Monday, March 29, 2010

ಕೀ ಕಳೆದು ಹೋದಾಗ...


ನೀವು ಯಾರಿಗಾದ್ರೂ ಏನಾದ್ರೂ ಸಹಾಯ ಮಾಡಿ. ಮನಸ್ಸಿಗೆ ಅದೆಷ್ಟು ಖುಷಿ ಅನ್ಸುತ್ತೆ ಅಲ್ವಾ? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸಹಾಯದಿಂದ ಸಿಗುವ ಆತ್ಮತೃಪ್ತಿ ಇದ್ಯಲ್ಲಾ? ಅದು ಮತ್ತೆಲ್ಲೂ ಸಿಗೋಲ್ಲ. ನಾನು ಇವತ್ತು ನಿನಗೆ ಈ ನೆರವು ಕೊಟ್ಟಿದ್ದೇನೆ. ನಾಳೆ ನನಗೂ ನಿನ್ನಿಂದ ಏನಾದ್ರೂ ಸಿಗಬಹುದಲ್ವಾ ಅಂತ ಅನ್ಕೊಂಡ್ರೋ ನೀವ್ ಕೆಟ್ರಿ! ಜಮಾನಾ change ಆಗಿದೆ, ಜೊತೆಗೆ ಜನರೂ ಕೂಡ. ಅಪ್ಪಿ ತಪ್ಪಿ ನಮ್ಮ ಕಷ್ಟಕ್ಕೆ ಯಾರಾದ್ರೂ ನೆರವಾದ್ರೆ ಒಂದೋ ನಮ್ಮ ಪುಣ್ಯ, ದೇವರ ದಯೆ ಅಥವಾ ಹಿಂದೆಂದೋ ನಾವು ಮಾಡಿದ ಒಳ್ಳೆ ಕೆಲಸಕ್ಕೆ ಸಿಕ್ಕ ಪ್ರತಿಫಲ ಅಷ್ಟೇ.

ಅದಕ್ಕೊಂದು example ಹೇಳ್ತೀನಿ. ಕೆಲ ತಿಂಗಳುಗಳ ಹಿಂದೆ ನಾನು ಮತ್ತು ನನ್ ಫ್ರೆಂಡ್ ನೀತು ಜಯನಗರಕ್ಕೆ ಹೋಗಿದ್ವಿ. ನೀತು ಮನೆ ಶಿಫ್ಟಿಂಗ್ ಕೆಲ್ಸ ನಡೀತಿದ್ರಿಂದ ಕೆಇಬಿ, ಬಿಎಸ್ಎನ್ಎಲ್ ಆಫೀಸ್ ಮೊದಲಾದ ಕಡೆ ಸುಮಾರು ಕೆಲಸ ಬಾಕಿಯಿತ್ತು. ಸುತ್ತಿ ಸುತ್ತಿ ಸಾಕಾಗಿತ್ತು. ಏನಾದ್ರೂ ತಿನ್ನೋಣ ಅನ್ಕೊಂಡ್ರೆ ಕಾಸು ಖಾಲಿ. ಸರಿ ಇಬ್ರೂ ಎಟಿಎಮ್ ಸರ್ಚ್ ಮಾಡ್ತಾ ಅಲ್ಲೊಂದು ಕಾಂಪ್ಲೆಕ್ಸ್ ಹತ್ರ ಹೋದ್ವಿ. ಅಲ್ಲಿ ಗಾಡಿ ಪಾರ್ಕ್ ಮಾಡಿ ಎಟಿಎಮ್ ನಲ್ಲಿ ಹಣ ತೆಗೆದು ಹೊರಗೆ ಬಂದ್ವಿ. ನಮ್ಮ ಗಾಡಿ ಪಕ್ಕ ಒಂದು activa ನಿಂತಿತ್ತು. ಆದ್ರೆ ಅದ್ಯಾವ ಆತುರದಲ್ಲೋ ವಾಹನದಲ್ಲೇ ಕೀ ಬಿಟ್ಟು ಹೋಗಿದ್ದರು ಅದರ ಒಡೆಯರು. ಸಾಮಾನ್ಯವಾಗಿ ಹೆಲ್ಮೆಟ್ ತೆಗೆದು ಸೀಟ್ ಬಾಕ್ಸ್ ನಲ್ಲಿ ಇಟ್ಮೇಲೆ ಬಹುತೇಕ ವಾಹನ ಸವಾರರು ಇಂತಹ ಪ್ರಮಾದ ಮಾಡ್ಬಿಡ್ತಾರೆ. ಇಲ್ಲೂ ಅದೇ ಆಗಿತ್ತು ಅನ್ಸುತ್ತೆ. ನಾವು ಪಕ್ಕದಲ್ಲೇ ಇದ್ದ ಅಂಗಡಿಯವರಿಗೆ ಕೀ ತಲುಪಿಸಿ ಸಂಬಂಧಪಟ್ಟವರಿಗೆ ದಯವಿಟ್ಟು ತಲುಪಿಸಿ ಅಂತ ಹೇಳಿ ಬಂದ್ವಿ.

ಅದೇನೋ ಒಂಥರಾ ಖುಷಿ. ಸದ್ಯ ಯಾರೋ ಕಳ್ಳರ ಕೈಗೆ ಸಿಗಲಿಲ್ವಲ್ಲಾ. ಅದ್ಯಾರೋ ಏನೋ ಕೀ ಜೊತೆ ಗಾಡೀನೂ ಕಳಕೊಂಡು ಪರದಾಡ್ಬೇಕಿತ್ತು ಅಂತ ನಮಗೆ ನಾವೇ ಅನ್ಕೊಂಡ್ವಿ. ದುರಂತ ಅಂದ್ರೆ ಹೀಗೆ ಕೀ ಯನ್ನು ಗಾಡಿ ಸೀಟ್ ಬಾಕ್ಸ್ ನಲ್ಲೇ ಬಿಟ್ಟು ಹೋಗೋ ಕಾಯಿಲೆ ನಂಗೂ ಉಂಟು! ಎಷ್ಟೋ ಸಲ ಹಾಗೆ ಬಿಟ್ಟು ಹೋದ ಕೀ ಅಲ್ಲೇ ಇದ್ದು ವಾಪಸ್ಸು ಗಾಡಿ ತೆಗೆಯಲು ಬಂದಾಗ ನೋಡಿದ್ದಿದೆ. ಮನಸಲ್ಲೇ 'ಸದ್ಯ ದೇವರೇ' ಅಂತ ಅಂದುಕೊಂಡದ್ದಿದೆ. ಹೊಸ activa ಕೊಂಡ ಮೇಲೆ ಗಾಂಧಿಬಜಾರಿನಲ್ಲೊಮ್ಮೆ ಹೀಗೆ ಆಗಿತ್ತು. ಮತ್ತೊಮ್ಮೆ ಸಿನಿಮಾಗೆ ಅಂತ ಮಾಲ್ ಒಂದಕ್ಕೆ ಹೋದಾಗ ಪಾರ್ಕಿಂಗ್ ಸ್ಥಳದಲ್ಲಿ ಕತ್ತಲಿದ್ರಿಂದ ಬಿಟ್ಟು ಹೋದ ಕೀ ಅಲ್ಲೇ ಸಿಕ್ಕಿತ್ತು. ಹೀಗಾದ್ರೆ ಓಕೆ. ನೂರಾರು ಮಂದಿ ಓಡಾಡೋ ಮಾಲ್ ಒಳಗೆಲ್ಲೋ ಕೈಬಿಟ್ರೆ ದೇವರೇ ಗತಿ.


ಮೊನ್ನೆ ನಾನು ಮತ್ತು ಅನುಷಾ ಕನ್ನಡ ಸಿನಿಮಾವೊಂದನ್ನು ನೋಡೋಣ ಅಂತ ಫೋರಂಗೆ ಹೋದ್ವಿ. ಶೋ ಶುರುವಾಗಲು ಅರ್ಧ ಗಂಟೆ ಇತ್ತು ಅಷ್ಟೇ. ಸರಿ ಟಿಕೆಟ್ ಏನೋ ಸಿಕ್ತು. ಹೊಟ್ಟೆ ಚುರ್ ಅಂತಿತ್ತು. ಇಬ್ರೂ ಮೆಕ್ ಡೀ ಗೆ ಹೋಗಿ ನೂರಾರು ರೂಪಾಯಿ ದಂಡ ತೆತ್ತು ಬನ್ನು ತಿಂದ್ವಿ! ಭರ್ತಿ 2ವರೆ ಗಂಟೆ ಸಿನಿಮಾನ ಎಂಜಾಯ್ ಮಾಡಿ ಹೊರಬಂದಾಗ ಯಾಕೋ ಬ್ಯಾಗಿಗೆ ಕೈ ಹಾಕ್ದೆ. ನನ್ ಗಾಡಿ ಕೀ ಪತ್ತೆನೇ ಇಲ್ಲ. ಪ್ಯಾಂಟ್ ಪಾಕೆಟ್ ಗಳೂ ಖಾಲಿ ಖಾಲಿ! ಪೀಕಲಾಟ ಶುರುವಾಯ್ತು. ತಕ್ಷಣ ಮೆಕ್ ಡೀ ಕಡೆ ಓಡಿದ್ವಿ. ಅಲ್ಲೋ ನಮ್ ಸಂಕಟ ಕೇಳೋರೇ ಗತಿ ಇಲ್ಲ. ನಿಮಿಷದಲ್ಲಿ ಸಾವಿರಾರು ರೂಪಾಯಿ ವ್ಯವಹಾರ ಮಾಡೋ ಅವ್ರಿಗೆ ನಮ್ಮ ವೆಹಿಕಲ್ ಕೀ ಕಳೆದೋದ್ರೆ ಏನ್ ಆಗ್ಬೇಕ್ ಅಲ್ವಾ? ಅಕಸ್ಮಾತ್ ಯಾರಾದ್ರೂ ವಾಪಸ್ಸು ತಂದ್ಕೊಟ್ರೆ ದಯವಿಟ್ಟು ತಿಳಿಸ್ತೀರಾ ಅಂತ ಕೇಳಿಕೊಂಡ್ರೆ ಕಡೇಪಕ್ಷ ಸೌಜನ್ಯಕ್ಕೂ ಅವರು ನಮ್ಮ ವಿಳಾಸ ದೂರವಾಣಿ ಸಂಖ್ಯೆ ಕೇಳೋ ಗೋಜಿಗೇ ಹೋಗ್ಲಿಲ್ಲ. ಅಫ್ಕೋರ್ಸ್ ಅವರ ಕೆಲಸ ಅವರಿಗೆ ತುಂಬಾ ಇಂಪಾರ್ಟೆಂಟ್. ಆದ್ರೆ ಗ್ರಾಹಕರ ಹಣ ಬೇಕು ಸಮಸ್ಯೆ ಮಾತ್ರ ಅವರಿಗೆ ಬೇಕಿಲ್ಲವಲ್ಲ ಅನ್ನಿಸಿಬಿಡ್ತು. ಬಿಟ್ಟಾಕು, ಸಮಸ್ಯೆ ನಮ್ಮದಾದಾಗಲೇ ನಮಗದು ದೊಡ್ಡದು ಅನ್ನಿಸೋದು ಅನ್ಕೊಂಡು, ನನ್ನ ತಪ್ಪಿಗೆ ನನ್ನನ್ನೇ ಶಪಿಸಿಕೊಂಡೆ.

ಥಿಯೇಟರ್ ನಲ್ಲೇನಾದ್ರೂ....? ಅಂತ ಹೊಳೆದು ಅಲ್ಲಿಗೆ ದೌಡಾಯಿಸಿದ್ವಿ. ಆದ್ರೆ ಮತ್ತೊಂದು ಶೋ ಆಗ್ಲೇ ಶುರುವಾಗಿತ್ತು. ಅಲ್ಲಿನವರು ನಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸಿ ನಾವು ಕುಳಿತಿದ್ದ ಸೀಟ್ ನಂಬರ್ ಕೇಳಿ ಥಿಯೇಟರ್ ಒಳಗೆ ಕರ್ಕೊಂಡು ಹೋದ್ರು. ಟಾರ್ಚ್ ಬಿಟ್ಟು ಹುಡುಕಿದ್ರೆ ಅಲ್ಲಿ ಏನೂ ಇರ್ಲಿಲ್ಲ. ಶೋ ಮುಗಿದ ಮೇಲೆ ಥಿಯೇಟರ್ ಚೆಕ್ ಮಾಡಿದ್ದ ವ್ಯಕ್ತಿ ಕೂಡ ಅಂತಹ ಯಾವ್ದೇ ವಸ್ತು ಸಿಗ್ಲಿಲ್ಲ ಅಂತ ಹೇಳಿದ್ರು. ಕಡೆಗೆ ನನ್ contact numbr ತಗೊಂಡು ಸಿಕ್ಕಿದ ತಕ್ಷಣ ತಿಳಿಸುವುದಾಗಿ ಭರವಸೆ ಕೊಟ್ರು. ಆದ್ರೆ ಕೀ ಸಿಗಲಿಲ್ಲ :( ಲೇ ಅನುಷಾ ನಾವೆಷ್ಟು ಸಲ ಈ ಥರ ಕೀ ಕಳ್ಕೊಂಡೋರಿಗೆ ಸಹಾಯ ಮಾಡಿದ್ದೀವಿ, ನಮ್ಗೇ ಯಾಕೆ ಈ ಥರ ಅಂತ ಕೇಳ್ದೆ.

ಹೀಗಾಯ್ತಲ್ಲಾ ಅಂತ ನಾನು ಸಖತ್ worried ಆಗಿದ್ರೆ, ಅನುಷಾ ಮಾತ್ರ as usual ತನ್ನ ಆರ್ಟ್ ಆಫ್ ಲಿವಿಂಗ್ ಸ್ಟೈಲಲ್ಲಿ ತಲೆ ಕೆಡ್ಸ್ಕೋಬೇಡ ಬಿಡೇ. ನಂಗೊತ್ತು ಅದು ಸಿಕ್ಕೇ ಸಿಗುತ್ತೆ ಅಂತ ಹೆಗಲ ಮೇಲೆ ಕೈ ಹಾಕಿ ನಗ್ತಿದ್ಲು. ಅಯ್ಯೋ ನನ್ನ ಸಂಕಟ ಯಾರಿಗೆ ಹೇಳ್ಲಿ? ಸರಿ ಹಿಂದಿನಂತೆ ಗಾಡಿಯಲ್ಲೇ ಇರ್ಬುಹುದಾ ಅಂತ ನೋಡಿದ್ರೆ..............ನೋ...:( ಅಲ್ಲಿರ್ಲಿಲ್ಲ. ಕಡೇ ಚಾನ್ಸು ಅಂತ ಅಲ್ಲಿದ್ದ ಸೆಕ್ಯೂರಿಟಿಯನ್ನ ಕೇಳಿದ್ರೆ ಅಂಡರ್ ಗ್ರೌಂಡ್ ನತ್ತ ಬೊಟ್ಟು ಮಾಡಿ ಹೋಗಲು ಹೇಳಿದ. ಅಲ್ಲೋ ಬರೀ ಕಾರ್ ಪಾರ್ಕಿಂಗು. ಅಲ್ಲಿದ್ದ ಮೂರ್ನಾಲ್ಕು ಸೆಕ್ಯೂರಿಟಿಗಳಿಗೆ ಭಯ್ಯಾ ಹಮಾರಾ ಗಾಡಿ ಕೀ...ಅನ್ನೋವಷ್ಟರಲ್ಲೇ ಮತ್ತೊಂದು ಕಡೆ ದಾರಿ ತೋರಿಸಿದರು. ಅಲ್ಲಿದ್ದ ಗ್ಲಾಸ್ ಚೇಂಬರ್ ನೊಳಗಿದ್ದ ಮಹಿಳೆಗೆ ನಮ್ ಗಾಡಿ ಕೀ...ಅಂತಿದ್ದ ಹಾಗೇ ಒಂದು ಕೀ ತೋರಿಸದ್ಲು. ಆಹಾ! ದೇವ್ರೇ ದೇವ್ರೇ ಅನ್ಕೊಂಡು ನೋಡಿದ್ರೆ ಅದ್ಯಾವ್ದೋ ಬೇರೆ :( ಮತ್ತೊಂದು ಕೀ ತೋರಿಸಿದ್ರು. ನಾನೆಷ್ಟು ಜೋರಾಗಿ ಖುಷಿಯಿಂದ ಕೂಗಿದೆ ಅಂದ್ರೆ ಬಾಡಿ ಹೋಗಿದ್ದ ತರಕಾರಿಯಂತಿದ್ದ ಮುಖ ಫ್ರೆಷ್ ಆದ ಹೂವಂತೆ ನಳನಳಿಸಿತು. ನೋಡ್ದಾ? ಸಿಗಲ್ಲ ಸಿಗಲ್ಲ ಅಂತ ಅಳೋ ಬದ್ಲು, ಸಿಗುತ್ತೆ ಅಂತ ಪಾಸಿಟಿವ್ ಆಗಿ ಯೋಚ್ನೆ ಮಾಡು ಕೋತಿ ಅಂದ್ಲು ನಮ್ ತತ್ವಜ್ಞಾನಿ!

ಸಿಕ್ಕ ಸಿಕ್ಕ ಸೆಕ್ಯೂರಿಟಿಗಳಿಗೆಲ್ಲಾ ಥ್ಯಾಂಕ್ಸ್ ಹೇಳ್ಕೊಂಡು ಬಂದ್ವಿ.. ಅವರಿಗೆ ನಮ್ ಖುಷಿ ಹೊಸತೇನಲ್ಲ. ಹಾಗೇ ಇತ್ತು ಅವರ ಮುಖಭಾವ. ಆದ್ರೆ ಆ ಕ್ಷಣದಲ್ಲಿ ಅವರ ಪ್ರಾಮಾಣಿಕತೆ ನಮಗೆ ಅಷ್ಟು ಖುಷಿ ಕೊಟ್ಟಿತ್ತು. ಅದ್ಯಾರು ಕೀ ಅವರಿಗೆ ತಲುಪಿಸಿದ್ರೋ ಅಥವಾ ಸ್ವತಃ ಸೆಕ್ಯೂರಿಟಿ ಕಣ್ಣಿಗೇ ಬಿದ್ದು ಅದನ್ನು ಸಂಬಂಧಪಟ್ಟೆಡೆ ತಲುಪಿಸಿದ್ರೋ ಗೊತ್ತಿಲ್ಲ. ಆದ್ರೆ ಉಪಕಾರ ಯಾರದ್ದೇ ಇರ್ಲಿ, ಅವರಿಗೆ ಮನಸಾರೆ ಕೃತಜ್ಞತೆಗಳನ್ನು ಹೇಳಿದ್ದಾಯ್ತು. ಕಲಿಗಾಲದಲ್ಲೂ ಪ್ರಾಮಾಣಿಕತೆಗೆ ಬೆಲೆ ಇದೆ ಅನ್ನೋದು ನಿಜ ಅಲ್ವಾ?

Thursday, February 25, 2010

ಇಟ್ಸ್ ದ ಟೈಮ್ ಟು ಸೀರಿಯಲ್...!


ಅಬ್ಬಾ ಈ ಟೀವಿಯ ಠೀವಿ ಅದೇನ್ರೀ...? ಚಾನೆಲ್ಲುಗಳನ್ನು ತಿರುಗಿಸಿದಷ್ಟೂ ಮುಗಿಯದ ಕಾರ್ಯಕ್ರಮಗಳ ಸರಮಾಲೆ. ಒಂದಕ್ಕಿಂತ ಮತ್ತೊಂದರದ್ದು ಭಿನ್ನ, ವಿಭಿನ್ನ. ಅದಕ್ಕೇ ನಮ್ ಜನ ಬಿಟ್ಟ ಕಣ್ಣು ಬಿಟ್ಟಂಗೇ ಟಿವಿ ನೋಡ್ತಾ ಕೂರೋದು. ನನಗಂತೂ ಇತ್ತೀಚೆಗೆ ಇದ್ರ ಪ್ರತ್ಯಕ್ಷ ದರ್ಶನ ಪದೇ ಪದೇ ಆಗ್ತಿರೋದ್ರಿಂದ ಈ ಬಗ್ಗೆ ಹೇಳ್ಲೇಬೇಕು.

ನಾನು ಮೊದಲಿದ್ದ ಪಿಜಿಯಲ್ಲಿ ಟಿವಿ ಇಟ್ಟ ಕೋಣೆ ರಾತ್ರಿ 10ಕ್ಕೆಲ್ಲಾ ಬಂದ್ ಆಗ್ತಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನವರ್ಯಾರೂ ಹೋಗ್ತಿರ್ಲಿಲ್ಲ. ಸಂಜೆ ವೇಳೆ ಸಮಯ ಸಿಕ್ಕಾಗ ಕೆಲವು ಸೀರಿಯಲ್ ಗಳನ್ನು ನೋಡೋಕೆ ಹುಡುಗೀರು ಬರ್ತಿದ್ರು. ಆದ್ರೆ ಒಬ್ಬೊಬ್ಬರದ್ದು ಒಂದೊಂದು ಟೈಮ್ ಅಂತ ಅವರವರಲ್ಲೇ ಮ್ಯೂಚುಯಲ್ ಅಂಡರ್ಸ್ಟ್ಯಾಂಡಿಂಗ್ ಇದ್ದಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನ ಜಗಳಗಳು ಇರ್ತಾನೇ ಇರ್ಲಿಲ್ಲ. ಆದ್ರೆ ಈಗಿರೋ ಪೇಯಿಂಗ್ ಗೆಸ್ಟ್ ನಲ್ಲಿ ನೋಡ್ಬೇಕು. ಅಯ್ಯಪ್ಪಾ! ಇಲ್ಲಿ ರಿಮೋಟ್ ಅನ್ನೋದು ನಮ್ಮ ರಾಜಕಾರಣಿಗಳ ಅಧಿಕಾರದ ಕುರ್ಚಿಗೆ ಸಮ! ನಾನ್ಹೇಳೋದು ಅತಿಯಾಯ್ತು ಅಂತ ಅನ್ನಿಸಿದ್ರೆ ನೀವೇ ಒಮ್ಮೆ ಬಂದು ನೋಡಬಹುದು!

ತೀರಾ ಸೀರಿಯಸ್ ಆಗಿ ಸೀರಿಯಲ್ ಗಳನ್ನು ನೋಡೋ ಅಭ್ಯಾಸ ಇಲ್ಲವಾದ್ದರಿಂದ ನಾನು ಈ ಸಮರದಲ್ಲಿ ಭಾಗಿಯಲ್ಲ. ದಿನದ ಬಹುತೇಕ ಸಮಯ ಟಿವಿ ಆನ್ ಇದ್ದೇ ಇರುತ್ತೆ ನಮ್ ಪಿಜಿಯಲ್ಲಿ. ಅದರಲ್ಲೂ ಪ್ರೈಮ್ ಟೈಮ್ ನಲ್ಲಿ ರಿಮೋಟ್ ಗಾಗಿ ನಡೆಯೋ ರಾಜಕೀಯ ನೋಡ್ಬೇಕು! ಇಲ್ಲಿ 3 ಟೀಮು. ಒಂದು ಅತಿ ಪ್ರಭಾವಿ ತಂಡ, ಹೇಳ್ಕೊಳ್ಳೋಕೆ ಅಚ್ಚ ಕನ್ನಡಿಗರು! ಇವ್ರೆಲ್ಲಾ ಸ್ಟಾರ್ ಪ್ಲಸ್ ಫ್ಯಾನುಗಳು. 2ನೇದು ಆಂಧ್ರ ಮೂಲದ ಮೂರ್ನಾಲ್ಕು ಹುಡುಗೀರ ಟೀಮು. ಪ್ರೈಮ್ ಟೈಮ್ ಗಿಂತ ಮುಂಚಿನ ಸ್ಲಾಟ್ ಇವರಿಗೇ ಕೊಡ್ದಿದ್ರೆ ಮುಗೀತು ಕಥೆ! ಇನ್ನು 3ನೇ ಟೀಮಲ್ಲಿ ಇಬ್ರೇ. ನಾರ್ಥ್ ಇಂಡಿಯನ್ಸ್. ಬೇಕಾದಾಗ ಮಾತ್ರ ಹಲ್ಲು ಕಿಸಿದು ಮಾತಾಡಿಸೋ ಇವ್ರ ರಿಮೋಟ್ ಬೇಡಿಕೆಗೆ ಕನ್ನಡಿಗರ ಗ್ಯಾಂಗು ಸೊಪ್ಪು ಹಾಕದ್ದರಿಂದ ಮೊದಲ ಗ್ಯಾಂಗ್ ಸಾಕಪ್ಪಾ ಅಂತ ರಿಮೋಟ್ ಇಟ್ಮೇಲೇನೇ ಇವ್ರಿಗೆ ನೆಚ್ಚಿನ ಚಾನೆಲ್ ವೀಕ್ಷಿಸೋ ಸೌಭಾಗ್ಯ.

ಊಟದ ತಟ್ಟೆ ಖಾಲಿ ಆದ್ರೆ ಮತ್ತೆ ಅನ್ನ, ಸಾರು ಹಾಕ್ಕೊಳ್ಳೋಕೋ ಅಥವಾ ಊಟ ಮುಗಿಸಿ ಕೈತೊಳೆಯೋಕೆ ಹೋಗೋದಕ್ಕು ಮುಂಚೆ ತಮ್ಮ ಟೀಮಿನವರಲ್ಲೇ ಒಬ್ರ ಸುಪರ್ದಿಗೆ ರಿಮೋಟ್ ಕೊಟ್ಟೇ ಹೋಗೋದು. ಅದೇನಾದ್ರೂ ಬೇರೇಯವ್ರ ಕೈ ಸೇರಿತೋ ಮುಗೀತು ಕಥೆ, ರಿಮೋಟ್ ಬಿಟ್ಟು ಕೊಟ್ಟವರಿಗೆ ತಪರಾಕಿ ಶುರು!

ನಾನು ಮೊದಲು ಈ ಪಿಜಿಯಲ್ಲಿ ಇಷ್ಟೊಂದು ಆರಾಮವಾಗಿ ಟಿವಿ ನೋಡ್ಬಹುದಲ್ಲಾ ಸದ್ಯ. ಇನ್ಮೇಲೆ ನ್ಯೂಸ್ ಚಾನೆಲ್ ಗಳ ವೀಕ್ಷಣೆಗೆ ನೋ ಪ್ರಾಬ್ಲಮ್ ಅಂತ ಒಳಗೊಳಗೇ ಅದೆಷ್ಟು ಖುಷಿ ಪಟ್ಟಿದ್ದೆ?.. ! ಛೇ...ನನ್ನ ಆಸೆಗೆ ಕೆಲವೇ ದಿನಗಳಲ್ಲಿ ಒಂದು ಲೋಡು ಮಣ್ಣು ಹಾಕಿ ಸಮಾಧಿ ಮಾಡ್ಬಿಟ್ರು ಅಲ್ಲಿನ ಹುಡುಗೀರು. ಮೊದ ಮೊದಲು ಡಿಸ್ಕಷನ್ನು ಅದು ಇದು ಅಂತ ಹಾಕಿದ್ರೆ ಹೋಗ್ಲಿ ಪಾಪ ಅಂತ ನಂಜೊತೆ ಒಂದಿಬ್ರು ನೋಡ್ತಿದ್ರು. ನಮ್ಗೂ ನ್ಯೂಸ್ ಇಷ್ಟಾನಪ್ಪಾ ಅಂತ ರೈಲು ಹತ್ತಿಸಿದ್ರು. 10 ನಿಮಿಷ ಬಿಟ್ಟು ತಿರುಗಿ ನೋಡಿದ್ರೆ ಇಡೀ ಕೋಣೆ ಖಾಲಿ ನಾನೊಬ್ಳೇ ಟಿವಿ ಮುಂದೆ ಇರ್ತಿದ್ದೆ! ಯಾವಾಗ ನನ್ನ ನ್ಯೂಸ್, ಚರ್ಚೆಗಳ ವೀಕ್ಷಣೆ ದಿನಾ ಸಂಜೆ ಶುರುವಾಯ್ತೋ ಇವ್ರಿಗೆ ಪೀಕಲಾಟ! ನನಗೂ ಗೊತ್ತಾಯ್ತು. ಓಹ್! ಅವರಲ್ಲಿ ಒಬ್ರಿಗಾದ್ರೂ ಸುದ್ದಿ, ಮಾಹಿತಿ ತಿಳಿಯೋ ಕುತೂಹಲವಿರ್ಲೀ ಸಾಸಿವೆ ಕಾಳಷ್ಟು ಇಂಟ್ರೆಸ್ಟೂ ಇಲ್ಲ ಅಂತ ತಿಳಿಯೋಕ್ಕೆ ಜಾಸ್ತಿ ಟೈಮ್ ಹಿಡೀಲಿಲ್ಲ. ಆಮೇಲೆ ಹೇಳ್ತಾರೆ ಲೇ ನೀನು ಬಂದ್ಮೇಲೇನೇ ನಾವು ನ್ಯೂಸ್ ನೋಡ್ತಿರೋದು ಅಂತ. ಧನ್ಯೋಸ್ಮಿ.

ಇವ್ರಿಗೆಲ್ಲಾ ಮೆಗಾ ಸೀರಿಯಲ್ ಗಳನ್ನ ನೋಡೋ ಭೂತ ಅದ್ಯಾವ ಪರಿ ಮೆಟ್ಟಿಕೊಂಡಿದೆ ಅಂದ್ರೆ ಆ ದೇವ್ರೇ ಬಂದ್ರೂ ಆ ದೆವ್ವ ಬಿಡಿಸೋದು ಕಷ್ಟಾ ರೀ ಕಷ್ಟ ಕಷ್ಟ. ಈ ಸೀರಿಯಲ್ ಗಳನ್ನು ನೋಡೋವಾಗ ಯಾರಾದ್ರೂ ನಮ್ ಪಿಜಿ ಅಕ್ಷತಾನ ಕೂಗಿ ನೋಡಿ. ಬಿಟ್ಟ ಬಾಯಿ ಮುಚ್ಚೋದೂ ಇಲ್ಲ, ತೆರೆದ ಕಿವಿ ಕೇಳೋದೂ ಇಲ್ಲ. ನಾಲ್ಕೈದು ಸಲ ಕೂಗಿ ಸಾಕಾಗಿ ಎದುರಲ್ಲಿ ಹೋಗಿ ನಿಂತ್ಮೇಲೇನೆ ಅವಳು ರೆಸ್ಪಾನ್ಸ್ ಮಾಡೋದು. ಎಷ್ಟೋ ಸಲ ನಾನು ಆಫೀಸ್ ಮುಗಿಸಿಕೊಂಡು ವಾಪಸ್ಸಾದಾಗ ಊಟ ಶುರು ಮಾಡಿ, ಊಟ ಮುಗಿಸೋ ಹೊತ್ತಾದ್ರೂ ಅವಳಿಗೆ ನಾನು ಬಂದದ್ದೇ ಗೊತ್ತಾಗಿರೋಲ್ಲ. ಧಾರಾವಾಹಿ ನಡುವೆ ಬ್ರೇಕ್ ಬಂದಾಗಲೇ ಅವಳು ಕಣ್ಣು ಮಿಟುಕಿಸೋದು!

ಇನ್ನು ಗಾನ. ಈ ಕೂರ್ಗಿ ಹುಡುಗಿ ನಾನ್ ಹೇಳಿದ್ ಫಸ್ಟ್ ಟೀಮಿನ ಅಧಿನಾಯಕಿ ಅಂತಾನೇ ತಿಳ್ಕೊಳ್ಳಿ. ಅಕಸ್ಮಾತ್ ಆಂಧ್ರ ಹುಡುಗೀರ ಟೈಮ್ ಅಪ್ ಆದ್ಮೇಲೂ ರಿಮೋಟ್ ಕೈಗೆ ಸಿಗ್ದಿದ್ರೆ ಇವಳ ವರಸೆ ನೋಡ್ಬೇಕು! ತನ್ನ ನೆಚ್ಚಿನ ಸೀರಿಯಲ್ ‘ಬಿದಾಯಿ’ ಟೈಮ್ ಗೆ ಸರ್ಯಾಗಿ ಕರೆಂಟ್ ಕೈಕೊಟ್ರೆ ನೋಡ್ಬೇಕು ಇವ್ಳ ಪೀಕಲಾಟಾನಾ. ಊಟ ತಿಂಡೀಲಿ ಏರುಪೇರಾದ್ರೆ ಅಡ್ಜೆಸ್ಟ್ ಮಾಡ್ಕೊಂಡಾರು, ಆದ್ರೆ ಸೀರೀಯಲ್ ಮಿಸ್ ಮಾಡ್ಕೊಳ್ಳೋರಲ್ಲಾ ಇವ್ರು.

ಮೊನ್ನೆ ಕರೆಂಟ್ ಹೋಗಿದ್ದು ಒಂದೂವರೆ ಗಂಟೆ ಕಳೆದ್ರೂ ಬರ್ಲೇ ಇಲ್ಲ. ‘ಬಿದಾಯಿ’ ಮುಗಿಯೋಕೆ 3 ನಿಮಿಷ ಬಾಕಿ ಇರೋವಾಗ ಬಂತು. ಈ ಹುಡುಗೀರ ಚಡಪಡಿಕೆ ಅದ್ಯಾವ ರೇಂಜಿಗಿತ್ತು ಅಂದ್ರೆ ಬೆಸ್ಕಾಂನವರು ಪಾಪ ಪ್ರಜ್ಞೆಯಿಂದ ನರಳದಿದ್ದದ್ದೇ ದೊಡ್ಡ ವಿಷಯ! ಹಿಂದಿನ ರಾತ್ರಿ ಆದ ‘ಭಾರೀ ನಷ್ಟ‘ವನ್ನು ಸರಿದೂಗಿಸಲು ಗಾನ ಬೆಳಗ್ಗೆ ಆಫೀಸಿಗೆ 5ರೂ. ಕೊಟ್ಟು ಬಸ್ಸಲ್ಲಿ ಹೋಗಬೇಕಿದ್ದವಳು ಸೀರಿಯಲ್ ನ ಮರುಪ್ರಸಾರ ನೋಡಿ 50ರೂ. ದಂಡ ಪಾವತಿಸಿ ಆಟೋದಲ್ಲಿ ಹೋದಳು. ಸೀರಿಯಲ್ ನೋಡಿದ್ಮೇಲೆ ಅವಳ ಮುಖದಲ್ಲಿ ಅದೆಂಥಾ ‘ಧನ್ಯತಾ ಭಾವ’?...!

ಸಂಜೆ ಟೀ ಕುಡಿಯೋಕಂತ ಬಂದ್ರೆ ಆಗ್ಲೇ ರಿಮೋಟ್ ಅಕ್ಷತಾ ಕೈಲಿ ವಿರಾಜಮಾನವಾಗಿತ್ತು. ಅರೇ ಇದೇನು ಇಷ್ಟು ಬೇಗ ಬಂದಿರೋದು ಇವತ್ತು? ಅಂತ ಕೇಳಿದ್ರೆ ತಲೆ ನೋವು ಅಂತ ಬೇಗ ಬಂದೆ ಅಂದ್ಲು. ಅದೂ ಸುಳ್ಳು ಅಂತ ನಂಗೊತ್ತಿಲ್ವಾ? ರಾತ್ರಿ ಮತ್ತು ಬೆಳಗ್ಗೆ ನೋಡಲಾಗದೆ, ಮರುದಿನ 3-30ಕ್ಕೆ ರಿಪೀಟ್ ಆಗಲಿದ್ದ ಅದೇ ಸೀರಿಯಲ್ ನೋಡೋಕೆ ಧಾವಂತದಿಂದ ಬಂದಿದ್ದಳು ಅಕ್ಷತಾ. ಕೇಳಿ ನಾನು ಸುಸ್ತು.

ನಿಜವಾಗ್ಲೂ ನಮ್ ಹುಡ್ಗೀರು ಈ ಧಾರಾವಾಹಿಗಳನ್ನು ಅದೆಷ್ಟು ಸೀರಿಯಸ್ಸಾಗಿ ನೋಡ್ತಾರೆ ಅಂದ್ರೆ ಅಲ್ಲಿನ ಒಂದೊಂದು ಪಾತ್ರಗಳನ್ನೂ ತಮ್ಮ ಜೊತೆಯವರಂತೆ ಟ್ರೀಟ್ ಮಾಡ್ತಾರೆ. ಸೀರಿಯಲ್ ನ ಮುಖ್ಯಪಾತ್ರಧಾರಿಗೆ ಪದೇ ಪದೇ ಕಷ್ಟ ಕೊಡ್ತಿದ್ರೆ ಇವ್ರೂ ಹಿಡಿಶಾಪ ಹಾಕ್ತಾ ಕೂತಿರ್ತಾರೆ. ಕಥಾನಾಯಕಿಗೆ ಖುಷಿ ಆದ್ರೆ ಇವರೂ ಹಿರಿಹಿರಿ ಹಿಗ್ಗಿದ ಹೀರೇಕಾಯಿಯಂತಾಗಿರ್ತಾರೆ. ಅದೇನ್ ಜಾದೂನಪ್ಪಾ ಈ ಮಾಯಾಪೆಟ್ಟಿಗೆಯಲ್ಲಿ. ರಬ್ಬರ್ ಬ್ಯಾಂಡ್ ಥರ ಎಳೆದು ಟಿ.ಆರ್.ಪಿ ರೇಸಲ್ಲಿ ಮುನ್ನುಗ್ಗೋ ಇಂಥ ಸೀರಿಯಲ್ ಗಳು ಸುಮ್ನೇ ವರ್ಷಾನುಗಟ್ಟಲೆ ಪ್ರಸಾರವಾಗ್ತವಾ ಹೇಳಿ? ಎಲ್ಲಾ ಇಂತಹ ವೀಕ್ಷಕ ಪ್ರಿಯರ ಕೃಪೆಯಿಂದಲೇ ತಾನೇ?

Monday, February 22, 2010

ತಾತ ಮಾಡಿದ ಅವಾಂತರ...!

ಬಹಳ ದಿನಗಳ ಬಳಿಕ ಬ್ಲಾಗ್ ಅಪ್ಡೇಟ್ ಮಾಡೋ ಮನಸ್ಸಾಗಿದೆ!

ಕಳೆದ ತಿಂಗಳು ಊರಿಗೆ ಹೋಗಿದ್ದೆ. ನಾನು ಬರ್ತಿದ್ದೇನೆ ಅಂತ ನನ್ನ ಆಂಟಿಯ ಮಗ ಕಾರ್ತಿಕ್ ಕೂಡ ಬಂದಿದ್ದ. ಇನ್ನು ನನ್ನ ತಂಗಿ. ನಾವೆಲ್ಲಾ ಸೇರಿಬಿಟ್ರೆ ಮುಗೀತು ಕಥೆ! ಸರಿ ೩ ದಿನ ರಜೆ ಇತ್ತು. ಎಲ್ಲಾದ್ರೂ ಸುತ್ತಕ್ ಹೋಗೋಣ. ಏನಾದ್ರು ಪ್ಲಾನ್ ಮಾಡು ಅಂತ ಮೊದ್ಲೇ ಹೇಳಿದ್ರು. ನಾನು ಕೂಡ ಧರ್ಮಸ್ಥಳಕ್ಕೆ ಹೋಗ್ಬೇಕು ಅಂತ ತುಂಬಾ ದಿನಗಳಿಂದ ಅನ್ಕೊಂಡಿದ್ದೆ. ಸರಿ ಮನೆಯವರೆಲ್ಲ ಹೊರಡೋದು ಅಂತ ಆಯ್ತು. ಸಂಜೆನೇ ಅಪ್ಪ ಗಾಡಿ ಬುಕ್ ಮಾಡ್ಸಿ, ಬರೋಕೆ ಹೇಳಿದ್ರು. ಆದ್ರೆ ನಾವು ಹೊರಡೋ ದಿನ ಮಾಮನ ಮಗ ಬಂದ ಅವನನ್ನು ಸಖತ್ ಫೋರ್ಸ್ ಮಾಡಿ ಹೊರ್ಡ್ಸಿದ್ ಆಯ್ತು. ಅವ್ನು ಮನೇಗ್ ಬಂದಾಗ ನಮ್ ತಾತ ಕೂಡ ಇದ್ರು. ನೀವೂ ಬನ್ನಿ ತಾತ ಅಂತ ಗಂಟು ಬಿದ್ವಿ. ನಮ್ ತಾತನ್ನ ಒಪ್ಪಿಸೋವಷ್ಟ್ರಲ್ಲಿ ಸಾಕು ಸಾಕಾಯ್ತು. ಅವ್ರು ಯಾರಿಗೋ ಏನೋ ಮಾಲು ಕೊಡ್ಬೇಕು ಅಂತ ಗೊಣಗುಡಲು ಶುರುಮಾಡಿದ್ರು. ನಾಳೆ ತಲುಪಿಸಿದರೆ ಆಯ್ತು ಬನ್ನಿ ಅಂತ ಸಮಾಧಾನ ಮಾಡಿದ್ವಿ. ಮನೆಗೆ ಹಿರಿಯರು. ಅವ್ರೆದುರೆ ನಾವು ನಾವೇ ಹೊರಟರೆ ಚೆನ್ನಾಗಿರಲ್ಲ. ಬೇಸರ ಮಾಡ್ಕೋಬಹುದು ಅನ್ನೋದು ನಮ್ ಉದ್ದೇಶ ಆಗಿತ್ತು ಅಷ್ಟೇ.


ಸರಿ ಸಂಜೆ ೭ರ ವೇಳೆಗೆ ಮನೆ ಮುಂದೆ ಗಾಡಿ ರೆಡಿ ಇತ್ತು. ದಾರಿ ಮಧ್ಯೆ ನಮ್ಮ ಬಾಲಿವುಡ್ ಹಾಡುಗಳ ಮಸ್ತಿ ಜೋರಾಗೆ ಇತ್ತು ಅನ್ನಿ. ಸಕಲೇಶಪುರದಲ್ಲಿ ತಾತನ ಮಾಮೂಲಿ ಅಡ್ಡ ಇದೆ. ಅಲ್ಲಿ ಬಿಸಿ ಬಿಸಿ ಅಕ್ಕಿ ರೊಟ್ಟಿ ಬೆಣ್ಣೆ ಚಪ್ಪರಿಸಿ ಬರೋದು ಅವ್ರಿಗೆ ಇಷ್ಟ. ಅವತ್ತು ರಾತ್ರಿ ನಮಗೆಲ್ಲ ಅಲ್ಲೇ ಊಟ. ಸರಿಯಾಗಿ ಬ್ಯಾಟಿಂಗ್ ಮಾಡಿದ್ವಿ. ರಾತ್ರಿ ಧರ್ಮಸ್ಥಳ ತಲುಪಿ ರೆಸ್ಟ್ ಮಾಡಿದ್ಮೆಲೇನೆ ಸ್ವಲ್ಪ ನೆಮ್ದಿ ಅನ್ಸಿದ್ದು. ಸರಿ ಬೆಳಗ್ಗೆ ೬-೪೫ಕ್ಕೆ ಸರಿಯಾಗಿ ದೇವಸ್ಥಾನದಲ್ಲಿ ದರ್ಶನ ಮಾಡೋದು ನಮ್ ಪ್ಲಾನ್ ಆಗಿತ್ತು. ಆದ್ರೆ ನಮ್ ತಾತ ಎದ್ದು ನಿಧಾನವಾಗಿ ರೆಡಿ ಆದ್ರು. ಟೈಮು ೭-೧೫! :( ದೇವರ ದಯೆ, ಬೇಗ ದರ್ಶನ ಆಯ್ತು. ಆದ್ರೆ ಆ ನೂಕು ನುಗ್ಗಲಲ್ಲಿ ನಮಗೆಲ್ಲ ನಮ್ ತಾತನ ಮೇಲೆ ನಿಗಾ ಇಡೋದೇ ದೊಡ್ಡ ಕೆಲಸ ಆಗ್ಬಿಟ್ಟಿತ್ತು.


ಅಷ್ಟೊತ್ತಿಗಾಗಲೇ ಬಿಸಿಲು ತನ್ನ ಕಾವು ಹೆಚ್ಚು ಮಾಡಿತ್ತು. ರಸ್ತೆಯಲ್ಲಿ ಕಾಲಿಟ್ರೆ ಸುಡು ಸುಡುವ ಅನುಭವ. ಮಧ್ಯಾಹ್ನ ಊಟಕ್ಕೆ ಹೋದಾಗಲೂ ನಮ್ ತಾತ ಆ ಗುಂಪಿನಲ್ಲಿ ನಮಗಿಂತ ೨-೩ ಸಾಲು ಹಿಂದೇನೆ ಸೇರಿ ಕುಳಿತಿದ್ರು. ಕೈ ತೊಳೆದು ಹೊರಡುವಾಗ ಅವ್ರು ನಮ್ ಜೊತೇನೆ ಇರ್ಬೇಕು ಕಣ್ರೋ. ಹುಷಾರು ಅಂತ ನಾವೆಲ್ಲ ಮೊದ್ಲೇ ತಾತನ ಮೇಲೊಂದು ಕಣ್ಣಿಟ್ಟೇ ಪ್ರಸಾದ ಸ್ವೀಕಾರ ಮುಗಿಸಿದ್ವಿ. ಆದ್ರೆ ನಮ್ ತಾತ ಇದ್ದಾರಲ್ಲ? ಅವ್ರು ಈ ಜಗತ್ತಿನ ಅತಿ ಕಿರಿಕ್ ವ್ಯಕ್ತಿಗಳಲ್ಲಿ ಟಾಪ್ ೧೦ ನಲ್ಲಿ ನಿಸ್ಸಂಶಯವಾಗಿ ಸ್ಥಾನ ಗಿಟ್ಟಿಸೋ ಅರ್ಹತೆ ಇರುವಂತಹವರು! ಅಲ್ಲೂ ಹೊರಗೆ ಹೋಗಲು ಎಲ್ಲರಿಗೂ ಇರುವ ಮಾರ್ಗ ಬಿಟ್ಟು ಕಾವಲಿನವರ ಹತ್ತಿರ ಹೋಗಿ short cut root ನಲ್ಲೆ ಹೊರ ನಡೆದರು. ನಾನು ಓಡಿ ಹೋಗಿ ಅವ್ರು ನಮ್ ತಾತ ಸ್ವಲ್ಪ ನಂಗು ಬಿಡಿ ಇಲ್ದಿದ್ರೆ ಮಿಸ್ ಆಗ್ತಾರೆ ಅಂದ್ರೆ, ಆತ ಇಲ್ರಿ ಆಗಲ್ಲ ಅಂತ ಖಡಕ್ ಆಗಿ ಹೇಳ್ಬಿಟ್ಟ . ಸರಿ ಬೇಗ ಹೊರ ನಡೆದು ತಾತನ್ನ ಕರ್ಕೊಂಡು ನಮ್ vehicle ಇದ್ದ ಕಡೆ ಹೊರಟ್ವಿ.


ಮೊದಲೇ ಚಪ್ಪಲಿ ಧರಿಸದೆ ಕಾಲು ಸುಡುತ್ತಿದ್ವು. ನೆರಳಿರೋ ಕಡೆ ಹಾಗೆ ಎಲ್ರು ಹೊರಟ್ವಿ. ಹಿಂದೇನೆ ಬರ್ತಿದ್ದ ತಾತ ನಾಪತ್ತೆ! ಇನ್ನೇನು ಇಲ್ಲೇ ಎಲ್ಲೋ ಇರ್ತಾರೆ ಅಂತ ಹುಡುಕೋಕೆ ನನ್ನ cousin ಹೋದ. ಎಲ್ಲೂ ಸಿಗ್ಲಿಲ್ಲ
ಅಂತ ಬರೋದಾ?...! ಇದೇನ್ ಹೀಗ್ ಹೇಳ್ತಿದಾನೆ ಅಂತ ನಮಪ್ಪ ಹೊರಟ್ರು ಹುಡ್ಕೋಕೆ. ಅವ್ರ ಕಣ್ಣಿಗೂ ನಮ್ ತಾತ ಕಾಣಲೊಲ್ಲರು!

ಹೇಳಿ ಕೇಳಿ ನಮ್ ತಾತ ಯಾವ್ದಾದ್ರು functions ಅಂತ ಒಟ್ಟಾಗಿ ಹೋದ್ರೆ ಊಟ ಮುಗ್ಸಿ ಕಾಲಿಗೆ ಬುದ್ಧಿ ಹೇಳೋ ಆಸಾಮಿ! ಆದ್ರೆ ತಮ್ಮ commitments ಅಂತ ಏನಾದ್ರು ಇದ್ರೆ ಮರೆಯೋ ಜಾಯಮಾನವೇ ಅಲ್ಲ ಅವ್ರದ್ದು. ಇದು ಕೆಲವೇ ವರ್ಷಗಳ ಹಿಂದಿನ ಮಾತು. ಪಟಪಟ ನಡೆಯುತ್ತಿದ್ರೆ ಬಿಸಿರಕ್ತದ ನಾವೂ ಅವ್ರನ್ನ ನಡಿಗೆಯಲ್ಲಿ ಸೋಲಿಸಲು ಉಸ್ಸಪ್ಪಾ ಅಂತಿದ್ವಿ. ಯಾಕೋ ಅವರನ್ನು ಹುಡುಕುತ್ತಾ ನಮ್ಗೆ ಇವೆಲ್ಲಾ ನೆನಪಾಯ್ತು. ನನ್ನ ಆಂಟಿ ಮಗ ಕಾರ್ತಿಕ್ ಅಂತೂ ಲೇ ಅವ್ರು ಬರೋದಿಲ್ಲಾ ಅಂತ ಎಷ್ಟು ಹೇಳಿದ್ರು ನಾವೇ ಬಲವಂತ ಮಾಡಿ ಕರ್ಕೊಂಡು ಬಂದ್ವಿ. ಈಗ ಹೀಗಾಯ್ತಲ್ಲೇ? ಥೂ ಅಂತ ತಲೆ ಚೆಚ್ಕೊಂಡ್ ಕೂತ! ಇದೆಲ್ಲಾ ಸಾಲ್ದು ಅಂತ ನನ್ನ ಸಹೋದ್ಯೋಗಿ ದಾಮು ತಮ್ಮ ಬೇರೆ ನಮ್ ಸ್ಥಿತಿ ಕೇಳಿ ಓಡೋಡಿ ಬಂದ್ರು ಸಹಾಯ ಮಾಡೋಕೆ. ಅವ್ರು ದೇವಸ್ಥಾನದ ಬಳಿ ಕಳೆದು ಹೋದವ್ರ ಪತ್ತೆಗೆ announce ಮಾಡೋವಲ್ಲಿಗೆ ಹೋಗಿ ಅದನ್ನೂ ಮಾಡ್ಸಿದ್ರು. ಆದ್ರೆ ನಮ್ ತಾತ ಕೇಳಿಸ್ಕೊಂಡ್ರೆ ತಾನೇ ಬರೋಕೆ?

ಸರಿ ನಾವು 3-30ರ ತನಕ ನೋಡಿದ್ವಿ. ನಮ್ ತಾತ ಬಿಲ್ ಕುಲ್ ಸಿಗೋ ಹಾಗೇ ಕಾಣ್ಲಿಲ್ಲ. ಏನೇ ಆಗ್ಲಿ ನಾವು ಅಂಥ ತಾತನ ಮೊಮ್ಮಕ್ಕಳು. ಹುಟ್ಟಿದಾಗಿಂದ ಇಲ್ಲಿವರ್ಗೂ ಅವರ ಇಂಥ ಅದೆಷ್ಟೋ ವರಸೆಗಳನ್ನು ನೋಡಿದ್ದೀವಿ! ಯಾಕೋ ಅವ್ರು ಈ ಧರ್ಮಸ್ಥಳದಲ್ಲಿ ಇರೋದೇ ಡೌಟು ಅನ್ಸೋಕ್ ಶುರುವಾಯ್ತು. ನನ್ cousins ಅಂತೂ ತಾತನ್ನ ನೆನಪು ಮಾಡ್ಕೊಂಡು ಬಿದ್ದು ಬಿದ್ದು ನಗ್ತಾರೆ ಬೇರೆ. ಇನ್ನು ಹುಡ್ಕಿ ಪ್ರಯೋಜನ ಇಲ್ಲಾ ಅನ್ಸಿ ನಾವು ವಾಪಸ್ ಹೊರಟೇ ಬಿಟ್ವಿ. ಅದೂ ಒಲ್ಲದ ಮನಸಲ್ಲಿ. ನಮ್ ಅಪ್ಪನಿಗೆ ಬಂದಿದ್ದ ಕೋಪ ಅಷ್ಟಿಷ್ಟಲ್ಲ. ನಿಮ್ ತಾತ ಕೈಗೆ ಸಿಕ್ರೆ.... ಅಂತ ಗೊಣಗುತ್ತಿದ್ದದ್ದು ಕೇಳಿಸಿದ್ರೂ ತೆಪ್ಪಗೆ ಕೂತಿದ್ವಿ. ಊರಿಗ್ ಹೋದ್ಮೇಲೆ ಅಲ್ಲೂ ನಮ್ ತಾತ ಬಂದಿಲ್ಲ ಅಂದ್ರೆ ಏನ್ ಉತ್ತರ ಕೊಡೋದು ಅಂತ ನಮ್ ಚಿಂತೆ. ಮಾರ್ಗ ಮಧ್ಯೆ ಸುರ್ಯ ದೇವಾಲಯಕ್ಕೊಂದು ವಿಸಿಟ್ ಕೊಟ್ವಿ. ಆದ್ರೆ ಯಾಕೋ ಮನಸ್ಸಿಗೆ ನೆಮ್ಮದಿ ಅನ್ನಿಸದು.

ಅಂತೂ ಸಂಜೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ದರ್ಶನ ಮುಗಿಸಿ ದೇವಾಲಯದ ಆವರಣದಲ್ಲಿ ಕುಳಿತ್ವಿ. ಯಾಕೋ ಬೇಜಾರು, ಹೀಗಾಯ್ತಲ್ಲಾ ಅಂತ. ಆದ್ರೆ ನನ್ ಕಸಿನ್ಸು ಲೇ ತಲೆ ಕೆಡಿಸ್ಕೋಬೇಡ ಕಣೇ. ನಮ್ ತಾತ ನಮ್ಗಿಂತಾ ಮುಂಚೇನೇ ಮನೆ ಸೇರೋ ಗಿರಾಕಿ. ಕೈಲಿ ದುಡ್ಡಿತ್ತು. ಯಾರಿಗೋ ಅದೇನೋ ತಲುಪಿಸ್ಬೇಕು ಅಂತ ಹಾರಾಡ್ತಿರ್ಲಿಲ್ವಾ? ಎಲ್ಲಿ ತನ್ ವ್ಯವಹಾರ ಕೈ ತಪ್ಪುತ್ತೋ ಅಂತ ಬೇಗ ಹೇಳ್ದೆ ಕೇಳ್ದೆ ಓಡೋಗಿದೆ ಅಷ್ಟೇ ಅಂತ ನಗೋಕೆ ಶುರು ಮಾಡಿ ರಿಲ್ಯಾಕ್ಸ್ ಮಾಡ್ತಿದ್ರು. ಸರಿ ಸಂಜೆ 5-30 ವೇಳೆಗೆ ಸುಮ್ನೆ ಮನೇಗೊಂದು ಕಾಲ್ ಮಾಡು ಅಂತ ಮಾಮನ ಮಗನಿಗೆ ಹೇಳ್ದೆ. ಅವ್ನು ಡೌಟಲ್ಲೇ ಫೋನ್ ಮಾಡಿ ಅವರಮ್ಮನ್ನ ವಿಚಾರಿಸಿದ್ರೆ ನಿಮ್ ತಾತ ಅರ್ಧ ಗಂಟೆ ಮೊದಲೇ ಬಂದು ಆರಾಮಾಗಿ ನಿದ್ರೆ ಮಾಡ್ತಿದ್ದಾರೆ ಅಂತ ಹೇಳಿದ್ರು ಅತ್ತೆ!

ಇದು ತಾನೇ ವರಸೆ? ನಮ್ ಸಂಕಟ ನಮ್ಗೆ, ನಮ್ ತಾತ ಕೊಟ್ಟ ತಾಪತ್ರಯಕ್ಕೆ ಬಂದಿದ್ದ ಕೋಪವೆಲ್ಲ ಮಂಗಮಾಯ! ಆದ್ರೂ ಊರಿಗ್ ಹೋದ್ಮೇಲೆ ನಮ್ದೇ ತಪ್ಪು ಅಂತ ವಾದಿಸೋ ನಮ್ ತಾತನ ಮತ್ತೊಂದು ಮುಖ ನೆನಪಿಸಿಕೊಂಡು ನಾವೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬಿಟ್ವಿ. ಮತ್ತಿನ್ನೆಲ್ಲೂ ಅವ್ರನ್ನ ಕರ್ಕೊಂಡು ಹೋಗೋ ಉಸಾಬರಿಗೆ ಕೈ ಹಾಕೋದು ಬೇಡ ಅಂತ ಸುಬ್ರಹ್ಮಣ್ಯದಲ್ಲಿ ಆಣೆ ಮಾಡಿಬಿಟ್ವಿ.

Monday, November 9, 2009

ಜೆ.ಕೆ.ರೋಲಿಂಗ್ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

Sunday, October 18, 2009

ಹ್ಯಾರಿ ಪಾಟರ್ ಜಾದೂ ಜಗತ್ತಿಗೆ ಸ್ವಾಗತ...

ಮನುಷ್ಯ ಕಲ್ಪನಾಜೀವಿ. ಅವನ ಕಲ್ಪನೆಗಳಿಗೆ ಇತಿಮಿತಿಯೇ ಇಲ್ಲ. ಕಲ್ಪಿಸಿಕೊಂಡಷ್ಟೂ ಹೊಸತನ್ನು ಸೃಷ್ಟಿಸುತ್ತದೆ. ಯಾಕಂದ್ರೆ ಕಲ್ಪನೆ ಎಂಬುದೇ ಹಾಗೆ. ಇಲ್ಲಿ ಸುಂದರವಾದ ಕನಸಿನ ಲೋಕ, ಮಾಯಾ ಕಿನ್ನರಿ, ಊಹೆಗೂ ನಿಲುಕದಂತಹ ವಿಚಿತ್ರ ಮಾದರಿಯ ಜೀವಿಗಳು, ಹಾರುವ, ತೇಲುವ ಗಗನ ನೌಕೆಗಳು, ಮ್ಯಾಜಿಕ್ ಮಹಾಪೂರಗಳಿಂದ ಹಿಡಿದು ಭಯಾನಕ ಸನ್ನಿವೇಶಗಳು, ವಿಷಕಾರುವ ಹಾವುಗಳು, ಕಣ್ಣ ಮುಂದೆ ಕಾಡುವ ರಕ್ಕಸನ ಪ್ರಾಣವನ್ನು ಹಿಡಿದು ಮತ್ತೆಲ್ಲೋ ಅವಿತು ಕೂತ ಹಕ್ಕಿ ಹೀಗೆ ಹರಿಯುವ ಬಗೆಬಗೆಯ ಕಲ್ಪನಾ ಲಹರಿಗೆ ಕೊನೆಮೊದಲಿಲ್ಲ. ಇಂತಹ ಬಹಳಷ್ಟು ಕಥೆಗಳನ್ನು ಎಲ್ಲರೂ ಓದಿರ್ತೀವಿ, ಕೇಳಿರ್ತೀವಿ. ಇವುಗಳನ್ನು ಓದಿದಷ್ಟು ಸರಾಗವಾಗಿ ದೃಶ್ಯರೂಪದಲ್ಲಿ ನಿರೂಪಿಸಿ ಗೆಲ್ಲುವುದು ಸುಲಭವಲ್ಲ. ಆದ್ರೆ ಅದನ್ನು ಕಣ್ಣಿಗೆ ಕಟ್ಟುವಂತೆ ಅಕ್ಷರಗಳಲ್ಲಿ ಸೃಷ್ಟಿಸಿದ್ದನ್ನು ದೃಶ್ಯೀಕರಿಸಿ ಗೆದ್ದು ಮನೆಮಾತಾದ ಸಿನಿಮಾಗಳಲ್ಲಿ ಹ್ಯಾರಿ ಪಾಟರ್ ಗೆ ಅಗ್ರಸ್ಥಾನ. ಮೂಲತಃ ಪುಸ್ತಕ ರೂಪದಲ್ಲಿದ್ದ ಹ್ಯಾರಿ ಪಾಟರ್ ಕಾದಂಬರಿಯನ್ನು, ಅದು ಗಳಿಸಿದ ಜನಪ್ರಿಯತೆಯಿಂದ ದೃಶ್ಯರೂಪಕ್ಕೆ ತರಲಾಯಿತು. ನಿಜ ಹೇಳಬೇಕಂದ್ರೆ ಹ್ಯಾರಿ ಪಾಟರ್ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನ ಪಾತ್ರ.


ಹ್ಯಾರಿ ಪಾಟರ್ ಮೇಲೆ ಅಭಿಮಾನಿಗಳ ಪ್ರೀತಿಯನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟವೇ. ನನಗೂ ಹ್ಯಾರಿ ಪಾಟರ್ ಬಗ್ಗೆ ತಿಳಿಯುವ ಕುತೂಹಲ ಉಂಟಾಗಿದ್ದು ತೀರಾ ಇತ್ತೀಚೆಗೆ. ಇದಕ್ಕೂ ಮುನ್ನ ಸುದ್ದಿಗಾಗಿ ಸ್ಕ್ರಿಪ್ಟ್ ಬರೆಯಬೇಕೆಂಬ ಕಾರಣಕ್ಕಾಗಿ ಅದೊಂದು ಹಾಲಿವುಡ್ ಮೂವಿ ಅಂತ ಅಲ್ಪಸ್ವಲ್ಪ ತಿಳಿದುಕೊಂಡಿದ್ದೆ. ಆದ್ರೆ ಹ್ಯಾರಿ ಪಾಟರ್ ಎಂಬ ಜಗದ್ವಿಖ್ಯಾತ ಮಾಯಾಲೋಕದ ಬಗ್ಗೆ ನನ್ನ ಜ್ಞಾನ ಅತ್ಯಲ್ಪ ಅಂತ ಗೊತ್ತಾದದ್ದೇ ಆ ಸಿನಿಮಾ ನೋಡಿದ ಮೇಲೆ, ಪ್ರತಿಯೊಂದು ಪಾತ್ರವನ್ನು ಅದರ ಹಿನ್ನೆಲೆಯನ್ನು ತಿಳಿದ ಮೇಲೆ. ಅರೇ ಎರಡೂವರೆ ಗಂಟೆಯ ಸಿನಿಮಾ ವಿಷಯ, ಜ್ಞಾನದವರೆಗೂ ಬಂತಲ್ಲ! ಅದೇನು ಅಷ್ಟೊಂದು ಪ್ರಾಮುಖ್ಯತೆ ಅದಕ್ಕೆ ಅಂತ ನೀವು ಹುಬ್ಬೇರಿಸಬಹುದು. ಆದ್ರೆ ಈ ಹ್ಯಾರಿ ಪಾಟರ್ ಅನ್ನೋ ಕಾದಂಬರಿ/ಸಿನಿಮಾವನ್ನು, ಓದಿದ/ನೋಡಿದ ಮೇಲೆ ನಿಮಗೇ ತಿಳಿಯುತ್ತೆ ಅದೆಂತಹ ಮಾಯಾಲೋಕ ಅಂತ. ಯಾಕಂದ್ರೆ ಇದು ಬರೀ ಎಂಡೂವರೆ ಗಂಟೆ ನೋಡಿ ಎದ್ದು ಹೋಗುವ ಸಿನಿಮಾ ರೀತಿ ಅಲ್ಲ. ನಿಮ್ಮನ್ನು ತನ್ನೊಂದಿಗೇ ಆ ಲೋಕದೊಳಕ್ಕೆ ವಿಹರಿಸುವಂತೆ ಮಾಡುವ ಯಕ್ಷಲೋಕ. ಅಲ್ಲೊಮ್ಮೆ ಹೊಕ್ಕರೆ ಆ ಮಜವೇ ಬೇರೆ ಬಿಡಿ!

ಹ್ಯಾರಿ ಪಾಟರ್ ಬಗ್ಗೆ ಅಂತರ್ಜಾಲದಲ್ಲಿ ಒಮ್ಮೆ ಜಾಲಾಡಿದರೆ ಸುಸ್ತಾಗುವಷ್ಟು ಮಾಹಿತಿ ಮಹಾಪೂರವೇ ನಿಮ್ಮ ಮುಂದೆ ತಡವಿ ಬೀಳುತ್ತವೆ. ಆದ್ರೆ ಎಲ್ಲಾ ಇಂಗ್ಲಿಷ್ ನಲ್ಲೇ ಇರೋದ್ರಿಂದ ಕನ್ನಡದಲ್ಲಿ ತಿಳಿಯಲಿಚ್ಛಿಸುವವರಿಗೆ ಸ್ವಲ್ಪ ನಿರಾಶೆ ಖಂಡಿತ, ಆ ನಿರಾಶೆ ನನಗೆ ಸಾಕಷ್ಟು ಸಲ ಆಗಿದ್ದಕ್ಕೇ ಹೀಗೆ ಬರೆಯಲು ಮನಸ್ಸಾಯಿತು. ನಿಜವಾಗಿ ಹ್ಯಾರಿ ಪಾಟರ್ ಬಗ್ಗೆ ಏನಾದರೂ ಬರೆಯಬೇಕೆಂದು ತುಂಬಾ ಅನ್ನಿಸಿದ್ದು ಇದುವರೆಗೂ ಕನ್ನಡದಲ್ಲಿ ಹೆಚ್ಚಿನವರ್ಯಾರು ಆ ಪ್ರಯತ್ನ ಮಾಡದಿದ್ದದ್ದು. ಬರೆಯೋಕೆ ಇನ್ನೂ ಅತಿಮುಖ್ಯ ಸಂಗತಿಗಳು ಜಗತ್ತಿನಲ್ಲಿ ಸಾಕಷ್ಟಿವೆಯಲ್ಲ ಅನ್ನಿಸಿದ್ರೂ, ಹ್ಯಾರಿ ಪಾಟರ್ ಬಗ್ಗೆಯೂ ತಿಳಿಸುವ ಹಂಬಲ ನನ್ನ ಬ್ಲಾಗ್ ನಲ್ಲಿ ಈಡೇರುತ್ತಿದೆ ಅನ್ನೋ ಖುಷಿ ನನಗುಂಟು. ಈ ಮೂಲಕ ಹ್ಯಾರಿ ಮತ್ತು ಗೆಳೆಯರ ಮಾಯಾಪ್ರಪಂಚವನ್ನು ನಾನು ಅಕ್ಷರ ರೂಪದಲ್ಲಿ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.

ಈ ಹ್ಯಾರಿ ಪಾಟರ್ ಹುಟ್ಟು ಒಂದು ಕುತೂಹಲಕಾರಿ ಕಥೆ. ನೇರವಾಗಿ ಹ್ಯಾರಿ ಬಗ್ಗೆ ಹೇಳುವ ಮುನ್ನ ಲೇಖಕಿಯ ಬಗ್ಗೆ ಮೊದಲು ತಿಳಿಸುತ್ತೇನೆ. ಬ್ರಿಟನ್ ಮೂಲದ ಜೆ.ಕೆ.ರೋಲಿಂಗ್ ಕನಸಿನ ಕೂಸು ಹ್ಯಾರಿ ಪಾಟರ್. ಜೋನ್ ಜೋ ಮುರ್ರೀ ಇವರ ಪೂರ್ಣ ಹೆಸರು. ಆದ್ರೆ ಎಲ್ರಿಗೂ ಜೆ.ಕೆ.ರೋಲಿಂಗ್ ಅಂತಲೇ ಪರಿಚಿತರು. ರೋಲಿಂಗ್ ಜನಿಸಿದ್ದು 1965ರ ಜುಲೈ 31ರಂದು ಇಂಗ್ಲೆಂಡ್ ನ ಗ್ಲೌಸ್ಟರ್ ಶೈರ್ ಬಳಿಯ ಯೇಟ್ ನಲ್ಲಿ. ಪೀಟರ್ ಜೇಮ್ಸ್ ರೋಲಿಂಗ್ ಮತ್ತು ಆನಿ ರೋಲಿಂಗ್ ಇವರ ತಂದೆ ತಾಯಿ. ಡ್ಯಾನಿ ಎಂಬ ಓರ್ವ ತಂಗಿಯಿದ್ದು ರೋಲಿಂಗ್ ಅವರ ಪ್ರೈಮರಿ ಶಿಕ್ಷಣ ಸೆಂಟ್ ಮೈಕೆಲ್ಸ್ ಪ್ರೈಮರಿ ಶಾಲೆಯಲ್ಲಾಯ್ತು. ಪ್ರೌಢಶಿಕ್ಷಣ ವೀಡೀನ್ ಸ್ಕೂಲ್ ಆಂಡ್ ಕಾಲೇಜ್ ನಲ್ಲಾಯಿತು. ಎಕ್ಸೆಟರ್ ಯೂನಿವರ್ಸಿಟಿಯಲ್ಲಿ ಫ್ರೆಂಚ್ ಮತ್ತು ಸಾಹಿತ್ಯದಲ್ಲಿ ಬಿ.ಎ ಮಾಡಿದರು.



Friday, August 28, 2009

ಮತ್ತೆ ಬಂದ ಗಣೇಶ ...

“ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ, ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ...ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ, ಮಂಗಳವಾ ತರುತಲಿರುವ ಶುಭದ ಚತುರ್ಥಿ...” ಹೌದು, ಮತ್ತೆ ಗಣೇಶ ಚತುರ್ಥಿ ಬಂದಿದೆ. ಗಣೇಶನ ಹಬ್ಬ ಅಂದ್ರೆ ಎಲ್ಲರಿಗೂ ಖುಷಿ ಕೊಡುವ ಹಬ್ಬ. ಹಿರಿಯರಿಂದ ಹಿಡಿದು ಮನೆಯ ಪುಟ್ಟ ಪುಟ್ಟ ಮಕ್ಕಳೂ ಗಣೇಶನ ಹಬ್ಬ ಬಂತೂಂದ್ರೆ ಸಂಭ್ರಮಿಸುತ್ತಾರೆ. ತಮ್ಮ ಮನೆಗೆ ಗಣಪನ ಮೂರ್ತಿ ತರುವುದೇ ಅವರಿಗೆ ಅತಿ ಸಂತಸದ ಸಂಗತಿ. Even ನಂಗೂ ಗಣೇಶನ ಹಬ್ಬ ಅಂದ್ರೆ ತುಂಬಾ ಇಷ್ಟ. ಈಸಲ ಅಂತೂ ನಾನು ಮನೆಯನ್ನು ತುಂಬಾ ಮಿಸ್ ಮಾಡ್ಕೊತಿದೀನಿ. ಬೇರೆ ಹಬ್ಬಗಳಿಗೆ ರಜೆ ಸಿಗದಿದ್ರೆ ಸ್ವಲ್ಪ ಬೇಜಾರಾದ್ರೂ ಸುಮ್ಮನಾಗ್ತಿದ್ದೆ. ಆದ್ರೆ ಈ ಸಲ ಗೌರಿ-ಗಣೇಶ ಹಬ್ಬಕ್ಕೆ ಮನೆಗೆ ಹೋಗೋ ಅವಕಾಶ ಸಿಗದಿದ್ದಕ್ಕೆ ತುಂಬಾ ಫೀಲ್ ಆಗ್ತಿದೆ. ಹಬ್ಬದ ದಿನದಂದು ಬಿಕೋ ಅನ್ನೋ ಆಫೀಸಿನ ವಾತಾವರಣದಲ್ಲಿ ಕೆಲಸ ಮಾಡೋ ಸಂಕಟ ನನಗೆ ಚೆನ್ನಾಗಿ ಗೊತ್ತು.

ಇತರೆ ಎಲ್ಲಾ ಹಬ್ಬಗಳಿಗೂ ಹೋಲಿಸಿದರೆ ಗಣೇಶನ ಹಬ್ಬದ ಖದರ್ರೇ ಬೇರೆ ಬಿಡಿ. ಊರಲ್ಲಂತೂ ಗಣೇಶ ಚತುರ್ಥಿ ಬರಲು ಇನ್ನೂ 15 ದಿನಗಳಿವೆ ಎಂಬಂತೇ ನಮ್ಮ ಏರಿಯಾ ಹುಡುಗರ ತಂಡಗಳು ಸಿದ್ಧತೆಯಲ್ಲಿ ತೊಡಗುತ್ತಿದ್ದವು. ಮನೆ ಮನೆಗಳಿಗೂ ಹೋಗಿ ಗಣೇಶನನ್ನು ಕೂರಿಸಲು ಚಂದಾ ಎತ್ತುತ್ತಿದ್ದರು. ಅಲ್ಲೂ ಪೈಪೋಟಿ. ಯಾಕಂದ್ರೆ ಏರಿಯಾಗೊಂದೇ ಗಣಪತಿ ಆದ್ರೆ ಓಕೆ, ಇಲ್ಲಿ ಹಾಗಲ್ಲವಲ್ಲ. ಏರಿಯಾಗೆ 2ರಿಂದ 3 ಕಡೆ ಗಣೇಶನನ್ನು ಕೂರಿಸ್ತಿದ್ರು. ಎಲ್ಲರಿಗೂ ಚಂದಾ ಕೊಟ್ಟು ಕೊಟ್ಟು ಸಾಕಾಗಿ ಎಷ್ಟೋ ಮನೆಗಳಲ್ಲಿ ಇವರ ಗ್ಯಾಂಗುಗಳು ಬರ್ತಿವೆ ಅಂದ್ರೆ ಸಾಕು ಮಕ್ಕಳ ಹತ್ರ ಮನೇಲಿ ಯಾರೂ ದೊಡ್ಡೋರು ಇಲ್ಲ ಅಂತ ಹೇಳಿಸೋ ಪರಿಪಾಠ ಶುರುವಾಗಿಬಿಡ್ತು! ನಮ್ಮ ಮನೆಯಲ್ಲೂ ಅಪ್ಪ ಇಲ್ಲದ ಸಮಯದಲ್ಲಿ ಇದೇ ಡೈಲಾಗು! ಆದ್ರೆ ನಮಗೆ ಹೀಗೆಲ್ಲಾ ಹೇಳೋಕೋ ಮುಜುಗರ. ಅದಕ್ಕೇ ಅಪ್ಪನಿಗೆ ದಬಾಯಿಸಿ ಮಾಮೂಲಾಗಿ ಚಂದಾ ಕೇಳಲು ಬರ್ತಿದ್ದ ಗುಂಪಿನವರಿಗೆ ಬೆಳಗ್ಗೆಯೇ ವಸೂಲಿ ಮಾಡಿಟ್ಟುಕೊಂಡು ಸಂಜೆ ಬಂದಾಗ ಅವರಿಗೆ ಕೊಡ್ತಿದ್ದೆವು. ಹೀಗೆ ಶುರುವಾಗ್ತಿತ್ತು ಗಣೇಶನ ಹಬ್ಬದ ಅಬ್ಬರ. ನಮಗಂತೂ ಗೌರಿ ಹಬ್ಬದಂದು ಹೊಸ ಬಟ್ಟೆ, ಬಳೆ ತೊಟ್ಟು ಸಂಭ್ರಮಿಸೋದೇ ಖುಷಿ. ನಾನಂತೂ ಅವತ್ತು ಬೆಳ್ಳಂಬೆಳಗೆ ಅಮ್ಮನ ಕೂಗಿಗೆ ಎದ್ದರೆ, ಸ್ನಾನ ಮಾಡಿ ಮಡಿಯುಟ್ಟು ಮಾಡಬೇಕಿದ್ದ ಮೊದಲ ಕಾರ್ಯ ಮನೆ ಮುಂದೆ ರಂಗುರಂಗಿನ ರಂಗೋಲಿ ಬಿಡಿಸೋದು. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಹಬ್ಬದ ದಿನ ನಾನು ಬಿಡಿಸುತ್ತಿದ್ದ ರಂಗೋಲಿ ಯಾವುದು ಹೇಗೆ ಕಲರ್ ತುಂಬಿಸಿದ್ದೇನೆ ಅಂತ ನೋಡೋಕೆ ಬೆಳಗ್ಗೆ 8ರ ಹೊತ್ತಿಗೆ ನನ್ನ ಗೆಳೆಯರು ಮನೆ ಮುಂದೆ ಜಮಾಯಿಸುತ್ತಿದ್ರು!

ಇನ್ನು ಮನೆಯೊಳಗಿನ ಕೆಲಸದಲ್ಲಿ ಪೂಜೆ ಪುನಸ್ಕಾರವೆಲ್ಲಾ ಅಮ್ಮನ ವಿಭಾಗ. ಅಪ್ಪ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿದ್ರೆ, ಅಡುಗೆ ಮನೆಯಲ್ಲಿ ಹೂರಣ ರುಬ್ಬಿ ಹೋಳಿಗೆ ಬೇಯಿಸುವುದು ನನ್ನ ಪಾಲು. ನನ್ನ ತಂಗಿಯೂ ಬೇಯಿಸುವುದು ಕಲಿಯಲಿ ಅಂತ ಕೂರಿಸಿದ್ರೆ ಅವಳು ಕೈಯಿಟ್ರೆ ಹೋಳಿಗೆಗಳು ಹರಿದು ಚಿಂದಿ ಚಿಂದಿ ಆಗ್ತಿದ್ವು! ಮತ್ತೆ ಆ ಕೆಲಸ ನನ್ನ ತಲೆಗೇ ಬರ್ತಿತ್ತು. ಅಬ್ಬಾ ಹೋಳಿಗೆ, ಕಾಯಿಹಾಲು, ನಿಂಬೆಹಣ್ಣಿನ ಚಿತ್ರಾನ್ನ, ಪಲ್ಯ, ಹೋಳಿಗೆ ಸಾರು, ನೆನಪಾದ್ರೆ ಬಾಯಲ್ಲಿ ನೀರೂರುತ್ತೆ, ಜೊತೆಗೆ ಕಣ್ಣಲ್ಲೂ ಕೂಡ. ಯಾಕಂದ್ರೆ ಹಬ್ಬದ ದಿನ ನನ್ನ ಪಾಲಿಗೆ ಆಫೀಸೇ ಗತಿ. ಗಣೇಶನ ಹಬ್ಬದಂದು ಚಿಕ್ಕವರಿದ್ದಾಗ ಬಟ್ಟಲಲ್ಲಿ ಅಕ್ಷತೆ ತೆಗೆದುಕೊಂಡು ಮನೆ ಮನೆಗಳಿಗೂ ಹೋಗಿ ‘ನಿಮ್ ಮನೇಲಿ ಗಣಪತಿ ಇಟ್ಟಿದ್ದೀರಾ? ‘ ಅಂತ ಕೇಳಿ ಕೇಳಿ ಅಕ್ಷತೆ ಹಾಕಿ ಬರ್ತಿದ್ವಿ. ಆದ್ರೆ ಮನೆ ಬದಲಾಯಿಸಿ ಹೊಸ ಏರಿಯಾಗೆ ಬಂದ್ಮೇಲೆ ಈ ಕೆಲಸಕ್ಕೆ ಪೂರ್ಣ ವಿರಾಮ ಬಿತ್ತು. ಗಣೇಶ ಚತುರ್ಥಿಯಂದು ನಾನು ನಮ್ಮ ಮನೆ ಮುಂದೆ ಪ್ರತಿವರ್ಷವೂ ಭಿನ್ನ ಭಿನ್ನ ಮಾದರಿಯ ಗಜಮುಖನನ್ನು ರಂಗೋಲಿಯಲ್ಲಿ ಬಿಡಿಸುತ್ತಿದ್ದುದು ನೆನಪು. ಗಣೇಶನ ಹೆಸರಲ್ಲಿ ರುಚಿಯಾದ ಕಾಯಿ ಕಡುಬು, ಪಾಯಸ ಚಪ್ಪರಿಸದ್ದಂತೂ ಮರೆಯೋ ಹಾಗೇ ಇಲ್ಲ. ಇನ್ನು ನಾವಂತೂ ಕಾತರದಿಂದ ಕಾಯ್ತಿದ್ದದ್ದು ಸಂಜೆಗೆ. ಸಂಜೆ ನಮ್ಮೆಲ್ಲರ ಮನೆಗಳಿಗೆ ಬಂದು ಚಂದಾ ಕೇಳ್ತಿದ್ದ ಹುಡುಗರೆಲ್ಲಾ ಸಖತ್ ಗ್ರಾಂಡ್ ಆಗಿ ಗಣೇಶನನ್ನು ಕೂರಿಸಿ 3 ದಿನ ವೈಭವಯುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಮಾರುತಿ ಯುವಕರ ಸಂಘ ಅಂದ್ರೆ ನಮ್ಮ ಏರಿಯಾದಲ್ಲಿ ಫೇಮಸ್ಸು. ಚಂದಾ ಪಡೆದು ಎಲ್ಲಿ ಗಣೇಶನನ್ನು ಕೂರಿಸ್ತಿದ್ದೀವಿ ಅಂತ ಹೇಳದೇ ಮಾಯವಾಗ್ತಿದ್ದ ಹುಡುಗರಂತಲ್ಲ ಅವ್ರೆಲ್ಲಾ. ಹಿರಿಯರು ಕಿರಿಯರಿಗೆಲ್ಲಾ ವಿಭಿನ್ನವಾದ ಸ್ಪರ್ಧೆಗಳನ್ನು ಆಯೋಜಿಸಿ ಮೆಚ್ಚುಗೆ ಪಡೆಯುತ್ತಿದ್ರು. ಒಂದಿನ ಮುಂಚೆಯೇ ಬಂದು ಪಾಂಪ್ಲೆಟ್ ಗಳನ್ನು ಹಂಚಿ ಹೋಗ್ತಿದ್ರು. ನಾವು ಯಾವ್ಯಾವ ಕಾಂಪಿಟೇಷನ್ ಗಳಲ್ಲಿ ಭಾಗವಹಿಸೋದು ಅಂತ ಸ್ಕೆಚ್ ಹಾಕ್ತಾ ಕೂರ್ತಿದ್ವಿ. ಪ್ರತಿ ವರ್ಷ ರಂಗೋಲಿ ಕಾಂಪಿಟೇಶನ್ ನಲ್ಲಿ ನನಗೊಂದು ಬಹುಮಾನ ಗ್ಯಾರಂಟಿ. ಇನ್ನು ಹಾಡು, ನೃತ್ಯ, pick n speak ಅಂತೆಲ್ಲಾ ಬೇರೆ ಬೇರೆ ವಿಭಾಗಗಳಲ್ಲೂ ಬಹುಮಾನಗಳು ಬರ್ತಿದ್ವು. ಮೊದಲ ವರ್ಷವಂತೂ ನನ್ನದೂ ತಂಗಿಯದ್ದೂ ಸೇರಿ 8 ಬಹುಮಾನಗಳು ಬಂದಿದ್ದವು. ನನ್ನದೇ 5 ಇದ್ದವು. ಎಲ್ಲರದ್ದೂ ಒಂದೇ ಕಂಪ್ಲೇಂಟು. ನಾವೂ ಚಂದಾ ಕೊಟ್ಟಿರ್ಲಿಲ್ವಾ ನಮ್ಮ ಮಕ್ಕಳಿಗೂ ಪ್ರೈಜ್ ಕೊಡಿ ಅಂತ. ಕಡೆಗೆ ಬರುವ ವರ್ಷದಿಂದ ಒಬ್ಬರಿಗೆ ಮ್ಯಾಕ್ಸಿಮಮ್ ಮೂರೇ ಬಹುಮಾನಗಳು ಅಂತ ಕಾನೂನು ಜಾರಿಯಾಯ್ತು!

ಗಣೇಶನನ್ನು ಬಿಡುವ ಕೊನೆಯ ದಿನವಂತೂ ಇಡೀ ಏರಿಯಾದಲ್ಲಿ ಮೆರವಣಿಗೆ ಮಾಡ್ತಿದ್ದದನ್ನು ನೋಡೋಕೆ ಕಾದು ನಿಲ್ತಿದ್ವಿ. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಗಣೇಶನನ್ನು ಹೂವುಗಳಿಂದ ಅಲಂಕರಿಸಿ ಜಯಘೋಷಗಳೊಂದಿಗೆ ಮೆರವಣಿಗೆ ಮಾಡ್ತಿದ್ರು. ನಾವು ಶಾಲೆಗೆ ಹೋಗಿ ನಿಮ್ ಏರಿಯಾದಲ್ಲಿ ಎಷ್ಟ್ ದೊಡ್ಡ ಗಣಪತಿ ಕೂರ್ಸಿದ್ರು ಅಂತ ಕೇಳಿಕೊಂಡು ಕಡೆಗೆ ನಮ್ಮ ಏರಿಯಾದೇ ದೊಡ್ದು ಅಂತ ಸಾಬೀತು ಮಾಡಿಕೊಳ್ತಿದ್ವಿ! ಈಗ ಈ ನೆನಪುಗಳನ್ನೆಲ್ಲಾ ‘ಆ ದಿನಗಳು ಪ್ರತಿಕ್ಷಣ ನನ್ನ ಒಳಗೆ, ಹಸಿರಾಗಿದೆ.... ‘ಅಂತ ಮೆಲುಕು ಹಾಕಬೇಕು ಅಷ್ಟೇ. ಆಫೀಸಿನಲ್ಲಿ ಹಬ್ಬದ ದಿನ ಅಂತ ಸೀರೆಯುಟ್ಟು ಕೈತುಂಬಾ ಬಳೆ ತೊಟ್ಟು ಸಂಭ್ರಮಿಸಿದ್ರೆ ಅಲ್ಲಿಗೆ ಹಬ್ಬ ಮುಗೀತು. ಮನೆಯಿಂದ as usual ಒಂದು ಫೋನ್ ಕಾಲ್ ಬರುತ್ತೆ. ನಿನ್ನನ್ನ ಮಿಸ್ ಮಾಡ್ಕೊತಿದೀವಿ ಅಂತಾರೆ. ಏನೇನು ಅಡಿಗೆ ಅಂತ ಹೇಳಿ ಒಂದಷ್ಟು ಹೊಟ್ಟೆ ಉರಿಸಿ ಫೋನ್ ಇಟ್ರೆ, ಇಲ್ಲಿ ನನ್ನ ಸಂಕಟ ಅವರಿಗೆಲ್ಲಿ ಅರ್ಥವಾಗ್ಬೇಕು?

ಗಣೇಶನ ಹಬ್ಬದ ಹಿಂದಿನ ರಾತ್ರಿ ಕುಳಿತು ಈ ಎಲ್ಲಾ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತ ಈ ಲೇಖನವನ್ನು ಬರಿತಿದ್ದೀನಿ. ವಾಹ್ ಹಬ್ಬಗಳಂದ್ರೆ ಎಷ್ಟು ಚೆನ್ನ ಅಲ್ವಾ? ನನ್ನ ಪಿಜಿ ಹಿಂದಿನ ರಸ್ತೆಯೇ ಸಣ್ಣ ಮಾರ್ಕೆಟ್ ಆಗ್ಬಿಟ್ಟಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ರಸ್ತೆ ತುಂಬಾ ತುಂಬಿ ಹೋಗಿವೆ. ಅಲ್ಲಿ ಕಾಲಿಟ್ರೆ ಹೂಗಳ ಘಮ ಮನಸ್ಸಿಗೆ ಆಹ್ಲಾದ ನೀಡುತ್ತೆ. ನೂರು ರೂಪಾಯಿ ಗಡಿದಾಟಿರೋ ಹೂಮಾಲೆಗಳು ನಮ್ಮೂರಲ್ಲಿ ಎಷ್ಟು ಕಮ್ಮಿ ಅಲ್ವಾ ಅನ್ಸುತ್ತೆ. ಹಸಿರು ತೋರಣಕ್ಕಿಟ್ಟ ಮಾವಿನ ಎಲೆಗಳು ಮನೆಯಲ್ಲಿ ಅಪ್ಪ ತೋರಣ ಕಟ್ಟುವ ದೃಶ್ಯ ಕಣ್ಮುಂದೆ ತರಿಸುತ್ತವೆ. ಎಲ್ಲಾ ನೆನಪಾದ್ರೆ ಕಣ್ಣಂಚಲ್ಲೊಮ್ಮೆ ನೀರಾಡುವಂತೆ ಮಾಡಿಬಿಡ್ತವೆ. ಅದೇ ನಮ್ಮ ಮನೆಯ ಹಬ್ಬದ ಸೊಬಗಿನಲ್ಲಿರೋ ಸಂಭ್ರಮ ಕಣ್ರೀ. ಯಾರ್ಯಾರು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸಿದ್ರೋ ನೀವೇ ಅದೃಷ್ಟವಂತರು ಬಿಡಿ. ನನ್ನ ಅದೃಷ್ಟಕ್ಕೆ ನಮ್ಮ ಪಿಜಿಯಲ್ಲಿ ಕಡೇಪಕ್ಷ ಊಟಕ್ಕೆ ಹೋಳಿಗೆ ಮಾಡಿದ್ರೆ ಹೆಚ್ಚು. ಇಲ್ದಿದ್ರೆ ಇದ್ದೇ ಇದ್ಯಲ್ಲಾ? ಊರಿಂದ ಬರೋವಾಗ ನನ್ನ ಗೆಳತಿ ಅನುಷಾಳ ಅಮ್ಮ ಮರೆಯದೇ ನನಗೋಸ್ಕರ ಸಿಹಿತಿಂಡಿ ಮರೆಯದೇ ಕಳಿಸಿರ್ತಾರೆ. ಅದನ್ನೇ ಚಪ್ಪರಿಸೋದು.

ಬೆನಕ ಬೆನಕ ಏಕದಂತ, ಪಚ್ಚೆ ಕಲ್ಲು ಪಾಣಿ ಮೆಟ್ಲು, ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ, ಗುಡ್ಡಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಘ್ನೇಶ ದೇವನಿಗೆ 21 ನಮಸ್ಕಾರಗಳನ್ನು ಅರ್ಪಿಸುತ್ತಾ ನನ್ನ ಗಣೇಶನ ಹಬ್ಬದ ನೆನಪಿನ ಬುತ್ತಿಯನ್ನು ಪೂರ್ಣಗೊಳಿಸುತ್ತಿದ್ದೇನೆ. ಗಣೇಶ ನಿಮಗೆ ಶುಭವನ್ನೇ ಮಾಡಲಿ ಅಂತ ಹಾರೈಸುತ್ತೇನೆ.

ವೀಕೆಂಡ್ ಮಸ್ತಿ...

ವೀಕೆಂಡ್ ಮಸ್ತಿಯ ಅಸಲಿತನ ಗೊತ್ತಾಗಬೇಕಂದ್ರೆ ಬೆಂಗಳೂರಿಗೇ ಬರ್ಬೇಕು. ವಾರಾಂತ್ಯ ಆರಂಭವಾಗುವ ಮುನ್ನವೇ ಅದನ್ನು ಹೇಗೆ ಕಳೆಯಬೇಕೆಂದು ಪ್ಲಾನ್ ಮಾಡುವ ನೂರಾರು ಜನ ಇಲ್ಲಿದ್ದಾರೆ. ಅದರಲ್ಲೂ ವಾರವಿಡೀ ಪರರಾಷ್ಟ್ರಗಳಿಗಾಗಿ ಬೆವರು ಹರಿಸುವ ಐಟಿ ಉದ್ಯೋಗಿಗಳೇ ಹೆಚ್ಚು. ಹಾಗಾಗಿ ಇವರ ದೃಷ್ಟಿಯಲ್ಲಿ ಶನಿವಾರ ಮತ್ತು ಭಾನುವಾರಗಳಿಗೆ ಇನ್ನಿಲ್ಲದ ಮಹತ್ವ. ಇನ್ನು ಇತರೆ ಜನರೂ ಇದರಿಂದ ಹೊರತಲ್ಲ. ವಿಶೇಷವಾಗಿ ಬೆಂಗಳೂರಿನ ಎಂ.ಜಿ ರಸ್ತೆ, ಬ್ರಿಗೇಡ್ ಮತ್ತು ಕಮರ್ಷಿಯಲ್ ರಸ್ತೆಗಳು ವೀಕೆಂಡ್ ಸಂಭ್ರಮಕ್ಕೆ ಕೈಬೀಸಿ ಕರೆ ನೀಡುತ್ತವೆ. ನನಗೆ ಬೆಂಗಳೂರಿನ ವೀಕೆಂಡ್ ಪ್ರಪಂಚ ಮೊದಮೊದಲು ಇದೇನಪ್ಪಾ ಹೀಗೆ ಅನ್ನಿಸುತ್ತಿದ್ದಾದ್ರೂ ಈಗ ಮಾಮೂಲು ಅನ್ನಿಸಿಬಿಟ್ಟಿದೆ. ಆದ್ರೆ ಮುಂಚಿನಂತೆ ಪ್ರತಿ ವಾರಾಂತ್ಯದಲ್ಲೂ ಬೆಂಗಳೂರು ಅಲೆಯುವ ಭಾಗ್ಯ ನನಗಿಲ್ಲ. ನಮ್ಮ ಕಚೇರಿಯ ಅವಧಿ ಬೇರೆ ರೀತಿ ಇರುತ್ತಾದ್ದರಿಂದ ನಾನು ಸಾಮಾನ್ಯವಾಗಿ ಭಾನುವಾರ ಮತ್ತು ಶನಿವಾರಗಳಂದೂ ವಾರದ ದಿನದಂತೆ ಕೆಲಸ ಮಾಡಬೇಕಿರುತ್ತದೆ. ಆದ್ರೆ ರಾತ್ರಿ ಪಾಳಿ ಮಾಡಿಬಿಟ್ಟರೆ ವಾರಾಂತ್ಯದಲ್ಲಿ ರಜೆ ಖಾಯಂ.

ಈಸಲವೂ ಅಷ್ಟೇ ಅದೆಷ್ಟೋ ದಿನಗಳ ನಂತರ ನನಗೆ ಭಾನುವಾರ ರಜೆಯಿತ್ತು. ನನ್ನ ರೂಂ ಮೇಟ್ ಅನುಷಾ ಕೂಡ ಅಂದು ಆರಾಮಾಗಿದ್ದಳು. ಮನೆಗೆ ಅನುಷಾಳ ಲ್ಯಾಪ್ ಟಾಪ್ ಬಂದ ಮೇಲಂತೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಬಹಳ ದಿನಗಳಾಗಿದ್ದವು. ಸರಿ ಇಬ್ರೂ ಸೇರಿ ಕೆಲ ವಾರಗಳ ಹಿಂದಷ್ಟೇ ತೆರೆಕಂಡಿದ್ದ ‘ಹ್ಯಾರಿ ಪಾಟರ್ ಅಂಡ್ ದ ಹಾಫ್ ಬ್ಲಡ್ ಪ್ರಿನ್ಸ್’ ನೋಡೋಣ ಅಂತಂದುಕೊಂಡ್ವಿ. ಮೊದಲು ಇದ್ದದ್ದರಲ್ಲಿ ಸ್ವಲ್ಪ ಹತ್ತಿರವಿದ್ದ ಪಿವಿಅರ್ ಮಲ್ಟಿಪ್ಲೆಕ್ಸ್ ಗೆ ಹೋದ್ರೆ ಅಲ್ಲಿ ಬೇಕಂದ್ರೂ ಒಂದೇ ಒಂದು ಟಿಕೇಟು ಬಾಕಿಯಿರಲಿಲ್ಲ. ನಾವೆಷ್ಟು ಎಕ್ಸೈಟ್ ಆಗಿದ್ವಿ ಅಂದ್ರೆ ಇವತ್ತು ಹ್ಯಾರಿ ಪಾಟರ್ ನೋಡೇಬಿಟ್ವಿ ಅಂದ್ಕೊಂಡು ಬಂದವ್ರಿಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಮತ್ಯಾವ್ಯಾವ ಥಿಯೇಟರ್ ಗಳಲ್ಲಿ ಸಿನಿಮಾ ಇದೆ ಅನ್ನೋದೂ ಗೊತ್ತಿಲ್ಲ. ಸ್ನೇಹಿತರಿಗೆ ಫೋನಾಯಿಸಿ ವಿಚಾರಿಸಿದಾಗ ಜಯನಗರದ ಗರುಡಾ ಸ್ವಾಗತ್ ನಲ್ಲಿ 2.30ಕ್ಕೆ ಶೋ ಇದೆ ಅಂತ ತಿಳಿಯಿತು. ತಕ್ಷಣ ಅತ್ತ ದೌಡಾಯಿಸಿದ್ವಿ. ಅಲ್ಲಿ ನಾನು ಗಾಡಿ ಪಾರ್ಕ್ ಮಾಡಿಬರೋವಷ್ಟರಲ್ಲಿ ಟಿಕೇಟ್ ತಗೊಂಡ್ರೆ ಸರಿ, ಅಲ್ಲೂ ಸೋಲ್ಡ್ ಔಟ್ ಆದ್ರೆ ಕಷ್ಟ ಅಂತ ಅನುಷಾ ನನ್ನನ್ನು ಬಿಟ್ಟು ಟಿಕೇಟ್ ಕೌಂಟರ್ ತಲುಪಿದ್ಲು. ಆದ್ರೆ ಪಾಪಿ ಸಮುದ್ರಕ್ಕೆ ಹೋದ್ರೂ ಮೊಳಕಾಲಷ್ಟು ನೀರು ಅನ್ನೋ ಹಾಗೆ ಅಲ್ಲಿ 2.30ಕ್ಕೆ ಹ್ಯಾರಿ ಪಾಟರ್ ನ ಯಾವ್ದೇ ಶೋ ಇರ್ಲಿಲ್ಲ. ಮಾಹಿತಿ ಕೊಟ್ಟ ಪುಣ್ಯಾತ್ಮನಿಗೆ ಫೋನ್ ಮಾಡಿ ಬಾಯಿ ತುಂಬಾ ಬೈಗುಳ ಕೊಟ್ಟಿದ್ದೂ ಆಯ್ತು. ಪಾಪ! ಬೆಂಗಳೂರು ಟೈಮ್ಸ್ ನವರು ಮುದ್ರಿಸಿದ ತಪ್ಪು ಮಾಹಿತಿಗದೆ ಅವರೇನು ತಾನೇ ಮಾಡಿಯಾರು?

ಈಗಾಗ್ಲೇ ಎರಡು ಥಿಯೇಟರ್ ಗಳಿಗೆ ಅಲೆದು ಸಾಕಾಗಿತ್ತು. ಕಡೆಯದಾಗಿ ಫೇಮ್ ಲಿಡೋ ನಲ್ಲಿ 3.30ರ ಶೋ ಇದೆ ಅಂತ ಗೊತ್ತಾಯ್ತು. ಕಡೆಯದಾಗಿ ಅಲ್ಲಿ ಚೆಕ್ ಮಾಡೋಣ ಅಂತ ದೇವರ ಜಪ ಮಾಡುತ್ತಲೇ ಅಲ್ಲಿ ಹೋದ್ವಿ. ನಿಜ ಹೇಳಬೇಕಂದ್ರೆ ಅವತ್ತು ಬೇರೆ ಕೌಂಟರ್ ಗಳಲ್ಲಿ ಟಿಕೇಟ್ ಖರೀದಿ ಮಾಡುತ್ತಿದ್ದವರೆಲ್ಲಾ ಹ್ಯಾರಿ ಪಾಟರ್ ಗಾಗೇ ನಿಂತಂತೆ ನಮಗನ್ನಿಸ್ತಿತ್ತು. ದೇವರೇ ಇಲ್ಲೂ ನಿರಾಸೆ ಮಾಡಬೇಡಪ್ಪಾ ಅಂತ ಬೇಡಿಕೊಂಡೇ ನಮ್ಮ ಸರದಿಗಾಗಿ ಕಾದ್ವಿ. ಅಲ್ಲೋ ನಮ್ಮ ಮುಂದೆ ನಿಂತಿದ್ದ ಹುಡುಗಿಯೂ ಅದೇ ಸಿನಿಮಾಗೆ ಟಿಕೇಟ್ ಖರೀದಿಸುತ್ತಿದ್ದಳೇನೋ, ಸೀಟಿಂಗ್ ವ್ಯವಸ್ಥೆ ಹೊಂದಿಕೆಯಾಗದೇ ಮುಖ ಬಾಡಿಸಿಕೊಂಡು ಹೋದ್ಳು. ಸರಿ ನಾವು ವಿಚಾರಿಸಿದಾಗ 3.30ರ ಶೋಗೂ ಎಳ್ಳುನೀರು ಬಿಡಬೇಕಾಯ್ತು. ಬಾಕಿಯಿದ್ದದ್ದು 6.15ರ ಶೋ. ಅದರಲ್ಲಿ ಮಿಕ್ಕಿದ್ದು ಕೇವಲ ನಾಲ್ಕೇ ಸೀಟುಗಳು. ಅವೂ ನಾಲ್ಕೂ ಒಂದೊಂದು ದಿಕ್ಕಿಗೆ! ವಿಧಿಬರಹ ಘೋರವಾದ್ರೂ ಇಲ್ಲಿ ಪರವಾಗಿಲ್ಲ ಅನ್ನಿಸ್ತು. ಮೊದಲ ಸಾಲಿನಲ್ಲಿ ಎಡ ಮತ್ತು ಬಲಭಾಗದ ಕೊನೆಗಿದ್ದ 2 ಟಿಕೇಟುಗಳೇ ಬೆಸ್ಟು ಅನ್ನಿಸಿ ಖರೀದಿ ಮಾಡಿದ್ವಿ. Atleast ಪಕ್ಕ ಕುಳಿತವರನ್ನು ಜರುಗಲು ಹೇಳಿ adjudst ಮಾಡಿಕೊಳ್ಳಬಹುದೆಂದು ಯೋಚಿಸಿದ್ವಿ.

ಆದ್ರೆ ಶೋ ಇದ್ದದ್ದು ಸಂಜೆ 6.15ಕ್ಕೆ. ಅಲ್ಲಿ ತನಕ ಏನು ಮಾಡೋದು? ಸರಿ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಸೆಂಟ್ರಲ್ ನತ್ತ ಹೋದ್ವಿ. ಅಲ್ಲಿ ಫುಲ್ ಫ್ರೆಂಡ್ ಶಿಪ್ ಡೇ ಫೀವರ್. ಹರೆಯದ ಹೃದಯಗಳು ಗೆಳೆಯರ ಬಳಗದೊಂದಿಗೆ ಸಂಭ್ರಮಿಸುತ್ತಿದ್ದವು. ಸಾಲದಕ್ಕೆ ಮಾಲ್ ನಲ್ಲಿ ಸಖತ್ ಆಫರ್ ಗಳು ಬೇರೆ. ಇತ್ತ ನಮ್ಮ ಹೊಟ್ಟೆ ಚುರುಗುಟ್ಟಲು ಶುರುಮಾಡಿ ಅದ್ಯಾವುದೋ ಕಾಲವಾಗಿತ್ತು. ಮಾಲ್ ಒಳಗಿದ್ದ ಭರ್ಜರಿ ಫುಡ್ ಕೋರ್ಟ್ ನಲ್ಲಿ ನಮ್ಮ ಹೊಟ್ಟೆಗೆ ಇಷ್ಟದ ತಿಂಡಿಗಳ್ಯಾವೂ ಕಾಣಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅಲ್ಲಿದ್ದ ಕ್ಯೂ ನೋಡಿದ್ರೆ ಕಾಯುವಷ್ಟು ತಾಳ್ಮೆ ನಮಗಿರ್ಲಿಲ್ಲ. ಸರಿ ಮಾಲ್ ಹೊರಗಿದ್ದ ಕ್ಯಾಂಟಿನ್ ಗಳತ್ತ ಬಂದ್ವಿ. ಅಲ್ಲಿ ತಿಂದ ಬಿಸಿಬಿಸಿ ಜಿಲೇಬಿ, ಆಹ್! ನಿಜಾರೀ ಸಖತ್ತಾಗಿತ್ತು. ಬೆಲೆ ಕೊಂಚ ಜಾಸ್ತಿ. ಒಂದ್ ಪ್ಲೇಟ್ ಗೆ ಬರೀ 25ರೂ! ಆದ್ರೆ ರುಚಿ ಮಾತ್ರ ಸೂಪರ್. ಆಗ ತಾನೇ ಸಕ್ಕರೆ ಪಾಕದಿಂದ ಅದ್ದಿ ತೆಗೆದ ಜಿಲೇಬಿಯನ್ನು ಕುರುಕುರು ಅಂತ ಕ್ಷಣಮಾತ್ರದಲ್ಲಿ ಗುಳುಂ ಮಾಡಬಹುದು. ಊಟ ಮುಗಿಸಿ ಅಲ್ಲೇ ನಡೆಸುತ್ತಿದ್ದ ಗೇಮ್ ನೋಡ್ತಾ ನಿಂತಿದ್ವಿ. ಫ್ರೆಂಡ್ ಶಿಪ್ ಡೇ ಆದ್ದರಿಂದ ಇಬ್ಬರು ಫ್ರೆಂಡ್ಸ್ ಒಬ್ಬರಿಗೊಬ್ರು ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಆಟ ಆಡಿಸ್ತಿದ್ರು. ಸಮೀಪದಲ್ಲೇ ನಿಂತಿದ್ದ ನಮ್ಮನ್ನೂ ಭಾಗವಹಿಸಲು ನಿರೂಪಕ ಆಹ್ವಾನಿಸಿದ. ಸರಿ, ಅನು ಒಲ್ಲೇ ಅನ್ನುತ್ತಲೇ ಬಂದ್ಲು. 30 ಸೆಕಂಡುಗಳಲ್ಲಿ ಎರಡೆರಡು ಬ್ಯಾಂಡ್ ಕಟ್ಟುವಷ್ಟಕ್ಕೇ ತೃಪ್ತಿಪಟ್ವಿ.

ಇನ್ನೇನು ಸಿನಿಮಾಗೆ ಸಮಯವಾಯ್ತು ಅಂತ ಲಿಡೋ ಮಾಲ್ ನತ್ತ ಹೆಜ್ಜೆ ಹಾಕಿದ್ವಿ. ಸಿನಿಮಾ ಆರಂಭವಾದ್ರೂ ಅನುಷಾಗೆ ಚಡಪಡಿಕೆ. ಯಾಕಂದ್ರೆ ನಮ್ಮ ಸಾಲಿನಲ್ಲಿ ಇನ್ನೆರಡು ಸೀಟುಗಳು ಖಾಲಿ ಇದ್ವು. ಅದೂ ಎಲ್ಲೆಲ್ಲೋ ಮಧ್ಯದಲ್ಲಿ. ಆ ಸೀಟಿಗೆ ಬರಬೇಕಿದ್ದವರು ನಾಪತ್ತೆ. ಮಿಕ್ಕ ಆ ಎರಡು ಸೀಟಿನವರು ಕನ್ಫ್ಯೂಸ್ ಆದ್ರೆ ಅಂತ ಅನ್ಕೊಳ್ಳೋವಷ್ಟರಲ್ಲೇ ಅವರ ಆಗಮನವೂ ಆಯ್ತು. ಸರಿ ಕುಳಿತಿದ್ದವರಿಗೆಲ್ಲಾ ಸ್ವಲ್ಪ ಪಕ್ಕದ ಸೀಟಿಗೆ ಜರುಗಲು ರಿಕ್ವೆಸ್ಟ್ ಮಾಡಿ ಅಂತೂ ಇಂತೂ ನೆಮ್ಮದಿಯಾಗಿ ಸಿನಿಮಾ ನೋಡಲು ಕೂತ್ವಿ. ಹ್ಯಾರಿ ಪಾಟರ್ ಸಿನಿಮಾಗಳು ಒಂದಕ್ಕೊಂದು ಮುಂದುವರಿಕೆ ಇರುತ್ತವಾದ್ದರಿಂದ ನಾವು ನೋಡಿದ ಭಾಗ ತೀರಾ ಕೌತುಕವಲ್ಲದ್ದಿದ್ರೂ ಮುಂದಿನ ಸಿನಿಮಾಗೆ ಲಿಂಕ್ ಕೊಡುವಂತಿತ್ತು. ಹೇಗೋ ವೀಕೆಂಡ್ ನಲ್ಲಿ ಹರಸಾಹಸ ಮಾಡಿ ಒಂದು ಸಿನಿಮಾ ನೋಡೋಹಾಗಾಯ್ತು. ಇಡೀ ದಿನ ಪಟ್ಟ ಅವಸ್ಥೆಗಳನ್ನು ಮೆಲುಕು ಹಾಕುತ್ತಾ ಇಬ್ರೂ ಮನೆ ಸೇರಿದ್ವಿ.