Wednesday, June 17, 2009

ಬಿಸಿಲೆ...ನಿನ್ನ ಸೊಬಗಿಗೆ ನೀನೆ ಸಾಟಿ!





ಅದೆಷ್ಟೋ ದಿನಗಳಿಂದ ನಮ್ಮ ಗ್ಯಾಂಗು ಎಲ್ಲಾದ್ರೂ ಹೊರಗೆ, ಈ ಬೆಂಗಳೂರಿನ ಗಡಿಬಿಡಿ ಪರಿಸರದಿಂದ ದೂರ ಹೋಗಿ ನಿಸರ್ಗದ ಮಡಿಲಲ್ಲಿ ತುಸು ಹೊತ್ತು ವಿರಮಿಸಲು ಹಾತೊರೆಯುತ್ತಿತ್ತು. ಆದ್ರೆ ಎಲ್ಲರಿಗು ಒಂದೇ ದಿನ ರಜೆ ಸಿಗದೇ ನಮ್ಮ ಪ್ಲಾನ್ ಮುಂದಕ್ಕೆ ಹೋಗ್ತಾನೇ ಇತ್ತು. ಆದ್ರೆ ಈ ಸಲ ಯಾರಾದ್ರು ಬರಲಿ ಬಿಡ್ಲಿ ಹೋಗೆ ಹೋಗ್ಬೇಕು ಅನ್ನೋ ಹಠ ಎಲ್ರಿಗೂ ಇದ್ದದಕ್ಕೋ ಏನೋ ಜಾಗ ಹಾಸನ ಸುಬ್ರಹ್ಮಣ್ಯ ವದುವೆ ಸಿಗುವ ಬಿಸಿಲೆ ಫಾರೆಸ್ಟ್ ಅಂತ ಫೈನಲ್ ಆಗಿದ್ದೇ ತಡ ನಮ್ಮ ಮನಸ್ಸಲ್ಲಿ ಆಗಲೇ ಬಿಸಿಲೆಯ ಅದ್ಭುತ ನಿಸರ್ಗ ಸಿರಿ ಕಣ್ಣಮುಂದೆ ಸುಳಿದಾಡಲು ಶುರುವಾಗಿತ್ತು. ಆದ್ರೆ ಆರಂಭದಿಂದಲೂ ನನ್ದೊಂದೇ ಕಿರಿಕ್ಕು. ಬಿಸಿಲೆ ಬೇಡ ಅಲ್ಲಿ ಮಳೆ ಜಾಸ್ತಿ ಇದೆ , ಹಾಗಾಗಿ ಜಿಗಣೆಗಳ ಕಾಟ ಅಂತ. ಆದ್ರೆ ನೀತು ಮತ್ತು ಅನುಷ ಲೇ ಅದೇನೂ ಅಷ್ಟೊಂದು ಕೆಟ್ಟ ಜೀವಿ ಅಲ್ಲ ಅಂತೆಲ್ಲ ಹೇಳಿ ಒಪ್ಪಿಸಿದರು. ಕಾಡು ಹೊಕ್ಕ ಮೇಲೇನೆ ಗೊತ್ತಾಗಿದ್ದು ಅಸಲಿಯತ್ತು ಏನು, ನನ್ನ ಅಚ್ಚು ಮೆಚ್ಚಿನ ಗೆಳತಿಯರು ಟ್ರೆಕ್ಕಿಂಗ್ ಹೋಗೋ ಜೋಶ್ನಲ್ಲಿ ನನ್ನ ಎಷ್ಟ್ ಚನ್ನಾಗಿ ಯಾಮಾರ್ಸಿದ್ರು ಅಂತ!
ಅವತ್ತು ರಾತ್ರಿ ೧೦ ಗಂಟೆಗೆ ಮೆಜೆಸ್ಟಿಕ್ ನಲ್ಲಿ ಎಲ್ರು ಸೇರಿದ್ವಿ. ನಮ್ಮ ಟ್ರೆಕ್ಕಿಂಗ್ ಅನ್ನು ಅರೆಂಜ್ ಮಾಡಿದ್ದ ದೇವ್ ಬಾಲಾಜಿ ನಮಗಿಂತ ತಡವಾಗಿ ಬಂದು ಸೇರಿಕೊಂಡರು! ಅವರ ಜೊತೆಗೆ ಬಂದಿದ್ದ ದಿನೇಶ್ ಓವರ್ ಲೋಡ್ ಆಗಿದ್ದ ನಮ್ಮ ಲಗೇಜುಗಳನ್ನು ನೋಡಿ ಮುಸಿ ಮುಸಿ ನಗುತ್ತಿದ್ರೆ ನಾವೆಲ್ಲ ಇವನ್ಯಾರೋ ಪೊರ್ಕಿ ಅಂತ ಕಮೆಂಟು ಕೊಟ್ಟು ಸುಮ್ಮನಾದ್ವಿ. ನಂತರ ಶುರುವಾದದ್ದೇ ನಮ್ಮ ನಿಸರ್ಗದತ್ತ ಪಯಣ . ಈ ಬೆಂಗಳೂರಿನ ಟ್ರಾಫಿಕ್ ದಾಟಿ ಮುಂದೆ ಸಾಗುವುದೇ ದೊಡ್ಡ ಸವಾಲು ಅನ್ನಿಸಿಬಿಡ್ತು. ಬೆಳಗ್ಗೆ ತುಂಬ ನಡೆಯಬೇಕು ಅಂತ ನಾನು ಕುಳಿತಲ್ಲೇ ನಿದ್ರಿಸಲು ಯತ್ನಿಸಿದೆ. ಆದ್ರೆ ಅಡಗೋಲಜ್ಜಿಗಳಂತೆ ನೀತು ಮತ್ತೆ ಛಬ್ಬಿ ಏನೇನೋ ಮಾತಾಡುತ್ತ ಕುಳಿತ್ತಿದ್ದರು. ಹಿಂದಿನ ಸೀಟಲ್ಲಿ ಕುಳಿತಿದ್ದ ಅನುಷ , ಗಾಯನ , ಶ್ವೇತ ತಣ್ಣಗೆ ಕುಳಿತು ಹಾಗೆ ನಿದ್ರೆಗೆ ಜಾರಿದ್ದರು. ಆದ್ರೆ ಸುಬ್ರಹ್ಮಣ್ಯ ಬರುವವರೆಗೂ ನಮ್ಮ ಅಜ್ಜಿಗಳ ಚರ್ಚೆ ನಡೆದೇ ಇತ್ತು. ಆಗ ಮುಂಜಾವು ೫ರ ಸಮಯ. ತುಂತುರು ಮಳೆ, ಚುಮುಚುಮು ಚಳಿ ನಮ್ಮನ್ನು ಸ್ವಾಗತಿಸಲೆಂದೇ ಕಾದಂತೆ ಭಾಸವಾಗುತ್ತಿತ್ತು.
ಫ್ರೆಶ್ ಆಗಲು ದೇವ್ ಬಾಲಾಜಿ ಲಾಡ್ಜ್ ಗಳಲ್ಲಿ ರೂಂ ಸಿಗದೇ ಪಬ್ಲಿಕ್ ಟಾಯ್ಲೆಟ್ ನಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳಿ ಅಂದಾಗ ನಂಗೆ ಬಂದ ಕೋಪ ಅಷ್ಟಿಷ್ಟಲ್ಲ. ಆ ಕೋಪಕ್ಕೆ ನಾನು ಚಬ್ಬಿ ಯಾವ್ದಾದ್ರು ರೂಂ ಸಿಗಬಹುದ ಅಂತ ಪ್ರಯತ್ನಿಸಿ ಜೋಲು ಮುಖ ಹೊತ್ತು ವಾಪಸ್ಸಾದೆವು. ನಂತರ ಬೆಳಗಿನ ಉಪಹಾರಕ್ಕೆ ನಾನು ಅನುಷ ಮೊದಲೇ ಅಂದುಕೊಂಡಂತೆ ರುಚಿಕಟ್ಟಾದ ಅವಲಕ್ಕಿ ಮೊಸರು ಮತ್ತು ಬನ್ಸ್ ಸವಿದರೆ ಅದರ ಮಜಾ ಗೊತ್ತಿಲ್ಲದ ಚಬ್ಬಿ ಮಾಮೂಲಿ ಇಡ್ಲಿ ವಡೆಗೆ ತೃಪ್ತಿ ಪಟ್ಟಳು. ನಂತರ ಶುರುವಾದದ್ದೇ ಆಪರೇಶನ್ ಜಿಗಣೆ ! ಹೇಗಾದರು ಮಾಡಿ ಜಿಗಣೆಗಳಿಗೆ ಬ್ರಹ್ಮಾಸ್ತ್ರ ರೆಡಿ ಮಾಡಬೇಕೆಂದು ೧ಕೆಜಿ ಉಪ್ಪು ಖರೀದಿಸಿದ್ದು ಆಯ್ತು. ನಂತರ ಫಾರೆಸ್ಟ್ ರೇಂಜರ್ ಗೆ ಮೀಸಲಾದ ಸಣ್ಣ ಮನೆಯಲ್ಲಿ ಟ್ರೆಕ್ಕಿಂಗ್ ಗೆ ಅಣಿಯಾದೆವು. ಆದರೆ ಅದಕ್ಕೂ ಮುನ್ನ ಪಯಣಿಸಿದ ೨೦-೨೫ ನಿಮಿಷಗಳ ಪ್ರಯಾಣ ಅದೆಷ್ಟು ಹಿತಕರವಾಗಿತ್ತಂದ್ರೆ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲೂ ಹಬ್ಬಿದ್ದ ಹಸಿರ ರಾಶಿ ಕಣ್ಣಿಗೆ ಹಬ್ಬ ತರುತ್ತಿತ್ತು. ಇನ್ನು ನನಗೆ ,ಛಬ್ಬಿ ,ಕಡ್ಡಿ ತಲೆ ತುಂಬ ಕೊರಿತಿದ್ದ ಹುಳ ಅಂದ್ರೆ ಈ ಜಿಗಣೆಗಳನ್ನು ಹೇಗೆ ನಿಭಾಯಿಸೋದು ಅಂತ.
ಕಾಡಿನೆಡೆಗೆ ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದ್ದ ನಮಗೆ ಆರಂಭದಲ್ಲೇ ಕಾಡಲು ಶುರು ಮಾಡಿದವು ನೋಡಿ ಈ ಜಿಗಣೆಗಳು ನಮಗಂತೂ ಆ ಕ್ಷಣದ ಮಟ್ಟಿಗೆ ಪ್ರಪಂಚದಲ್ಲಿರುವ ಏಕೈಕ ಶತ್ರುಗಳು ಇವೆ ಇರಬೇಕು ಅನ್ನಿಸಲು ಶುರುವಾಯಿತು . ಕಣ್ಣು ಮಿಟುಕಿಸುವಷ್ಟರಲ್ಲಿ ಅದೆಲ್ಲಿಂದಲೋ ಬಂದು ರಕ್ತ ಹೀರಲು ಶುರು ಮಾಡುತ್ತಿದ್ದವು. ಹಿಂದಿನ ದಿನ ಬಿದ್ದ ಮಳೆಗೆ ತುಂಬಿ ಹರಿಯುತ್ತಿದ್ದ ನದಿ ದಾಟಲು ಎಲ್ಲರು ದೇವ್ ಬಾಲಾಜಿ ಒದಗಿಸಿದ ರೋಪ್ ಸಹಾಯದೊಂದಿಗೆ ನೀರಿಗಿಳಿದೆವು. ನಮ್ಮೆಲ್ಲರಿಗಿಂತ ಸಕತ್ ಹುರುಪಿನಲ್ಲಿದ್ದ ನೀತು ಅದ್ಯಾಕೋ ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದದ್ದೇ ಬಂತು. ಹಿಂದೆ ಇದ್ದ ನಾನು ಗಾಯನ ನೀರು ಪಾಲು! ಅಂತು ಇಂತೂ ನದಿ ದಾಟಿ ಕಿನಾರೆ ಮುಟ್ಟಿದಾಗಲೇ ಅರಿವಾದದ್ದು ನಮ್ಮ ಮೊಬೈಲುಗಳು ನೀರಿನಲ್ಲಿ ಮುಳುಗಿ ಸತ್ತಿವೆ ಅಂತ! ಮತ್ತೆ ಶುರು ಕಾಡಿನೊಳಗಿನ ಯಾನ....
ಎಲ್ಲರು ಯುದ್ದಕ್ಕೆ ಹೊರಟ ಸೇನಾನಿಗಳಂತೆ ಕಾಲಿಗೆ ಹರಳೆಣ್ಣೆ ನಶ್ಯ ಪುಡಿ ಲೇಪಿಸಿಕೊಂಡು ಜಿಗಣೆಗಳನ್ನು ಶಪಿಸುತ್ತ ಮುನ್ನಡೆದೆವು. ಕಾಡಿನೊಳಗಿನ ಆ ಪ್ರಶಾಂತತೆ ಮನಸ್ಸಿಗೆ ಖುಷಿ ಕೊಟ್ಟರೆ ಹಕ್ಕಿಗಳು ಅಗೋ ಯಾರೋ ಬರ್ತಿದ್ದಾರೆ ಅಂತ ತಮ್ಮಲ್ಲೇ ಚಿಲಿಪಿಲಿ ಮೂಲಕ ಸಂದೇಶ ರವಾನಿಸುತ್ತಿದ್ದವು. ಮಾರ್ಗ ಮಧ್ಯೆ ಅಲ್ಲಲ್ಲಿ ಸಿಗುತ್ತಿದ್ದ ಆನೆಯ ಲದ್ದಿ ನೋಡಿ ಸದ್ಯ ಹಳೆಯದ್ದು ಅಂತ ನಿಟ್ಟುಸಿರು ಬಿಡುತ್ತಿದ್ದೆವು. ಮೊದಲೇ ಮಳೆ ಬಿದ್ದದ್ದಕ್ಕೋ ಏನೋ ಕಾಲಿಟ್ಟ ಕಡೆಯೆಲ್ಲ ಬರೀ ಜಿಗಣೆಗಳು! ಅವನ್ನು ಮೊದಲು ನಾನು ನೋಡಿರದ ಕಾರಣ ನನ್ನ ಶೂಗಳ ಮೇಲೆ ಅವು ಹತ್ತುತ್ತಿದ್ರೆ ಕಿಟಾರನೆ ಕಿರುಚಿ ಸಹಾಯಕ್ಕಾಗಿ ಕೈಲಿದ್ದ ಕೋಲಿಂದ ಅವನ್ನು kittuvudakke ವಿಫಲ ಯತ್ನ ನಡೆಸುತ್ತಿದ್ದೆ. ಆರಂಭದಿಂದಲೂ ನನಗೆ ಜಿಗಣೆ ಹತ್ತಿದಾಗ ನೆರವಿಗೆ ಬರ್ತಿದ್ದ ದಿನೇಶ್ ಗೆ ಅದೆಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿ . ಈ ಜಿಗಣೆಗಳು ಬಿಸಿಲೆಯ ಆ ಅದಮ್ಯ ನಿಸರ್ಗ ಸಿರಿಯನ್ನು ಸವಿಯಲು ಬಿಡದೆ ಅದೆಷ್ಟು ಕಾಟ ನೀಡಿದವೆಂದ್ರೆ ರಾತ್ರಿ ಕನಸಲ್ಲೂ ಅವುಗಳದ್ದೇ ಕಾರುಬಾರು! ಮದ್ಯಾಹ್ನ ೧೨ರ ಹೊತ್ತಿಗೆ ನಾವು ಕಾಡಿನ ನಡುವೆ ವಿಶ್ರಮಿಸಲು ಇದ್ದ ಹಳೆಯ ಪುಟ್ಟ ಕಟ್ಟಡವನ್ನು ಹೊಕ್ಕೆವು. ಅಲ್ಲಿ ಮದ್ಯಾಹ್ನದ ಊಟ ಮುಗಿಸಿದೆವು. ಅಷ್ಟರಲ್ಲೇ ಶುರುವಾಯ್ತು ಜಡಿ ಮಳೆ. ನದಿ ದಾಟಿದರೆ ಜಿಗಣೆ ಕಾಟ ಕಮ್ಮಿ ಅಂತ ದೇವ್ ಅಂದಾಗ ಅದಕ್ಕೆ ಸಮ್ಮತಿಸಿದ್ದ ನಮಗೆ ಮಳೆ ಅಡ್ಡಿಪಡಿಸಿತು. ಹಾಗಾಗಿ ಮತ್ತೊಮ್ಮೆ ಕಾಡಿನ ನಡುವೆ ಹೆಜ್ಜೆ ಹಾಕಲೇ ಬೇಕಾಯಿತು.
ಬಿಸಿಲೆಯ ವೈಶಿಷ್ಟ್ಯ ಅಂದ್ರೆ ಇಲ್ಲಿನ ಗಗನ ಚುಂಬಿ ಮರಗಳು. ದಿನಕರನ ಅಷ್ಟೂ ಬಿಸಿಲನ್ನು ಹೊಟ್ಟೆ ಬಾಕಗಳಂತೆ ಹೀರಿಕೊಂಡು ಬಾನೆತ್ತರಕ್ಕೆ ಬೆಳೆಯುತ್ತವೆ ಇಲ್ಲಿನ ಮರಗಳು. ಪಶ್ಚಿಮ ಘಟ್ಟಕ್ಕೆ ಸೇರುವ ಈ ಕಾಡಿನ ಮರಗಳ ಕಾಂಡ ಬೃಹತ್ ಗಾತ್ರದವು. ಕಾಲಿಟ್ಟ ಕಡೆಯೆಲ್ಲ ಕಾಡುವ ಜಿಗಣೆಗಳು ಒಂದೆಡೆಯಾದರೆ ಬಣ್ಣ ಬಣ್ಣದ ಕ್ರ್ಯಾಬ್ ಗಳು ಅಚ್ಚರಿ ಹುಟ್ಟಿಸುತ್ತಿದ್ದವು. ಮತ್ತೆ ನಮ್ಮ ಪಯಣ ಮಳೆಯ ನಡುವೆಯೇ ಶುರುವಾಯಿತು. ತಗ್ಗಿನಿಂದ ಎತ್ತರ ಪ್ರದೇಶಕ್ಕೆ ಸಾಗುತ್ತಿದ್ದುದರಿಂದ ಮಳೆ ನೀರು ಸಣ್ಣ ಜಲಪಾತದಂತೆ ನಮ್ಮ ಎದುರು ಹರಿದು ಬರುತ್ತಿತ್ತು. ಪುಟ್ಟ ಝರಿಯ ಮೇಲೆ ಹೆಜ್ಜೆ ಹಾಕುತ್ತ ೩ ಗಂಟೆ ಪ್ರಯಾಣ ಮಾಡಿದ್ದು ಅರಿವಿಗೆ ಬರಲಿಲ್ಲ. ಅದರಲ್ಲೂ ಮಳೆಗೆ ಹೊಮ್ಮುವ ಮಣ್ಣಿನ ಘಮ, ಕಾಡಿನ ತಂಪಾದ ಪರಿಸರದಲ್ಲಿ ನಾವೆಲ್ಲ ಅಕ್ಷರಶಃ ಸ್ವರ್ಗ ಸುಖ ಅನುಭವಿಸುತ್ತಿದ್ದೆವು! ಕಾಡಿನಿಂದ ರಸ್ತೆಯ ಮಾರ್ಗ ಸಿಕ್ಕಾಗ ಎಲ್ಲರು ಕೊಂಚ ಸುಸ್ತಾಗಿದ್ದೆವು.. ದೇವ್ ಕೊಟ್ಟ ಕಡ್ಲೆ ಮಿಠಾಯಿ ತಿಂದು ಅಲ್ಲೇ ಪಕ್ಕದಲ್ಲೇ ಹರಿಯುತ್ತಿದ್ದ ನೈಸರ್ಗಿಕ ಜರಿಯೊಂದರಿಂದ ಕುಡಿದ ನೀರಿನ ಆ ಸ್ವಾದವನ್ನು ಹೇಗೆ ವರ್ಣಿಸಲಿ? ಅಂದು ಸಂಜೆ ಬಿಸಿಲೆ ಚೆಕ್ಪೋಸ್ಟ್ ನಲ್ಲಿನ ಹೋಟೆಲೊಂದರಲ್ಲಿ ಬಂದಿಳಿದೆವು. ಮೊದಲೇ ಮಳೆಯಲ್ಲಿ ನೆಂದು ನಡುಗುತ್ತಿದ್ದ ನಮಗೆ ಅಲ್ಲಿ ಸಿಕ್ಕ ಬಿಸಿಬಿಸಿ ಕಾಫಿ ಮತ್ತು ಆಮ್ಲೆಟ್ ಕೊಂಚ ನೆಮ್ಮದಿ ತಂದವು. ಆದ್ರೆ ಬಿಡದೆ ಸುರಿಯುತ್ತಿದ್ದ ಮಳೆಯಿಂದ ಟೆಂಟ್ ಹಾಕಿ ಮಲಗುವ ಯೋಜನೆ ಕ್ಯಾನ್ಸಲ್ ಆಗಿ ಎಲ್ಲರಿಗು ಬೇಸರ ತಂದಿತ್ತು. ಅಂದು ರಾತ್ರಿ ನಾವು ತಂಗಿದ ಮನೆಯೊಡತಿ ರುಚಿಯಾದ ಅನ್ನ ಬೆಳೆ ಸಾರು ಮಾಡಿದ್ದರು. ಬಿಸಿನೀರಿನ ಸ್ನಾನ ಮುಗಿಸಿ ನಾವೆಲ್ಲ ಹರಟೆಯಲ್ಲಿ ತೊಡಗಿದರೆ ದೇವ್ ಬಾಲಾಜಿ ಸ್ಲೀಪಿಂಗ್ ಬ್ಯಾಗ್ ಒಳಹೊಕ್ಕಿ ನಿದ್ರಿಸುತ್ತಿದ್ದರು! ಜೊತೆಗಿದ್ದ ದಿನೇಶ್ ತನ್ನ ಟ್ರೆಕ್ಕಿಂಗ್, ಫೋಟೋಗ್ರಫಿ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡಿದ. ಅವನ ನಾಲೆಡ್ಜ್ ಕಂಡ ನಮಗಂತೂ ಅಚ್ಚರಿ. ನಿಜಕ್ಕೂ ದಿನೇಶ್ ನಮ್ಮ ಟ್ರೆಕ್ಕಿಂಗ್ ನಲ್ಲಿ ಬೇಸರವಾಗದಂತೆ ಮಾಹಿತಿ ಜೊತೆಗೆ ತನ್ನ ಎಕ್ಸಲೆಂಟ್ ಫೋಟೋಗ್ರಫಿಯಿಂದ ಆಶ್ಚರ್ಯ ಮೂಡಿಸಿದ್ದು ಸುಳ್ಳಲ್ಲ. ಅಂದು ರಾತ್ರಿ ಗೂಡು ಹೊಕ್ಕ ಮರಿಗಳಂತೆ ಸ್ಲೀಪಿಂಗ್ ಬ್ಯಾಗ್ ನೊಳಗೆ ಮಲಗಿದ್ದಾಯಿತು.
ಮರುದಿನ ಮುಂಜಾನೆ ಮೈ ನಡುಗಿಸುವ ಚಳಿ ಜೊತೆಗೆ ದಾರಿ ಕಾಣದಷ್ಟು ಗಾಢವಾದ ಮಂಜು ಕಣ್ಣಿಗೆ ಮನಸ್ಸಿಗೆ ಹಬ್ಬ ತಂದಿತ್ತು. ಬೆಳಗ್ಗೆ ನಾವು ತಂಗಿದ್ದ ಮನೆಯ ಆಂಟಿ ಮಾಡಿದ್ದ ಬಿಸಿಬಿಸಿ ಕೈ ರೊಟ್ಟಿ ಕಾಯಿ ಚಟ್ನಿ ರುಚಿ ಸೂಪರ್ ! ನಂತರ ಬೆಚ್ಚನೆ ಜಾಕೆಟ್ ಶೂಗಳೊಂದಿಗೆ ಬ್ಯೂಟಿ ಸ್ಪಾಟ್ ನತ್ತ ಪಯಣ! ಅಲ್ಲಂತೂ ಮುಂಜಾನೆಯ ಮಂಜು ಗಿರಿ ಶಿಖರಗಳನ್ನು ಅದ್ಯಾವ ಪರಿ ಆವರಿಸಿತ್ತಂದ್ರೆ ಅದರ ಬಣ್ಣನೆ ಅಕ್ಷರಗಳಲ್ಲಿ ಅಸಾಧ್ಯ ! ಮಳೆ ಬರಲಿ ಮಂಜೂ ಇರಲಿ ಅನ್ನೋ ಹಾಗೆ ಇತ್ತು ಅಲ್ಲಿನ ವಾತಾವರಣ. ಬಳಿಕ ಮಂಜರಬಾದ್ ಕೋಟೆಯತ್ತ ಚಿತ್ತ ನೆಟ್ಟ ನಾವು ಬಿಸಿಲೆಯ ಚೆಲುವನ್ನು ಬಿಟ್ಟು ಬರಲು ಅನುಭಬಿಸಿದ ಸಂಕಟ ನಮಗೆ ಗೊತ್ತು! ಕೋಟೆಯನ್ನು ನೋಡಿ ಬರಲು ೧ ಗಂಟೆ ಸಮಯ ಅಷ್ಟೆ ಅಂತ ದೇವ್ ಹೇಳಿದರು ನಾವು ಗಂಟೆ ಕಾಲ ಅಲ್ಲಿ ಕಳೆದೆವು. ಸಕತ್ ಫೋಟೋ ಸೆಶನ್ ಕೂಡ ಮಾಡಿದೆವು. ಸವಾರಿ ಸಿನೆಮಾದಲ್ಲಿ ಶೂಟ್ ಮಾಡಿರುವ ಜಾಗಗಳಲ್ಲೇ ಫೋಟೋ ತೆಗೆದು ಖುಷಿ ಪಟ್ಟೆವು! ಬಳಿಕ ಸಕಲೇಶಪುರದ ಹೋಟೆಲೊಂದರಲ್ಲಿ ಅಕ್ಕಿ ರೊಟ್ಟಿ ಊಟ ಮಾಡಿ ಬೆಂಗಳೂರಿನತ್ತ ಪಯಣ ಬೆಳೆಸಿದೆವು. ಅಯ್ಯೋ ವೀಕೆಂಡ್ ಮೋಜು ಇಷ್ಟೇ ,ಮತ್ತೆ ಬೆಂಗಳೂರಿನ ಗಿಜಿ ಬಿಜಿ ಜೊತೆಗೆ ಆಫೀಸಿಗೆ ಹೋಗಬೇಕಾದನ್ನು ನೆನೆದು ಆಗುತ್ತಿದ್ದ ಸಂಕಟ ಹೇಳತೀರದು . ಆದ್ರೆ ಬೆಂಗಳೂರಿಗೆ ಬರುವ ದಾರಿಯಲ್ಲಿ ಮಾಡಿದ ಸಕ್ಕತ್ ಕೀಟಲೆ ಕಿತ್ತಾಟಗಳನ್ನೂ ಮರೆಯಲು ಸಾದ್ಯವೇ ಇಲ್ಲ.
ರಾತ್ರಿ ೯-೩೦ಕ್ಕೆ ಬೆಂಗಳೂರು ತಲುಪಿದೆವು. ಒಬ್ಬರಿಗೊಬ್ಬರು ವಿದಾಯ ಹೇಳಲು ಸಂಕಟ. ಬೇಸರದೊಂದಿಗೆ ಬಿಸಿಲೆಯ ಸವಿಸವಿ ನೆನಪನ್ನು ಮನಸಲ್ಲೇ ಚಪ್ಪರಿಸುತ್ತ ಮನೆಯತ್ತ ಹೆಜ್ಜೆ ಹಾಕಿದೆವು. ಅಂದು ರಾತ್ರಿ ಪಾಳಿ ಇದ್ದ ಕಾರಣ ನನ್ನ ದಾರಿ ಆಫೀಸಿನ ಕಡೆ. ಅನುಷ , ನೀತು, ಛಬ್ಬಿ, ಗಾಯನ, ಕಡ್ಡಿ ವಾವ್ ! ಎಷ್ಟ್ ಮಜಾ ಇತ್ತಲ್ವ ಟ್ರೆಕ್ಕಿಂಗ್? ನಾವೆಲ್ಲ ಹಿಡಿ ಶಾಪ ಹಾಕಿ ಕಚ್ಚಿಸಿಕೊಂಡ ಜಿಗಣೆ ಕಡಿತ ಈಗಲೂ ಬಿಸಿಲೆಯ ಸುಂದರ ಪ್ರಕೃತಿಯ ಗಿಫ್ಟು ಅಂದುಕೊಂಡು ಕುಶಿ ಪಡುತ್ತೇವೆ! ಅದೇ ನಿಸರ್ಗದ ಅಸಲಿ ಮಜಾ!!!