Friday, November 7, 2008

ಅತ್ತೆಗೊಂದು ಕಾಲ...ಸೊಸೆಗೊಂದು ಕಾಲ

ದೇನೇ ವಾಲಾ ಜಬ್ಬೀ ದೇತಾ, ದೇತಾ ಚಪ್ಪಡ್ ಫಾಡ್ ಕೇ ಅಂತಾರೆ. ಈ ಮಾತನ್ನ ನೀವೂ ಬಹಳಷ್ಟು ಸಾರಿ ಕೇಳಿರ್ತೀರಿ. ದೇವರು ವರವನು ಕೊಡೋದೇ ಹಾಗೆ, ನೋಡೋರ ಹೊಟ್ಟೆಯಲ್ಲೊಮ್ಮೆ ಕಿಚ್ಚು ಹೊತ್ತಿಕೊಳ್ಳಬೇಕು ಹಾಗಿರುತ್ತೆ ಅವನು ಕೊಡುವ ವರ. ನಮ್ಮ 'ಸೀರಿಯಲ್ ಕ್ವೀನ್' ಏಕ್ತಾ ಕಪೂರ್ ಳನ್ನೇ ನೋಡಿ. ಯಾವ ಚಾನೆಲ್ ಹಾಕಿದ್ರೂ ಬರೀ K ಸೀರಿಯಲ್ ಗಳದ್ದೇ ದರ್ಬಾರು. ಅದರಲ್ಲೂ ಕಳೆದ ೮ ವರ್ಷಗಳಿಂದ ಪ್ರಸಾರವಾಗುತ್ತಾ ಟೆಲಿವಿಷನ್ ಪ್ರಪಂಚದಲ್ಲೇ ಇತಿಹಾಸ ಬರೆದ 'ಕ್ಯೂಂ ಕೀ ಸಾಸ್ ಭೀ ಕಭೀ ಬಹೂ ಥೀ' ಒಂದು ಕಾಲದಲ್ಲಿ ಗಳಿಸಿದ ಜನಪ್ರಿಯತೆ ನಿಮಗೇ ಗೊತ್ತುಂಟು. ಇದಷ್ಟೇ ಅಲ್ಲ, ಹೆಚ್ಚು ಕಡಿಮೆ ಏಕ್ತಾಳ ಎಲ್ಲಾ ಸೀರಿಯಲ್ ಗಳೂ ಜನಪ್ರಿಯತೆ ಪಡೆದಿವೆ. ಆದ್ರೆ ಕ್ಯೂ ಕೀಯನ್ನು ಕಣ್ಣಿಗೆ ಎಣ್ಣೆ ಬಿಟ್ಟು ನೋಡುತ್ತಿದ್ದ ಅತ್ತೆ ಸೊಸೆಯರು ಈಗೇನಾದ್ರು? ಟಿಆರ್ ಪಿ ಗ್ರಾಫ್ ಇನ್ನಿಲ್ಲದಂತೆ ಏರಿಸಿಕೊಂಡ ಧಾರಾವಾಹಿ ಹೀಗೆ ನೆಲ ಕಚ್ಚಲು ಕಾರಣ ಆದ್ರೂ ಏನು? ಏನು? ಏನು!

ಅಬ್ಬಬ್ಬಾ! ನನ್ನ ಈ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸೋದಕ್ಕಿಂತ ಆ soap much better ಅಂತೀರಾ? ಖಂಡಿತ ಇಲ್ಲ. ಯಾಕೆ ಗೊತ್ತಾ? ಈ ಸಿನಿಮಾ ಸೀರಿಯಲ್ ಅನ್ನೋ ಮಾಯಾ ಪ್ರಪಂಚವೇ ಹಾಗೆ ರೀ. ಇಲ್ಲಿ ಖ್ಯಾತಿ, ಯಶಸ್ಸು ಯಾರಪ್ಪನ ಸೊತ್ತೂ ಅಲ್ಲ. ಪ್ರತಿಭೆ ಮತ್ತು ನಸೀಬು ಚೆನ್ನಾಗಿದ್ರೆ ಸಾಕು ಅಷ್ಟೇ. ಇದಕ್ಕೆ ಸರಿಯಾದ ಸದ್ಯದ ಉದಾಹರಣೆ ಬೇಕಂದ್ರೆ colours channel ನ ಒಮ್ಮೆ ತಿರುಗಿಸಿ. ರಾತ್ರಿ ೮ ಗಂಟೆಗೆ ಪ್ರಸಾರವಾಗೋ 'ಬಾಲಿಕಾ ವಧು' ಸೀರಿಯಲ್ ನ ಒಮ್ಮೆ ನೋಡಿ. ರಾಜಸ್ಥಾನದಲ್ಲಿ ಸಾಮಾನ್ಯವಾದ ಬಾಲ್ಯ ವಿವಾಹ ಈ ಧಾರಾವಾಹಿಯ ಕಥಾವಸ್ತು.

ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ಬರುವ ಆನಂದಿ( ಅವಿಕಾ ಘೋರ್) ಪಾತ್ರಧಾರಿಯನ್ನೊಮ್ಮೆ ನೋಡ್ರಿ. ಯಾಕಂತೀರಾ? ಈ ಮುದ್ದು ಹುಡುಗಿಯ ಅಭಿನಯ ಬರೀ ಎಲ್ಲರ ಮನಗೆದ್ದಿರೋದಷ್ಟೇ ಅಲ್ಲ, ಏಕ್ತಾಳ ಕ್ಯೂಂ ಕೀಗೆ ಫುಲ್ ಸ್ಟಾಪ್ ಬೀಳಲು ಬಾಲಿಕ ವಧು ಸೀರಿಯಲ್ ಒಂದು ಕಾರಣ ಅನ್ನುತ್ತೆ ಒಂದು ಮೂಲ. ವಯಸ್ಸು ಅಬ್ಬಬ್ಬಾ ಅಂದ್ರೆ ೧೨-೧೩ ಇರಬಹುದು. ತನ್ನ ಅಭಿನಯದಿಂದ ಎಲ್ಲರನ್ನೂ ಕಟ್ಟಿ ಹಾಕಿಬಿಡ್ತಾಳೆ ಈ ಪೋರಿ. ಆನಂದಿ ನಕ್ಕರೆ ಅದೇ ನಮ್ಮೂರ ಕೆರೆಗಳಲ್ಲಿ ನೋಡಿರ್ತೀವಲ್ಲಾ? ಪುಟ್ಟ ಪುಟ್ಟ ಕೆಂದಾವರೆಗಳು ಹಾಗೇ ಕಾಣ್ತಾಳೆ. ಅತ್ತರಂತೂ ನಮಗೂ ಬೇಜಾರು, ಆದ್ರೂ ನೋಡೋಕೆ ಮುದ್ದು ಮುದ್ದು. ಇನ್ನು ಅವಳ ಮಾತುಗಳೋ ಮರಿ ಹಕ್ಕಿಗಳು ಕಿಚಿಪಿಚಿಗುಟ್ಟುತ್ತವಲ್ಲ ಅಷ್ಟು ಮಧುರ. ಆದ್ರೆ ವಿಪರ್ಯಾಸ ನೋಡಿ ಶಾಲೆಗೆ ಹೋಗಿ ಅಕ್ಷರ ತಿದ್ದುವ ವಯಸ್ಸಲ್ಲಿ ಸೌಟು ಹಿಡಿಯಬೇಕಾದ ಪರಿಸ್ಥಿತಿ. ಇದು ಕೇವಲ ಆನಂದಿಯ ಕಥೆ ಮಾತ್ರ ಅಲ್ಲ. ಅಂತಹ ಅದೆಷ್ಟು ಲಕ್ಷ ಲಕ್ಷ ಆನಂದಿಯರ ಕಣ್ಣೀರ ಧಾರೆ ರಾಜಸ್ಥಾನದ ಮರಳು ಭೂಮಿಯ ತಹತಹಿಸುವ ಈ ಬಾಲ್ಯ ವಿವಾಹವೆಂಬ ಪಿಡುಗಿನ ದಾಹವನ್ನು ತಣಿಸುತ್ತಿದೆಯೋ? ಈ ವ್ಯವಸ್ಥೆ ಹೀಗೇ ಇರುವುದಾದರೆ ಕಣ್ಣೀರ ಕೋಡಿ ಹರಿಸುತ್ತಲೇ ಇರುವ ಆನಂದಿಯರು ಇನ್ನು ಮುಂದೆಯೂ ಇರುತ್ತಾರೆ. ಇನ್ನು ಈ ಸೀರಿಯಲ್ ನಲ್ಲಿ ಬರುವ ಪ್ರತಿಯೊಬ್ಬ ಪಾತ್ರಧಾರಿಯೂ ಇಷ್ಟ ಆಗ್ತಾರೆ. ಸಂಪ್ರದಾಯದ ಭೂತ, ಶ್ರೀಮಂತಿಕೆಯ ಸೊಕ್ಕು ಹೊಕ್ಕ ದಾದಿ ಅಂತೂ ಅಬ್ಬಬ್ಬಾ...ಒಟ್ಟಿನಲ್ಲಿ ಮಿಸ್ ಮಾಡದೆ ಈ ಧಾರಾವಾಹಿ ನೋಡಿ. ಮಣಭಾರದ ಆಭರಣ, ಡಿಸೈನರ್ ಉಡುಗೆ ತೊಟ್ಟ ಅತ್ತೆ ಸೊಸೆಯರ ಕಾದಾಟಕ್ಕಿಂತ ಇದು ನಿಮ್ಮ ಮನಮೆಚ್ಚದಿದ್ದರೆ ಕೇಳಿ.