Saturday, May 15, 2010

ಜೇನು ತಂದ ಟೆನ್ಷನ್ನು!

ಪ್ರಕೃತಿ ಮಾತೆ ತನ್ನೊಡಲೊಳಗೆ ಅದೆಷ್ಟು ರಹಸ್ಯಗಳನ್ನು ಅಡಗಿಸಿಕೊಂಡಿದ್ದಾಳಲ್ವಾ? ನಿಸರ್ಗದತ್ತವಾಗಿ ಸಿಗುವ ಪ್ರತಿಯೊಂದು ವಸ್ತುವಿನ ಸೃಷ್ಟಿಯೂ ಅದೆಷ್ಟು ವಿಸ್ಮಯ ಅನ್ನಿಸದಿರದು. ನನಗಂತೂ ಈ ಜೇನುತುಪ್ಪ ನೋಡಿದ್ರೆ ಬಹಳ ಸಲ ಹಾಗನ್ನಿಸಿದ್ದುಂಟು. ಎಷ್ಟು ಸೋಜಿಗ ಅಲ್ವಾ? ಎಲ್ಲಿಂದಲೋ ಬರುವ ಜೇನುಹುಳುಗಳು ಸೂರ್ಯನ ಕಿರಣಗಳಿಗೆಂದೇ ಕಾದು ಅರಳಿ ನಳನಳಿಸುವ ಕುಸುಮಗಳಿಂದ ಮಕರಂದ ಹೀರುವುದು, ಬಳಿಕ ಅವುಗಳೇ ನಿರ್ಮಿಸಿದ ಮೇಣದ ಗೂಡು, ಅದರ ಒಂದೊಂದು ತೂತು ಯಾರೋ ಕುಳಿತು ಅಡಿಪಟ್ಟಿಯಿಟ್ಟು ನಿರ್ಮಿಸಿದಷ್ಟು ವ್ಯವಸ್ಥಿತ. ಅದರೊಳಗೆ ಜೇನುಹುಳುಗಳು ತುಂಬಿದ ಮಕರಂದವನ್ನು ಅವು ಹೀರುವ ಮುನ್ನವೇ ಸಮಯ ನೋಡಿ ಹೊಂಚು ಹಾಕಿ ಬೆಂಕಿ ಕೊಟ್ಟು ಜೇನು ಗಿಟ್ಟಿಸೋದು ನಾವು!ಆದ್ರೂ ನೋಡಿ, ಈ ಜೇನು ಅದೆಷ್ಟು ಸಿಹಿ. ಚಿಕ್ಕಮಕ್ಕಳಿಗೆ ಬುದ್ಧಿ ಚುರುಕಾಗಲೆಂದು ಇದನ್ನು ಕೊಡೋದುಂಟು. ಚಪ್ಪರಿಸಿದಷ್ಟು ಮತ್ತಷ್ಟು ಬೇಕು ಅನ್ನಿಸುತ್ತೆ. ನಾನಂತೂ ಚಿಕ್ಕವಳಿದ್ದಾಗ ಅಪ್ಪ ದೊಡ್ಡ ಬಾಟಲಿಯಲ್ಲಿ ತಂದಿಟ್ಟಿರುತ್ತಿದ್ದ ಜೇನುತುಪ್ಪವನ್ನು ಎಷ್ಟು ತಿಂತಿದ್ದೆ ಗೊತ್ತಾ? ಅಮ್ಮ ಏನಾದರೂ ಬೇಕಂತ ಬೀರು ಬಾಗಿಲು ತೆರೆದರೆ ನಾನಲ್ಲಿ ಹಾಜರ್. ಪುಟ್ಟ ಅಂಗೈ ಒಡ್ಡುತ್ತಾ 'ಅಮ್ಮ ಜೇನ್ತುಪ್ಪ...' ಅಂತ ಕಣ್ಣರಳಿಸಿ ನಿಂತುಬಿಡ್ತಿದ್ದೆ. ನಮ್ಮಮ್ಮ ಪುಟಾಣಿ ಬಟ್ಟಲಿನಲ್ಲಿ ಸುರಿದು ಕೊಟ್ರೆ ಇಷ್ಟಿಷ್ಟೇ ನೆಕ್ಕುತ್ತಾ ಆಸ್ವಾದಿಸುತ್ತಿದ್ದದ್ದು ಈಗ್ಲೂ ನೆನಪು. ಎಲ್ಲಕ್ಕಿಂತ ಹೆಚ್ಚಾಗಿ ಈ ಜೇನುತುಪ್ಪವನ್ನು ತುಂಬಾ ದಿನ ಇಟ್ರೆ ಬಾಟಲಿಯೊಳಗೆ ಸಕ್ಕರೆ ಕಟ್ಟುತ್ತೆ. ಅದೆಷ್ಟು ಚೆಂದ ಗೊತ್ತಾ ತಿನ್ನೋಕೆ? ಬಾಯಿಗಿಟ್ರೆ ಕರಗುವುದೇ ಗೊತ್ತಾಗದು!ಹೀಗೆ ರುಚಿಯಾದ ಜೇನುತುಪ್ಪವನ್ನು ಕೊಡೋ ಜೇನುಗೂಡು ಕಟ್ಟಿದ್ರೆ ಮನೆಗೆ ಶುಭ, ಲಕ್ಷ್ಮಿ ಬಂದ ಸಂಕೇತ ಅಂತೆಲ್ಲಾ ಹೇಳೋದು ಕೇಳಿದ್ದೇನೆ. ಮೊನ್ನೆ ಹೀಗೇ ಆಯ್ತು. ಸಂಜೆ 7ಕ್ಕೆ ಆಫೀಸಿಂದ ಆಗ ತಾನೇ ಬಂದೆ. ಇನ್ನೂ ಗೇಟ್ ಸಮೀಪಿಸಿದೆ ಅಷ್ಟೇ. ನಮ್ ಪಿಜಿಯಲ್ಲಿರೋ ಗಾನಾ ಗೇಟ್ ಹತ್ರ ಇದ್ಲು. ನಾನ್ ಬಂದ ತಕ್ಷಣ ತನ್ನ ಮಾಮೂಲಿ ಸ್ಚೈಲಲ್ಲಿ ' ಚಿನ್ನಾ, ಅಲ್ನೋಡು ಚಿನ್ನಾ! ನಮ್ ರೂಮ್ ಬಾಲ್ಕನಿಗೆ ಹೆಂಗ್ ಜೇನ್ ಕಟ್ಟಿದೆ' ಅಂತ ತೋರಿಸಿದ್ಲು. ನಾನು 'ವಾವ್!' ಅಂದೆ. 'ಏನ್ ಚಿನ್ನಾ ಖುಷಿ ಪಡ್ತೀಯಾ. ನನ್ ಸಂಕಟ ನಂಗೆ' ಅಂತ ಮುಖ ಕೆಂಪಗೆ ಮಾಡಿಕೊಂಡ್ಲು. ನಮ್ ಪಿಜಿ ಮಾಲೀಕ ಕೇಶವನ ಬೆನ್ನು ಬಿಡದೆ ಇವತ್ತು ರಾತ್ರಿನೇ ಶತಾಯಗತಾಯ ಜೇನುಹುಳಗಳನ್ನು ಅಲ್ಲಿಂದ ವಾಶ್ ಔಟ್ ಮಾಡ್ಬೇಕು ಅನ್ನೋ ಶಪಥ ಮಾಡಿದ್ದಳು ಗಾನ. ಯಾರನ್ನೋ ವಿಚಾರಿಸಿದ್ದಕ್ಕೆ ಜೇನುಗೂಡು ತೆಗೆಯೋಕೆ 750ರೂ ಕೊಡಬೇಕು ಅಂದ್ರು. ಮೊದಲೇ ಜ್ವರ, ಲೂಸ್ ಮೋಷನ್ ಅಂತ ಬೆಸವಳಿದಿದ್ದ ಕೇಶವ್ ಮುಖ ರೇಟ್ ಕೇಳಿ ಇನ್ನೂ ಬಾಡಿಹೋಯ್ತು! ಆದ್ರೆ ಗಾನಾ ಯಾಕೋ ಬಿಡೋಹಾಗೆ ಕಾಣ್ಲಿಲ್ಲ. ಅಷ್ಟು ಹೊತ್ತು ನಿಂತು ಕಾಲು ನೋವು, ಈ ಬ್ಯಾಗ್ ಬೇರೆ, ನಿಲ್ಲು ನನ್ನ ಬ್ಯಾಗ್ ರೂಮಿನಲ್ಲಿ ಇಟ್ಟು ಬರ್ತೀನಿ ಅಂದ್ರೂ ಬಿಡಲೊಲ್ಲಳು. 'ಇಲ್ಲಾ ಚಿನ್ನಾ, ನೀನೂ ನಂಜೊತೇನೇ ಇರು' ಅಂತ ಸುಮ್ನೇ ಕಿರಿಕ್ ಶುರುಮಾಡಿದ್ಲು.


ಕೊನೆಗೆ ನಮ್ ಪಿಜಿ ಎದುರಿನ ಹೊಟೇಲ್ ನವರು ಇವಳ ಕಾಟ ತಡೀಲಾಗದೆ, ಒಂದು ತಗಡಿನ ಡಬ್ಬಕ್ಕೆ ಒಂದಷ್ಟು ಕೆಂಡ, ಮೆಣಸಿನ ಪುಡಿ, ಅದೆಂಥದೋ ಜೆಲ್ ತುಂಬಿಸಿ ತಂದ್ರು. ನನ್ನ ಲೈಫಲ್ಲೇ ಮೊದಲ ಸಲ ಈ ರೀತಿ ಜೇನುಗೂಡು ತೆಗೆಯೋದನ್ನ ನೋಡಿದ್ದು ನಾನು. ಎಲ್ರಿಗೂ ಮೊದಲೇ ಅವರವರ ರೂಮಿನ ಬಾಗಿಲು ಲೈಟು ಬಂದ್ ಮಾಡೋಕೆ ಹೇಳಿದ್ದಾಯ್ತು. ಅಂತೂ ಒಂದು ಸ್ಟೂಲ್ ಮೇಲೆ ಈ ಡಬ್ಬ ಇಟ್ಟು ಹೊಗೇ ಹಾಕೇ ಬಿಟ್ರು. ಜೇನುಗಳೆಲ್ಲಾ ಎದ್ದೇನೋ ಬಿದ್ದೇನೋ ಅಂತ ಹಾರಿಹೋದ್ವು. ಅದಲ್ಲಾ ಅಸಲಿ ರಾದ್ಧಾಂತ. ಇಟ್ಟ ಬೆಂಕಿ, ಗೂಡಿಗೆ ತಾಕಿ ಕೆಳಗೆಲ್ಲಾ ಚೆಲ್ಲಾಡಿತು. ತಾವು ಧರಿಸೋ ರಂಗ್ ಬಿರಂಗಿ ಬಟ್ಟೆಗಳಿಗೆಲ್ಲಾ ಮ್ಯಾಚಿಂಗ್ ಚಪ್ಪಲಿಗಳನ್ನು ಈ ಗಾನಾ ಮತ್ತೆ ಅವಳ ರೂಮ್ ಮೇಟ್ ಇಟ್ಕೊಂಡಿದ್ರು. ಸರಿ ಸುಮಾರು ಒಂದ್ ಮೂಟೆ ಚಪ್ಪಲಿಗಳು, ಬ್ರಾಂಡೆಡ್ ಶೂಗಳು ಸೇರಿ ಸಾವಿರಾರು ರೂಪಾಯಿ ಪಾದರಕ್ಷೆಗಳು ಈ ಬೆಂಕಿ ಕೆಂಡಕ್ಕೆ ಸುಟ್ಟು ಭಸ್ಮ!

ಅವಳಿಗೋ ಹೇಗಾದ್ರೂ ಮಾಡಿ ಅವುಗಳನ್ನು ನಮ್ ಪಿಜಿ ಯಿಂದ ಗಡಿಪಾರು ಮಾಡ್ಲೇಬೇಕು ಅನ್ನೋ ಹಟ. ಸಾಲದಕ್ಕೆ ಜೇನುಗಳಿದ್ರೆ ಈ ಸೆಕೆಯಲ್ಲಿ ಬಾಲ್ಕನಿ ಬಾಗಿಲೂ ತೆಗೆಯುವಂತಿಲ್ಲ ಅನ್ನೋ ಸಂಕಟ. ಅಲ್ಲಾ...ಬೆಂಕಿ ಹಾಕಿಸೋ ಮುಂಚೆ ಒಂದೇ ಒಂದು ಕ್ಷಣ ಗಾನ ಅವುಗಳ ಬಗ್ಗೆ ಯೋಚಿಸಿದ್ರೆ ಉಳ್ಕೋತಿದ್ವೇನೋ. ರಾತ್ರಿ ಅವಳ ರೂಮ್ ಮೇಟ್ ಬಂದು ನೋಡ್ತಾಳೆ ಪಾಪ! ಅವ್ಳ ಬ್ರಾಂಡ್ ನ್ಯೂ adidas ಮಸಿ ಬಳಿದುಕೊಂಡು ಕೂತಿದ್ದು ನೋಡಿ ಹೊಟ್ಟೆ ಉರ್ಕೊಂಡ್ಳು. ಅರ್ಧಂಬರ್ಧ ಸುಟ್ಟಿದ್ದ ಒಂದೊಂದು ಚಪ್ಪಲಿಯನ್ನೂ ನೋಡುತ್ತಾ ಬೇಜಾರು ಮಾಡ್ಕೊಂತಿದ್ರೆ, 'ನಾನು ಮಾಡಿದ್ದು ಸರಿಯಾಗೇ ಇತ್ತು ಚಿನ್ನ' ಅನ್ನೋ ಗಾನಾ ಬಜಾನಾ ಮುಂದುವರಿದಿತ್ತು!


ತಮಾಷೆಯೋ, ವಿಷಾದವೋ.........ಮರುದಿನ ಅದೇ ಜಾಗದಲ್ಲಿ ಇನ್ನೂ ದೊಡ್ಡ ಗಾತ್ರದ ಗೂಡು ಕಟ್ಟಿಕೊಂಡು ಜೇನುಗಳು ಗುಂಯ್ ಗುಡುತ್ತಿದ್ವು!