Tuesday, November 2, 2010

‘ಬೆಟ್ಟದ ಮೇಲೊಂದು ಟ್ರೆಕ್ಕಿಂಗ್ ಮಾಡಿ...’

ಆವತ್ತು ಹೀಗೇ ಇಮೇಲ್ ಚೆಕ್ ಮಾಡ್ತಿದ್ದೆ ಗೆಳತಿ ನೀತು ಯಾವ್ದೋ ಮೇಲ್ ಕಳಿಸಿದ್ಲು. ಫ್ರೆಂಡ್ಸ್ ಪ್ಲೀಸ್ ನನಗೆ ತುರ್ತಾಗಿ ಹಣದ ಅಗತ್ಯವಿದೆ. ಕಡೇ ಪಕ್ಷ 1 ಸಾವಿರ ರೂಪಾಯಿ. I want to go for this night trekking, ನೀವೂ ಇಂಟ್ರೆಸ್ಟ್ ಇದ್ರೆ ಬನ್ನಿಅಂತ ಆ ಟ್ರೆಕ್ಕಿಂಗ್ ಗೆ ಸಂಬಂಧಿಸಿದ ಲಿಂಕ್ ಕಳಿಸಿದ್ಲು. ಅಷ್ಟೇ... ಅವಳಿಗೆ ತಕ್ಷಣ ಫೋನಾಯಿಸಿದೆ. ಯಾವಾಗ? ಎಲ್ಲಿ? ರಿಜಿಸ್ಟ್ರೇಷನ್ ಗೆ ಲಾಸ್ಟ್ ಡೇಟ್ ಆಯ್ತಾ?’ ಅಂತೆಲ್ಲಾ ನನ್ನಿಂದ ಪ್ರಶ್ನೆಗಳ ಸುರಿಮಳೆ. ಆ ಕಡೆಯಿಂದ ನೀತು ನಿನ್ನೆ ಕಳಿಸಿದ ಮೇಲ್ ಅದು. ಇಷ್ಟ ಇದ್ರೆ ಬಾ ಅಂದದ್ದೇ ತಡ ನಾನು ಓಕೆ ಅಂದಾಗಿತ್ತು ಈ ಕಡೆಯಿಂದ. ಅಕ್ಟೋಬರ್ 31 ಯಾವಾಗ ಬರುತ್ತಪ್ಪಾ ಅಂತ ಕಾದಿದ್ದೇ ಕಾದಿದ್ದು. ಬಂದೇ ಬಿಡ್ತು ಆ ದಿನ. ಇನ್ನು ಮದ್ಯಾಹ್ನ 3 ಗಂಟೆ ಯಾವಾಗ ಆಗುತ್ತೆ ಅನ್ನೋದೇ ಧ್ಯಾನ! ಮದ್ಯಾಹ್ನ 3ರ ವೇಳೆಗೆ ಕೆಂಪು ಬಣ್ಣದ ಕಾರಲ್ಲಿ ನೀತು ಕೈ ಬೀಸುತ್ತಾ ಇದೇ ಕಾರು come on’ ಅಂತಿದ್ಲು. ಕಾರು ಹತ್ತಿ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದ ಕವಿತಾ ರೆಡ್ಡಿ ಅವರಿಗೆ ಕೇಳಿದೆ, ನೀವೇನಾ ಕವಿತಾ?’ ಅಂತ. ಆಕೆ ‘yes’ ಅಂದಾಗ ಇಬ್ರಲ್ಲೂ ಮೊದಲ ಭೇಟಿಯ ನಗು ವಿನಿಮಯವಾಗಿತ್ತು.

Base camp adventures ವತಿಯಿಂದ ಪ್ರತಿ ತಿಂಗಳೂ ಆಯೋಜಿಸುವ ಟ್ರೆಕ್ಕಿಂಗ್ ನ ಮಜಾ ನಮಗೂ ಆವತ್ತು ಸಿಗಲಿತ್ತು. ಬೆಂಗಳೂರಿಂದ ಸುಮಾರು 50ಕಿ.ಮೀ ದೂರದಲ್ಲಿರೋ ಬಿಳಿಕಲ್ಲು ರಂಗಸ್ವಾಮಿ ಬೆಟ್ಟಕ್ಕೆ ನಮ್ಮ ಸವಾರಿ ಹೊರಡಲಿತ್ತು. ಕನಕಪುರ ಮಾರ್ಗವಾಗಿ ಹೊರಟು ಹಾರೋಹಳ್ಳಿ ಮೂಲಕ ಕೋಣ್ಯಾಳದೊಡ್ಡಿ ಹಳ್ಳಿ ತಲುಪಿದಾಗ ಸಮಯ ಸಂಜೆ 5.30. ನಮಗಿಂತ ಮುಂಚೆಯೇ ಅಲ್ಲಿಗೆ ಬಂದಿದ್ದ ಅನುಷಾ ಮತ್ತು ಸುಮಂತ್ ಇದ್ದ ತಂಡ ಮುಗುಳ್ನಗೆಯೊಂದಿಗೆ ನಮಗೆ ಹಾಯ್ ಮಾಡಿದ್ರು. ಸ್ವಲ್ಪ ಹೊತ್ತು ವಿರಮಿಸಿ, ಹೊಸದಾಗಿ ಬಂದಿದ್ದವರೊಂದಿಗೆ ಪರಿಚಯ ಮಾಡ್ಕೊಂಡ್ವಿ. ಕೆಲವೇ ಕ್ಷಣಗಳಲ್ಲಿ ಯುದ್ಧಕ್ಕೆ ಸನ್ನದ್ಧರಾದ ಯೋಧರಂತೆ ನಮ್ಮ ದಂಡು ದೂರದಲ್ಲಿ ಕಾಣ್ತಿದ್ದ ಬೆಟ್ಟದ ತಪ್ಪಲು ತಲುಪಿತ್ತು. ಮಾರ್ಗ ಮಧ್ಯೆ ಕೋಣ್ಯಾಳದೊಡ್ಡಿಯ ಹಿರಿಯಜ್ಜಿಯರು, ಯುವಕರು, ಅಯ್ಯೋ ಎತ್ ಕಡೆ? ಬೆಟ್ಟವಾ? ಅಲ್ ಆನೆ ಐತ್ರೋ? ಈಗ್ ತಾನೇ 10 ನಿಮ್ಷ ಮುಂಚೆ ಘೀಳಿಡ್ತಿದ್ವು. ಅಲ್ ಯಾಕ್ ಹೊಂಟೋವೋ ಬಡೆತ್ತೋವುಅಂತ ಬಡಬಡಿಸುತ್ತಿದ್ರು. ಅಷ್ಟರಲ್ಲಾಗ್ಲೇ ನಾವು ಬೆಟ್ಟದ ಪಾದ ಸೇರಿದ್ವಿ. ದೊಡ್ಡ ಟ್ರೆಕ್ಕಿಂಗ್ ಬ್ಯಾಗ್ ಹೊತ್ತು ಹಣೆಯ ಬಳಿ ಟಾರ್ಚ್ ಧರಿಸಿದ್ದ ಕವಿತ ಎಲ್ಲರಿಗೂ ಟ್ರೆಕ್ಕಿಂಗ್ ನಲ್ಲಿ ಅನುಸರಿಸಬೇಕಾದ ಮುನ್ನಚ್ಚರಿಕೆ ಕ್ರಮಗಳು, ಒಬ್ಬರಿಗೊಬ್ಬರು ಹೊಂದಿಕೊಳ್ಳಬೇಕಾದ ಬಗೆ ಮೊದಲಾದ ಮಾರ್ಗದರ್ಶನ, ಮುನ್ಸೂಚನೆಗಳನ್ನು ಕೊಟ್ಟು ಮುಂದಡಿಯಿಡಲು ಹಸಿರು ನಿಶಾನೆ ನೀಡಿದ್ರು. ಸೇನೆಯ ದಂಡನಾಯಕಿಯಂತೆ ಕವಿತಾ ಮುನ್ನುಗ್ಗುತ್ತಿದ್ರೆ ಹಿಂದೆ ನಾನು ನೀತು, ಅನುಷಾ, ಸುಮಂತ್ ನಮ್ಮ ಹಿಂದೆ ಬೇಸ್ ಕ್ಯಾಂಪ್ ನ ಕೃಷ್ಣ, ಅವರ ಹಿಂದೆ ಮತ್ತೆ ಮಿಕ್ಕವರಿದ್ರೆ ಕಡೆಯಲ್ಲಿ ಬೇಸ್ ಕ್ಯಾಂಪ್ ಅಡ್ವೆಂಚರ್ಸ್ ನ ಜಿಗ್ನಾ ಕೇರ್ ಟೇಕರ್ ರೀತಿ ಚಕಚಕ ಹೆಜ್ಜೆ ಹಾಕ್ತಿದ್ರು.
ಮೊದಲ 20 ನಿಮಿಷ ಉತ್ಸಾಹದಿಂದ ಬೆಟ್ಟವೇರಿದ್ವಿ. ಆದ್ರೆ ಆ ಪರ್ವತ ಏರುಮುಖವಾಗಿತ್ತು. ನಡುನಡುವೆ ಸಮತಟ್ಟು ಅನ್ನೋ ಪ್ರಶ್ನೆಯೇ ಇರ್ಲಿಲ್ಲ. ಸಹಜವಾಗಿ ಹಾರ್ಡ್ ಕೋರ್ ಟ್ರೆಕ್ಕರ್ಸ್ ಅಲ್ಲದವರಿಗೆ ಏದುಸಿರು ಬರುತ್ತೆ. ಅಲ್ಲಿ ನಮ್ಮ ಮೊದಲ ಪುಟ್ಟ ವಿರಾಮ. ನಿಜವಾಗ್ಲೂ ಹೇಳ್ತೀನಿ, ಬೆಟ್ಟದಲ್ಲಿ ಆನೆ, ಕರಡಿ ಮತ್ತು ಲೆಪರ್ಡ್ಸ್ ಇರುತ್ತವೆ ಅಂತ ಹೇಳಿದ್ರಿಂದ ನನ್ನ ಕಿವಿ ಆಗಾಗ ಅಂಥ ಜೀವಿಗಳ ಸದ್ದೇನಾದ್ರೂ ಕೇಳುತ್ತಾ ಅಂತ ಗಮನಿಸ್ತಾನೇ ಇದ್ವು. ಅದೃಷ್ಟವೇ...ನಾವು ವಿರಾಮಕ್ಕೆ ಕುಳಿತ ಜಾಗದಲ್ಲೇ ಯಾವುದೋ ಪ್ರಾಣಿ ಗುರ್ ರ್ ರ್ ರ್ ಅಂತಿದ್ದು ಕೇಳಿಸ್ತು. ಕ್ರಮೇಣ ಹಿಂದಿದ್ದವರೂ ಎಲ್ಲರೂ ಅಲ್ಲಿ ಸೇರಿದ್ರಿಂದ ಅದರ ಸದ್ದಡಗಿತು. ಮತ್ತೆ ಶುರುವಾಯ್ತು ನಮ್ಮ ನಡಿಗೆ. ಕಗ್ಗತ್ತಲಲ್ಲಿ ಟಾರ್ಚ್ ಬೆಳಕು ಹೊಮ್ಮಿಸ್ತಾ ಇದ್ರೆ ನಮ್ಮ ಹೆಜ್ಜೆ ಮುಂದಕ್ಕೆ ಸಾಗುತ್ತಿತ್ತು. ಸಣ್ಣ ದೊಡ್ಡ ಕಲ್ಲುಗಳು, ಮುಳ್ಳಿನ ಗಿಡಗಳು, ಹುಲ್ಲು ಎಲ್ಲವನ್ನೂ ಸವರುತ್ತಾ ಮುಂದಕ್ಕೆ ನಡೆದೆವು. ಮಾರ್ಗ ಮಧ್ಯೆ ಸುಮಂತ್ ಕೊಡ್ತಿದ್ದ ಕಾಮಿಡಿ ಡೋಸ್ ನಗುವಿನ ಬುಗ್ಗೆ ಚಿಮ್ಮಿಸ್ತಿತ್ತು. ಅದರಲ್ಲೂ ನೀತೂನಾ ಅವ್ನು ರೇಗಿಸ್ತಿದ್ದ ಪರಿಗೆ ಎಷ್ಟು ನಗು ಬರ್ತಿತ್ತಂದ್ರೆ ಕೆಲವೊಮ್ಮೆ ಹೆಜ್ಜೆ ತಪ್ಪುವಷ್ಟು ರೇಗಿಸಿಬಿಡ್ತಿದ್ದ. ನಡು ನಡುವೆ ಸುಸ್ತಾದಾಗೆಲ್ಲಾ ಕವಿತಾ ಬ್ರೇಕ್ಅಂತ ಕೂಗಿ ಏದುಸಿರು ಬಿಡ್ತಾ ದಣಿವಾರಿಸಿಕೊಳ್ತಿದ್ವಿ. ಎಲ್ಲರೂ ಬರೋವರ್ಗೂ ಕಾದು ತಂಪಾದ ನೀರು ಹೀರಿ ಮತ್ತೆ ‘let’s move’.

ಇನ್ನೂ ಎಷ್ಟ್ ದೂರ ಅಂತ ಕೇಳಿದ್ರೆ ಮುಂದಿದ್ದ ಕವಿತಾ, ಹಿಂದೆ ಬರ್ತಿದ್ದ ಕೃಷ್ಣ ಬಾಯಿಂದ ಬರ್ತಿದ್ದ ಒಂದೇ ಮಾತು. ಏನ್ ಒಂದ್ 15 ನಿಮಿಷ ಅಷ್ಟೇ !’ ಹದಿನೈದಲ್ಲ ಅರ್ಧ ಗಂಟೆಯಾದ್ರೂ ತಲುಪಬೇಕಾದ ಜಾಗ ಸಿಗ್ತಿರ್ಲಿಲ್ಲ. ನನ್ನಿಂದ ಮತ್ತದೇ ರಾಗ. ಇನ್ನೂ ಎಷ್ಟ್ ದೂರ?!’ ಇನ್ನು 10-15 ನಿಮಿಷ ಅಂತ ಹೇಳೋದು, ಸುಸ್ತಾಗದಂತೆ ನಮ್ಮನ್ನು ಉತ್ತೇಜಿಸಲು ಅವರು ಹೇಳ್ತಿದ್ದ ಸುಳ್ಳು ಅಂತ ಕಡೆಗೊಮ್ಮೆ ಕೃಷ್ಣ ಬಾಯ್ಬಿಟ್ಟಾಗ್ಲೇ ಸತ್ಯ ಗೊತ್ತಾದದ್ದು. ಆಮೇಲೆ ನಗು ಜೊತೆಗೆ ಹುಸಿಕೋಪ. ಮಾರ್ಗ ಮಧ್ಯೆ ಒಂದು ದೊಡ್ಡ ಹಾಸು ಬಂಡೆ ಸಿಗ್ತು. ಅದನ್ನು ನೋಡಿದ್ರೆ ಯಾರಿಗಾದ್ರೂ ಅಲ್ಲೊಮ್ಮೆ ವಿರಮಿಸೋಣ ಅನ್ನಿಸದಿರದು. ಎಲ್ಲರಿಗಿಂತ ಮೊದಲು ಬಂಡೆಯ ಮೇಲೆ ಸಾಕ್ಷಾತ್ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಸ್ಟೈಲಲ್ಲಿ ನಮ್ ನೀತೂ ಆಸೀನಳಾಗೇ ಬಿಟ್ಲು. ಸುತ್ತ ನೋಡಿದ್ರೆ ದೂರದ ಪಟ್ಟಣಗಳಲ್ಲಿ ಹೊತ್ತಿಸಿದ ದೀಪಗಳು ಮಿಣಮಿಣ ಅಂತ ಕಣ್ಣಿಗೆ ಹಬ್ಬ ತಂದಿದ್ದವು. ಅಲ್ಲಿಂದ ಹೊರಟು ಮತ್ತೆ ಬಿರಬಿರನೆ ಹೆಜ್ಜೆ ಹಾಕಿದ್ವಿ.


ಮಾರ್ಗ ಮಧ್ಯೆ ನನ್ನ ರಿಬಾಕ್ ಶೂಗಳು ಬಾಯಿ ತೆರೆದ ಮೊಸಳೆಯಂತಾದ್ವು. ಥೂ ಇದ್ರಜ್ಜಿ ಅಂತ ಶಪಿಸಿದೆ. ಅದ್ಯಾಕೋ ಏನೋ ಅದೊಂದು ದೊಡ್ಡ ಸಮಸ್ಯೆ ಅಂತ ಅನ್ನಿಸ್ಲಿಲ್ಲ. ಅರ್ಧ ಲೇಸ್ ಬಿಚ್ಚಿ ಅಡಿಯಿಂದ ಒಂದು ಸುತ್ತು ತಂದು ಟೈಟ್ ಆಗಿ ಅಲ್ಲಾಡದಂತೆ ಬಿಗಿದೆ. ಇನ್ನರ್ಧ ಗಂಟೆ ಬಿಟ್ಟು ಮತ್ತೊಂದು ಕಾಲಿನ ಶೂ ಕೂಡ ನಾನು ಮೊಸಳೆ ಥರ ಬಾಯಿ ಬಿಡ್ಬೇಕು ಅಂತಿದ್ದು ಗೊತ್ತಾಯ್ತು. ಮೊದಲ ಶೂಗೆ ಮಾಡಿದ್ದ ತಂತ್ರವನ್ನೇ ಇದಕ್ಕೂ ಮಾಡಿ ನಡೆದ್ದದ್ದಷ್ಟೇ ಗೊತ್ತು. ಅಲ್ಲಿಗೆ ಟ್ರೆಕ್ಕಿಂಗ್ ಶೂ ಧರಿಸಬೇಕಿತ್ತು ಅಂತ ಬುದ್ಧಿ ಕಲಿತ ಹಾಗಾಯ್ತು. ರಾತ್ರಿ ಸಮಯ ಸುಮಾರು 8-45. ಬೆಟ್ಟದ ತುತ್ತ ತುದಿಯಲ್ಲಿ ಪುಕಪುಕ ಅಂತಿದ್ದ ಟ್ಯೂಬ್ ಲೈಟೊಂದು ನೀವು ಪರ್ವತ ತುದಿಯಲ್ಲಿದ್ದೀರಿ ಅಂತ ಸಾರಿ ಹೇಳ್ತಿತ್ತು. ‘Yehhhhhhhhh ಏಏಏಏಏಏ ಹೂಊಊಊಊಊ ಅನ್ನೋ ಸಂಭ್ರಮೋದ್ಘಾರಗಳು ಎಲ್ಲರ ಬಾಯಿಂದ ಹೊರಟವು. ನಾವು ತಂಗಲಿದ್ದ ಜಗುಲಿಯ ಮೇಲೆ ಹೊತ್ತಿದ್ದ ಬ್ಯಾಗ್ ಪ್ಯಾಕ್ ಇಳಿಸಿದಾಗ ಉಸ್ಸಪ್ಪಾ...ಹೆಗಲೇರಿದ್ದ ಬೆಟ್ಟವೊಂದನ್ನು ಧರೆಗಿಟ್ಟಷ್ಟು ನಿರಾಳತೆ. ನಂತರ ಒಂದೆರಡು ಫೋಟೋ ಕ್ಲಿಕ್ಕಿಸಿದ್ವಿ. ಅತ್ತ ಕವಿತ ಮತ್ತು ಜಿಜ್ಞಾ ಬಿಸಿಬಿಸಿ ಕಾಫಿ ಟೀ ರೆಡಿ ಮಾಡಿದ್ರು. ಆ ದಣಿವು, ತಣ್ಣಗೆ ಬೀಸುತ್ತಿದ್ದ ಚಳಿಗಾಳಿಗೆ ಮಗ್ ತುಂಬಿದ್ದ ಕಾಫಿ ತುಂಬಾ ಹಿತವಾಗಿತ್ತು. ಕೊನೆಯ ಸಿಪ್ ಹೀರಿ, ನೋಡುವಷ್ಟರಲ್ಲಿ ಸುಡು ಸುಡುವ ಸೂಪ್ ರೆಡಿ. ಕವಿತಾ ಮತ್ತವರ ಟೀಂನ ಎನರ್ಜಿ ಲೆವೆಲ್ ಗೆ ಎಷ್ಟು ಹೊಗಳಿಕೆಯೂ ಕಮ್ಮಿ. ಸೂಪ್ ನಿಜಕ್ಕೂ ವೆರಿ ವೆರಿ ಟೇಸ್ಟಿಯಾಗಿತ್ತು. ಅದಕ್ಕೇ ಎರಡೆರಡು ಸಲ ಸೂಪ್ ಹೀರಿ ಖುಷಿ ಪಟ್ವಿ! ಹತ್ತಿರದಲ್ಲಿದ್ದ ಚಿಲುಮೆ ಬಳಿ ನೀರು ತರೋಕೆ ಕೃಷ್ಣ ಹೊರಟಾಗ ನಾವೂ ಟಾರ್ಚ್ ಹಿಡಿದು ಹಿಂಬಾಲಿಸಿದ್ವಿ. ಚಿಲುಮೆ ಸುತ್ತ ಕಟ್ಟಿದ್ದ ಕಾಂಪೌಂಡ್ ಏರಿ ಕುಳಿತ್ರೆ ಕಾಡಿನ ಆಚೆ ಈಚೆ ಇರುವ ಕನಕಪುರ, ಕಬ್ಬಾಳ ದುರ್ಗ, ಸಾವನ ದುರ್ಗ ಮೊದಲಾದ ಊರುಗಳೆಲ್ಲಾ ದೀಪಾವಳಿ ಮಾಡ್ತಿದ್ದ ಹಾಗೆ ಕಾಣ್ತಿದ್ವು. ವರ್ಣಿಸಲಸದಳ ಆ ದೃಶ್ಯ. ಆದ್ರೆ ಕಣ್ಣು ಮನಸ್ಸುಗಳಿಗೆ ಉಲ್ಲಾಸ ನೀಡುವ ದೃಶ್ಯ ಅಂತ ಮಾತ್ರ ಹೇಳಬಲ್ಲೆ. ಆದ್ರೆ ಅತ್ತ ಊಟಕ್ಕೆ ಕವಿತಾ ಅಂಡ್ ಟೀಂ ಕಾಯ್ತಿದ್ರು. ಊಟ ಮುಗಿಸಿ ಮತ್ತೆ ಬರುವಾ ಅಂತ ಎಲ್ಲರೂ ಹೊರಟ್ವಿ.

ಆಗಾಗ್ಲೇ ನಮ್ಮ ಬ್ಯಾಗ್ ಸೇರಿದ್ದ ಮೆತ್ತನೆಯ ಚಪಾತಿಗಳು ಹೊರಬಂದ್ವು. ಎಂಟಿಆರ್ ರೆಡಿ ಟೂ ಈಟ್ ದಾಲ್ ಕುದಿಯುವ ನೀರಲ್ಲಿ ಬಿಸಿಯಾಗ್ತಿತ್ತು. ಬಳಿಕ ಎಲ್ಲರೂ ಊಟ ಮುಗಿಸಿ, ಬೆಚ್ಚನೆ ಜಾಕೆಟ್ ಟೊಪ್ಪಿ ತೊಟ್ಟು ಮತ್ತೆ ಚಿಲುಮೆ ಕಡೆ ಹೆಜ್ಜೆ ಹಾಕಿದ್ವಿ. ಈಗ ದೃಶ್ಯ ಬದಲಾಗಿತ್ತು. ಬೆಟ್ಟದ ಕೆಳಗಿದ್ದ ಊರವರೆಲ್ಲಾ ಲೈಟ್ ಆಫ್ ಮಾಡಿ ಮಲಗಿದ್ದಂತಿತ್ತು! ಸಾಲದ್ದಕ್ಕೆ ರಾತ್ರಿಯ ಮುಖಕ್ಕೆ ಮಬ್ಬಾದ ಪರದೆಯನ್ನು ಮುಚ್ಚಿದ ಹಾಗೆ ಮಂಜು ಆವರಿಸಲು ಶುರುವಾಗಿತ್ತು. ಕಾಲೇಜು, ಆಫೀಸು, ಮನೆ, ಸ್ನೇಹಿತರು, ಹೀಗೆ ನಾವು ಮಾತಾಡಿದ ಟಾಪಿಕ್ ಗಳೆಲ್ಲಾ ಮುಗಿಯದಂಥವು. ಆದ್ರೆ ಎಂದಿನಂತೆ ತೂಕಡಿಕೆ, ನಿದ್ರೆಯ ಜೋಂಪು ನಮ್ಮ ನೀತೂಗೆ ಮೊದಲು ಹತ್ತಿದ್ದು. ಜಗತ್ತಿನ ಸಕಲ ಕಷ್ಟ ಕಾರ್ಪಣ್ಯಗಳನ್ನೂ ಸಾಧುವಾಗಿ ಸಹಿಸೋ ನೀತು ನಿದ್ರೆ ಜೊತೆ ಮಾತ್ರ ನೋ ಕಾಂಪ್ರಮೈಸ್!! ಅದು ಅವಳ ವೀಕ್ನೆಸ್ ಕೂಡ!. ನನ್ನ ವಾಚ್ ನಲ್ಲಿ ದೊಡ್ಡ ಮುಳ್ಳು ಮತ್ತು ಸಣ್ಣ ಮುಳ್ಳು 12ರ ಬಳಿ ಮಿಲನವಾಗಿದ್ವು. ಕ್ಯಾಂಪ್ ಫೈರ್ ಗೆ ಹಾಕಿದ್ದ ಬೆಂಕಿ ಕೆಂಡ ಇನ್ನೂ ಹಾಗೆ ಬಿದ್ದಿತ್ತು. ನಾವೆಲ್ಲಾ ನಮ್ ಟೆಂಟ್ ಒಳಹೊಕ್ಕೆವು. ನನ್ನ ಎಡ ಬಲಗಳಲ್ಲಿ ನೀತು ಅನುಷಾ ಮಲಗಿದ್ರು. ನಡುವೆ ನಾನು. ಅದು ಇದೂ ಅಂತ ಒಬ್ಬರಿಗೊಬ್ರು ಕಿಚಾಯ್ಸುತ್ತಾ ನಿದ್ದೆಗೆ ಜಾರಿದ್ರು ನೀತೂ ಅನುಷ. ಮಾರ್ನಿಂಗ್ ಶಿಫ್ಟ್ ಮುಗಿಸಿ ಟ್ರೆಕ್ಕಿಂಗ್ ಗೆ ಬಂದಿದ್ರೂ ನನಗೆ ನಿದ್ದೆಯ ಸುಳಿವೇ ಇಲ್ಲ. ನನ್ನ ಕಿವಿಗಳು ಟೆಂಟ್ ಬಳಿ ಯಾವ್ದಾದ್ರೂ ಪ್ರಾಣಿಯ ಸಪ್ಪಳ ಕೇಳುತ್ತಾ ಅಂತ ನಿರೀಕ್ಷಿಸುತ್ತಿದ್ವು. ಸಾಲದ್ದಕ್ಕೆ ಚಳಿ ಜೋರಾಗ್ತಿತ್ತು. ಅತ್ತ ಬೆಂಗಳೂರಿಂದ ಕರೆ ಮಾಡಿದ್ದ ನೀತು ಅಮ್ಮ ನನ್ನ ಜೊತೆ ಮಾತಾಡ್ತಾ ನೀತು ಹೊದಿಕೆ ತಂದಿಲ್ಲ ಅವಳಿಗೆ ನೀನೂ ಕೊಡ್ಬೇಡ, ಚಳಿ ಅಂದ್ರೇನು ಅಂತ ಗೊತ್ತಾಗ್ಲಿ ಅಂದಿದ್ರು. ನೆನಪಾಯ್ತು. ಈ ಕಡೆ ಅವ್ಳು ಗಡಗಡ ನಡುಗುತ್ತಾ ಮಲಗಿದ್ರೆ ನನಗೆ ತಡೆಯಲಾರದಷ್ಟು ನಗು. ಈ ಕಡೆ ಅನುಷಾ. ಅವಳಿಗೆ ಸ್ವಲ್ಪ ಚಳಿಯಿದ್ರೂ ಕೈಕಾಲು ತಣ್ಣಗಿರುತ್ತೆ. ಆಹಾ...ಏನ್ ಮಜಾನಪ್ಪಾ ಇವ್ರದ್ದು ಅನ್ನಿಸ್ತು. ಸರಿ ನನ್ ಹತ್ರಾ ಇದ್ದ ಒಂದೇ ಒಂದು ಸಿಂಗಲ್ ಬ್ಲಾಂಕೆಟ್ ನ ನೀತು ಕಾಲಿಗೆ, ಅನುಷ ಕೈಗೆ ಕವರ್ ಮಾಡಿ ಒಳಗೊಳಗೇ ನಗುತ್ತಾ ಟೆಂಟ್ ಮೇಲೆ ಕಣ್ಣಾಡಿಸ್ತಾ ಮಲಗಿದೆ. ಅಕ್ಕಪಕ್ಕದ ಎರಡೂ ಟೆಂಟುಗಳಿಂದ ಬರ್ತಿದ್ದ ಗೊರಕೆಯ ಹಿಮ್ಮೇಳ ನಮ್ಮಪ್ಪನನ್ನು ನೆನಪಿಸಿತ್ತು!

ಇದ್ದಕ್ಕಿದ್ದ ಹಾಗೇ ನೀತೂ ಎದ್ದು ಟೆಂಟ್ ಝಿಪ್ ತೆಗೇತಿದ್ರೆ ನಾನು ಅನುಷಾ ಬಾಯಿಗೆ ಕೈ ಅಡ್ಡ ಇಟ್ಟು ನಗು ತಡೀತಿದ್ವಿ. ಆ ಚಳಿಯಲ್ಲಿ ನಿದ್ದೆಗಣ್ಣಲ್ಲಿ ಇದೇನ್ ಮಾಡ್ತಿದ್ದಾಳೆ ಅಂತ. ಮತ್ತೆ ಇಬ್ರೂ ನಿದ್ದೆಗೆ ಶರಣು. ಬೆಳಗ್ಗೆ 6ಕ್ಕೆ alarm ಇಟ್ಟದ್ದು ನೆನಪಾಗಿ ಟೈಮ್ ಎಷ್ಟು ಅಂತ ನೋಡಿದ್ರೆ ಇನ್ನೂ 2-45. ದೇವರೇ ಇನ್ನೂ ಎಷ್ಟೊತ್ ಮಲಗ್ಬೇಕು ಅಂತ ನೆನಪಾಗಿ ಅಳು ಬಂತು. ಚಳಿಯ ತೀವ್ರತೆ ಅಷ್ಟಿತ್ತು. ಕಡೆಗೆ ನನ್ನ ದಪ್ಪನೇ ಜಾಕೆಟ್ ತೊಟ್ಟು ಮಲಗಿದಾಗ್ಲೇ ನೆಮ್ಮದಿ. ಮುಂಜಾನೆ 6ಕ್ಕೆ ಎದ್ದು ನೀತೂಗೆ ಎದ್ದೇಳೇ 6 ಗಂಟೆ ಅಂದ್ರೆ, ಆರೂಊಊಊಊವರೆ ಅಂತ ನಿದ್ದೆಗಣ್ಣಲ್ಲೇ ಹೇಳುತ್ತಾ ಮಗ್ಗಲು ಬದಲಿಸಿದ್ಲು. ನಾನು ಅನುಷಾ ಕೊಟ್ಟ ಟಾರ್ಚರ್ ಗೆ ಅವಳು ಏಳಲೇಬೇಕಾಯ್ತು. ಬಿಸಿಬಿಸಿ ಕಾಫಿ ಮತ್ತೆ ರೆಡಿಯಿತ್ತು. ಅಷ್ಟೊತ್ತಿಗಾಗ್ಲೇ ಸುಮಂತ್ ಕೃಷ್ಣ ಒಂದ್ ರೌಂಡ್ ಪೋಟೋ ಸೆಷನ್ ಮುಗಿಸಿ ಬಂದಿದ್ರು. ಮುಂಜಾವಿನ ಮಂಜಿನ ತೆರೆ ದಟ್ಟವಾಗಿತ್ತು. ನೋಡಿ ಕಣ್ತುಂಬಿಕೊಂಡಷ್ಟು ಅದರ ಚೆಲುವು ಹೇಗಿದೆ ಅಲ್ವಾ ಅಂತ ಖುಷಿಯಾಗ್ತಿತ್ತು. ಹುಲ್ಲು, ಗಿಡ, ಮರಗಳೆಲ್ಲಾ ಇಬ್ಬನಿಯ ಹನಿಯ ಆಭರಣ ತೊಟ್ಟಂತೆ ಕಾಣ್ತಿದ್ವು. ಚಿಲುಮೆ ಬಳಿ ಹಲ್ಲುಜ್ಜಿ, ಮುಖ ತೊಳೆದೆವು. ನೀರು ಖಾಲಿ ಅಂತ ಮತ್ತೆ ಚಿಲುಮೆ ಮೆಟ್ಟಿಲು ಇಳೀವಾಗ ಯಾವ್ದೋ ಪ್ರಾಣಿ ಉಸಿರಾಡೋ ಸದ್ದು! ಕರಡಿ ಇರಬಹುದಾ? ಗೊತ್ತಿಲ್ಲ. ನೀತೂ ಮಾತ್ರ ಕರಡಿ ಅಟ್ಯಾಕ್ ಮಾಡಿದ್ರೆ ಪಾರಾಗೋದು ಕಷ್ಟ ಬೇಗ ಬಾ ಅಂತ ಎಚ್ಚರಿಸಿದ್ಲು. ನಾನು ನಮ್ಮಜ್ಜಿ ಮೇಲೆ ಕರಡಿ ಮಾಡಿದ ದಾಳಿ ಕಥೆ ಹೇಳ್ತಾ ಕ್ಯಾಂಪ್ ಇದ್ದ ಕಡೆ ತಲುಪಿದ್ವಿ. ಬಿಸಿಬಿಸಿ ನೂಡಲ್ಸ್ ನಮಗಾಗಿ ಕಾದಿತ್ತು. ಚೆನ್ನಾಗಿ ಬ್ಯಾಟಿಂಗ್ ಮಾಡಿ ಮತ್ತೆ ಪ್ಯಾಕಪ್. ಒಂದೆರಡು ಗ್ರೂಪ್ ಫೋಟೋ ಕ್ಲಿಕ್ಕಿಸಿ ಬಿಳಿಕಲ್ಲು ರಂಗಸ್ವಾಮಿ ಬೆಟ್ಟದ ಸೊಬಗಿಗೆ ಮಾರು ಹೋಗಿದ್ದನ್ನು ಮನಸ್ಸಲ್ಲೇ ಅನುಭವಿಸುತ್ತಾ ವಾಪಾಸ್ಸಾಗಲು ಅಣಿಯಾದೆವು.


ಪರ್ವತಾವರೋಹಣ ಮಾಡುವಾಗ ಪಾದಗಳನ್ನು ಹುಷಾರಾಗಿ ಇಡಬೇಕು. ಆತುರಪಟ್ಟು ಹೆಜ್ಜೆ ಇಟ್ಟರೆ ಕಾಲು ಉಳುಕಬಹುದು ಅಥವಾ ನಾವೇ ಉರುಳಿ ಬೀಳಬಹುದು. ಮೊದಲೇ ನನ್ನ ಶೂ ಕೈ ಕೊಟ್ಟಿದ್ರಿಂದ 2-3 ಸಲ ನಾನು ಬಿದ್ದದ್ದೂ ಆಯ್ತು! ರಾತ್ರಿ ಕಾಣದ ಪರ್ವತದ ಸೊಬಗನ್ನು ಬೆಳಗಿನಲ್ಲಿ ಕಣ್ತುಂಬಾ ಸವಿಯುತ್ತಾ ಸಾಗಿದೆವು. ಕೆಲವೇ ನಿಮಿಷದಲ್ಲಿ ಬಿಳಿಕಲ್ಲು ರಂಗಸ್ವಾಮಿ ಬೆಟ್ಟದ ಕೆಳಗೆ ಬಂದಿಳಿದಿದ್ದೆವು. ಕೆಳಗಿಳಿದು ಒಮ್ಮೆ ಮೇಲೆ ಕಣ್ಣು ಹಾಯ್ಸಿದಾಗ್ಲೇ ಗೊತ್ತಾದದ್ದು ನಾವೆಷ್ಟು ಮೇಲೇರಿದ್ವಿ ಅಂತ. ಅಲ್ಲೇ ಇದ್ದ ಇಬ್ಬರು ಕೊಟ್ಟ ಆಗ ತಾನೇ ಕಿತ್ತಿದ್ದ ನೆಲಗಡಲೆ ರುಚಿ ಮಾತ್ರ ಮರೆಯಲಾಗದು. ...ದರ್ಶನ ಕ್ರಿಯೆ, ದಾಲ್ ಜೋಕುಗಳು ಮರೆಯಲಾಗವು. ಟ್ರೆಕ್ಕಿಂಗ್ ಶುರುವಾದಾಗಿಂದ ಕೊನೆತನಕವೂ ಕವಿತಾಗಿದ್ದ ಎನರ್ಜಿ, ನಮ್ಮ ಉತ್ಸಾಹ ಕುಗ್ಗದಂತೆ ನೋಡಿಕೊಂಡ ಕೃಷ್ಣ, ಜಿಜ್ಞಾ ನಿಮ್ಮ ಸಹಕಾರಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು. ನಿಗದಿಪಡಿಸಿದ ಹಣ ಕೊಟ್ರೆ ಯಾರು ಬೇಕಾದ್ರೂ ಇಂಥ ಸಾವಿರ ಟ್ರೆಕ್ಕಿಂಗ್ ಆಯೋಜಿಸಬಲ್ಲರೇನೋ. ಆದ್ರೆ ಆಯೋಜಕರು ಆ ಜವಾಬ್ದಾರಿ ಹೊರುವ ರೀತಿ, ಜೊತೆಗಾರರೊಂದಿಗೆ ಬೆರೆಯುವ ಬಗೆ, ಟ್ರೆಕ್ಕಿಂಗ್ ಮಾಡ್ತಿರೋ ಜಾಗದ ಬಗ್ಗೆ ಕೊಡೋ ಮಾಹಿತಿ, ತಮ್ಮ ಅನುಭವಗಳ ಬುತ್ತಿಯನ್ನು ರುಚಿಕಟ್ಟಾಗಿ ಜೊತೆಗಾರರಿಗೆ ಉಣಬಡಿಸುತ್ತಾ ದಾರಿಯುದ್ದಕ್ಕೂ ದಣಿವಾಗದಂತೆ ಮಾಡುವ ಕಲೆ ಬೇಸ್ ಕ್ಯಾಂಪ್ ಅಡ್ವೆಂಚರ್ಸ್ ನ ಕವಿತಾ ರೆಡ್ಡಿ ಮತ್ತವರ ತಂಡಕ್ಕೆ ಕರಗತ. ಇದೆಲ್ಲಾ ಅತಿಶಯದ ಮಾತಲ್ಲ. ಖುದ್ದು ಅನುಭವಿಸಿದ ಅನುಭವ.


ಬಹಳ ದಿನಗಳ ಮೇಲೆ ನನ್ನ ಬ್ಲಾಗ್ ಅಪ್ ಡೇಟ್ ಆಗೋಕೂ ಈ ಟ್ರೆಕ್ಕಿಂಗೇ ಕಾರಣ. ;) J ಬಿಡುವಿದ್ದಾಗ, ಈ ಜಾಗದ ಬಗ್ಗೆ ಯಾರಾದ್ರೂ ಅನುಭವಿಗಳ ಸಾಥ್ ಇದ್ರೆ , ಒಮ್ಮೆ ಭೇಟಿ ಕೊಟ್ರೆ ಒಳ್ಳೆ ಅನುಭವವಂತೂ ಗ್ಯಾರಂಟಿ. ಆದ್ರೆ ಊಟ ತಿಂಡಿ ಮತ್ತೆ ನಿಮ್ಮ ಸಂಪೂರ್ಣ ಜವಾಬ್ದಾರಿ ನಿಮ್ಮದೇ!!!