Sunday, April 11, 2010

ಮೌನ...ಬಂಗಾರ!


ಮೌನ...ಮೌನ ಅಂದಾಕ್ಷಣ ದೊಡ್ಡೋರು ಹೇಳ್ತಾರಲ್ಲ, ಮಾತು ಬೆಳ್ಳಿ ಮೌನ ಬಂಗಾರ ಅಂತ ಆ ಮಾತು ನೆನಪಾಗ್ದೇ ಇರೋಲ್ಲ. ಆದ್ರೆ ಈ ಮಾತು ಎಷ್ಟು ನಿಜ ಅಲ್ವಾ? ಮಾತು ಬೆಳ್ಳಿಯಷ್ಟು ಶುಭ್ರವಾಗಿದ್ರೆ ಆ ವ್ಯಕ್ತಿಯ ಮೌಲ್ಯ ಹೆಚ್ಚುತ್ತೆ. ಇನ್ನು ಮೌನವನ್ನು ಬಂಗಾರ ಅಂತಾರೆ. ಯಾಕಿರಬಹುದು? ಬಂಗಾರಕ್ಕೆ ಬೆಳ್ಳಿಗಿಂತ ಬೆಲೆ ಹೆಚ್ಚು. ಹಾಗಾಗಿ ಏನೇನೋ ಮಾತಾಡಿ ನಮ್ಮ ಮೌಲ್ಯ ಕಡಿಮೆ ಮಾಡಿಕೊಳ್ಳುವುದಕ್ಕಿಂತ ಮೌನವಾಗಿದ್ದು ನಮ್ಮ ವ್ಯಾಲ್ಯೂ ಹೆಚ್ಚಿಸಿಕೊಳ್ಳಬೇಕೆಂದು ಹೀಗೆ ಹೇಳಿರಬಹುದೇನೋ...ಆದ್ರೆ ಯಾವಾಗಲೂ ಮಾತನಾಡುತ್ತ ಇದ್ದರೂ ಒಳ್ಳೆಯದಲ್ಲ, ತೀರಾ ಮೌನವಾಗಿದ್ದರೂ ಕ್ಷೇಮವಲ್ಲ. ಯಾಕಂದ್ರೆ ತುಂಬಾ ಮೌನವಾಗಿದ್ರೆ ಬೇರೆಯವರು ನಮ್ಮ ವೀಕ್ನೆಸ್ ಅಂತ ತಿಳಿಯುವ ಸಾಧ್ಯತೆಯೂ ಉಂಟು. ಹಾಗಾಗಿ ನಾವು ಆಡುವ ಮಾತು ಹಿತವಾಗಿದ್ದು, ಮೌನವೂ ಮಿತವಾಗಿದ್ರೆ ಒಳ್ಳೆಯದೇನೋ.

ಮೌನ ಅನ್ನೋ ಪದದ ಬಗ್ಗೆ ಇಷ್ಟೇ ಹೇಳಿದ್ರೆ ಹೇಗೆ. ಹೆಣ್ಣಿಗೆ ಮೌನವೇ ಆಭರಣ ಅಂತ ಬೇರೆ ಹೇಳ್ತಾರೆ. ಸುಮ್ನೇ ಯೋಚಿಸ್ತಾ ಹೋಗಿ ಮೌನ ಅನ್ನೋ ಈ ಎರಡಕ್ಷರದ ಪದವೇ ಸದ್ದಿಲ್ಲದೇ ಸಾವಿರ ನೆನಪುಗಳ ಬುತ್ತಿ ಬಿಚ್ಚಿಡುತ್ತಾ ಹೋಗುತ್ತೆ. ನನಗಂತೂ ಮೌನ ಅನ್ನೋ ಪದದ ಬಗ್ಗೆ ಹೇಳುವುದಾದರೆ ನೆನಪಾಗೋದೇ ನನ್ನ ಶಾಲಾ ದಿನಗಳು. ಯಾಕಂದ್ರೆ ನಾನು ಕಲಿತದ್ದು ಕ್ರಿಶ್ಚಿಯನ್ ಕಾನ್ವೆಂಟನಲ್ಲಿ. ಅಂದ್ಮೇಲೆ ಸ್ಕೂಲಿನ ತುಂಬಾ ಬಿಳಿ ಅಂಗಿ ತೊಟ್ಟ ಸಿಸ್ಟರ್ ಗಳೇ ಹೆಚ್ಚೆಚ್ಚು ಕಾಣಸಿಗುತ್ತಿದ್ದರು. ಇನ್ನು ಅಲ್ಲಿನ ಬಹುಪಾಲು ಶಿಕ್ಷಕಿಯರು ಕ್ರೈಸ್ತರೇ. ಅವರದ್ದು ಶುದ್ಧ ಮಂಗಳೂರು ಕನ್ನಡ. ನಾನು ಆ ಕನ್ನಡ ಕೇಳ್ತಿದ್ರೆ, ಓಹ್ ಟೀಚರ್ ಅಂದ್ರೆ ಹೀಗೇ ಮಾತಾಡಬೇಕೇನೋ ಅಂತ ತಿಳಿದುಕೊಂಡಿದ್ದೆ! ಚಿಕ್ಕಮಕ್ಕಳು ಅಂದ್ರೆ ಗೊತ್ತಲ್ಲ? ಶಿಕ್ಷಕಿ ತರಗತಿಯಲ್ಲಿಲ್ಲ ಅಂದ್ರೆ ಮಣಮಣ ಗಲಾಟೆ ಶುರುವಾಗೋದು ಇಧ್ದದ್ದೇ. ಆಗ ಟೀಚರ್ ಬಂದು ಮಕ್ಕಳೇ ಮೌನವಾಗಿರಿ ಅಂತ ಹೇಳುತ್ತಿದ್ದರು. ಎಲ್ಲರೂ ಮೌನವಾಗಿ ಪುಸ್ತಕ ತೆರೆದು ಓದಿ ಅಂತ ಆದೇಶಿಸುತ್ತಿದ್ದರು. ನಾವು ಪ್ರೈಮರಿಯಲ್ಲಿದ್ದಾಗ ಬಹುಪಾಲು ನೋಟ್ಸನ್ನು ಕರಿಹಲಗೆ ಮೇಲೇ ಬರೆಯುತ್ತಿದ್ದರು. ಅದನ್ನು ನೋಡಿಕೊಂಡು ನಾವು ನಮ್ಮ ನೋಟ್ಸಲ್ಲಿ ಬರೆದುಕೊಳ್ಳುತ್ತಿದ್ದೆವು. ಆಗಲೂ ಅಷ್ಟೇ ಟೀಚರ್ ಒಮ್ಮೆ 'ಶ್' ಅಂದು ಬರೆಯಲು ಅತ್ತ ತಿರುಗಿದರೇ ಮುಗೀತು. ಕೆಲವೇ ನಿಮಿಷದಲ್ಲಿ ಇಡೀ ಕ್ಲಾಸಲ್ಲಿ ಕಪ್ಪೆಗಳು ಸದ್ದು ಮಾಡಿದಂತೆ ವಟವಟ ಸದ್ದು. ಮತ್ತೆ ಟೀಚರ್ ತಿರುಗಿ ಡೆಸ್ಕ್ ಮೇಲೆ ಡಸ್ಟರ್ ನಿಂದ ಧಡ್ ಅಂತ ಸದ್ದು ಮಾಡಿದಾಗಲೇ ನಿಶ್ಯಬ್ಧ. ಆಗಂತೂ ನಮಗೆಲ್ಲಾ ಮೌನ ಅಂದ್ರೆ ಅಸಹನೀಯ.

ಕ್ಲಾಸಿಗೆ ಶಿಕ್ಷಕಿ ಬರೋದು ಕೊಂಚ ತಡವಾದ್ರೂ ಅಲ್ಲಿ ನಮ್ಮದೇ ಲೋಕ ಸೃಷ್ಟಿಯಾಗಿಬಿಡ್ತಿತ್ತು. ಹೋಮ್ ವರ್ಕ್ ಮಾಡಿದ್ಯಾ? ಟೀಚರ್ ಆ ಲೆಕ್ಕ ಕೊಟ್ಟಿದ್ರಲ್ಲಾ ಅದಕ್ಕೆ ಸರಿ ಉತ್ತರ ಬಂತಾ? ಹೀಗೆ ಚರ್ಚೆಗಳು ಶುರುವಾಗ್ತಿದ್ವು. ಇವಿಷ್ಟೇ ಅಲ್ಲ, ಆ ದಿನ ಸೋಮವಾರವಾಗಿದ್ರಂತೂ ಹಿಂದಿನ ದಿನ ಟಿವಿಯಲ್ಲಿ ಬಂದಿದ್ದ ಸಿನಿಮಾ ನೋಡಿದ್ಯೋ ಇಲ್ವೋ ಅನ್ನೋ ವಿಷಯಾನೂ ನಮ್ಮ ಹರಟೆಯ ಕೇಂದ್ರಬಿಂದುವಾಗ್ತಿತ್ತು. ಈ ಹರಟೆ ಕೊಚ್ಚುವಿಕೆಗೆ ಫುಲ್ ಸ್ಟಾಪ್ ಬೀಳಬೇಕಿದ್ರೆ ನಮ್ಮ ಟೀಚರ್ ಬಂದು ಬಾಯಿ ಮುಚ್ಚಿ ಅಂತ ರೇಗಲೇಬೇಕಿತ್ತು.


ಈ ಮಾತು ಬೆಳ್ಳಿ ಮೌನ ಬಂಗಾರ ಅನ್ನೋ ಗಾದೆ ಕೇಳಿದ್ರೆ ನಂಗೆ ಒಂದು ಘಟನೆ ಚೆನ್ನಾಗಿ ನೆನಪಾಗುತ್ತೆ. ಹೈಸ್ಕೂಲು ದಿನಗಳಲ್ಲಿ ನಮಗೆ ಸಿಸ್ಟರ್ ಪ್ರಮಿಳಾ ಡ್ರಾಯಿಂಗ್ ಕ್ಲಾಸ್ ತೆಗೆದುಕೊಳ್ತಿದ್ರು. ಕ್ಲಾಸ್ ನಲ್ಲಿರೋ ಬಹುತೇಕ ಹುಡ್ಗೀರ್ಗೆ ನೀಡಲ್ ವರ್ಕ್ ಮತ್ತು ಡ್ರಾಯಿಂಗ್ ಕ್ಲಾಸ್ ಅಂದ್ರೆ ಅಲರ್ಜಿ. ನಂಗೆ ಮಾತ್ರ ಅದೆಷ್ಟು ಇಂಟ್ರೆಸ್ಟು ಅಂದ್ರೆ ಸಿಸ್ಟರ್ ಬರೋಕೆ ಸ್ವಲ್ಪ ತಡ ಆದ್ರೂ ಆವ್ರ ಕ್ಯಾಬಿನ್ ಗೆ ಹೋಗಿ ಕರೆದುತರ್ತಿದ್ದೆ. ಆಗೊಮ್ಮೆ ಬ್ಯಾನರ್ ನಲ್ಲಿ ಬರೆಯುವ ಮಾದರಿ ಕನ್ನಡ ಅಕ್ಷರಗಳನ್ನು ನಮಗೆ ಸಿಸ್ಟರ್ ಕಲಿಸಿದ್ದರು. ಎಲ್ಲರಿಗೂ ಈ 'ಮಾತು ಬೆಳ್ಳಿ ಮೌನ ಬಂಗಾರ' ಅನ್ನೋ ಸಾಲುಗಳನ್ನು ನೀಟಾಗಿ ಬರೆದು ಪೇಂಟ್ ಮಾಡಿ ನೆಕ್ಸ್ಟ್ ಕ್ಲಾಸಿನಲ್ಲಿ ತರಲು ಹೇಳಿದ್ರು. ಎಲ್ಲರಂತೆ ಮಾಮೂಲಾಗಿ ಮಾಡಿಕೊಂಡು ಹೋಗೋದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಏನಾದ್ರೂ ಕೊಂಚ ಭಿನ್ನವಾಗಿ ಮಾಡಲು ಯೋಚಿಸುತ್ತಿದ್ದೆ. ಆಗ ನಂಗೊಂದು ಐಡಿಯಾ ಹೊಳೆದಿತ್ತು. ಈ ಮಾತು ಬೆಳ್ಳಿ ಮೌನ ಬಂಗಾರ ಅನ್ನೋ ಸಾಲನ್ನ ಅಂದವಾಗಿ ಬರೆದು ಬೆಳ್ಳಿ ಪದಕ್ಕೆ ಸಿಲ್ವರ್ ಪೌಡರ್ ಮತ್ತು ಬಂಗಾರ ಅನ್ನೋ ಪದಕ್ಕೆ ಚಿನ್ನದ ಬಣ್ಣದ ಪೌಡರ್ ಮಿಕ್ಸ್ ಮಾಡಿ ಪೇಂಟ್ ಮಾಡಿದ್ದೆ. ಸಿಸ್ಟರ್ ನನ್ನ ಬುಕ್ ಗೆ ಗುಡ್ ಅಂತ ಬರೆದಾಗ ಆದ ಖುಷಿ ಅಷ್ಟಿಷ್ಟಲ್ಲ. ನಾನು ಹೈಸ್ಕೂಲಿಗೆ ಕಾಲಿಟ್ಟಾಗ ನನಗೆ ಅಷ್ಟೊಂದು ಫ್ರೆಂಡ್ಸ್ ಇರ್ಲಿಲ್ಲ. ಇದ್ದವರೆಲ್ಲಾ ಇಂಗ್ಲಿಷ್ ಮೀಡಿಯಂಗೆ ಜಿಗಿದಿದ್ರೆ ನಾನೊಬ್ಬಳು ಕನ್ನಡ ಮೀಡಿಯಂ ಸೇರಿದೆ. ಹಾಗಾಗಿ ಕ್ಲಾಸಿನಲ್ಲಿ ಹತ್ತಿರದ ಗೆಳತಿಯರು ಅಂತ ಇದ್ದವರು ನೆನಪೇ ಇಲ್ಲ. ಆದ್ರೆ ನಮ್ಮ ಗ್ಯಾಂಗು ಗೈಡ್ಸ್ ಕ್ಲಾಸಿನಲ್ಲಿ ಒಟ್ಟಾಗುತ್ತಿದ್ದರಿಂದ ನಮ್ಮ ತಂಟೆ ತರಲೆಗಳು ಅಬಾಧಿತವಾಗಿ ನಡೆದಿದ್ದವು.


ಕಾಲೇಜಿಗೆ ಬಂದಾಗ ನಾನಿನ್ನೂ ಮೌನಿ. ಯಾಕಂದ್ರೆ ಅಲ್ಲಿ ನಂಗೆ ಯಾರೂ ಗೊತ್ತಿಲ್ಲ! ಎಲ್ಲೊ ಅಲ್ಲೊಬ್ರು ಇಲ್ಲೊಬ್ರು ನಮ್ಮ ಶಾಲೆಯವರು ಕಂಡ್ರೆ ಅವರೇ ಬಂಧುಗಳು! ಆದ್ರೆ ಅವರಿಗೆ ನನ್ನ ಕಂಡು ಹಾಗೆ ಅನಿಸಬೇಕಲ್ಲ? ನಾನು ಪಿಯು ಕಾಲೇಜಿನಲ್ಲಿ ಮೊದಲ ವರ್ಷವಂತೂ ಕ್ಲಾಸಿನಲ್ಲಿ ಅದೆಷ್ಟು ಸೈಲೆಂಟಾಗಿ ಕೂರ್ತಿದ್ದೆ ಅಂದ್ರೆ ಕ್ಲಾಸಿನ ಹುಡುಗೀರು ನಂಗೆ ಸಖತ್ ಕೊಬ್ಬು ಅಂತ ತಿಳ್ಕೊಳ್ಳೋರು! ಮೊದಮೊದಲಂತೂ ಸ್ವಲ್ಪ ಬಾಯಿ ಜೋರಿರೋ ಹುಡುಗೀರು ಫಸ್ಟ್ ಬೆಂಚನ್ನು ಆಕ್ರಮಿಸಿಕೊಂಡುಬಿಡ್ತಿದ್ರು.

ನಾನು ಯಾರೂ ಕೂರದ ಕಡೇ ಬೆಂಚಿಗೆ ಹೆಚ್ಚು ಪ್ರಿಫರ್ ಮಾಡ್ತಿದ್ದೆ. ಕೆಲವು ಹುಡುಗೀರು ನನ್ನ ಮೇಲೆ ಕರುಣೆ ತೋರಿ ಯಾಕೆ ಒಬ್ಳೆ ಕೂರ್ತೀಯಾ ಬಾ ನಮ್ಮ ಜೊತೆ ಅಂತ ಕರೀತಿದ್ರು. ಆಗಲೂ ನನ್ನ ಮೌನ ಅವರನ್ನು ಅಸಹನೆಗೀಡುಮಾಡ್ತಿತ್ತು. ಆದ್ರೆ ಒಂದ್ಸಲ ನಂಗ್ಯಾರಾದ್ರೂ ಹಿಡಿಸಿದ್ರೆ ನಾನೆಷ್ಟು ಮಾತಾಡ್ತೀನಿ ಅಂತ ಪಾಪ ಅವರೀಗೇನು ಗೊತ್ತಿತ್ತು!!

ಇನ್ನು ಕೇಳಿದ ಪ್ರಶ್ಲೆಗಳಿಗೆ ತಪ್ಪಾದ್ರೂ ಸರಿ ಕಾನ್ಪಿಡೆಂಟಾಗಿ ಉತ್ತರಿಸೋದನ್ನು ಕಲಿಸಿತ್ತು ಶಾಲಾಜೀವನ. ಎಲ್ಲಕ್ಕೂ ಮಿಗಿಲಾಗಿ ನನ್ನ ಗೈಡ್ಸ್ ದಿನಗಳು. ಹಾಗಾಗಿ ಲೆಕ್ಚರರ್ ಗಳು ಏನಾದ್ರೂ ಕೇಳಿದ್ರೆ ನನಗೆ ತಿಳಿದಷ್ಟನ್ನು ಎಕ್ಸ್ ಪ್ಲೇನ್ ಮಾಡುತ್ತಿದ್ದ ರೀತಿ ಅವರಿಗೆ ಇಷ್ಟವಾಗ್ತಿತ್ತು. ದಿನ ಕಳೆದಂತೆ ಮೊದಲ 3 ಬೆಂಚುಗಳ ಸಾಲುಗಳಲ್ಲಿ ನಾನಿರುತ್ತಿದ್ದೆ. ದ್ವಿತೀಯ ಪಿಯುಸಿಗೆ ಬರುವಷ್ಟರಲ್ಲಿ ನಾನು ಮೌನದ ಚಿಪ್ಪನ್ನು ಕಳಚಿ ಹೊರಬಂದಿದ್ದೆ. ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನನ್ನ ಹೆಸರು ತಾನಾಗೇ ಸೇರಿಕೊಳ್ತಿತ್ತು. ಮೊದಲ ವರ್ಷದಲ್ಲಿ ನನ್ನ ವಿರುದ್ಧ ಒಂದು ಶತ್ರು ಪಡೆಯೇ ಸಂಘಟಿತವಾಗಿತ್ತು. ಅಸಲಿಗೆ ನಾನು ಯಾರಿಗೂ ಏನೂ ತೊಂದರೆ ಮಾಡ್ತಿರ್ಲಿಲ್ಲ. ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುವ ಕೆಟ್ಚಚಟ ಮೊದಲೇ ಇಲ್ಲ. ನನಗೇ ಗೊತ್ತಿಲ್ದೇ ಇದೆಲ್ಲಾ ಆಗ್ತಿತ್ತು. ಆದ್ರೆ 2ನೇ ವರ್ಷ ಬರುವಷ್ಟರಲ್ಲಿ ನನಗೆ ಚೆನ್ನಾಗಿ ನೆನಪಿರುವಂತೆ ಬಹಳಷ್ಟು ಹುಡುಗೀರು ನನ್ನ ಪಕ್ಕ ಕೂತರೆ ಮೆಲ್ಲಗೆ ಕ್ಷಮೆ ಕೇಳಿಬಿಡ್ತಿದ್ರು. ನಂಗಾಗ ಅಚ್ಚರಿ, ಜೊತೆಗೆ ಅರೇ ನನಗೇ ಅರಿವಿಲ್ಲದೆ ನನ್ನ ಸುತ್ತ ಇಷ್ಟೆಲ್ಲಾ ನಡೆದಿತ್ತಾ ಅಂತ ನಗು ಬರ್ತಿತ್ತು. ಆದ್ರೆ ಆ ದಿನಗಳು ಮಾತ್ರ ವಂಡರ್ ಫುಲ್.

ನಾನು ಪದವಿ ವ್ಯಾಸಂಗಕ್ಕೆ ಮತ್ತೆ ಕಾಲೇಜು ಬದಲಿಸಬೇಕಾಯ್ತು. ಆಗ ಮತ್ತೆ ಹಳೇ ಕಾಲೇಜಿನ ಗೆಳತಿಯರೆಲ್ಲಾ ದೂರಾದರು. ಹೊಸ ಕಾಲೇಜಿನಲ್ಲಿ ನನ್ನ ಪಾಡಿಗೆ ನಾನಿರುವುದು ನನಗೆ ಅಭ್ಯಾಸವಾಗಿಬಿಟ್ಟಿತ್ತು. ಹಾಗಾಗಿ ಇಲ್ಲಿ ಅದೇನು ಕಷ್ಟವಾಗ್ಲಿಲ್ಲ. ಓಡಾಡಲು ನನ್ನದೇ ಟೂ ವ್ಹೀಲರ್ ಇತ್ತು. ಹಾಗಾಗಿ ನಾನಯ್ತು ನನ್ನ ಪಾಡಾಯ್ತು. ಆದ್ರೂ ನೋಡೋ ಕಣ್ಣುಗಳು ಸುಮ್ನಿರ್ತಿರ್ಲಿಲ್ಲ. ನನ್ನ ಬೆನ್ನ ಹಿಂದಿನ ಮಾತುಗಳು ಎಷ್ಟೋ ಸಲ ಮೌನ ಮುರಿದು ಮಾತಾಡಲು ಪ್ರೇರೇಪಿಸುತ್ತಿದ್ರೂ ಮನಸ್ಸಾಗುತ್ತಿರ್ಲಿಲ್ಲ. ಕಾರಣ ನಾನಾಗ ಕೇಬಲ್ ಟಿವಿಯೊಂದರಲ್ಲಿ ನಿರೂಪಕಿ ಮತ್ತು ವಾರ್ತಾವಾಚಕಿಯಾಗಿ ಕೆಲಸ ಮಾಡ್ತಿದ್ದೆ. ಹಾಗಾಗಿ ನನಗೆ ಅಹಂಕಾರ, ಜಂಭ ಅನ್ನೋ ಭಾವ ಅವರಿಗೆಲ್ಲಾ. ಹಾಗಾಗಿ ನನಗೆ ಸಮಜಾಯಿಷಿ ನೀಡೋ ಅಗತ್ಯವೇ ಬರ್ತಿರ್ಲಿಲ್ಲ. ಅವರಿಗೇ ಗೊತ್ತಾಗಲಿ ಬಿಡು ಅಂತ ಸುಮ್ನಿರ್ತಿದ್ದೆ. ಕಾಲೇಜು ಸ್ಕೂಲು ಅಂದ್ಮೇಲೆ ಇದೆಲ್ಲಾ ಪ್ರತಿಯೊಬ್ಬರಿಗೂ ಅನುಭವವಾದ ಸಂಗತಿಗಳೇ. ಆದ್ರೆ ಸುಮ್ಮನೆ ಕುಳಿತು ನೆನಪಿಸಿಕೊಂಡ್ರೆ ಇವೆಲ್ಲಾ ಈಗ ಸಖತ್ ಮಜಾ ಕೊಡೋ ಸನ್ನಿವೇಶಗಳೇ ಬಿಡಿ.

ನನಗಂತೂ ಗಲಾಟೆ ಅಂದ್ರೆ ಆಗಲ್ಲ. ಸದಾ ಗಿಜಿಗಿಜಿ ಅನ್ನೋ ಜಾಗದಲ್ಲಿರೋದೇ ಒಂಥರಾ ಕಿರಿಕಿರಿ. ನಮ್ಮ ಮನೆ ಹತ್ರ ಅಂತೂ ಅದೆಷ್ಟು ಪ್ರಶಾಂತ ವಾತಾವರಣ ಗೊತ್ತಾ. ಮನೆ ಪಕ್ಕದಲ್ಲೇ ಇರುವ ಹಸಿರು ಗಿಡಮರಗಳು ಮನಸ್ಸಿಗೆ ಸದಾ ಆಹ್ಲಾದ ಅನುಭವ ನೀಡುತ್ತವೆ. ಮನೆ ಮುಂದೆ ಇದ್ದ ವಿಶಾಲವಾದ ಜಾಗದಲ್ಲಿ ಒಬ್ಬಳೇ ಕುಳಿತೆ ಅಂದ್ರೆ ನನ್ನದೇ ಲೋಕ, ನನ್ನದೇ ಕಲ್ಪನೆಗಳು ಜೀವತಳೆಯುತ್ತಿದ್ದವು. ಆಗ ಮೌನವೇ ನನ್ನ ಸಂಗಾತಿ. ನಿಜಕ್ಕೂ ಇಂತಹ ಸುಂದರ ವಾತಾವರಣದಲ್ಲಿ ನಮ್ಮ ಸಂಗಾತಿ ಮೌನವೇ ಆಗಿದ್ದರೆ ಆ ಕ್ಷಣಗಳನ್ನು ಯಾರೇ ಆದ್ರೂ ಎಂಜಾಯ್ ಮಾಡಬಲ್ಲರೇನೋ. ಇನ್ನು ರಾತ್ರಿ ಹೊತ್ತಂತೂ ನಾನು ಅದೆಷ್ಟೋ ಸಲ ಒಬ್ಬಳೇ ತಾಸುಗಟ್ಟಲೆ ಹೊರಗೆ ಕುಳಿತು ನಕ್ಷತ್ರಗಳನ್ನು ನೋಡುತ್ತಿದ್ದೆ. ಅದ್ಯಾಕೋ ಗೊತ್ತಿಲ್ಲ. ಪಕ್ಕದಲ್ಲಿ ತಂಗಿ ಕುಳಿತು ತಲೆಕೊರೀತಿದ್ರೆ ಅವಳಿಗೂ ಮೌನವಾಗಿ ಆಕಾಶವನ್ನೇ ದಿಟ್ಟಿಸು ಅಂತ ಹೇಳ್ತಿದ್ದೆ. ಕಾರಣ ನನಗೆ ಈಗಲೂ ಗೊತ್ತಿಲ್ಲ. ಆದ್ರೆ ಹಾಗೆ ಮಾಡುವುದು ನನಗೆ ಒಂಥರಾ ಖುಷಿ, ನೆಮ್ಮದಿ ಕೊಡ್ತಿತ್ತು. ಎಷ್ಟೋ ಸಲ ನಾನು ತುಂಬಾ ಬೇಜಾರಾದಾಗ ನಕ್ಷತ್ರಗಳನ್ನು ನೋಡುತ್ತಾ ಮನಸಲ್ಲೇ ಮಾತಾಡಿದ್ದುಂಟು. ಕಣ್ಣಂಚಲ್ಲಿ ನೀರು ತುಂಬಿಕೊಂಡದ್ದುಂಟು. ಆದ್ರೆ ಸುಮ್ಮನೆ ಕುಳಿತು ಪ್ರಕೃತಿಯನ್ನು ಅನುಭವಿಸುವುದಿದೆಯಲ್ಲ ಅದು ಒಂಥರಾ ಚೆಂದ. ಈಗಲೂ ಅವಕಾಶ ಸಿಕ್ಕರೆ ಹಾಗೆ ಮಾಡ್ತೀನಿ. ಆದ್ರೆ ನನಗೆ ನೆನಪಿರುವಂತೆ ಇತ್ತೀಚೆಗೆ ತಾಸುಗಟ್ಟಲೆ ರಾತ್ರಿ ಆಕಾಶ ವೀಕ್ಷಿಸಿದ್ದು ನನಗೆ ನೆನಪೇ ಇಲ್ಲ.

ಈಗಂತೂ ಬಿಡಿ. ಇರೋದು ಬೆಂಗಳೂರೆಂಬ ಬಿಜಿ ಸಿಟಿಯಲ್ಲಿ. ಇಲ್ಲಿ ಹಗಲು ರಾತ್ರಿ ಬದಲಾಗುವುದೇ ಗೊತ್ತಾಗುವುದಿಲ್ಲ. ನಿತ್ಯವೂ ಒಂದೊಂಥರಾ ಶಿಫ್ಟ್ ಟೈಮು. ಹೋಗೋದೊಂದು ಹೊತ್ತು ಬರೋದೊಂದು ಹೊತ್ತು. ಉಣ್ಣೋದೊಂದು ಹೊತ್ತು ಮಲಗೋದೊಂದು ಹೊತ್ತು. ಎಲ್ಲರಂತೆ ಪ್ರತಿನಿತ್ಯ ಒಂದೇ ಸಮಯದ ಕೆಲಸ ಮಾಡಿದ್ದು ಗೊತ್ತೇ ಇಲ್ಲ. ಎಷ್ಟೋ ಸಲ ಎಲ್ಲಾ ಮಲಗಿ ಕನಸಿನ ಲೋಕದಲ್ಲಿರುವಾಗ ಮನೆಗೆ ಬರುವುದುಂಟು. ಎಲ್ಲಾ ಎದ್ದು ಆಫೀಸಲ್ಲಿ ಕೆಲಸ ಮಾಡೋವಾಗ ನಾನು ಹಾಸಿಗೆ ಬಿಟ್ಟಿರ್ತೀನಿ. ರಾತ್ರಿ ನಾನು ಮನೆ ತಲುಪಿದರೆ ನನಗಾಗಿ ಕಾಯುವ ಏಕೈಕ ಸಂಗಾತಿ ನೀರವ ಮೌನ. ಅಫ್ಕೋರ್ಸ್ ಬೆಂಗಳೂರಲ್ಲಿ ನಿಮಗೆ ನೀರವ ಮೌನ ಬಿಟ್ರೆ ಸಿಗುವ ಮತ್ತೊಂದು ಸಂಗತಿ, ಸಂಗಾತಿ ಅಂದ್ರೆ ಕೆಟ್ಟ ಟ್ರಾಫಿಕ್ ಮತ್ತು ಕಿವಿಗಡಚಿಕ್ಕುವ ಗದ್ದಲ. ಊರಲ್ಲಿ ಒಂಟಿಯಾಗಿ ಕೂತು ಅನುಭವಿಸಿದ ಮೌನಯಾನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಇದ್ರೂ ಮನಸ್ಸಿಗೆ ತೃಪ್ತಿ ಸಿಗೋಲ್ಲ ಬಿಡಿ. ನೋಡನೋಡುತ್ತಿದ್ದ ಹಾಗೇ ಈ ಪರಿಸರಕ್ಕೆ ಹೊಂದಿಕೊಂಡಿದ್ದೇನೆ. ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆಯಲ್ಲ? ಈಗಲೂ ಒಂದೆರಡು ದಿನ ಊರಿಗೆ ಅಂತ ಹೋದ್ರೆ ಅಲ್ಲಿನ ವಾತಾವರಣ ತುಂಬಾ ಆಹ್ಲಾದಕರ ಅನ್ನಿಸುತ್ತದೆ. ನನಗೆ ಹೆಚ್ಚಾಗಿ ಊರು ಸುತ್ತೋಕೆ ಹೋಗದೆ ಮನೆಯಲ್ಲೇ ಇರೋದೆ ಇಷ್ಟ. ನೆಮ್ಮದಿಯಾಗಿ ನಿದ್ರೆ ಬರುತ್ತೆ. ಬೆಂಗಳೂರಲ್ಲಿ ಆ ವಾಹನಗಳ ಸದ್ದಿನ ಜೋಗುಳದಲ್ಲೇ ನಿದ್ದೆ ಮಾಡಿ ಅದೇ ವಾಹನಗಳ ಹಾರ್ನ್ ಅಬ್ಬರದ ಅಲಾರ್ಮ್ ಸದ್ದು ತಾಳಲಾರದೆ ಎದ್ದು ಅಭ್ಯಾಸವಾಗಿ, ಮನೆಯ ಬಳಿಯ ಶುದ್ಧ ಮೌನ ಖುಷಿ ನೀಡುತ್ತದೆ. ಮೌನದ ಮಡಿಲಲ್ಲಿ ತಣ್ಣಗೆ ಮಲಗಿ ಬೆಳಗಿನ ಮುಂಜಾವಲ್ಲೂ ಬೆಚ್ಚಗೆ ಹೊದಿಕೆ ಸುತ್ತಿ ಸುತ್ತಿ ಮಲಗಿ ಎದ್ರೆ, ಅಮ್ಮನ ಬಿಸಿಬಿಸಿ ಕೈ ತಿಂಡಿ ತಿನ್ನೋದಿದೆಯಲ್ಲ ಅದು ರಾಜಭೋಗ!

ಮೌನಕ್ಕೆ ಅದೆಷ್ಟು ಮುಖಗಳು, ಬರೆದಷ್ಟು ಮುಗಿಯಲ್ಲ. ಮೌನ ಹೊಮ್ಮಿಸುವ ಭಾವಗಳು ಅನುಭವಿಸಿದರಷ್ಟೇ ಗೊತ್ತಾಗುವುದು. ಅದಕ್ಕೇ ಹೇಳೋದು ಮೌನ ಬಂಗಾರ ಅಂತ ಅಲ್ವಾ?