Friday, October 17, 2008

ಎಷ್ಟು ರಿಯಲ್...? ಎಷ್ಟು ರೀಲ್...?

ಸಮೂಹ ಮಾಧ್ಯಮಗಳಲ್ಲಿ ದೂರದರ್ಶನಕ್ಕಿರುವ ಸ್ಥಾನ ಬಹುದೊಡ್ಡದು. ಹಿಂದೆಲ್ಲಾ ರಾಮಾಯಣ, ಮಹಾಭಾರತಗಳಂತಹ ಸಭ್ಯ ಸದಭಿರುಚಿಯ ಕಾರ್ಯಕ್ರಮಗಳಿಂದ ದೂರದರ್ಶನ ಮನೆಮನ ಸೂರೆಗೊಂಡಿತ್ತು. ಆದ್ರೆ ಟಿವಿ ಯಲ್ಲಿ ಬರುವ ಈಗಿನ ಕಾರ್ಯಕ್ರಮಗಳ ಬಗ್ಗೆ ಮಾತಾಡೋದು ಸ್ವಲ್ಪ ಅಲ್ಲ, ತುಂಬಾನೇ ಕಷ್ಟ ಅನ್ನಬಹುದು. ಮನರಂಜನೆ, ಮ್ಯೂಸಿಕ್, ಸ್ಪೋರ್ಟ್ಸ್, ನ್ಯೂಸ್, ಫ್ಯಾಷನ್, ಕಾರ್ಟೂನ್, ಕಾಮಿಡಿ, ಬಿಸಿನೆಸ್ ನಿಂದ ಹಿಡಿದು ದೇವರಿಗೆ ಅಂತಲೇ ಪ್ರತ್ಯೇಕ ಚಾನೆಲ್ ಇರುವವರೆಗೆ ಹಬ್ಬಿದೆ ಈ ಮಾಯಾಜಾಲ. ಒಂದು ಚಾನೆಲ್ ಯಶಸ್ವಿ ಆಗಬೇಕಂದ್ರೆ ಅದರಲ್ಲಿ ಪ್ರಸಾರ ಆಗೋ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಬೇಕು. ಇದರಿಂದ ಕಾರ್ಯಕ್ರಮದ ಟಿಆರ್ ಪಿ ರೇಟಿಂಗ್ ಏರಬೇಕು, ಜೊತೆಗೆ ಹಣದ ಹೊಳೆ ಹರಿದು ಬರಬೇಕು.

ಇಷ್ಟೆಲ್ಲಾ ನಾನು ಹೇಳಬೇಕಾಗಿ ಬಂದ ಕಾರಣ ಅಂದ್ರೆ ರಿಯಾಲಿಟಿ ಶೋ ಎಂಬ ಮಾಯಾಬಜಾರು. ಯಾವ ಚಾನೆಲ್ ಹಾಕಿದ್ರೂ ಅಲ್ಲಿ ರಿಯಾಲಿಟಿ ಶೋಗಳದ್ದೇ ದರ್ಬಾರು. ಇಂತಹ ಕಾರ್ಯಕ್ರಮಗಳಿಲ್ಲದಿದ್ರೆ ಚಾನೆಲ್ ನಡೆಯೋದೇ ಇಲ್ಲ ಎಂಬಷ್ಟು ನಡೆದಿದೆ ಅವುಗಳ ಕಾರುಬಾರು. ರಿಯಾಲಿಟಿ ಹೆಸರಲ್ಲಿ ಟಿ.ವಿ ನೋಡುವ ಮಂದಿ ಮಂಡೆ ಬಿಸಿ ಆಗಿ ಮೂರ್ಖರ ಪೆಟ್ಟಿಗೆ ಆಗದಿರಲಿ ಚೂರು ಚೂರು!
ಈ ರಿಯಾಲಿಟಿ ಶೋಗಳು ಎಷ್ಟರ ಮಟ್ಟಿಗೆ ಜನರ ತಲೆ ಹೊಕ್ಕಿವೆ ಅಂದ್ರೆ ಆ ಕಾರ್ಯಕ್ರಮಗಳಲ್ಲಿ ಪ್ರಸಾರವಾಗುವುದೆಲ್ಲಾ ಕಟು ಸತ್ಯ ಎಂದು ಜನ ನಂಬುವಷ್ಟು . ಕೆಲದಿನಗಳಿಂದ ಖಾಸಗಿ ವಾಹಿನಿ ಕಲರ್ಸ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್-೨ ವನ್ನೇ ತಗೊಳ್ಳಿ. ಹೊರಜಗತ್ತಿನೊಡನೆ ಯಾವುದೇ ಸಂಪರ್ಕವಿಲ್ಲದೆ ಸ್ಪಧಿಗಳು 2-3 ತಿಂಗಳು ಬಿಗ್ ಬಾಸ್ ಮನೆಯಲ್ಲಿರಬೇಕು. ಈ ಅವಧಿಯಲ್ಲಿ ಮೇಲ್ನೋಟಕ್ಕೆ ಜೊಳ್ಳು ಕಾಳು ಗಟ್ಟಿ ಕಾಳು ಸ್ಪರ್ಧೆ ನಡೆದ್ರೂ ಅಲ್ಲಿ ನಡೆಯುವ ಘಟನೆಗಳು ಚಿತ್ರ ವಿಚಿತ್ರ . ಹೇಳಿ ಕೇಳಿ ಅಲ್ಲಿ ಬರಿ ಸೆಲಿಬ್ರಿಟಿಗಳದ್ದೆ ಪಾರುಪತ್ಯ . ಆರಂಭದಲ್ಲಿ ದೋಸ್ತಿಗಳಾಗಿದ್ದವ್ರು ದಿನೇ ದಿನೇ ದಿನೇ ದುಶ್ಮನ್ಗಳಾಗೋದು ಇಲ್ಲಿ ಕಾಮನ್. ಸುತ್ತಲೂ ಹದ್ದಿನ ಕಣ್ಣಿನಂತೆ ಕ್ಯಾಮೆರಾಗಳಿದ್ರೂ ಅವರ ಅಬ್ಬರದ ಆಟೋಪ, ಕೋಪ-ತಾಪ, ಪ್ರೀತಿ-ಸಲ್ಲಾಪ, ಆರೋಪ-ಪ್ರತ್ಯಾರೋಪ, ಕಣ್ಣೀರು-ಸಂತಾಪಗಳಿಗೆ ಬರವಿರೋದಿಲ್ಲ। ವಾರದ ಆರಂಭದಲ್ಲಿ ನಡೆಯೋ nomination ಪ್ರಕ್ರಿಯೆ ಮತ್ತು ವಾರಾಂತ್ಯದಲ್ಲಿ ನಡೆಯೋ elimination ಪ್ರಕ್ರಿಯೆ ಬಿಗ್ ಬಾಸ್ ಮನೆಯಲ್ಲಿರೋರ ಬಣ್ಣ ಬಯಲು ಮಾಡೋ ರಂಗ ಮಂದಿರ. ಇಷ್ಟೆಲ್ಲ ಆದ್ರೂ ವೀಕ್ಷಕರಿಗೆ ಮಾತ್ರ ಇದೊಂಥರ ರಸಗವಳ, ಚಾನೆಲ್ ನವರಿಗೆ TRP ಕಾ ಮಾಮ್ಲಾ, ಒಟ್ಟಾರೆ ಪೈಸೆ ಕೇ ಲಿಯೇ ಕುಛ್ ಭೀ ಕರೇಗಾ...!
ಇನ್ನು ಸಿನಿಮಾ, ಧಾರಾವಾಹಿಗಳ ಕಲಾವಿದರನ್ನು ವೇದಿಕೆ ಹತ್ತಿಸಿ ಹೆಜ್ಜೆ ಹಾಕಿಸೋ ಕಾರ್ಯಕ್ರಮಗಳಿಗಂತೂ ಲೆಕ್ಕವೇ ಇಲ್ಲ. ಒಂದಷ್ಟು ಮಸ್ತಿ, ಮತ್ತಷ್ಟು ಕುಸ್ತಿ ಮಾಡಿಸಿ ( pre planned ಮನಸ್ತಾಪ!) TRP ಹೆಚ್ಚಿಸಿಕೊಳ್ಳೋ ತಂತ್ರಗಳಂತೂ ದೇವರಿಗೇ ಪ್ರೀತಿ.
ರಿಯಾಲಿಟಿ ಶೋ ಅನ್ನೋ ಮಾಯಾಬಜಾರ್ ಕಥೆ ಇಷ್ಟಕ್ಕೇ ಮುಗಿಯಲ್ಲ. ಖ್ಯಾತ ಚಿತ್ರ ನಟ ನಟಿಯರಿಂದ ಕ್ವಿಝ್ಝೋ, ಗೇಮ್ ಶೋವನ್ನೋ ಮಾಡಿಸುವ ಪರಿಪಾಠ ನಿಲ್ಲುವ ಸೂಚವೆ ಸದ್ಯಕ್ಕಂತೂ ಇಲ್ಲ. ಉದಯೋನ್ಮುಖ ಗಾಯಕ-ಗಾಯಕಿಯರ ಶೋಧದ ಹೆಸರಲ್ಲೂ ಈ 'ವ್ಯಾಪಾರ' ಜನಪ್ರಿಯ. ಇಲ್ಲಿ ಕಾಲೇಜು ಹುಡುಗ ಹುಡುಗಿಯರೊಂದಿಗೆ ಮುಗ್ಧ ಮನಸ್ಸಿನ ಮಕ್ಕಳೂ ಸರಕಾಗುತ್ತಿರೋದು ವಿಷಾದನೀಯ. ಜೊತೆಗೆ ಪೋಷಕರ 'ಅಭೂತಪೂರ್ವ' ಬೆಂಬಲ. ಇವೆಲ್ಲದರ ಜೊತೆಗೆ ಮಹಿಳಾ ಮಣಿಗಳಿಗೆ ಸೀರೆ, ಚಿನ್ನ, ವಿದೇಶ ಪ್ರವಾಸದ ಆಸೆ ತೋರಿಸಿ TRP ಹೆಚ್ಚಿಸಿಕೊಳ್ಳುವ ಶೋಗಳೂ ಬಹಳಷ್ಟು ಸಿಕ್ತವೆ.
ಾಗಂತ ರಿಯಾಲಿಟಿ ಶೋಗಳು ಮಾಡೋದೆಲ್ಲಾ ಬರೀ TRP ಗಾಗಿ, ಮತ್ತು ಅವುಗಳ ಕಾರ್ಯಕ್ರಮದ ರೀತಿ ರಿವಾಜುಗಳೆಲ್ಲಾ ತಪ್ಪು ಅನ್ನೋದು ಸ್ವಲ್ಪ ಮಟ್ಟಿಗೆ ತಪ್ಪು. ಹ್ಹಾಂ, ಖಂಡಿತ ಇವುಗಳಿಂದ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ. ಆದ್ರೆ ರಿಯಾಲಿಟಿ ಹೆಸರಲ್ಲಿ ಶೋ ನಾಟಕೀಯ ಆಗದಿದ್ರೆ ಅದು ಚೆನ್ನ. ಮತ್ತೊಂದು ದೃಷ್ಟಿಯಲ್ಲಿ ನೋಡಿದ್ರೆ ತೀರ್ಪುಗಾರರ ಟೀಕೆಗಳಿಂದ ಎಷ್ಟೋ ಪ್ರತಿಭಾವಂತ ಮತ್ತು ಮಹತ್ವಾಕಾಂಕ್ಷಿಗಳು ಇರುವ ಅಲ್ಪ ಉತ್ಸಾಹವನ್ನು ಕಳೆದುಕೊಳ್ಳುವ ಸಂಭವವೂ ಇದೆ. ಪ್ರತಿಷ್ಟಿತ ಚಾನೆಲ್ ಒಂದರ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡ ಬೆಂಗಾಲಿ ಹುಡುಗಿ ಶಿಂಜಿನಿ ಇದಕ್ಕೆ ಪ್ರತ್ಯಕ್ಷ ಉದಾಹರಣೆ. ಆದ್ರೆ ಇದಕ್ಕೆ ತದ್ವಿರುದ್ಧ ಜೈಪುರದ ಭಾನು ಪ್ರತಾಪ್ ಸಿಂಗ್. ಇಂಡಿಯನ್ ಐಡಲ್ ನಲ್ಲಿ ಭಾಗವಹಿಸಬೇಕೆಂಬ ಅದಮ್ಯ ಆಸೆ ಚಿಗುರುವ ಮುನ್ನವೇ ಅದಕ್ಕೆ ಕೊಡ್ಲಿ ಪೆಟ್ಟು ಪಡೆದಾತ ಇವ. ೩ ಬಾರಿ ಸತತವಾಗಿ ಸ್ಪರ್ಧೆಯ ಮೊದಲ ಸುತ್ತಿನಲ್ಲೆ ಹೊರ ನಡೆದ ಭಾನು ಎದೆಗುಂದದೆ ಈಗ ಯಶಸ್ಸಿನ ಪಯಣದತ್ತ ಮುಖ ಮಾಡಿ ಹೊರಟಿದ್ದಾನೆ. ಇಂತಹ ಪ್ರಕರಣಗಳಿಗೆ ತೀರ್ಪುಗಾರರನ್ನು ನೇರಹೊಣೆ ಮಾಡುವವರೂ ಇದ್ದಾರೆ, ಅದನ್ನು ಸಮರ್ಥಿಸಿಕೊಳ್ಳುವವರೂ ಸಿಕ್ತಾರೆ. ಒಟ್ಟಾರೆ ಇವೆಲ್ಲಾ ರಿಯಾಲಿಟಿ ಶೋಗಳ ರಿಯಾಲಿಟಿ ಅಷ್ಟೇ.

ಪ್ಪು ಒಪ್ಪುಗಳೇನೇ ಇದ್ರೂ ನಮ್ಮ ಜನ ಮಾತ್ರ ಇವುಗಾಳ ಮಾಯಾಜಾಲದಲ್ಲಿ ಬಂಧಿಗಳಾಗಿರೋದಂತೂ ಸತ್ಯ, ಸತ್ಯ, ಸತ್ಯ. ಇನ್ನು ಈ ಶೋಗಳು ವಾರಾಂತ್ಯದಲ್ಲಿ ಮಾಡುವ ಎಲಿಮಿನೇಷನ್ ಮತ್ತು ನಾಮಿನೇಷನ್ ಗಳ ಎಸ್ಸೆಮ್ಮೆಸ್ ಪ್ರಕ್ರಿಯೆಯಿಂದಂತೂ ಹಣದ ಹೊಳೆಯೇ ಹರಿದು ಬರುತ್ತೆ. ಆದ್ರೆ ಮನರಂಜನೆಯ ಹೆಸರಲ್ಲಿ ಹಣ ಹೊಡಿಯೋ, ಮುಗ್ಧ ಮನಸ್ಸುಗಳನ್ನು ಮುರಿಯೋ ರಿಯಾಲಿಟಿ ಶೋಗಳಲ್ಲಿ ಎಷ್ಟು ರಿಯಲ್? ಎಷ್ಟು ರೀಲ್? ಇದಕ್ಕೆ ಉತ್ತರ ಹೇಳೋರ್ಯಾರು?

5 comments:

ಶ್ರೀನಿಧಿ.ಡಿ.ಎಸ್ said...

ಅಂತೂ ಇಂತೂ ಬ್ಲಾಗ್ ಅಪ್ ಡೇಟ್ ಆಯ್ತು! ಒಳ್ಳೇ ಬರಹ.. ಆದ್ರೂ, ಇನ್ನೂ ಸ್ವಲ್ಪ ಡೀಟೇಲ್ ಆಗಿ ಬರೀಬೇಕಿತ್ತು ಅಂತ ಅನ್ನಿಸಿತು.. :)

sunil s said...

good story keep it up wright something about life tv and film is not a real life

sunil s said...

vvvvvvvvvvvvvvv

ತೇಜಸ್ವಿನಿ ಹೆಗಡೆ said...

True! Agree with you.

sudi said...

its so boring...