Wednesday, October 22, 2008

ಝಣ ಝಣ ಕಾಂಚಾಣ...

ಚಿಕ್ಕವರಿದ್ದಾಗ ಸಿನಿಮಾ ನಟರನ್ನ ನೋಡೋದಂದ್ರೆ ಅಬ್ಬಬ್ಬಾ ಅದೇನ್ ಖುಷಿ ಅದೇನ್ ಕಥೆ? ರಾಜ್ ಕುಮಾರ್ ಬರ್ತಾರಂತೆ! ಅವ್ರು ಹಾಡ್ ಹಾಡಿ ಹೆಜ್ಜೇನೂ ಹಾಕ್ತಾರಂತೆ? ಇಂತಹ ಪ್ರಶ್ನೆಗಳೇ ಸಾಕಿದ್ದವು, ಸಿನಿಮಾ ನಟರ ಬಗೆಗಿನ ಹುಚ್ಚು ಅದೆಷ್ಟಿತ್ತು ಅನ್ನೋದನ್ನ ಹೇಳೋದಕ್ಕೆ. ನಾನೊಮ್ಮೆ ಪುಟ್ಟವಳಿದ್ದಾಗ ಮನೆಯವ್ರ ಜೊತೆಗೆ ಜಾತ್ರೆಗೆ ಹೋದಾಗ ಅಲ್ಲಿಗೆ ಅಂದಿನ ಖ್ಯಾತ ತಾರಾ ಜೋಡಿ ಮಾಲಾಶ್ರೀ ಮತ್ತು ಶಶಿ ಕುಮಾರ್ ಬಂದಿದ್ದ ನೆನಪು. ಅದೆಷ್ಟು ಜನ ಸೇರಿದ್ದರು? ಮತ್ಯಾವಾಗಲೋ ಡಾ.ರಾಜ್ ಕುಮಾರ್ ಅವರನ್ನು ಕಂಡಿದ್ದ ನೆನಪಿದೆ. ಆಗೆಲ್ಲಾ ಎಷ್ಟು ಥ್ರಿಲ್ ಆಗಿದ್ದೆ? ಮಾರನೆ ದಿನ ಕ್ಲಾಸಿಗೆ ಹೋಗಿ "ನೀನೂ ಬಂದಿದ್ದೇನೇ ನಿನ್ನೆ? ನಾನಂತೂ ಹೋಗಿದ್ನಪ್ಪಾ!" ಅಂತ ಜಂಭ ಕೊಚ್ಚಿಕೊಳ್ತಿದ್ದು ನೆನಪಾದ್ರೆ ಈಗ ನಗು ಬರುತ್ತೆ.

ಆದ್ರೀಗ ಪರಿಸ್ಥಿತಿ ತೀರಾ ಭಿನ್ನ. ನಮಗ್ಯಾವ ಸಿನಿಮಾ ತಾರೆ ಬೇಕೋ ಅವರೇ ಖುದ್ದು ಮನೆಗೆ ಬರಬಹುದು! ಮತ್ತೆ ನಾನು ರಿಯಾಲಿಟಿ ಶೋಗಳ ಬಗ್ಗೆ ಬರೀತಿದ್ದೀನಿ ಅಂತ ಕೋಪ ಮಾಡ್ಕೋಬೇಡಿ. ವಿಷಯಕ್ಕೆ ಬರ್ತೀನಿ. ಹಾಂ, ಎಲ್ಲಿದ್ದೆ? ಅದೇ ಸ್ಟಾರ್ ಗಳು ನಮ್ಮ ಮನೆಗ್ ಬರೋ ವಿಷಯ ತಾನೇ? ಕಾರಣ ಈ ರಿಯಾಲಿಟಿ ಶೋಗಳೇ ನೋಡಿ. ಯಾವ ವಾಹಿನಿಯೇ ಆಗಲೀ ಅದರಲ್ಲಿ ರಿಯಾಲಿಟಿ ಶೋ ಇಲ್ಲದಿರುವ ಮಾತೇ ಇಲ್ಲ. ಹಾಗಂತ ಜನ ಸುಮ್ನೆ ಆ ಕಾರ್ಯಕ್ರಮಗಳನ್ನ ನೋಡ್ತಾರ? ಅದಕ್ಕಾಗೇ ದೊಡ್ಡ ದೊಡ್ಡ ಸಿನಿಮಾ ತಾರೆಯರನ್ನು ತೆಕ್ಕೆಗೆ ಹಾಕಿಕೊಂಡು ಅವರಿಗೆ ಲಕ್ಷಾಂತರ ರೂಪಾಯಿಗಳನ್ನ ತೆತ್ತು ಆಯೋಜಕರು ಈ ಶೋಗಳನ್ನು ನಡೆಸುತ್ತಾರೆ.

ಟ್ರೆಂಡ್ ಹುಟ್ಟಿದ್ದು ಸ್ಟಾರ್ ಪ್ಲಸ್ ಚಾನೆಲ್ ನ ಕೌನ್ ಬನೇಗಾ ಕರೋಡ್ ಪತಿಗಾಗಿ ಅಮಿತಾಬ್ ಬಚ್ಚನ್ ಹಾಟ್ ಸೀಟ್ ನಲ್ಲಿ ಕುಳಿತಾಗ. ಹೌದು, ಬಿಗ್ ಸ್ಕ್ರೀನ್ ನಲ್ಲಿ ಮೆರೆದಾಡಿದ ಮೇರು ನಟನೊಬ್ಬ ಟೆಲಿವಿಶನ್ ನ ಪುಟ್ಟ ಪರದೆ ಮೇಲೆ ಬಂದು ಜನ ಮನ ಗೆಲ್ಲೋದು ಚಿಕ್ಕ ಸಂಗತಿಯೇನಲ್ಲ. ಆದ್ರೆ ಅಮಿತಾಬ್ ಸಿನಿಮಾಗಳು ಮೇಲಿಂದ ಮೇಲೆ ತೋಪೆದ್ದು ಕೈ ಖಾಲೀ ಇದ್ದಾಗ ಕೈ ಹಿಡಿದು ಕಾಪಾಡಿದ್ದು ಕೆಬಿಸಿ ಕಾರ್ಯಕ್ರಮ. ಕ್ರಮೇಣ ಇದೊಂಥರ ಸಾಮೂಹಿಕ ಸನ್ನಿಯ ಹಾಗೆ ಹಬ್ಬತೊಡಗಿತು. ನಂತರ ಸೋನಿ ಟೆಲಿವಿಶನ್ ನಲ್ಲಿ ಪ್ರಸಾರವಾದ ಜಿತೋ ಚಪ್ಪಡ್ ಫಾಡ್ ಕೆ ಗಾಗಿ ನಟ ಗೋವಿಂದ ಬಂದರು. ನಮ್ಮ ನೃತ್ಯ ಚತುರೆ ಮಾಧುರಿ ದೀಕ್ಷಿತ್ ಅಂತು ಒಂದ್ ಹೆಜ್ಜೆ ಮುಂದೆ ಹೋಗಿ ಅವಿವಾಹಿತ ವಧು ವರರಿಗೆ ಟಿವಿ ಯಲ್ಲಿ ಸಂದರ್ಶನ ಮಾಡಿಸಿ ಮದುವೆ ಮಾಡಿಸುವ ಕೆಲಸಾನು ಮಾಡಿದ್ದಾಯ್ತು. ಆಗೆಲ್ಲಾ ಇದು ಹೊಸತು ಅನ್ನಿಸಿದ್ದಕ್ಕೋ ಏನೋ ಜನಕ್ಕೂ ಟಿವಿಯಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡೋಕೆ ಇಷ್ಟವು ಆಗ್ತಿತ್ತು.


ಆದರೀಗ ನೋಡಿ ಯಾವ ಸ್ಥಿತಿ ಬಂದಿದೆ ಅಂತ. ಅಂತ ಎಲ್ಲೆಲ್ಲು ನಾವೇ ಎಲ್ಲೆಲ್ಲು ನಾವೇ ಅಂತ ಟೀವಿ ತುಂಬಾ ಬರೀ ಸಿನಿಮಾ ಸ್ಟಾರ್ ಗಳೇ ತುಂಬಿ ಹೋಗಿದ್ದಾರೆ. ಈ ಕಾರ್ಯಕ್ರಮಗಳ ಪಟ್ಟಿಯನ್ನೇ ನೋಡಿ. ಬಾದ್ ಷಾ ಶಾರುಖ್ ಖಾನ್ ( ಕ್ಯಾ ಆಪ್ ಪಾನ್ಚ್ವಿ ಪಾಸ್ ಸೆ ತೇಜ್ ಹೇ) , ಉರ್ಮಿಳಾ ಮಾತೊಂದ್ಕರ್ (ವಾರ್ ಪರಿವಾರ್ ) , ಅಕ್ಷಯ್ ಕುಮಾರ್ ( ಖಾತ್ರೊಂ ಕೆ ಖಿಲಾಡಿ) , ಹೃತಿಕ್ ರೋಶನ್ ( ಜುನೂನ್ ಕುಚ್ ಕರ್ ದಿಖಾನೇ ಕಾ) , ಸೊನಾಲಿ ಬೇಂದ್ರೆ (ಇಂಡಿಯನ್ ಐಡಲ್), ಕಾಜೋಲ್-ಅಜಯ್ ದೇವಗನ್ (ರಾಕ್ ಎನ್ ರೋಲ್ - ಫ್ಯಾಮಿಲಿ) ,ಸುಷ್ಮಿತಾ ಸೇನ್ ( ಏಕ್ ಆಗಿದ್ದೆ ಏಕ ಹಸೀನಾ) , ಶೆಟ್ಟಿ ( ಬಿಗ್ ಬಾಸ್ ) ಹೀಗೆ ಪಟ್ಟಿ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಹೋಗುತ್ತೆ.

ಅದೆಲ್ಲಾ ಬಿಡಿ, ಇಲ್ಲಿ ಕೇಳಿ...ಈ ಕಾರ್ಯಕ್ರಮಗಳನ್ನೆಲ್ಲಾ ನೋಡಿ ಚೆನ್ನಾಗಿದ್ರೆ ಓಕೆ, ಇಲ್ದಿದ್ರೆ ಹಿಗ್ಗಾ ಮುಗ್ಗಾ ಉಗೀತಿವಲ್ಲಾ? ಇವುಗಳಿಗೆ ಕಾರ್ಯಕ್ರಮದ ಆಯೋಜಕರು ಎಷ್ಟೆಲ್ಲ ಕಸರತ್ತು ಮಾಡ್ತಾರೆ ಗೊತ್ತಾ? (ಅಯ್ಯೋ ಹಾಗಂತ ಕಾರ್ಯಕ್ರಮ ಚೆನ್ನಾಗಿಲ್ದಿದ್ರೆ ಉಗೀಬೇಡಿ ಅಂತ ನಾನ್ ಹೇಳ್ತಿಲ್ಲಪ್ಪಾ!) ಸೋನಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ 'ದಸ್ ಕಾ ದಮ್' ನ ಪ್ರತಿ ಕಂತಿಗೆ ಆಯೋಜಕರು ಖರ್ಚು ಮಾಡುವ ಹಣ ೧.೨ರಿಂದ ೧.೫ ಕೋಟಿ. ಒಟ್ಟು ೩೬ ಕಂತುಗಳನ್ನು ಪ್ರಸಾರ ಮಾಡುವ ಗುರಿ ಸೋನಿ ಸಂಸ್ಥೆಯದ್ದು. ಲಂಡನ್ನಿನಲ್ಲಿ ಜನಪ್ರಿಯವಾಗಿರುವ 'ಬಿಗ್ ಬ್ರದರ್' ಈಗ ಭಾರತದಲ್ಲಿ 'ಬಿಗ್ ಬಾಸ್' ಆಗಿದೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವ ನಟಿ ಶಿಲ್ಪಾ ಶೆಟ್ಟಿ ಒಂದು ಎಪಿಸೋಡ್ ಗೆ ಪಡೆಯೋ ಸಂಭಾವನೆ ೮೦ ಲಕ್ಷ. ಇದರರ್ಥ ಜನರು ಟಿವಿ ನೋಡಲೇ ಬೇಕು ಅಂದ್ರೆ ಯಾವುದು ಅವರನ್ನು ಥಟ್ ಅಂತ ಆಕರ್ಷಿಸುತ್ತೋ ಅದನ್ನೇ ಈ ಶೋಗಳು ನೀಡಲು ತಯಾರಿರುತ್ತವೆ ಅಂದಾಯ್ತು. ಅಷ್ಟೇ ಅಲ್ಲ, ತನ್ನ ಪ್ರತಿ ಸ್ಪರ್ಧಿ ಚಾನೆಲ್ ಗಿಂತ ಒಂದು ಹೆಜ್ಜೆ ಮುಂದೆ ಇರ್ಬೇಕು ಅನ್ನೋ ಉದ್ದೇಶ, ಕಾರ್ಯಕ್ರಮದ ಕ್ವಾಲಿಟಿ ಹೆಚ್ಚಿರಬೇಕೆಂಬ ಹಂಬಲ ಖರ್ಚು ಹೆಚ್ಚುವಂತೆ ಮಾಡುತ್ತೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಪ್ರತಿ ಚಾನೆಲ್ ನ ಅಜೆಂಡಾ ಕೂಡಾ ಆಗಿದೆ. ಬಿಗ್ ಬಿ ನಂತರ ಹಾಟ್ ಸೀಟ್ ಅಲಂಕರಿಸಿದ ಶಾರೂಖ್ ಪಡೆಯುತ್ತಿದ್ದ ಸಂಭಾವನೆ ಪ್ರತಿ ಎಪಿಸೋಡ್ ಗೆ ೭೫ ಲಕ್ಷ. ಆದ್ರೆ 'ಕ್ಯಾ ಆಪ್ ಪಾಂಚ್ ವೀ ಪಾಸ್ ಸೇ ತೇಝ್ ಹೇ' ಗೆ ಪಡೆದದ್ದು ೧ ಕೋಟಿ. ಆದ್ರೆ ಕೆಬಿಸಿ ೩ ಮತ್ತು ಈ ಕಾರ್ಯಕ್ರಮಗಳು ತೀರಾ ಹೀನಾಯ ಪ್ರತಿಕ್ರಿಯೆ ಪಡೆದದ್ದು ವಿಪರ್ಯಾಸ.

ದಸ್ ಕಾ ದಮ್ ಕಾರ್ಯಕ್ರಮ ನಿರೂಪಿಸುವ ಸಲ್ಲೂ ಶಾರೂಖ್ ಗಿಂತ ಕಡಿಮೆ ಸಂಭಾವನೆ ಪಡೆಯಲು ಸುತಾರಾಂ ಒಪ್ಪುವುದಿಲ್ಲ ಅನ್ನೋ ಮಾತುಗಳಿವೆ. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಪ್ರತಿ ಎಪಿಸೋಡ್ ಗೆ ೮೦ ಲಕ್ಷ ಪಡೆಯುತ್ತಾರಂತೆ. (ಅಂದ್ರೆ ಶಾರೂಖ್ ಕೆಬಿಸಿ ಗೆ ಪಡೆದಷ್ಟು. ಎಲ್ಲಾ ಬಿಡಿ ಮಾತೆತ್ತಿದರೆ ಮೂಗು ತುದಿಯಲ್ಲಿ ಕೋಪ ಮಾಡಿಕೊಳ್ಳೋ ಈ ಪುಣ್ಯಾತ್ಮ {ಸಲ್ಮಾನ್} ರಿಯಾಲಿಟಿ ಶೋವೊಂದನ್ನು ಯಶಸ್ವಿಯಾಗಿ ನಿಭಾಯಿಸ್ತಿರೋದೇ ದೊಡ್ಡ ವಿಷಯ ಅನ್ಸುತ್ತೆ)


ನೀವು ಕಲರ್ಸ್ ನಲ್ಲಿ fear factor ಖತ್ರೋಂ ಕಿ ಖಿಲಾಡಿ ನೋಡಿರ್ತೀರಾ, ೧೩ ಮಂದಿ ಸುಂದರಾತಿ ಸುಂದರಿಯರಿಗೆ ನಮ್ಮ ಖಿಲಾಡಿಯೋಂ ಕಾ ಖಿಲಾಡಿ ಅಕ್ಕಿ ಭಯಾನಕ actionಗಳನ್ನ ಮಾಡಿಸಿ ಜನರಿಗೆ ಥ್ರಿಲ್ ಮಾಡಿಸಿ ತಾನೂ ಮಜಾ ತಗೊಂಡಿದ್ದು ಬೇರೆ ವಿಷಯ ಬಿಡಿ. ಇದು ಒಟ್ಟು ಪ್ರಸಾರವಾಗಿದ್ದು ೧೬ ಎಪಿಸೋಡ್ ಗಳು. South Africaದಲ್ಲಿ ಚಿತ್ರೀಕರಿಸಲ್ಪಟ್ಟ ಈ ಶೋನ ಪ್ರತಿ ಎಪಿಸೋಡ್ ಗೆ ಅಕ್ಷಯ್ ಪಡೆದದ್ದು ೧.೫ ಕೋಟಿ. ಒಂದು ಎಪಿಸೋಡ್ ನ ಖರ್ಚು ಕಡಿಮೆ ಅಂದ್ರೂ ೨.೨ಕೋಟಿ. ಏನು? ಕೇಳಿ ಬೇಸ್ತು ಬಿದ್ರಾ? ಸ್ವಲ್ಪ ಸುಧಾರಿಸಿಕೊಳ್ಳಿ. ಇದು ಬಿಗ್ ಬಿ ತಮ್ಮ ಮೊದಲ ಕರೋಡ್ ಪತಿ ಶೋಗೆ ಪಡೆದ ಸಂಭಾವನೆಗಿಂತ ೩ ಪಟ್ಟು ಹೆಚ್ಚು. ಈ ಮಾತು ಸುಳ್ಳಾಗಿದ್ರೆ ಆ ರಿಯಾಲಿಟಿ ಶೋ ಮೇಲಾಣೆ!
ಇದೆಲ್ಲಾ ದೊಡ್ಡ ದೊಡ್ಡ ಸ್ಟಾರ್ ಗಳ ದುನಿಯಾ ಆಯ್ತು. ಮಿನಿ ಮಾಥುರ್ ಗೊತ್ತಿರ್ಬೇಕಲ್ಲಾ? ಅದೇ ಸೋನಿ ಚಾನೆಲ್ ನಲ್ಲಿ ಇಂಡಿಯನ್ ಐಡಲ್ ೧ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ್ದ ಬೆಡಗಿ (ಕ್ಷಮಿಸಿ ಈಕೆಗೆ ಮದುವೆ ಆಗಿ ಮಗುವಿದೆ, ನಿಮಗೆ ಆಕೆ ಬೆಡಗಿ ಅನ್ನಿಸ್ತಾರೋ ಇಲ್ವೋ, ಆದ್ರೂ ನೋಡೋಕೆ ಮಿನಿ ಚೆಂದಾನೇ) ಪ್ರತಿ ಕಂತಿಗೆ ೪೦=೫೦ಸಾವಿರ ಪಡೆಯುತ್ತಿದ್ದವಳು ಇಂಡಿಯನ್ ಐಡಲ್-೨ಗೆ ಏಕಾಏಕಿ ತನ್ನ ಸಂಭಾವನೆ ಏರಿಸಿದ್ದು (ಪಡೆದದ್ದು) ೧.೫ ಲಕ್ಷ . ಝೀಯಲ್ಲಿ ಪ್ರಸಾರವಾಗುವ ಸಾ ರೆ ಗ ಮ ಗೆ ಗಾಯಕ ಶಾನ್ ೧.೫ ಲಕ್ಷ ತೆಗೆದೊಕೊಳ್ಳೋರು. ಆದ್ರೆ ಏಕಾಏಕಿ ೨.೫ ಲಕ್ಷ ಕೊಡಲು ಮುಂದೆ ಬಂದ ಸ್ಟಾರ್ ಚಾನೆಲ್ ಗೆ ಜಿಗಿದ್ರು ಶಾನ್. ಇದೇ ಝೀಯಲ್ಲಿ ಪ್ರಸಾರವಾದ ಫ್ಯಾಮಿಲಿ ಶೋ ರಾಕ್ n ರೋಲ್ ಫ್ಯಾಮಿಲಿ ಕಾರ್ಯಕ್ರಮಕ್ಕೆ ಕಾಜೋಲ್ ಅಜಯ್ ದೇವಗನ್ ದಂಪತಿ ಎಷ್ಟು ಸಂಭಾವನೆ ಪಡೆಯುತ್ತಿದ್ರೋ ಗೊತ್ತಿಲ್ಲ. ಆದ್ರೆ ಕಾರ್ಯಕ್ರಮ ಪಲ್ಟಿ ಹೊಡೆದಿದ್ದಂತೂ ಗೊತ್ತು.

ರಿಯಾಲಿಟಿ ಶೋಗಳ ಭೂತ ಪ್ರಾದೇಶಿಕ ಚಾನೆಲ್ ಗಳನ್ನೂ ಬಿಟ್ಟಿಲ್ಲ. ಕನ್ನಡದಲ್ಲೇ ನೋಡಿ, ನಟಿ ಅನುಪ್ರಭಾಕರ್,ತಾರಾ, ಸುಧಾರಾಣಿ, ವಿಜಯ ಲಕ್ಷ್ಮಿ ಎಲ್ಲರೂ ಸಿನಿಮಾದ ದೊಡ್ಡ ಪರದೆ ಬಿಟ್ಟು ಹೆಂಗಳೆಯರ ಮನಕ್ಕೆ ರಿಯಾಲಿಟಿ ಶೋಗಳ ಮೂಲಕ ಲಗ್ಗೆ ಇಡಲು ಒಂದು ಕೈ ನೋಡಿದವ್ರೇ. ಕಾಗೆ ಹಾರಿಸಿ ಜಗ್ಗೇಶ್, ಪ್ರೀತಿಯಿಂದಲೇ ವೀಕ್ಷಕರ ಪ್ರೀತಿ ಗಳಿಸಿದ ರಮೇಶ್ ಕೂಡ ಇದರಿಂದ ಹೊರತಲ್ಲ. ಗಾಯನ ಪ್ರತಿಭೆಗಳಿಗೆ ಗಾಳ ಹಾಕುವ ಕಾರ್ಯಕ್ರಮವನ್ನು ಎಸ್ಪಿಬಿ ಎದೆ ತುಂಬಿ ಹಾಡಿದಂದಿನಿಂದ ಇಂದಿಗೂ ಎಲ್ಲಾ ಚಾನೆಲ್ ಗಳೂ ದಿನಚರಿಯಂತೆ ಪಾಲಿಸುತ್ತಿವೆ.



(ನೆನಪಿರಲಿ ಇಂತಹ ಕಾರ್ಯಕ್ರಮಗಳಿಂದ ಎಷ್ಟೋ ಕಾರ್ಮಿಕರ ಜೇಬಿಗೆ ಕಾಸು ಬೀಳುತ್ತಿದೆ. ಇಲ್ಲಿ ಲೈಟ್ ಬಾಯ್, ಮೇಕಪ್ ಕಲಾವಿದರು, ಸಹಾಯಕರು, ಸಂಕಲನಕಾರರು ಹೀಗೆ ಸಾವಿರಾರು ಮಂದಿಯ ಶ್ರಮ ಇಂತಹ ರಂಗು ರಂಗಿನ ಕಾರ್ಯಕ್ರಮಗಳ ಹಿಂದೆ ಇರುತ್ತದೆ. ಅವರೆಲ್ಲಿ ಬಹುತೇಕರಿಗೆ ಈ ಕಾರ್ಯಕ್ರಮಗಳೇ ಹೊಟ್ಟೆಹೊರೆಯುವ ಮೂಲ)



ಹಾಗಂತ ಇವರೆಲ್ಲ ಸಿನಿಮಾದ ದೊಡ್ಡ ಪರದೆ ಬಿಟ್ಟು ಹೀಗೆ ಟೆಲಿವಿಶನ್ ಗೆ ಯಾಕೆ ಲಗ್ಗೆ ಇಟ್ರು ಅಂತ ಅನ್ನಿಸೋದು ಸಹಜ. ತಿಂಗಳಾನುಗಟ್ಟಲೆ ಒಂದು ಸಿನಿಮಾ ಮಾಡಿ ಗಳಿಸುವ ಹಣವನ್ನು ಕೆಲವೇ episodeಗಳಲ್ಲಿ ರಿಯಾಲಿಟಿ ಶೋಗಳು ಕೊಟ್ರೆ ಯಾರ್ ತಾನೇ ಬೇಡ ಅಂತಾರೆ? ಹೇಳಿ ಕೇಳಿ ಇದು computer ಯುಗ. ಎಲ್ಲಾ ಥಟ್ ಅಂತ ಆಗೋ ಮತ್ತು ಬಯಸೋ ಜಾಯಮಾನ ನಮ್ಮ ಜನರದ್ದು. ಎಲ್ಲಕ್ಕೂ ಮಿಗಿಲಾಗಿ ಈ ಸ್ಟಾರ್ ಗಳನ್ನ ನೋಡೋಕೆ ಜನ ಕಾಸು ಕೊಟ್ಟು ಥಿಯೇಟರ್ ಗೆ ಹೋಗ್ಬೇಕು. ಆದ್ರೆ ವೇಗವಾಗಿ ಅಂದ್ರೆ ready to eat ಅನ್ನೋ ಹಾಗೆ ಪುಟ್ಟ ಪರದೆಯಲ್ಲೇ ಇವರನ್ನು ನೋಡೋ ಮತ್ತು ಈ ಸ್ಟಾರ್ ಗಳು ವೀಕ್ಷಕರನ್ನು ಇಷ್ಟೂ ಸುಲಭವಾಗಿ ತಲುಪೋ ಅವಕಾಶವನ್ನು ಯಾಕ್ ತಾನೇ ಬಿಡ್ತಾರೆ? ಚಾನೆಲ್ ಗಳು ಕೋಟಿ ಕೋಟಿ ಸುರಿದು ಕೋಟಿ ಕೋಟಿ ಬಾಚಿಕೊಳ್ಳೋ ತರಾತುರಿಯಲ್ಲಿವೆ. ಒಟ್ಟಾರೆ ಇದೆಲ್ಲಾ ನೋಡಿದ್ರೆ ಜನ ಮರುಳೋ ಜಾತ್ರೆ ಮರುಳೋ ಎಂಬಂತಾಗಿದೆ.

5 comments:

Unknown said...

its boring man write something just for a common man any how you have a good data

Unknown said...

Has come out well...but its really too long...by the way where do u get these figures from?

sudi said...

Thumba boring............

damodara dondole said...

chennagide kanri navu kooda film actors andre prana bidthidvi kanri....................

jomon varghese said...

ಬರಹ ಚೆನ್ನಾಗಿದೆ. ಇನ್ನೂ ಚಿಕ್ಕ ಚಿಕ್ಕ ಲೇಖನಗಳನ್ನು ಬರೆಯಿರಿ. ಅಂತರ್ಜಾಲದ ಓದಿನ ಮಿತಿಯೊಳಗೆ ದೊಡ್ಡ ಲೇಖನಗಳಿದ್ದರೆ ಒಮ್ಮೆ ನೋಡಿ ಹಾಗೇ ಹೋಗುವ ಅಪಾಯಗಳೇ ಹೆಚ್ಚಿರುತ್ತದೆ.

ಚಿಕ್ಕವರಿದ್ದಾಗ, ಬ್ಲಾಕ್ ಆಂಡ್ ವೈಟ್ ಟಿವಿಯ ಮುಂದೆ, ಚಾಪೆ ಹಾಸಿ ಕುಳಿತು, ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಚಿತ್ರಗಳನ್ನು ನೋಡುತ್ತಿದ್ದೂ, ವಾರಗಟ್ಟಲೆ ಅದರ ಬಗ್ಗೆ ಮಾತನಾಡುತ್ತಿದ್ದೂ ನೆನಪಾಯಿತು.

ಬರೆಯುತ್ತಲಿರಿ...