Wednesday, February 16, 2011

'ನಮ್ಮೂರು' ಹುಸ್ಕೂರು....


ಬಹಳ ದಿನಗಳ ಬಳಿಕ ಬೆಂಗಳೂರಿನ ಜಂಜಾಟ-ಜಂಗುಳಿಯಿಂದ ತಪ್ಪಿಸಿಕೊಳ್ಳೋ ಸುವರ್ಣಾವಕಾಶ ಸಿಕ್ಕಿತಪ್ಪಾ...

ನಮ್ಮ ಚಿಕ್ಕಪ್ಪ ತನ್ನ 2ನೇ ಮಗಳಿಗೆ ಮದುವೆ ಮಾಡಿದ್ರು. ಆ ಮದುವೆಗೆ ನನಗೂ ಸಹಜವಾಗಿ ಕರೆಯೋಲೆ ಬಂದಿತ್ತು. ಅದ್ಯಾವ ಪುಣ್ಯವೋ ಆಫೀಸಿನಲ್ಲಿ ಈ ಬಾರಿ ತಕರಾರಿಲ್ಲದೆ 3 ದಿನ ರಜೆ ಸಿಕ್ಕೇಬಿಡ್ತು. ಸರಿ ಇತ್ತ ಉದ್ಯಾನನಗರಿಯಿಂದ ನಮ್ಮ ದಿಬ್ಬಣ ಹೊರಟಿತು ಅಂದ್ಮೇಲೆ ಅತ್ತ ಮೈಸೂರಿಂದ ನಮ್ಮ ಸೈನ್ಯ ಸವಾರಿ ಹೊರಡಲೇಬೇಕಲ್ಲ...?...!!! ಅರ್ಥಾತ್ ನನ್ನ ತಮ್ಮಂದಿರಾದ ಕಾರ್ತಿಕ್, ಪ್ರಭು, ದೀಪು ನನ್ನಾಗಮನಕ್ಕೆ, ಜೊತೆ ಸೇರಿ ಊರು ಅಲೆಯೋಕೆ, ಮಸ್ತ್ ಮಜಾ ಮಾಡೋಕೆ ತುದಿಗಾಲಲ್ಲಿ ನಿಂತಿದ್ರು. ಮದುವೆ ನೆಪದಲ್ಲಿ ಎಲ್ರೂ ನಮ್ಮೂರಿನ ಸೊಬಗು ಸವಿದು ಚಪ್ಪರಿಸಲು ಹೊರಟೆವು. ಊರಿಗೆ ಹೊರಟ ದಿನ ನನ್ನ ತಂದೆಯವರ ಹುಟ್ಟುಹಬ್ಬ ಬೇರೆ. ಎಲ್ರೂ ಗೊರೂರು ಹೇಮಾವತಿ ಹಿನ್ನೀರಿನಲ್ಲಿರೋ ರೆಸಾರ್ಟ್ ಗೆ ಲಗ್ಗೆಯಿಟ್ವಿ. ಅಲ್ಲಿ ಸ್ವಲ್ಪ ಹೊತ್ತು ಬೋಟಿಂಗ್, ಚಾಟಿಂಗ್ ಮುಗಿಸಿ ಅಪ್ಪಾಜಿಗಾಗಿ ಸರ್ಪ್ರೈಸ್ ಆಗಿ ತಂದಿದ್ದ ಕೇಕ್ ಕತ್ತರಿಸಿ ಚಪ್ಪರಿಸಿದೆವು. ಅಪ್ಪಾಜಿಗೆ ನನ್ನ ಗಿಫ್ಟ್ ಟೈಟಾನ್ ವಾಚ್. ಅವ್ರಂತೂ ದಿಲ್ ಖುಷ್. ಅಲ್ಲಿಂದ ನೇರ ಮದುವೆ ಮನೆಗೆ ಹೊರಟ್ವಿ.

ಇದು ಮಲೆನಾಡ ಕಡೆ ಮಾಡೋ ಮಧ್ಯಮ ಬಜೆಟ್ ನ ಮದುವೆ. ಇಲ್ಲಿ ಬ್ಯಾಂಡ್ ಬಾಜಾ ಬಾರಾತ್ ಒಂಥರಾ ಡಿಫ್ರೆಂಟ್. ವಿಶೇಷವಾಗಿ ಇಲ್ಲಿ ಮದುವೆ ಓಲಗದವರು. ಇವರು ಹಳೇ ರೀತಿಯ ಓಲಗ, ತಮಟೆ, ಡೋಲುಗಳನ್ನೇ ಈಗಲೂ ಬಾರಿಸ್ತಾರೆ. ಈ ಬೀಟ್ ಕೇಳ್ತಿದ್ರೆ ಹೋಗಿ ಎರಡು ಸ್ಟೆಪ್ ಹಾಕೋಣ ಅನ್ಸುತ್ತೆ, ಜೊತೆಗೆ ಬನ್ರೋ ಅಂದ್ರೆ ತುಂಬಾ ಸಭ್ಯ ಹುಡುಗರಂತೆ ಪೋಸು ಕೊಡ್ತಿದ್ರು ನನ್ನ ತಮ್ಮಂದ್ರು. ಬೆಂಗಲೂರಿನ ಗಣೇಶನ ಮೆರವಣಿಗೆ ನೋಡಿದ್ರೂ ನನಗೆ ಕುಣಿಯುವ ಆಸೆ. ಆದ್ರೆ ರಸ್ತೇಲಿ ಕುಣಿಯೋರನ್ನೇ ನೋಡಿ ಖುಷಿ ಪಡೋ ಅನಿವಾರ್ಯತೆ. :( ರಾತ್ರಿಯಿಡೀ ಹರಟೆ, ಕಾರ್ಡ್ಸು ಅಂತ ಎಲ್ರೂ ಟೈಮ್ ಪಾಸ್ ಮಾಡ್ತಿದ್ರೆ ನಂಗೆ ಕಣ್ಬಿಡಲಾಗದಷ್ಟು ನಿದ್ರೆ. ನನ್ನ ಅಮ್ಮನ ತಮ್ಮ ಯೋಗೀಶ್ ಮಾಮ ನಿದ್ರೆಗೆ ಜಾರಿ ಯಾವ್ದೋ ಕಾಲವಾಗಿತ್ತು. ಹಳ್ಳಿ ಮದುವೆಗಳಲ್ಲಿ ನಡುರಾತ್ರಿಯೂ ಕೆಲ ಶಾಸ್ತ್ರಗಳು ನಡೀತಲೇ ಇರ್ತವೆ. ಅದರ ಜೊತೆಗೆ ಓಲಗದವರು ಊದೋದು ಬಡಿಯೋದು ಮಾಡ್ತಿರ್ತಾರೆ. ನಮಗೂ ಅವತ್ತು ಇದ್ದಕ್ಕಿದ್ದಂತೆ ಅವರು ಬಾರಿಸಿದ್ದು ಕೇಳಿಸ್ತು. ಅದೇನಾಯ್ತೋ ಈ ಸದ್ದಿಗೆ ಎಚ್ಚರವಾದ ಯೋಗೀಶ್ ಮಾಮ ಧಡಕ್ ಎದ್ದು ಬನ್ರೋ ಒಂದೆರಡ್ ಸ್ಟೆಪ್ ಹಾಕೋಣ ಅಂತಂದು ಹೋರಟೇ ಬಿಟ್ರು. ಮಲಗಿದ್ದವಳನ್ನು ಬಲವಂತವಾಗಿ ಹೊಡೆದು ಎಬ್ಬಿಸಿ ನನ್ನನ್ನೂ ಕರ್ಕೊಂಡ್ ಬಂತು ನಮ್ಮ ಕೋತಿ ಸೈನ್ಯ. ಆಮೇಲೆ ಸರಿಸುಮಾರು ಒಂದು ಗಂಟೆ ಎಲ್ರೂ ತಮಟೆ ಸದ್ದಿಗೆ ಮನಬಂದಂತೆ ಕುಣಿದದ್ದಷ್ಟೇ ನೆನಪು.

ಈ ನಡುವೆ ಒಂದು ಅತಿಮುಖ್ಯ ವಿಷಯ ಹೇಳ್ಲೇಬೇಕು. ನಾವು ನಿಜಕ್ಕೂ ಮದುವೆಗೆ ಹಾಜರಿ ಹಾಕಲು ಬಂದಿರಲಿಲ್ಲ. ನಮ್ಮೂರಿನ ನಿರಾಳ ಹವೆ, ನಿಶ್ಯಬ್ಧ ವಾತಾವರಣದಲ್ಲಿ 3 ದಿನ ಕಳೆಯೋ ಪ್ಲಾನ್ ನಮ್ಮದಾಗಿತ್ತು. ಯಾಕಂದ್ರೆ ನಮ್ಮೂರೇ ಹಾಗೆ. ಈ 'ನಮ್ಮೂರು' ನಮ್ಮ ತಂದೆಯವರ ಹುಟ್ಟಬರು. ಹೆಸರು ಹುಸ್ಕೂರು. ಹಾನ ಜಿಲ್ಲೆ ಆಲೂರು ತಾಲೂಕಿನಲ್ಲಿದೆ. ಟಿವಿಯಲ್ಲಿ ಪೇಪರಲ್ಲಿ ಬರೋ ವಾರ್ತೆಯಲ್ಲಿ ಪದೇ ಪದೇ ನೋಡೋ ಆನೆ ದಾಳಿಗೆ ತುತ್ತಾಗುವ ಸುದ್ದಿಯಿದೆಯಲ್ಲಾ? ಅದಕ್ಕೀಡಾಗೋ ಪ್ರದೇಶಗಳಲ್ಲಿ ಇದೂ ಒಂದು...ಇಲ್ಲಿಗೊಮ್ಮೆ ಕಾಲಿಟ್ರೆ ಮೊಬೈಲ್ ನೆಟ್ವರ್ಕ್ ಕಣ್ಣಾಮುಚ್ಚಾಲೆ ಶುರು. ನಮಗೂ ಅದೇ ಬೇಕು ಬಿಡಿ!!! ಆದ್ರೆ ಮದುವೆ ಮನೆ ಸಂಭ್ರಮದಲ್ಲಿದ್ದ ನಮ್ಮ ಹಿರಿಯರ ಬಳಗವನ್ನು ಊರಿನತ್ತ ಮುಂಚಿತವಾಗಿ ಹೋಗಲು ಅನುಮತಿ ಕೇಳಿ ಅವರನ್ನದಕ್ಕೆ ಒಪ್ಪಿಸುವಲ್ಲಿ ಸಾಕುಬೇಕಾಯ್ತು. ಹಾಗೆ ಮಾಡಲು ನನ್ನನ್ನು ಮುಂದೆ ಬಿಟ್ಟಿದ್ದ ನಮ್ಮ ಕಪಿಸೇನೆ ಇಡೀದಿನ ಮದುವೆಮನೇಲಿ ನಿಷ್ಪ್ರಯೋಜಕವಾಗಿ ಕಳೆದೆವಲ್ಲ ಅಂತ ನನ್ನ ಮೇಲೆ ಹೇರುತ್ತಿದ್ದ ಒತ್ತಡ ಅಷ್ಟಿಷ್ಟಲ್ಲ. ಕಡೇಪಕ್ಷ ಚೆನ್ನಾಗಿ ರೆಡಿ ಆಗಲೂ ಬಿಡಲೊಲ್ಲರು. ನಾನು ಕನ್ನಡಿ ಮುಂದೆ ನಿಂತ್ರೆ ಕೆಂಗಣ್ಣು ಬೀರಿ ಬೇಗ ಮುಗ್ಸೇ. ಧಾರೆ ಮುಹೂರ್ತ ಆದ್ಮೇಲೆ ಊರ ಕಡೆ ಜೈ ಅನ್ನೋಣ ಅಂತ ಚಡಪಡಿಸ್ತಿದ್ರು. ಇಷ್ಟು ದೂರ ಕರೆತಂದು ನಮ್ಮ ಇಡೀ ದಿನ ಹಾಳು ಮಾಡಿದೆ ಅಂತ ಪದೇಪದೇ ಚುಚ್ಚಿ ಮಾತಾಡಿ, ನಾನು ಹಿರಿಯರ ಬಳಿ ಬೇಗ ಹುಸ್ಕೂರಿಗೆ ಕಳಿಸಲು ಮತ್ತಷ್ಟು ಒತ್ತಡ ಹೇರುವಂತೆ ಮಾಡುವಲ್ಲಿ ಯಶಸ್ಸಿಯಾದರು ಪಾಪಿಗಳು. :P ದಲೇ ಪ್ಲಾನ್ ಮಾಡಿ ಊರಿನ ಕೆರೆಯಲ್ಲಿ ತೆಪ್ಪ ತರಿಸಿಡಲು ಅಪ್ಪಾಜಿಯಲ್ಲಿ ವಿನಂತಿಸಿದ್ದರಿಂದ ಎಲ್ಲಾ ರೆಡಿಯಾಗಿತ್ತು. ಆದ್ರೆ ನಂಬಿದ್ರೆ ನಂಬಿ....ನಗು ಬಂದ್ರೆ ನಕ್ಕು ಬಿಡಿ. ನಾವೆಷ್ಟು ಆತುರ ಕಾತರರಾಗಿದ್ವಿ ಅಂದ್ರೆ ಎಷ್ಟು ಬೇಡವೆಂದರೂ ಮದುವೆ ಮನೆಯಿಂದ ಆ ವೇಳೆ ಹುಸ್ಕೂರಿನ ಕಡೆ ಹೊರಡಲಿದ್ದ ಗೂಡ್ಸ್ ಆಟೋವನ್ನೇ ಹತ್ತಿಬಿಟ್ಟೆವು.








ನಜ್ಜುಗುಜ್ಜಾದ ರಸ್ತೆಯಲ್ಲಿ ತಂಪು ಹವೆ ಸೇವಿಸುತ್ತಾ, ಅಕ್ಕಪಕ್ಕದಲ್ಲಿ ಕಾಣ್ತಿದ್ದ ಕಾಫಿ ತೋಟಗಳತ್ತ ಕಣ್ಣು ಹಾಯಿಸ್ತಲೇ ಊರೊಳಗೆ ಪ್ರವೇಶಿಸಿದೆವು. ನಮ್ಮನ್ನೆಲ್ಲಾ ತೆಪ್ಪದಲ್ಲಿ ಕೆರೆ ಸುತ್ತಿಸಬೇಕಿದ್ದ ವ್ಯಕ್ತಿಯನ್ನು ಅಪ್ಪಾಜಿ ಮೊದಲೇ ನಿಗದಿಪಡಿಸಿ ಜೊತೆಗೇ ಕಳಿಸಿದ್ದರು. ಎಷ್ಟು ಬೇಗ ನಮ್ಮನ್ನೆಲ್ಲಾ ಸುತ್ತಿಸಿ ಭೇಷ್ ಅನ್ನಿಸಿಕೊಳ್ತೇನೋ ಎಂಬ ತವಕ ಆ ವ್ಯಕ್ತಿಗೆ. ಅದೆಷ್ಟು ಮಿತಿಮೀರಿತ್ತಂದ್ರೆ ಮದುನೆಮನೆಯಿಂದ ನಮ್ಮ ಜೊತೆ ಕಳಿಸಿಕೊಟ್ಟಿದ್ದ ಲಗೇಜನ್ನು ಮನೆಯೊಳಗಿಡಲೂ ಪುರುಸೊತ್ತು ಕೊಡ್ಲಿಲ್ಲ. ಕಡೆಗೂ ಸ್ವಲ್ಪ ಫ್ರೆಷ್ ಆಗಿ ಬಳಿಕ ನಮ್ಮ ಸವಾರಿ ಹೊರಟಿತು. ಕೈಲಿ ಕೆಮೆರಾ. ನಮ್ಮೂರ ಚೆಂದವನ್ನು ಎಷ್ಟು ಸೆರೆಹಿಡಿದರೂ ಕಮ್ಮೀನೇ ಅನ್ನಿಸಿಬಿಡ್ತು. ಚಿಕ್ಕವರಿದ್ದಾಗ ಬಂದದ್ದು. ಆಮೇಲೆ ಇತ್ತ ತಲೇನೇ ಹಾಕಿರ್ಲಿಲ್ಲ. ಆದ್ರೀಗ ಆ ಪರಿಸರವನ್ನು ಎಷ್ಟು ಮಿಸ್ ಮಾಡ್ಕೊಂಡೆ ಅನ್ನಿಸೋಕೆ ಶುರುವಾಗಿತ್ತು. ತೆಪ್ಪದಲ್ಲಿ ಪಯಣ ನನಗೆ ಮೊದಲಾಸಲ :) ಹೇಗಂದ್ರೆ ಹಾಗೆ ಅದರಲ್ಲಿ ಕೂರೋ ಹಾಗೇ ಇಲ್ಲ. ಇಬ್ಬರೋ ಮೂವರೋ...ಎಷ್ಟು ಮಂದಿ ಕೂತ್ರೂ ಬ್ಯಾಲೆನ್ಸ್ ಮಾಡಿ ಒಂದೇ ಕಡೆ ವಾಲದಂತೆ ಕೂರಬೇಕು. ಬರುಬರುತ್ತಾ ತೆಪ್ಪ ಕೆರೆಯ ನಡುವಿಗೆ ಬಂತು.

ವಾವ್...!!! ಸುತ್ತ ಹಸಿರ ಸ್ವರ್ಗ ಎದ್ದು ನಿಂತು ನಮ್ಮನ್ನು ನೋಡುತ್ತಿದ್ದ ಹಾಗೇ ಭಾಸ. ಸಂಜೆ 5 ದಾಟಿದ್ರಿಂದ ನೆತ್ತಿ ಮೇಲಿನ ಸೂರ್ಯನೂ ಮನೆಗೆ ಹೊರಡೋ ಆತುರದಲ್ಲಿದ್ದ. ಹಾಗಾಗಿ ನೀರ ಮೇಲೆ ತನ್ನ ಹೊನ್ನ ರಶ್ಮಿಯನ್ನು ಪ್ರತಿಬಿಂಬಿಸಿ ಫಳಫಳಿಸುತ್ತಿದ್ದ. ಕಣ್ಣುಕೋರೈಸುವಂತಿತ್ತು. ಆಚೆ ದಡದಲ್ಲಿ ನನ್ನ ತಂಗಿ ಮತ್ತು ದೀಪು ನಮ್ಮತ್ತ ಕೈಬೀಸುತ್ತಾ ನಿಂತಿದ್ರು. ಆಚೆ ದಡಕ್ಕೆ ಬಿಟ್ಟು ಮತ್ತೊಂದು ದಡದಲ್ಲಿದ್ದ ದೀಪು ಮತ್ತು ಸಿಂಧುವನ್ನು ಕರೆತರಲು ತೆಪ್ಪದ ವ್ಯಕ್ತಿ ಹೊರಡಬೇಕಿತ್ತು. ಆದ್ರೆ ಆತ ಸುಲಭದಲ್ಲಿ ನಮ್ಮನ್ನು ಬಿಡೋ ಹಾಗೆ ಕಾಣ್ಲಿಲ್ಲ. ನನ್ನ ಕೈಲಿದ್ದ ಪುಟ್ಟ ಕೆಮೆರಾದಲ್ಲಿ ತಾನು ಮಾತಾಡಿದ್ರೆ ರೆಕಾರ್ಡ್ ಆಗುತ್ತಾ ಅಂದ. ಹೌದು ಅಂದಿದ್ದೇ ತಡ...ನಮ್ಮೂರ ಹಿನ್ನೆಲೆ, ಆನೆ ಕಾಟ, ಮುಳುಗಡೆ ಪ್ರದೇಶದ ಸಮಸ್ಯೆಗಳ ಬಗ್ಗೆ ಮಾತಾಡತೊಡಗಿದ. ನಾನು ಸುಮ್ಮನೆ ಹ್ಲಾಂ...ಹ್ಲೂ ಅಂತ ಕೇಳ್ತಿದ್ರೆ ಪಕ್ಕದಲ್ಲಿದ್ದ ನನ್ನ ಕಂತ್ರಿ ಬ್ರದರ್ಸ್ ನನಗೆ 'ಲೇ ರೆಕಾರ್ಡ್ ಅಲ್ದಿದ್ರೂ ಫೋಟೋನಾದ್ರೂ ತೆಗಿಯೇ' ಅಂತ ಕಿಚಾಯಿಸತೊಡಗಿದ್ರು. ಕಡೆಗೂ ತೆಪ್ಪದ ಮಾತು ಮುಗಿಸಿ ಆಚೆ ದಡದಲ್ಲಿ ಸರ್ಕಾರದ ಪರಿಹರಕ್ಕೆ ಕಾಯುವ ನಿರಾಶ್ರಿತರಂತೆ ನಿಂತಿದ್ದ ಸಿಂಧು ಮತ್ತು ದೀಪೂನ ಕರ್ಕೊಂಡು ಬರೋ ಮನಸ್ಸು ಮಾಡಿದ!!


ಬಹುಶಃ ದೀಪು ಮತ್ತು ಪ್ರಭು ತಮ್ಮ ಜೀವನದಲ್ಲಿ ಕಂಡ ಪ್ರಪ್ರಥಮ ಹಳ್ಳಿ, ಕಾಡುಪ್ರದೇಶ ಅದಾಗಿತ್ತು. ಅದಕ್ಕೆ ಕಂಡದ್ದನ್ನೆಲ್ಲಾ ಚೆನ್ನಾಗಿದೆ ಅಲ್ವಾ ಅಂತ ಅಚ್ಚರಿಪಡ್ತಿದ್ರು. ಮನದಣಿಯೆ ತೋಟವೆಲ್ಲಾ ಸುತ್ತಿ, ಹಕ್ಕಿಗಳ ಹಾಡು ಕಿಚಿಪಿಚಿ ಸದ್ದು ಕೇಳುತ್ತಾ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಕಡೆಗೆ ಆ ತೆಪ್ಪದಾತ ನಮ್ಮನ್ನು ಹುಡುಕುತ್ತಾ ಬಂದು ಅಷ್ಟು ದೊರದಿಂದ ಶಿಳ್ಳೆ ಹಾಕಿದಾಗ್ಲೇ ಗೊತ್ತಾದದ್ದು ಹೊತ್ತಾಯ್ತು ಅಂತ. ಸೂರ್ಯನ ಚೆಲ್ಲಾಟ ಮಿತಿಮೀರಿತ್ತು. ಕೆರೆಯ ತಿಳಿನೀರಿನ ಮೇಲೆ ಚಿನ್ನದ ಪುಡಿ ಸುರಿದಂತೆ ಕಾಣ್ತಿತ್ತು. ನಡು ನಡುವೆ ಬೆಳ್ಳಕ್ಕಿಗಳ ಟಾಟಾ ಬಾಯ್ ಬಾಯ್...ದೂರದ ಬೆಟ್ಟ ನಿಶ್ಚಲ ನೀರ ಮೇಲೆ ಪ್ರತಿರೂಪವಿಳಿಸಿ ಹೊಸ ಜಗತ್ತನ್ನು ಸೃಷ್ಟಿಸಿತ್ತು. ಅದನ್ನೆಲ್ಲಾ ನೋಡುತ್ತಾ ಖುಷಿಖುಶಿಯಾಗೇ ಮತ್ತೆ ಆಚೆ ದಡ ಸೇರಿದ್ವಿ. ಮತ್ತೆ ಶುರುವಾಯ್ತಪ್ಪ ನನ್ನ ತಮ್ಮಂದ್ರ ಕಾಟ. ಅವರಿಗೋ ಬಂದ 3 ದಿನವೂ ಒಂದ್ನಿಮಿಷವೂ ನಿಷ್ಪ್ರಯೋಜಕವಾಗದಂತೆ ಮಜಾ ಉಡಾಯಿಸಬೇಕು. ಆದ್ರೆ ಹೇಗೆ ಅನ್ನೋದನ್ನು ನಿರ್ಧರಿಸಬೇಕಿದ್ದು ಮಾತ್ರ ನಾನು. ಎಂಥಾ ಸಂಕಟದ ಕೆಲ್ಸಾವಪ್ಪಾ :(

ಈಗ ಅವರ ಬೇಡಿಕೆ ರಾತ್ರಿ ಆ ಕೊರೆಯೋ ಚಳಿಯಲ್ಲಿ ಕ್ಯಾಂಪ್ ಫೈರ್ ಮಾಡ್ಬೇಕು ಅಂತ. ಮೊದಲೇ ಹಠ ಮಾಡಿ ಕೇಳಿದ್ದಕ್ಕೆ ಓಕೆ ಅನ್ನಿಸಲು ಸಾಕುಬೇಕಾಗಿತ್ತು. ಯಾಕಂದ್ರೆ ಅಪರೂಪಕ್ಕೆ ಎಲ್ರೂ ಊರಿಗೆ ಬರೋದ್ರಿಂದ ದೊಡ್ಡವರಿಗೂ ನಮ್ಮೊಂದಿಗೆ ಸಮಯ ಕಳೆಯೋ ಮನಸ್ಸು. ಆದ್ರೆ ನಮಗೋ ಮತ್ತೆತ್ತಲೋ ಮನಸ್ಸು. ಹೇಗೋ ಒಪ್ಪಿಸಿ ಮನೆ ಪಕ್ಕದ ಪುಟ್ಟ ಅಂಗಳದಲ್ಲೇ ಫೈರ್ ಮಾಡೋದು ಅಂತ ನಿರ್ಧಾರವಾಯ್ತು. ಅದಕ್ಕೂ ಮುನ್ನ ನಮ್ಮ ಸೈನ್ಯದ ಮತ್ತೊಂದು ತಿಕ್ಕಲು ಬೇಡಿಕೆ! ಮದುವೆಮನೇಯಿಂದ ಬಂದ್ಮೇಲೆ ಸಹಜವಾಗಿ ರಾತ್ರಿಯೂಟವೂ ಮನೆಯಲ್ಲಿ ಸಿದ್ಧವಾಗಿರುತ್ತೆ ತಾನೇ. ಇವ್ರಿಗೆ ಒಲೆ ಹಚ್ಚಿ ಅಡುಗೆ ಮಾಡಿ ತಿನ್ನೋ ಆಸೆ. ದೇವರೇ...!! ಮನೇಲಿ ಬಿಟ್ರೂ ಬಿಡ್ತಾರ? ಅದಕ್ಕೂ ನಾನೇ ಬಲಿಪಶು. ಅದಕ್ಕೊಂದು ಬೇಡಿಕೆ ಅರ್ಜಿ ಕೊಟ್ಟು ಸಮ್ಮತಿ ಪಡೆದು ಒಲೆ ಹಚ್ಚಿದೆವು. ಪ್ಯಾಟೆ ಮಂದಿಯ ಅರ್ಜೆಂಟ್ ಅಡುಗೆ ಮ್ಯಾಗಿಯನ್ನು ಮೊದಲೇ ತಂದಿದ್ರು ಇವ್ರೆಲ್ಲಾ.

ಒಲೆ ಮುಂದೆ ನಾನು ದೊಡ್ಡದಾಗಿ ಮ್ಯಾಗಿ ಸಿದ್ಧಪಡಿಸ್ತಿದ್ರೆ ಮನೇಲಿದ್ದ ನೆಂಟರೆಲ್ಲಾ ಯಾವ್ದೋ ಮಹಾನ್ ಭೂರಿ ಭೋಜನ ಮಾಡ್ತಿದ್ದೀನಿ ಅನ್ನೋ ಥರ ಸುತ್ತ ನಿಂತುಬಿಟ್ರಪ್ಪಾ. ನಮಗೂ ಟೇಸ್ಟ್ ಮಾಡೋಕೆ ಕೊಡಿ ಅಂತ ಬೇರೆ ನಡುನಡುವೆ ರಾಗ. ಅಯ್ಯೋ ಪಾಪ ನನ್ನ ತಂಗಿ ತಮ್ಮಂದ್ರ ಪ್ರೈವೆಸಿ ಗತಿ ಏನಾಗ್ಬೇಡ!! pheeeee ;) ಅಂತೂ ಟೂ ಮಿನಟ್ಸ್ ಮ್ಯಾಗಿ ರೆಡಿಯಾಯ್ತು. ಎಲ್ಲರಿಗೂ ಹಂಚಿ ನಾವೂ ತಟ್ಟೆಗೆ ಸುರಿದು ಬಾಯಿಗಿಡ್ಬೇಕು ಅಷ್ಟರಲ್ಲಿ ಪ್ರಭು ನಖರಾ ಶುರು. ನನಗೆ ಸ್ಪೂನ್ ಬೇಕಂತ. ಅವರದ್ದೇ ರಗಳೆಗಳಲ್ಲಿ ಮುಳುಗಿದ್ದವರ ಹತ್ತ ಅಷ್ಟಬ ಜನಕ್ಕೆ ಸ್ಪೂನ್ ಕೇಳಿ ಯಾಕ್ ತೊಂದರೆ ಅಂತ ನಾವಿದ್ರೆ ಇವನದ್ದೊಂದೇ ವರಾತ. ಕಡೆಗೂ ಸ್ಪೂನಲ್ಲೇ ತಿಂದ.


ರಾತ್ರಿಯಿಡೀ ಬೆಂಕಿ ಕಾಯಿಸಿ ಮಜಾ ಮಾಡೋದು ಇವರ ಮುಂದಿನ ಪ್ಲಾನ್. ಊಟ ಮುಗಿಸಿ ಹೊರಬಂದ್ರೆ ಚಳಿಯ ತೀವ್ರತೆ ಮತ್ತೂ ಹೆಚ್ಚು. ಸುತ್ತಲೂ ಎತ್ತ ಕಣ್ಣು ಹಾಯಿಸಿದ್ರೂ ಕಾರ್ಗತ್ತಲು. ಏನೇನೂ ಕಾಣದು. ನಮ್ಮ ಮುಂದಿದ್ದ ಬೆಂಕಿಯ ಜ್ವಾಲೆ ಬಿಟ್ಟು. ಫೈರ್ ಮುಂದೆ ಕುಳಿತು ಏನಾದ್ರೂ ಆಟ ಆಡೋ ಹುಮ್ಮಸ್ಸು ಇವ್ರಿಗೆಲ್ಲಾ. ಸರಿ ಒಂದು ಸಿನಿಮಾ ಹೆಸ್ರು ಗುಟ್ಟಲ್ಲಿ ಹೇಳಿ ಎದುರಿನ ಪಾರ್ಟಿಯವ್ರು ಅದಕ್ಕೆ ಮೂಕಾಭಿನಯಿಸಿ ಕಂಡುಹಿಡಿಯೋ ಆಟ ಅದು. ಇವ್ರು ಹೇಳೋ ಸಿನಿಮಾ ಹೆಸ್ರುಗಳು ಹೇಗಿರ್ತಿದ್ವು ಅಂದ್ರೆ ಹೇಳಿದೋರ್ಗೆ ಬಿಟ್ಟು ಮತ್ಯಾರಿಗೂ ಅರ್ಥ ಆಗ್ತಿರ್ಲಿಲ್ಲ. ವೇಕ್ ಅಪ್ ಸಿದ್, ಬೀಯಿಂಗ್ ಸೈರಸ್, ರತ್ನಗಿರಿ ರಹಸ್ಯ....ಇತ್ಯಾದಿ. ಥೂ...ಕಡೆಗೆ ಅಂತಾಕ್ಷರಿಯೇ ಬೆಸ್ಟ್ ಅಂತ ನಿರ್ಧರಿಸಿಬಿಟ್ವಿ. ಇವ್ರೆಲ್ಲಾ ಎಂಥ ಸೋಮಾರಿಗಳು ಅಂದ್ರೆ ಎರಡೂ ಬದಿಯ ಆಟವನ್ನು ನಿದ್ದೆ ಬರೋ ತನಕ ನಾನೊಬ್ಬಳೇ ಆಡಬೇಕಾಯ್ತು!! :( ರಾತ್ರಿ ಎಷ್ಟೊತ್ತಾಗಿತ್ತೊ ಗೊತ್ತಿಲ್ಲ. ಮೊದಲೇ ಅಲ್ಲಿ ಆನೆಕಾಟ. ಬನ್ರೋ ಮಲಗೋಣ ಅಂದ್ರೆ ಏಳಲು ಮನಸಿಲ್ಲ ಅವ್ರಿಗೆ.

ಕಾಡಿನ ನಿಶ್ಯಬ್ಧ ಒಂಥರಾ ಅನುಭವ. ನಮ್ಮ ಗಲಾಟೆ ಹಾಡುಪಾಡುಗಳ ನಡುವೆ ಅಂಥ ಸದ್ದಿಲ್ಲದ ವಾತಾವರಣ ತೀರಾ ಹೊಸ ಮತ್ತು ವಿಚಿತ್ರ ಅನುಭವ ಕೊಡುತ್ತಿತ್ತು. ಅರೆಕ್ಷಣ ಮೌನವೂ ಅಲ್ಲಿ ಮನಸ್ಸು ಮತ್ತೆಲ್ಲೋ ಕದಲುವಂತೆ ಮಾಡುತ್ತಿತ್ತು. ಯಾವ ಮೂಲೆಯಿಂದಾದ್ರೂ ಆನೆ ಬಂದುಬಿಟ್ರೆ ಅನ್ನೋ ಹಾಗೆ!! ಮರವೊಂದ್ರಿಂದ ಎಲೆ ಉದುರಿಬಿದ್ರೆ ಆ ಸದ್ದು ಎಷ್ಟು ಜೋರಾಗಿ ಕೇಳ್ತಿತ್ತು ಅಂದ್ರೆ ಮನಸಲ್ಲಿ ಬರೋ ಪೆದ್ದು ಪೆದ್ದು ಸಂಶಯ ನಿಜವೇ ಅನ್ನಿಸಿಬಿಡೋದು. ಆದ್ರೆ ಗಡಗಡ ನಡುಗೋ ಚಳಿಗೆ ಎದುರಿಗಿದ್ದ ಬೆಂಕಿಯ ಕಾವು ಒಂಥರಾ ಮುದ ನೀಡ್ತಿತ್ತು. ನಿದ್ರೆ ಬರೋತನಕ ಕೂತೆ. ಕಡೆಗೆ ಕಾಡೊಳಗಿನ ಸದ್ದು ಕೇಳಿ 'ನೋಡ್ರೋ ಆನೆ ಬಂದ್ರೆ ನಾನಲ್ಲ ಹೊಣೆ' ಅಂತ್ಹೇಳಿ ಹೊರಟೆ. ಎಲ್ರೂ ರೂಮು ಸೇರಿ ಸ್ವಲ್ಪ ಹೊತ್ತು ಹರಟಿ ಹಾಗೇ ನಿದ್ರೆಗೆ ಜಾರಿದೆವು.

ಅಲ್ಲಿ ಬೆಳಗಿನ ಮುಂಜಾವು ಅತ್ಯದ್ಭುತ. ತೆಳುವಾಗಿ ಲೇಪಿಸಿದ ಮಂಜಿನ ಹನಿ ನಿಮಗೆ ಗುಡ್ ಮಾರ್ನಿಂಗ್ ಹೇಳುತ್ತೆ. ಬೆಂಗಳೂರಲ್ಲಿ ನೋಡಿರದ ಕೇಳಿರದ ಹಕ್ಕಿಗಳ ಚಿಲಿಪಿಲಿಯೇ ಸುಪ್ರಬಾತ. ಇದೆಲ್ಲವನ್ನೂ ಸೆರೆಹಿಡಿಯೋ ತವಕ ನನಗೆ. ಬೆಳಗ್ಗೆ ಯಾವಾಗಾಗುತ್ತೋ ಅಂತ ಕಾಯುತ್ತಲೇ ನಿದ್ರೆಗೆ ಜಾರಿದೆ. ನೆಂಟರ ಹಿಂಡು ಹೆಚ್ಚಿದ್ರಿಂದ ಜಾವದಲ್ಲೇ ಎದ್ದು ತಿಂಡಿಯ ಸಿದ್ಧತೆಯಲ್ಸಿದ್ದು ಹೆಂಗಳೆಯರು. ಪಕ್ಕದಲ್ಲೇ ಕೆಮೆರಾ ಇಟ್ಕೊಂಡು ಮಲಗಿದ್ದವಳು ಎಚ್ಚರವಾದೆ. ನನ್ನ ತಮ್ಮ ತಂಗನ ಕರೆದೆ ಬರ್ತೀರಾ ಅಂತ ಪಾಪಿಗಳು 'ಇಷ್ಟು ಬೇಗಾನಾ?' ಅಂತ ರಾಗ ಎಳೆದ್ರು. ಇವ್ರಿಗೆ ಕಾದ್ರೆ ನನ್ನ ಕೆಲ್ಸ ಹಾಳು ಅಂದವಳೇ ಸುಮ್ಮನೇ ಕೆಮೆರಾ ಜೇಬಿಗಿಳಿಸಿ ಹೊರಟೆ. ಸದ್ಯ ನಾನು ಎದ್ದದ್ದಕ್ಕೆ ನನ್ನದೊಂದು ಕಂಬಳಿ ಹೊದೆಯಲು ಎಕ್ಸ್ಟ್ರಾ ಸಿಕ್ತು ಅಂತ ಹೊದ್ದು ಮಲಗಿದ್ವು ಕಪಿಗಳು.

ಮುಂಜಾನೆ...! ಆಹಾ!!! ಆ ಚಳಿಚಳಿ ಹವೆಯಲ್ಲಿ ಮೆಲ್ಲಗೆ ಎಲ್ಲರ ಕಣ್ತಪ್ಪಿಸಿ ಹಿಂದಿನ ದಿನ ತೆಪ್ಪ ಸವಾರಿ ಮಾಡಿದ್ದ ಕಡೆ ಹೊರಟೆ. ಆಗ ತಾನೇ ಸೂರ್ಯನೂ ಮಂಜಿನ ತೆರೆ ಸರಿಸಿ ಹೊರಬರಲು ಸಜ್ಜಾಗುತ್ತಿದ್ದ. ಅಸಲಿಗೆ ಕಣ್ಣಿಗೆ ಅಲ್ಲೇನೂ ಕಾಣದಷ್ಟು ಮಂಜು. ಸಮಯ ಉರುಳಿದಂತೆ ಪ್ರತಿಕ್ಷಣವೂ ಅಲ್ಲಿ ಹೊಸ ಹೊಸ ದೃಶ್ಯಾವಳಿ ಕಟ್ಟಿಕೊಡ್ತಿತ್ತು. ಮನದಣಿಯೆ ಫೋಟೋ ಕ್ಲಿಕ್ಕಿಸಿದೆ. ನಿಜ ಹೇಳ್ಬೇಕಂದ್ರೆ ನನ್ನ ಜೀವನದಲ್ಲಿ ನಾನು ತೆಗೆದ ಮೊದಲ ಪರಿಸರ ಚಿತ್ರಗಳು ಅವು. ಹಾಗಾಗಿ ಅದನ್ನು ಫೋಟೋಗ್ರಫಿ ಅಂತ ಹೇಳಿಕೊಳ್ಲೋ ಯೋಗ್ಯತೆ ನಂಗಿನ್ನೂ ಖಂಡಿತ ಇಲ್ಲ. ಆದ್ರೆ ನನ್ನ ಊಹೆ, ತಿಳುವಳಿಕೆ, ಅಭಿರುಚಿಗೆ ನಿಲುಕಿದ ಹಾಗೆ ಒಂದಷ್ಟು ಸುಂದರ ಚಿತ್ರ ಸೆರೆಹಿಡಿಯೋ ಪ್ರಯತ್ನವನ್ನಂತೂ ಖಂಡಿತಾ ಮಾಡಿದೆ.

ಮನೆಯತ್ತ ಬರುವಂತೆ ನನ್ನಪ್ಪಾಜಿ ಫೋನ್ ಮಾಡಿದ್ರು. ನಾನಿದ್ದ ಜಾಗದಲ್ಲಿ ಫುಲ್ ನೆಟ್ವರ್ಕು. ಭಲೇ ತಂತ್ರಜ್ಞಾನವೇ ಅನ್ನಿಸಿದ್ರೂ ಥೂ ಇದ್ರಜ್ಜಿ...ಯಾಕಪ್ಪಾ ಜಗತ್ತು ಇಷ್ಟು ಮುಂದುವರಿದಿದೆ ಅಂತಲೂ ಅನ್ನಿಸ್ತು. ಮನೇಗೆ ಹೋದ್ರೆ ಹಸಿರು ಬಾಳೆ ಎಲೆ ಮೇಲೆ ಬಿಸಿ ಬಿಸಿ ಬಿಸಿಬಿಸಿ ಟೊಮಾಟೋ ಪುಲಾವ್ ಕಾದಿತ್ತು. ತಿಂದಷ್ಟೂ ಇನ್ನೂ ಬೇಕು ಅನ್ನಿಸ್ತಿತ್ತು. ಚಳಿ ಬೇರೆ ;) ಈಗ ವಾಪಾಸ್ ಹಾಸನಕ್ಕೆ ಹೊರಡೋ ಸಮಯ. ಮನಸ್ಸೇ ಬಾರದು. ಇನ್ನೂ ಈ ಹಸಿರ ಕಾನನದಲ್ಲೇ ಇರೋಣ ಅನ್ನೋ ಆಸೆ. ನನಗಷ್ಟೇ ಅಲ್ಲ. ಟ್ರಾಫಿಕ್, ಕಾಲೇಜ್, ಓದು, ಪರೀಕ್ಷೆ, ಮನೇವ್ರ ಬೈಗುಳ ಅಂತಲ್ಲಾ ಬೇಸತ್ತಿದ್ದ ಕಾರ್ತಿಕ್, ದೀಪು, ಪ್ರಭು, ಸಿಂಧೂ ಎಲ್ಲರದ್ದೂ ಇದೇ ಫೀಲಿಂಗು. ಆದ್ರೆ ನನ್ನ ರಜೆ ಅವತ್ತಿಗೆ ಕೊನೆ. ವಾಪಾಸ್ ಬೆಂಗಳೂರಿಗೆ ಬರೋದು ನೆನಸಿಕೊಂಡ್ರೆ ಹೊಟ್ಟೆಯೊಳಗೆ ಒಂಥರಾ ಸಂಕಟ. ಎಷ್ಟು ಸಾಧ್ಯವೋ ಅಷ್ಟು ತಡ ಮಾಡುತ್ತಲೇ ಎಲ್ರೂ ಹೊರಟ್ವಿ!! ಆದ್ರೆ ದೊಡ್ಡವರಿಗೆ ಬೇಗ ಊರು ಸೇರೋ ಆತುರ.

ಹಳ್ಳ ದಿಣ್ಣೆ, ಕಲ್ಲು ರಸ್ತೆಯ ಮೇಲೆ ಕಾರು ಎತ್ತಿನ ಗಾಡಿಗಿಂತಲೂ ಕಡೆಯಾಗಿ ಮುಂದುವರೀತಿದ್ರೆ ಮನಸ್ಸಿಲ್ಲದ ಮನಸ್ಸಲ್ಲಿ ನಾವೆಲ್ಲಾ ಬೆಟ್ಟ, ಸುತ್ತಲಿನ ತೋಟ ವೀಕ್ಷಿಸುತ್ತಾ ಕುಳಿತಿದ್ವಿ. ಡ್ರೈವರ್ ಅಂಕಲ್ ಆನೆಕಾಟ ಅಲ್ವಾ? ಅಕಸ್ಮಾತ್ ಈಗ ಎದುರು ಬಂದ್ರೆ ಏನ್ ಮಾಡೋದು ಅದು ಇದು ಅಂತ ತಲೆ ಕೊರೀತಿದ್ರು. ಟಾಪ್ ಮೇಲೆ ಕಟ್ಟಿರೋ ಲಗೇಜು ಬಿದ್ರೆ ಹೇಳ್ರೋ ಹುಡುಗ್ರಾ... ಅಯ್ಯಯ್ಯೋ ಆಗೇನಾದ್ರೂ ಆನೆ ಬಂದ್ರೆ? ಇಲ್ಲಪ್ಪಾ ನನ್ನ ಕಾರ್ ನಿಲ್ಸಲ್ಲಾ. ನಿಮ್ ಲಗೇಜು ನೀವೇ ಜವಾಬ್ದಾರಿ ಯಾಕ್ ಬೇಕು ಗ್ರಹಚಾರ ಅಂತ ಬಡಬಡಿಸ್ತಿದ್ರು. ನಾನು ಹಾಗೇ ನಿದ್ರೆಗೆ ಜಾರಿದವಳು ಎದ್ದಾಗ ಕಂಡದ್ದು ಹಾಸನದ ಧೂಳುಮಯ ಟ್ರಾಫಿಕ್ಕು :(