯಕ್ತಿಯನ್ನು ನಾನು ಮತ್ತು ಆಂಟಿ ಬಿಟ್ರೆ ಮತ್ಯಾರು ನೋಡಿರಲಿಲ್ಲ. ಸರಿ ಬ್ಯಾಗೊಂದನ್ನು ತಗಲುಹಾಕಿಕೊಂಡಿದ್ದವನು ಅಮಾಯಕನಂತೆ ನಮ್ಮೆದುರೇ ನಡೆದು ಹೋದ. ಸಂಶಯಕ್ಕೆ ಆಸ್ಪದವೇ ಬರಲಿಲ್ಲ. ಕಳ್ಳನಂತೆ ಕಾಣಲಿಲ್ಲ. ನಾನೇನಾದ್ರು ತಪ್ಪು ವ್ಯಕ್ತಿಯನ್ನು ಕಳ್ಳ ಅಂತ ಭಾವಿಸಿ ಧರ್ಮದೇಟು ಕೊಡಿಸಿದ್ರೆ ಆ ಪಾಪ ನನಗೆ ಯಾಕೆ ಅಂತ ಯೋಚಿಸಿ, ಸ್ವಲ್ಪ ದೂರ ಫಾಲೋ ಮಾಡೋಣ, ಓಡಲು ಯತ್ನಿಸಿದ್ರೆ ಇವ್ನೇ ಕಳ್ಳ ಅಂತ ನಿರ್ಣಯಿಸಿ ಹಿಂಬಾಲಿಸಿದೆವು. ಆತ ಮಾತ್ರ ಕೂಲ್ ಆಗಿ ನಡೆಯುತ್ತಲೇ ಹೋದ. ದೇವರ ದಯೆಯೆಂಬಂತೆ ಅಲ್ಲೇ ಒಬ್ರು ಪೊಲೀಸ್ ನಿಂತಿದ್ರು. ಅವರಲ್ಲಿ ನಡೆದದ್ದನ್ನು ವಿವರಿಸಿ ಆ ವ್ಯಕ್ತಿಯನ್ನು ಸ್ವಲ್ಪ ವಿಚಾರಿಸಿ ಅಂತ ವಿನಂತಿಸಿದೆವು. ಆದ್ರೆ ಆ ಮಹಾಶಯರಿಗೆ ಇದ್ಯಾಕೋ interesting case ಅಂತ ಅನ್ನಿಸಲಿಲ್ವೇನೋ. ಯಾರನ್ನೋ ಮಾತಾಡಿಸೋ ನೆಪದಲ್ಲಿ ಪೇರಿ ಕಿತ್ತರು. ನಮ್ಮ ಕೆಟ್ಟ ನಸೀಬಿಗೆ ಹಿಡಿಶಾಪ ಹಾಕುತ್ತಾ ಮನೆಕಡೆ ಹೆಜ್ಜೆ ಹಾಕುವಾಗ ಪಕ್ಕದ ಅಂಗಡಿಯವರನ್ನೊಮ್ಮೆ ನಮ್ಮ ಮನೆ ಅಡ್ರಸ್ ಕೇಳಿ ಯಾರದ್ರೂ ಬಂದಿದ್ರಾ? ಅಂತ ಕೇಳಿದೆವು. ತಕ್ಷಣ ಸ್ಪಂದಿಸಿದ ಅವರು ಆ ವ್ಯಕ್ತಿಯ ಹೇಗಿದ್ದ ಅಂತ ವಿವರಿಸಿದ್ರು. ಅವನ ಕೈಲಿದ್ದ ಕಪ್ಪು ಬಿಳುಪು ಬ್ಯಾಗಿನ ಕುರುಹನ್ನು ಕೇಳಲು ನಾನು ಮರೆಯಲಿಲ್ಲ. ಆಗ್ಲೆ ನಮ್ಮ investigationಗೆ ಹೊಸ ತಿರುವು ಸಿಕ್ಕದ್ದು.

ಅವನನ್ನು ಮತ್ತೆ ಹುಡುಕಲು ಆಟೋ ಕರೆಯಲು ಹೋದ ಅಂಜಲಿಯನ್ನು ನನ್ನ ಟೂ ವ್ಹೀಲರ್ ಏರಲು ಹೇಳಿ ಮತ್ತೆ ಆತ ನಡೆದು ಹೋದ ಹಾದಿಯಲ್ಲೇ ಎಲ್ಲರನ್ನೂ ವಿಚಾರಿಸುತ್ತಾ ಹೋದೆವು. ಹಾಗೆ ಸಿಕ್ಕವರೇ ನಮ್ಮ great Tom ಅಂಕಲ್ ಗೆಳೆಯರು. ನಾವು ಅವರ ಕೆಳಗಿನ ಮನೆಯ ಮಕ್ಕಳು ಅಂತ ತಿಳಿದವರೇ ನಮ್ಮ investigationಗೆ ಕೈಜೋಡಿಸಿದ್ರು. ನಾವಿಬ್ಬರೂ ಹಿಂದೆಂದೂ ನೋಡಿರದ ಗಲ್ಲಿಗಳನ್ನೆಲ್ಲಾ ಅವರ ದೆಸೆಯಿಂದ ಸುತ್ತಿದೆವು. ಯಾಕೊ ಆ ಖದೀಮ ಸಿಗಲಾರನೇನೋ ಅಂತ ಅಂಜಲಿ ಉಸುರುತ್ತಿದ್ದಳು, ಬಾಯಿ ಮುಚ್ಚಿಕೊಂಡು ಕೂರು ಅಂತ ನಾನು ಗದರಿಸಿದೆ. ಪಿಂಕ್ ಶರ್ಟ್, ಕಪ್ಪು ಪ್ಯಾಂಟ್, ಕೈಲಿ ಬ್ಯಾಗು ಇದಿಷ್ಟೆ ನನ್ನ ಕಣ್ಣ ತುಂಬ. ಹಾಗೇ ಮುಂದಿನ ತಿರುವಿಗೆ ಬಂದ್ವಿ, ಅಲ್ಲಿತ್ತು ಮಿಕ. ತೀರಾ ಪೆದ್ದನಂತೆ, ಸ್ವಲ್ಪ ಅಮಾಯಕನಂತೆ ನಟಿಸುತ್ತ ನಡೆದು ಬರುತ್ತಿದ್ದ. ಅಂಕಲ್ ಅವ್ನೇ ಅವ್ನೇ ಅಂತ ಕೂಗಿದ್ದೇ ತಡ, ನಮ್ಮ ಜೊತೆ ಬಂದವರು ಆ ವ್ಯಕ್ತಿಯನ್ನು ಹಿಂದು ಮುಂದು ವಿಚಾರಿಸದೇ ಪಕ್ಕಕ್ಕೆ ಕರೆತಂದು ಕಪಾಳಕ್ಕೆರಡು ಬಿಗಿಯೋದಾ? ಇತ್ತ ಅಂಜಲಿ plz dont hit ಅಂತಿದ್ರೆ ಕೇಳೋರ್ಯಾರು?ಮೊದಲು ಕೈಲಿದ್ದ ಬ್ಯಾಗ್ ಕೊಡಲು ಒಪ್ಪದ ಆತ ವಿಧಿಯಿಲ್ಲದೆ ಕೊಡಬೇಕಾಯ್ತು. ಆದ್ರೆ ಅದರಲ್ಲಿದ್ದದ್ದು ಯಾವ್ದೊ ಹಳೇ ನೋಕಿಯಾ ಮೊಬೈಲ್ ಸೆಟ್. ಅಷ್ಟರಲ್ಲಿ ಜನರ ಹಿಂಡು ನೆರೆದಿತ್ತು. ಇಷ್ಟೆಲ್ಲಾ scene create ಆದ್ಮೇಲೆ ಏನಪ್ಪ ಗ್ರಹಚಾರ ಅನ್ಕೊಳ್ವಾಗ್ಲೇ ಅಂಜಲಿ ಮೊಬೈಲ್ ಕಳ್ಳನ ಬ್ಯಾಗಿಂದ ಆಚೆ ಬಂತು. ನಾನಂತೂ ಒಂದು ಕ್ಷಣ ಅವಾಕ್ಕಾದೆ. ಸಿಮ್ ಇದ್ಯಾ ನೋಡ್ಕೋ ಅಂದೆ. ಅದು ಅವನ ಜೇಬು ಸೇರಿತ್ತು. ಆಮೇಲೆ ಅಂಜಲಿ ಕೈಗೆ ಬಂತು. ಆಮೇಲೆ ಆದದ್ದೇ Tom uncle entry. ನಮ್ಮ ಏರಿಯಾದಲ್ಲೇ ತಮ್ಮದೇ ಆದ ಖದರ್ರ್ ಇಟ್ಟುಕೊಂಡಿರೋ uncle ಅಲ್ಲಿ ಬಹುತೇಕ ಎಲ್ಲರಿಗೂ ಪರಿಚಿತರು. ಅವರಾ....ತನ್ನನ್ನು ಕೇಳಿಕೊಡು ಬಂದು ಫೋನ್ ಕದ್ದನಲ್ಲ ಅಂತ ಬಂದಿದ್ದ ಕೋಪಕ್ಕೆ ಎರಡು ಬಾರಿಸಿ ಮನೆ ಹತ್ರ ಆ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಕರೆದು ತಂದ್ರು. ಮೊದಲು policeಗೆ ಹಿಡಿದು ಕೊಡ್ತೀನಿ ಅಂದವರು ಆಮೇಲೆ ಆ ಮೊಬೈಲ್ ಚೋರನಿಗೆ ಬುದ್ಧಿ ಹೇಳಿ ಉಪದೇಶ ಕೊಟ್ಟು ನಮ್ಮೇರಿಯಾದಲ್ಲಿ ಮತ್ತೆ ಕಂಡರೆ ಹುಷಾರ್ ಅಂತ ಎಚ್ಚರಿಸಿ ಬಿಟ್ಟು ಬಿಟ್ಟ್ರು.

ಅಷ್ಟರಲ್ಲಾಗ್ಲೇ ನಮ್ಮೆಲ್ಲ friends ಗೆ ಸುದ್ದಿ BBC News ಥರಾ ತಿಳಿದುಹೋಗಿತ್ತು. ಒಂದು ಕ್ಷಣ ಯಾಮಾರಿದ್ದಕ್ಕೆ ಇಷ್ಟೆಲ್ಲಾ ಆಯ್ತು. ಇದೊಂದು ಮೊಬೈಲ್ ಕಳ್ಳತನ ಅಷ್ಟೆ ಸರಿ. ಆದ್ರೆ, ಬೆಂಗಳೂರಲ್ಲಿ ಎಷ್ಟೇ ಹುಷಾರಲ್ಲಿದ್ರು ಟೊಪ್ಪಿ ಹಾಕುವವರು ಬಿಡಲಾರರು. ನೀವೂ ಹುಷಾರು, ಸಲ್ಲದ ನೆಪ ಹೇಳಿ ಮನೆ ಬಾಗಿಲಿಗೆ ಬಂದವರನ್ನು ಎಚ್ಚರಿಕೆಯಿಂದ handle ಮಾಡಿ.