Monday, February 16, 2009

ಸಿಕ್ಕಿ ಬಿದ್ದ ಕಳ್ಳ...!

ಅಬ್ಬ ಮತ್ತೆ ಬ್ಲಾಗ್ ಅಪ್ ಡೇಟ್ ಮಾಡುವ ಸವಿಘಳಿಗೆ ಬಂದಿದೆ ನಂಗೆ! ಮೊನ್ನೆ ಮೊನ್ನೆ ನಡೆದ ಒಂದು ಘಟನೆಯನ್ನ ನಿಮ್ ಜೊತೆ ಹಂಚಿಕೊಳ್ಳಲೇಬೇಕು ಗೆಳೆಯರೇ. ನಮ್ಮನೇಲಿ ಈ ವೊಡಾಫೋನ್ ಗ್ರಾಹಕರು ತುಂಬ ಪರದಾಡೋ ಸ್ಥಿತಿ ರೀ. ಸರ್ಯಾಗ್ ನೆಟ್ವರ್ಕ್ ಸಿಗಲ್ಲ. ಅದಕ್ಕೆ ನಡುಮನೆಯಲ್ಲಿ ಕಿಟಕಿ ಹತ್ತಿರ ನೆಟ್ವರ್ಕ್ ಸಿಗುತ್ತೆ ಅನ್ನೋ ಕಾರಣಕ್ಕೆ ಅಲ್ಲಿ ತಮ್ಮ ಮೊಬೈಲ್ ಫೋನ್ ಇಡ್ತಾರೆ. ಹಾಗೇ ಅವತ್ತು ಆಯ್ತು. ಮನೆ ಬಳಿ ಯಾರೋ ಇಬ್ಬರು ಮಲೆಯಾಳಿಗಳು ಬಂದು ಏನೂ ಕೇಳಿದ್ರು. ನಂಗೆ ಆ ಭಾಷೆ ಅರ್ಥವಾಗದೆ ನಮ್ಮ ಆಂಟಿಯನ್ನು ಕರೆದು ಟಿವಿ ನೋಡೋದ್ರಲ್ಲಿ ಮಗ್ನಳಾದೆ. ನನಗೆ night shift ಇತ್ತಾದ್ರಿಂದ ಟಿವಿ ನೋಡಿದ್ಮೇಲೆ ಮಲಗೋ plan ನನ್ನದಾಗಿತ್ತು. ಅಷ್ಟರಲ್ಲಿ ಮತ್ಯಾರೋ ಬಂದು ಅದೇ ಅರ್ಥವಾಗದ ಭಾಷೆಯಲ್ಲಿ ಏನೇನೋ ಮಾತಾಡಿದ. ನಾನು ಕಳೆದ ಬಾರಿ ಮಾಡಿದ ಕೆಲಸವನ್ನೇ ಈ ಸಲವೂ ಮಾಡಿದೆ. ಮಾತಿನ ಮಧ್ಯೆ Tom ಅಂತ ಅಂದದ್ದು ಮಾತ್ರ ನೆನಪು. ಕೆಲಸ ಕೇಳುವ ನೆಪದಲ್ಲಿ ಬಂದಿದ್ದ ಆ ಭೂಪ ಏನೂ ಗಿಟ್ಟದೆ ಜಾಗ ಖಾಲಿ ಮಾಡಿದ.

ನನ್ನ ಗೆಳತಿ ಅಂಜಲಿ ಅವತ್ತು ಆಫೀಸಿಗೆ ಭಾರಿ ಆತುರದಲ್ಲಿ ರೆಡಿ ಆಗ್ತಿದ್ಲು. ಎಷ್ಟೊತ್ತಾದ್ರು ಆಫೀಸಿನ ಕ್ಯಾಬ್ ನವ್ನ ಕರೆ ಬಂದೇ ಇಲ್ವಲ್ಲಾ ಅಂತ ಕಂಗಾಲಾಗಿದ್ಲು. ಫೋನಿಗಾಗಿ ಹುಡುಕಿ ಹುಡುಕಿ ಸಾಕಾಗಿ ಎಲ್ಲರನ್ನೂ ಕಾಡಿ ಬೇಡಿದ್ರೂ ಫೋನಿನ ತಂಟೆಗೆ ಯಾರೂ ಹೋಗಿಲ್ಲ ಅನ್ನೋದು ಖಾತರಿಯಾಯ್ತು. ೨ನೇ ಸಲ ಬಂದವನೇನಾದ್ರು ಫೋನ್ ಕದ್ದನಾ ಅನ್ನೋ ಅನುಮಾನ ಕಾಡಲು ಶುರುವಾಯ್ತು. ನನಗಲ್ಲ ಅಂಜಲಿಗೆ...! ಯಾಕಂದ್ರೆ ನಾನ್ ಅವಾಗ ಟಿವಿಯೊಳಗೆ ಮುಳುಗಿದ್ದೆ. ಕೋಪದಲ್ಲಿ ಕಿಡಿಕಿಡಿಯಾಗಿದ್ದ ಅಂಜಲಿ ನನ್ನ ಮೇಲೆ ರೇಗಿದಾಗಲೇ ನಾನು ಅವಳ ಮೊಬೈಲ್ ಹುಡುಕಲು ಮನಸ್ಸು ಮಾಡಿದ್ದು. ಮನೆಯಲ್ಲಂತು ಅದರ ಪತ್ತೆ ಇಲ್ಲ. ಕರೆ ಮಾಡಿದ್ರೆ no respnse. ಇನ್ನು ಕದ್ದ ಮಹಾಶಯ ಸಿಗುತ್ತಾನೆಂಬ ನಂಬಿಕೆ ಹೊಂದದಿರುವುದೇ ಲೇಸು ಅನಿಸಿತು. ಆದ್ರು ಅಂಜಲಿ ಬಲವಂತಕ್ಕೆ ಮಟ ಮಟ 12ರ ಹೊತ್ತಲ್ಲಿ ಹೊರಗೆ ಬಂದವರೇ ಅವನು ಸ್ವಲ್ಪ ಕುಡಿದು ಬಂದಿದ್ದ ಅನ್ನೊ ಆಂಟಿಯ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ನಮ್ಮ ಏರಿಯಾದ ೨-೩ ವೈನ್ ಶಾಪ್ ಗಳಿಗೆ ಹೋಗಿ "ಯಾರಾದ್ರು ಮೊಬೈಲ್ ಮಾರಲು ಕಪ್ಪು ಜಾಕೆಟ್ ತೊಟ್ಟು ಬಂದಿದ್ದರೇ? ಅಥವಾ ಬಂದ್ರೆ ತಿಳಿಸಿ" ಅಂತ ಮನವಿ ಮಾಡಿ ಬಂದದ್ದಾಯ್ತು. ಸಾಲದಕ್ಕೆ "ಅಂತಹವರನ್ನೇಕೆ ಮನೆಯೊಳಗೆ ಬಿಟ್ಟದ್ದೆಂಬ" ಪ್ರಶ್ನೆಗೆ ಉತ್ತರಿಸಬೇಕಾಯ್ತು. ಹೀಗೆ ಒಂದು ಸುತ್ತು ಬರುವಷ್ಟರಲ್ಲಿ ಅವನನ್ನು ಹಿಡಿಯಲೇ ಬೇಕೆಂಬ ಸಂಕಲ್ಪ ಮಾಡಿದ್ದೆ. ಅದೂ ಸಿಕ್ಕರೇ ತಾನೇ ಹಿಡಿಯೋದು?

ಹಾಗಂತ ಬರುವಾಗಲೇ ನಮ್ಮನೆಗೆ ಬಂದವನ ಥರಾನೇ ಒಬ್ಬನನ್ನು ನೋಡಿದ ಹಾಗಾಯ್ತು. ಆ ವ್ಯಕ್ತಿಯನ್ನು ನಾನು ಮತ್ತು ಆಂಟಿ ಬಿಟ್ರೆ ಮತ್ಯಾರು ನೋಡಿರಲಿಲ್ಲ. ಸರಿ ಬ್ಯಾಗೊಂದನ್ನು ತಗಲುಹಾಕಿಕೊಂಡಿದ್ದವನು ಅಮಾಯಕನಂತೆ ನಮ್ಮೆದುರೇ ನಡೆದು ಹೋದ. ಸಂಶಯಕ್ಕೆ ಆಸ್ಪದವೇ ಬರಲಿಲ್ಲ. ಕಳ್ಳನಂತೆ ಕಾಣಲಿಲ್ಲ. ನಾನೇನಾದ್ರು ತಪ್ಪು ವ್ಯಕ್ತಿಯನ್ನು ಕಳ್ಳ ಅಂತ ಭಾವಿಸಿ ಧರ್ಮದೇಟು ಕೊಡಿಸಿದ್ರೆ ಆ ಪಾಪ ನನಗೆ ಯಾಕೆ ಅಂತ ಯೋಚಿಸಿ, ಸ್ವಲ್ಪ ದೂರ ಫಾಲೋ ಮಾಡೋಣ, ಓಡಲು ಯತ್ನಿಸಿದ್ರೆ ಇವ್ನೇ ಕಳ್ಳ ಅಂತ ನಿರ್ಣಯಿಸಿ ಹಿಂಬಾಲಿಸಿದೆವು. ಆತ ಮಾತ್ರ ಕೂಲ್ ಆಗಿ ನಡೆಯುತ್ತಲೇ ಹೋದ. ದೇವರ ದಯೆಯೆಂಬಂತೆ ಅಲ್ಲೇ ಒಬ್ರು ಪೊಲೀಸ್ ನಿಂತಿದ್ರು. ಅವರಲ್ಲಿ ನಡೆದದ್ದನ್ನು ವಿವರಿಸಿ ಆ ವ್ಯಕ್ತಿಯನ್ನು ಸ್ವಲ್ಪ ವಿಚಾರಿಸಿ ಅಂತ ವಿನಂತಿಸಿದೆವು. ಆದ್ರೆ ಆ ಮಹಾಶಯರಿಗೆ ಇದ್ಯಾಕೋ interesting case ಅಂತ ಅನ್ನಿಸಲಿಲ್ವೇನೋ. ಯಾರನ್ನೋ ಮಾತಾಡಿಸೋ ನೆಪದಲ್ಲಿ ಪೇರಿ ಕಿತ್ತರು. ನಮ್ಮ ಕೆಟ್ಟ ನಸೀಬಿಗೆ ಹಿಡಿಶಾಪ ಹಾಕುತ್ತಾ ಮನೆಕಡೆ ಹೆಜ್ಜೆ ಹಾಕುವಾಗ ಪಕ್ಕದ ಅಂಗಡಿಯವರನ್ನೊಮ್ಮೆ ನಮ್ಮ ಮನೆ ಅಡ್ರಸ್ ಕೇಳಿ ಯಾರದ್ರೂ ಬಂದಿದ್ರಾ? ಅಂತ ಕೇಳಿದೆವು. ತಕ್ಷಣ ಸ್ಪಂದಿಸಿದ ಅವರು ಆ ವ್ಯಕ್ತಿಯ ಹೇಗಿದ್ದ ಅಂತ ವಿವರಿಸಿದ್ರು. ಅವನ ಕೈಲಿದ್ದ ಕಪ್ಪು ಬಿಳುಪು ಬ್ಯಾಗಿನ ಕುರುಹನ್ನು ಕೇಳಲು ನಾನು ಮರೆಯಲಿಲ್ಲ. ಆಗ್ಲೆ ನಮ್ಮ investigationಗೆ ಹೊಸ ತಿರುವು ಸಿಕ್ಕದ್ದು.

ಅವನನ್ನು ಮತ್ತೆ ಹುಡುಕಲು ಆಟೋ ಕರೆಯಲು ಹೋದ ಅಂಜಲಿಯನ್ನು ನನ್ನ ಟೂ ವ್ಹೀಲರ್ ಏರಲು ಹೇಳಿ ಮತ್ತೆ ಆತ ನಡೆದು ಹೋದ ಹಾದಿಯಲ್ಲೇ ಎಲ್ಲರನ್ನೂ ವಿಚಾರಿಸುತ್ತಾ ಹೋದೆವು. ಹಾಗೆ ಸಿಕ್ಕವರೇ ನಮ್ಮ great Tom ಅಂಕಲ್ ಗೆಳೆಯರು. ನಾವು ಅವರ ಕೆಳಗಿನ ಮನೆಯ ಮಕ್ಕಳು ಅಂತ ತಿಳಿದವರೇ ನಮ್ಮ investigationಗೆ ಕೈಜೋಡಿಸಿದ್ರು. ನಾವಿಬ್ಬರೂ ಹಿಂದೆಂದೂ ನೋಡಿರದ ಗಲ್ಲಿಗಳನ್ನೆಲ್ಲಾ ಅವರ ದೆಸೆಯಿಂದ ಸುತ್ತಿದೆವು. ಯಾಕೊ ಆ ಖದೀಮ ಸಿಗಲಾರನೇನೋ ಅಂತ ಅಂಜಲಿ ಉಸುರುತ್ತಿದ್ದಳು, ಬಾಯಿ ಮುಚ್ಚಿಕೊಂಡು ಕೂರು ಅಂತ ನಾನು ಗದರಿಸಿದೆ. ಪಿಂಕ್ ಶರ್ಟ್, ಕಪ್ಪು ಪ್ಯಾಂಟ್, ಕೈಲಿ ಬ್ಯಾಗು ಇದಿಷ್ಟೆ ನನ್ನ ಕಣ್ಣ ತುಂಬ. ಹಾಗೇ ಮುಂದಿನ ತಿರುವಿಗೆ ಬಂದ್ವಿ, ಅಲ್ಲಿತ್ತು ಮಿಕ. ತೀರಾ ಪೆದ್ದನಂತೆ, ಸ್ವಲ್ಪ ಅಮಾಯಕನಂತೆ ನಟಿಸುತ್ತ ನಡೆದು ಬರುತ್ತಿದ್ದ. ಅಂಕಲ್ ಅವ್ನೇ ಅವ್ನೇ ಅಂತ ಕೂಗಿದ್ದೇ ತಡ, ನಮ್ಮ ಜೊತೆ ಬಂದವರು ಆ ವ್ಯಕ್ತಿಯನ್ನು ಹಿಂದು ಮುಂದು ವಿಚಾರಿಸದೇ ಪಕ್ಕಕ್ಕೆ ಕರೆತಂದು ಕಪಾಳಕ್ಕೆರಡು ಬಿಗಿಯೋದಾ? ಇತ್ತ ಅಂಜಲಿ plz dont hit ಅಂತಿದ್ರೆ ಕೇಳೋರ್ಯಾರು?ಮೊದಲು ಕೈಲಿದ್ದ ಬ್ಯಾಗ್ ಕೊಡಲು ಒಪ್ಪದ ಆತ ವಿಧಿಯಿಲ್ಲದೆ ಕೊಡಬೇಕಾಯ್ತು. ಆದ್ರೆ ಅದರಲ್ಲಿದ್ದದ್ದು ಯಾವ್ದೊ ಹಳೇ ನೋಕಿಯಾ ಮೊಬೈಲ್ ಸೆಟ್. ಅಷ್ಟರಲ್ಲಿ ಜನರ ಹಿಂಡು ನೆರೆದಿತ್ತು. ಇಷ್ಟೆಲ್ಲಾ scene create ಆದ್ಮೇಲೆ ಏನಪ್ಪ ಗ್ರಹಚಾರ ಅನ್ಕೊಳ್ವಾಗ್ಲೇ ಅಂಜಲಿ ಮೊಬೈಲ್ ಕಳ್ಳನ ಬ್ಯಾಗಿಂದ ಆಚೆ ಬಂತು. ನಾನಂತೂ ಒಂದು ಕ್ಷಣ ಅವಾಕ್ಕಾದೆ. ಸಿಮ್ ಇದ್ಯಾ ನೋಡ್ಕೋ ಅಂದೆ. ಅದು ಅವನ ಜೇಬು ಸೇರಿತ್ತು. ಆಮೇಲೆ ಅಂಜಲಿ ಕೈಗೆ ಬಂತು. ಆಮೇಲೆ ಆದದ್ದೇ Tom uncle entry. ನಮ್ಮ ಏರಿಯಾದಲ್ಲೇ ತಮ್ಮದೇ ಆದ ಖದರ್ರ್ ಇಟ್ಟುಕೊಂಡಿರೋ uncle ಅಲ್ಲಿ ಬಹುತೇಕ ಎಲ್ಲರಿಗೂ ಪರಿಚಿತರು. ಅವರಾ....ತನ್ನನ್ನು ಕೇಳಿಕೊಡು ಬಂದು ಫೋನ್ ಕದ್ದನಲ್ಲ ಅಂತ ಬಂದಿದ್ದ ಕೋಪಕ್ಕೆ ಎರಡು ಬಾರಿಸಿ ಮನೆ ಹತ್ರ ಆ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಕರೆದು ತಂದ್ರು. ಮೊದಲು policeಗೆ ಹಿಡಿದು ಕೊಡ್ತೀನಿ ಅಂದವರು ಆಮೇಲೆ ಆ ಮೊಬೈಲ್ ಚೋರನಿಗೆ ಬುದ್ಧಿ ಹೇಳಿ ಉಪದೇಶ ಕೊಟ್ಟು ನಮ್ಮೇರಿಯಾದಲ್ಲಿ ಮತ್ತೆ ಕಂಡರೆ ಹುಷಾರ್ ಅಂತ ಎಚ್ಚರಿಸಿ ಬಿಟ್ಟು ಬಿಟ್ಟ್ರು.

ಅಷ್ಟರಲ್ಲಾಗ್ಲೇ ನಮ್ಮೆಲ್ಲ friends ಗೆ ಸುದ್ದಿ BBC News ಥರಾ ತಿಳಿದುಹೋಗಿತ್ತು. ಒಂದು ಕ್ಷಣ ಯಾಮಾರಿದ್ದಕ್ಕೆ ಇಷ್ಟೆಲ್ಲಾ ಆಯ್ತು. ಇದೊಂದು ಮೊಬೈಲ್ ಕಳ್ಳತನ ಅಷ್ಟೆ ಸರಿ. ಆದ್ರೆ, ಬೆಂಗಳೂರಲ್ಲಿ ಎಷ್ಟೇ ಹುಷಾರಲ್ಲಿದ್ರು ಟೊಪ್ಪಿ ಹಾಕುವವರು ಬಿಡಲಾರರು. ನೀವೂ ಹುಷಾರು, ಸಲ್ಲದ ನೆಪ ಹೇಳಿ ಮನೆ ಬಾಗಿಲಿಗೆ ಬಂದವರನ್ನು ಎಚ್ಚರಿಕೆಯಿಂದ handle ಮಾಡಿ.