Monday, March 29, 2010

ಕೀ ಕಳೆದು ಹೋದಾಗ...


ನೀವು ಯಾರಿಗಾದ್ರೂ ಏನಾದ್ರೂ ಸಹಾಯ ಮಾಡಿ. ಮನಸ್ಸಿಗೆ ಅದೆಷ್ಟು ಖುಷಿ ಅನ್ಸುತ್ತೆ ಅಲ್ವಾ? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸಹಾಯದಿಂದ ಸಿಗುವ ಆತ್ಮತೃಪ್ತಿ ಇದ್ಯಲ್ಲಾ? ಅದು ಮತ್ತೆಲ್ಲೂ ಸಿಗೋಲ್ಲ. ನಾನು ಇವತ್ತು ನಿನಗೆ ಈ ನೆರವು ಕೊಟ್ಟಿದ್ದೇನೆ. ನಾಳೆ ನನಗೂ ನಿನ್ನಿಂದ ಏನಾದ್ರೂ ಸಿಗಬಹುದಲ್ವಾ ಅಂತ ಅನ್ಕೊಂಡ್ರೋ ನೀವ್ ಕೆಟ್ರಿ! ಜಮಾನಾ change ಆಗಿದೆ, ಜೊತೆಗೆ ಜನರೂ ಕೂಡ. ಅಪ್ಪಿ ತಪ್ಪಿ ನಮ್ಮ ಕಷ್ಟಕ್ಕೆ ಯಾರಾದ್ರೂ ನೆರವಾದ್ರೆ ಒಂದೋ ನಮ್ಮ ಪುಣ್ಯ, ದೇವರ ದಯೆ ಅಥವಾ ಹಿಂದೆಂದೋ ನಾವು ಮಾಡಿದ ಒಳ್ಳೆ ಕೆಲಸಕ್ಕೆ ಸಿಕ್ಕ ಪ್ರತಿಫಲ ಅಷ್ಟೇ.

ಅದಕ್ಕೊಂದು example ಹೇಳ್ತೀನಿ. ಕೆಲ ತಿಂಗಳುಗಳ ಹಿಂದೆ ನಾನು ಮತ್ತು ನನ್ ಫ್ರೆಂಡ್ ನೀತು ಜಯನಗರಕ್ಕೆ ಹೋಗಿದ್ವಿ. ನೀತು ಮನೆ ಶಿಫ್ಟಿಂಗ್ ಕೆಲ್ಸ ನಡೀತಿದ್ರಿಂದ ಕೆಇಬಿ, ಬಿಎಸ್ಎನ್ಎಲ್ ಆಫೀಸ್ ಮೊದಲಾದ ಕಡೆ ಸುಮಾರು ಕೆಲಸ ಬಾಕಿಯಿತ್ತು. ಸುತ್ತಿ ಸುತ್ತಿ ಸಾಕಾಗಿತ್ತು. ಏನಾದ್ರೂ ತಿನ್ನೋಣ ಅನ್ಕೊಂಡ್ರೆ ಕಾಸು ಖಾಲಿ. ಸರಿ ಇಬ್ರೂ ಎಟಿಎಮ್ ಸರ್ಚ್ ಮಾಡ್ತಾ ಅಲ್ಲೊಂದು ಕಾಂಪ್ಲೆಕ್ಸ್ ಹತ್ರ ಹೋದ್ವಿ. ಅಲ್ಲಿ ಗಾಡಿ ಪಾರ್ಕ್ ಮಾಡಿ ಎಟಿಎಮ್ ನಲ್ಲಿ ಹಣ ತೆಗೆದು ಹೊರಗೆ ಬಂದ್ವಿ. ನಮ್ಮ ಗಾಡಿ ಪಕ್ಕ ಒಂದು activa ನಿಂತಿತ್ತು. ಆದ್ರೆ ಅದ್ಯಾವ ಆತುರದಲ್ಲೋ ವಾಹನದಲ್ಲೇ ಕೀ ಬಿಟ್ಟು ಹೋಗಿದ್ದರು ಅದರ ಒಡೆಯರು. ಸಾಮಾನ್ಯವಾಗಿ ಹೆಲ್ಮೆಟ್ ತೆಗೆದು ಸೀಟ್ ಬಾಕ್ಸ್ ನಲ್ಲಿ ಇಟ್ಮೇಲೆ ಬಹುತೇಕ ವಾಹನ ಸವಾರರು ಇಂತಹ ಪ್ರಮಾದ ಮಾಡ್ಬಿಡ್ತಾರೆ. ಇಲ್ಲೂ ಅದೇ ಆಗಿತ್ತು ಅನ್ಸುತ್ತೆ. ನಾವು ಪಕ್ಕದಲ್ಲೇ ಇದ್ದ ಅಂಗಡಿಯವರಿಗೆ ಕೀ ತಲುಪಿಸಿ ಸಂಬಂಧಪಟ್ಟವರಿಗೆ ದಯವಿಟ್ಟು ತಲುಪಿಸಿ ಅಂತ ಹೇಳಿ ಬಂದ್ವಿ.

ಅದೇನೋ ಒಂಥರಾ ಖುಷಿ. ಸದ್ಯ ಯಾರೋ ಕಳ್ಳರ ಕೈಗೆ ಸಿಗಲಿಲ್ವಲ್ಲಾ. ಅದ್ಯಾರೋ ಏನೋ ಕೀ ಜೊತೆ ಗಾಡೀನೂ ಕಳಕೊಂಡು ಪರದಾಡ್ಬೇಕಿತ್ತು ಅಂತ ನಮಗೆ ನಾವೇ ಅನ್ಕೊಂಡ್ವಿ. ದುರಂತ ಅಂದ್ರೆ ಹೀಗೆ ಕೀ ಯನ್ನು ಗಾಡಿ ಸೀಟ್ ಬಾಕ್ಸ್ ನಲ್ಲೇ ಬಿಟ್ಟು ಹೋಗೋ ಕಾಯಿಲೆ ನಂಗೂ ಉಂಟು! ಎಷ್ಟೋ ಸಲ ಹಾಗೆ ಬಿಟ್ಟು ಹೋದ ಕೀ ಅಲ್ಲೇ ಇದ್ದು ವಾಪಸ್ಸು ಗಾಡಿ ತೆಗೆಯಲು ಬಂದಾಗ ನೋಡಿದ್ದಿದೆ. ಮನಸಲ್ಲೇ 'ಸದ್ಯ ದೇವರೇ' ಅಂತ ಅಂದುಕೊಂಡದ್ದಿದೆ. ಹೊಸ activa ಕೊಂಡ ಮೇಲೆ ಗಾಂಧಿಬಜಾರಿನಲ್ಲೊಮ್ಮೆ ಹೀಗೆ ಆಗಿತ್ತು. ಮತ್ತೊಮ್ಮೆ ಸಿನಿಮಾಗೆ ಅಂತ ಮಾಲ್ ಒಂದಕ್ಕೆ ಹೋದಾಗ ಪಾರ್ಕಿಂಗ್ ಸ್ಥಳದಲ್ಲಿ ಕತ್ತಲಿದ್ರಿಂದ ಬಿಟ್ಟು ಹೋದ ಕೀ ಅಲ್ಲೇ ಸಿಕ್ಕಿತ್ತು. ಹೀಗಾದ್ರೆ ಓಕೆ. ನೂರಾರು ಮಂದಿ ಓಡಾಡೋ ಮಾಲ್ ಒಳಗೆಲ್ಲೋ ಕೈಬಿಟ್ರೆ ದೇವರೇ ಗತಿ.


ಮೊನ್ನೆ ನಾನು ಮತ್ತು ಅನುಷಾ ಕನ್ನಡ ಸಿನಿಮಾವೊಂದನ್ನು ನೋಡೋಣ ಅಂತ ಫೋರಂಗೆ ಹೋದ್ವಿ. ಶೋ ಶುರುವಾಗಲು ಅರ್ಧ ಗಂಟೆ ಇತ್ತು ಅಷ್ಟೇ. ಸರಿ ಟಿಕೆಟ್ ಏನೋ ಸಿಕ್ತು. ಹೊಟ್ಟೆ ಚುರ್ ಅಂತಿತ್ತು. ಇಬ್ರೂ ಮೆಕ್ ಡೀ ಗೆ ಹೋಗಿ ನೂರಾರು ರೂಪಾಯಿ ದಂಡ ತೆತ್ತು ಬನ್ನು ತಿಂದ್ವಿ! ಭರ್ತಿ 2ವರೆ ಗಂಟೆ ಸಿನಿಮಾನ ಎಂಜಾಯ್ ಮಾಡಿ ಹೊರಬಂದಾಗ ಯಾಕೋ ಬ್ಯಾಗಿಗೆ ಕೈ ಹಾಕ್ದೆ. ನನ್ ಗಾಡಿ ಕೀ ಪತ್ತೆನೇ ಇಲ್ಲ. ಪ್ಯಾಂಟ್ ಪಾಕೆಟ್ ಗಳೂ ಖಾಲಿ ಖಾಲಿ! ಪೀಕಲಾಟ ಶುರುವಾಯ್ತು. ತಕ್ಷಣ ಮೆಕ್ ಡೀ ಕಡೆ ಓಡಿದ್ವಿ. ಅಲ್ಲೋ ನಮ್ ಸಂಕಟ ಕೇಳೋರೇ ಗತಿ ಇಲ್ಲ. ನಿಮಿಷದಲ್ಲಿ ಸಾವಿರಾರು ರೂಪಾಯಿ ವ್ಯವಹಾರ ಮಾಡೋ ಅವ್ರಿಗೆ ನಮ್ಮ ವೆಹಿಕಲ್ ಕೀ ಕಳೆದೋದ್ರೆ ಏನ್ ಆಗ್ಬೇಕ್ ಅಲ್ವಾ? ಅಕಸ್ಮಾತ್ ಯಾರಾದ್ರೂ ವಾಪಸ್ಸು ತಂದ್ಕೊಟ್ರೆ ದಯವಿಟ್ಟು ತಿಳಿಸ್ತೀರಾ ಅಂತ ಕೇಳಿಕೊಂಡ್ರೆ ಕಡೇಪಕ್ಷ ಸೌಜನ್ಯಕ್ಕೂ ಅವರು ನಮ್ಮ ವಿಳಾಸ ದೂರವಾಣಿ ಸಂಖ್ಯೆ ಕೇಳೋ ಗೋಜಿಗೇ ಹೋಗ್ಲಿಲ್ಲ. ಅಫ್ಕೋರ್ಸ್ ಅವರ ಕೆಲಸ ಅವರಿಗೆ ತುಂಬಾ ಇಂಪಾರ್ಟೆಂಟ್. ಆದ್ರೆ ಗ್ರಾಹಕರ ಹಣ ಬೇಕು ಸಮಸ್ಯೆ ಮಾತ್ರ ಅವರಿಗೆ ಬೇಕಿಲ್ಲವಲ್ಲ ಅನ್ನಿಸಿಬಿಡ್ತು. ಬಿಟ್ಟಾಕು, ಸಮಸ್ಯೆ ನಮ್ಮದಾದಾಗಲೇ ನಮಗದು ದೊಡ್ಡದು ಅನ್ನಿಸೋದು ಅನ್ಕೊಂಡು, ನನ್ನ ತಪ್ಪಿಗೆ ನನ್ನನ್ನೇ ಶಪಿಸಿಕೊಂಡೆ.

ಥಿಯೇಟರ್ ನಲ್ಲೇನಾದ್ರೂ....? ಅಂತ ಹೊಳೆದು ಅಲ್ಲಿಗೆ ದೌಡಾಯಿಸಿದ್ವಿ. ಆದ್ರೆ ಮತ್ತೊಂದು ಶೋ ಆಗ್ಲೇ ಶುರುವಾಗಿತ್ತು. ಅಲ್ಲಿನವರು ನಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸಿ ನಾವು ಕುಳಿತಿದ್ದ ಸೀಟ್ ನಂಬರ್ ಕೇಳಿ ಥಿಯೇಟರ್ ಒಳಗೆ ಕರ್ಕೊಂಡು ಹೋದ್ರು. ಟಾರ್ಚ್ ಬಿಟ್ಟು ಹುಡುಕಿದ್ರೆ ಅಲ್ಲಿ ಏನೂ ಇರ್ಲಿಲ್ಲ. ಶೋ ಮುಗಿದ ಮೇಲೆ ಥಿಯೇಟರ್ ಚೆಕ್ ಮಾಡಿದ್ದ ವ್ಯಕ್ತಿ ಕೂಡ ಅಂತಹ ಯಾವ್ದೇ ವಸ್ತು ಸಿಗ್ಲಿಲ್ಲ ಅಂತ ಹೇಳಿದ್ರು. ಕಡೆಗೆ ನನ್ contact numbr ತಗೊಂಡು ಸಿಕ್ಕಿದ ತಕ್ಷಣ ತಿಳಿಸುವುದಾಗಿ ಭರವಸೆ ಕೊಟ್ರು. ಆದ್ರೆ ಕೀ ಸಿಗಲಿಲ್ಲ :( ಲೇ ಅನುಷಾ ನಾವೆಷ್ಟು ಸಲ ಈ ಥರ ಕೀ ಕಳ್ಕೊಂಡೋರಿಗೆ ಸಹಾಯ ಮಾಡಿದ್ದೀವಿ, ನಮ್ಗೇ ಯಾಕೆ ಈ ಥರ ಅಂತ ಕೇಳ್ದೆ.

ಹೀಗಾಯ್ತಲ್ಲಾ ಅಂತ ನಾನು ಸಖತ್ worried ಆಗಿದ್ರೆ, ಅನುಷಾ ಮಾತ್ರ as usual ತನ್ನ ಆರ್ಟ್ ಆಫ್ ಲಿವಿಂಗ್ ಸ್ಟೈಲಲ್ಲಿ ತಲೆ ಕೆಡ್ಸ್ಕೋಬೇಡ ಬಿಡೇ. ನಂಗೊತ್ತು ಅದು ಸಿಕ್ಕೇ ಸಿಗುತ್ತೆ ಅಂತ ಹೆಗಲ ಮೇಲೆ ಕೈ ಹಾಕಿ ನಗ್ತಿದ್ಲು. ಅಯ್ಯೋ ನನ್ನ ಸಂಕಟ ಯಾರಿಗೆ ಹೇಳ್ಲಿ? ಸರಿ ಹಿಂದಿನಂತೆ ಗಾಡಿಯಲ್ಲೇ ಇರ್ಬುಹುದಾ ಅಂತ ನೋಡಿದ್ರೆ..............ನೋ...:( ಅಲ್ಲಿರ್ಲಿಲ್ಲ. ಕಡೇ ಚಾನ್ಸು ಅಂತ ಅಲ್ಲಿದ್ದ ಸೆಕ್ಯೂರಿಟಿಯನ್ನ ಕೇಳಿದ್ರೆ ಅಂಡರ್ ಗ್ರೌಂಡ್ ನತ್ತ ಬೊಟ್ಟು ಮಾಡಿ ಹೋಗಲು ಹೇಳಿದ. ಅಲ್ಲೋ ಬರೀ ಕಾರ್ ಪಾರ್ಕಿಂಗು. ಅಲ್ಲಿದ್ದ ಮೂರ್ನಾಲ್ಕು ಸೆಕ್ಯೂರಿಟಿಗಳಿಗೆ ಭಯ್ಯಾ ಹಮಾರಾ ಗಾಡಿ ಕೀ...ಅನ್ನೋವಷ್ಟರಲ್ಲೇ ಮತ್ತೊಂದು ಕಡೆ ದಾರಿ ತೋರಿಸಿದರು. ಅಲ್ಲಿದ್ದ ಗ್ಲಾಸ್ ಚೇಂಬರ್ ನೊಳಗಿದ್ದ ಮಹಿಳೆಗೆ ನಮ್ ಗಾಡಿ ಕೀ...ಅಂತಿದ್ದ ಹಾಗೇ ಒಂದು ಕೀ ತೋರಿಸದ್ಲು. ಆಹಾ! ದೇವ್ರೇ ದೇವ್ರೇ ಅನ್ಕೊಂಡು ನೋಡಿದ್ರೆ ಅದ್ಯಾವ್ದೋ ಬೇರೆ :( ಮತ್ತೊಂದು ಕೀ ತೋರಿಸಿದ್ರು. ನಾನೆಷ್ಟು ಜೋರಾಗಿ ಖುಷಿಯಿಂದ ಕೂಗಿದೆ ಅಂದ್ರೆ ಬಾಡಿ ಹೋಗಿದ್ದ ತರಕಾರಿಯಂತಿದ್ದ ಮುಖ ಫ್ರೆಷ್ ಆದ ಹೂವಂತೆ ನಳನಳಿಸಿತು. ನೋಡ್ದಾ? ಸಿಗಲ್ಲ ಸಿಗಲ್ಲ ಅಂತ ಅಳೋ ಬದ್ಲು, ಸಿಗುತ್ತೆ ಅಂತ ಪಾಸಿಟಿವ್ ಆಗಿ ಯೋಚ್ನೆ ಮಾಡು ಕೋತಿ ಅಂದ್ಲು ನಮ್ ತತ್ವಜ್ಞಾನಿ!

ಸಿಕ್ಕ ಸಿಕ್ಕ ಸೆಕ್ಯೂರಿಟಿಗಳಿಗೆಲ್ಲಾ ಥ್ಯಾಂಕ್ಸ್ ಹೇಳ್ಕೊಂಡು ಬಂದ್ವಿ.. ಅವರಿಗೆ ನಮ್ ಖುಷಿ ಹೊಸತೇನಲ್ಲ. ಹಾಗೇ ಇತ್ತು ಅವರ ಮುಖಭಾವ. ಆದ್ರೆ ಆ ಕ್ಷಣದಲ್ಲಿ ಅವರ ಪ್ರಾಮಾಣಿಕತೆ ನಮಗೆ ಅಷ್ಟು ಖುಷಿ ಕೊಟ್ಟಿತ್ತು. ಅದ್ಯಾರು ಕೀ ಅವರಿಗೆ ತಲುಪಿಸಿದ್ರೋ ಅಥವಾ ಸ್ವತಃ ಸೆಕ್ಯೂರಿಟಿ ಕಣ್ಣಿಗೇ ಬಿದ್ದು ಅದನ್ನು ಸಂಬಂಧಪಟ್ಟೆಡೆ ತಲುಪಿಸಿದ್ರೋ ಗೊತ್ತಿಲ್ಲ. ಆದ್ರೆ ಉಪಕಾರ ಯಾರದ್ದೇ ಇರ್ಲಿ, ಅವರಿಗೆ ಮನಸಾರೆ ಕೃತಜ್ಞತೆಗಳನ್ನು ಹೇಳಿದ್ದಾಯ್ತು. ಕಲಿಗಾಲದಲ್ಲೂ ಪ್ರಾಮಾಣಿಕತೆಗೆ ಬೆಲೆ ಇದೆ ಅನ್ನೋದು ನಿಜ ಅಲ್ವಾ?