Thursday, February 25, 2010

ಇಟ್ಸ್ ದ ಟೈಮ್ ಟು ಸೀರಿಯಲ್...!


ಅಬ್ಬಾ ಈ ಟೀವಿಯ ಠೀವಿ ಅದೇನ್ರೀ...? ಚಾನೆಲ್ಲುಗಳನ್ನು ತಿರುಗಿಸಿದಷ್ಟೂ ಮುಗಿಯದ ಕಾರ್ಯಕ್ರಮಗಳ ಸರಮಾಲೆ. ಒಂದಕ್ಕಿಂತ ಮತ್ತೊಂದರದ್ದು ಭಿನ್ನ, ವಿಭಿನ್ನ. ಅದಕ್ಕೇ ನಮ್ ಜನ ಬಿಟ್ಟ ಕಣ್ಣು ಬಿಟ್ಟಂಗೇ ಟಿವಿ ನೋಡ್ತಾ ಕೂರೋದು. ನನಗಂತೂ ಇತ್ತೀಚೆಗೆ ಇದ್ರ ಪ್ರತ್ಯಕ್ಷ ದರ್ಶನ ಪದೇ ಪದೇ ಆಗ್ತಿರೋದ್ರಿಂದ ಈ ಬಗ್ಗೆ ಹೇಳ್ಲೇಬೇಕು.

ನಾನು ಮೊದಲಿದ್ದ ಪಿಜಿಯಲ್ಲಿ ಟಿವಿ ಇಟ್ಟ ಕೋಣೆ ರಾತ್ರಿ 10ಕ್ಕೆಲ್ಲಾ ಬಂದ್ ಆಗ್ತಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನವರ್ಯಾರೂ ಹೋಗ್ತಿರ್ಲಿಲ್ಲ. ಸಂಜೆ ವೇಳೆ ಸಮಯ ಸಿಕ್ಕಾಗ ಕೆಲವು ಸೀರಿಯಲ್ ಗಳನ್ನು ನೋಡೋಕೆ ಹುಡುಗೀರು ಬರ್ತಿದ್ರು. ಆದ್ರೆ ಒಬ್ಬೊಬ್ಬರದ್ದು ಒಂದೊಂದು ಟೈಮ್ ಅಂತ ಅವರವರಲ್ಲೇ ಮ್ಯೂಚುಯಲ್ ಅಂಡರ್ಸ್ಟ್ಯಾಂಡಿಂಗ್ ಇದ್ದಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನ ಜಗಳಗಳು ಇರ್ತಾನೇ ಇರ್ಲಿಲ್ಲ. ಆದ್ರೆ ಈಗಿರೋ ಪೇಯಿಂಗ್ ಗೆಸ್ಟ್ ನಲ್ಲಿ ನೋಡ್ಬೇಕು. ಅಯ್ಯಪ್ಪಾ! ಇಲ್ಲಿ ರಿಮೋಟ್ ಅನ್ನೋದು ನಮ್ಮ ರಾಜಕಾರಣಿಗಳ ಅಧಿಕಾರದ ಕುರ್ಚಿಗೆ ಸಮ! ನಾನ್ಹೇಳೋದು ಅತಿಯಾಯ್ತು ಅಂತ ಅನ್ನಿಸಿದ್ರೆ ನೀವೇ ಒಮ್ಮೆ ಬಂದು ನೋಡಬಹುದು!

ತೀರಾ ಸೀರಿಯಸ್ ಆಗಿ ಸೀರಿಯಲ್ ಗಳನ್ನು ನೋಡೋ ಅಭ್ಯಾಸ ಇಲ್ಲವಾದ್ದರಿಂದ ನಾನು ಈ ಸಮರದಲ್ಲಿ ಭಾಗಿಯಲ್ಲ. ದಿನದ ಬಹುತೇಕ ಸಮಯ ಟಿವಿ ಆನ್ ಇದ್ದೇ ಇರುತ್ತೆ ನಮ್ ಪಿಜಿಯಲ್ಲಿ. ಅದರಲ್ಲೂ ಪ್ರೈಮ್ ಟೈಮ್ ನಲ್ಲಿ ರಿಮೋಟ್ ಗಾಗಿ ನಡೆಯೋ ರಾಜಕೀಯ ನೋಡ್ಬೇಕು! ಇಲ್ಲಿ 3 ಟೀಮು. ಒಂದು ಅತಿ ಪ್ರಭಾವಿ ತಂಡ, ಹೇಳ್ಕೊಳ್ಳೋಕೆ ಅಚ್ಚ ಕನ್ನಡಿಗರು! ಇವ್ರೆಲ್ಲಾ ಸ್ಟಾರ್ ಪ್ಲಸ್ ಫ್ಯಾನುಗಳು. 2ನೇದು ಆಂಧ್ರ ಮೂಲದ ಮೂರ್ನಾಲ್ಕು ಹುಡುಗೀರ ಟೀಮು. ಪ್ರೈಮ್ ಟೈಮ್ ಗಿಂತ ಮುಂಚಿನ ಸ್ಲಾಟ್ ಇವರಿಗೇ ಕೊಡ್ದಿದ್ರೆ ಮುಗೀತು ಕಥೆ! ಇನ್ನು 3ನೇ ಟೀಮಲ್ಲಿ ಇಬ್ರೇ. ನಾರ್ಥ್ ಇಂಡಿಯನ್ಸ್. ಬೇಕಾದಾಗ ಮಾತ್ರ ಹಲ್ಲು ಕಿಸಿದು ಮಾತಾಡಿಸೋ ಇವ್ರ ರಿಮೋಟ್ ಬೇಡಿಕೆಗೆ ಕನ್ನಡಿಗರ ಗ್ಯಾಂಗು ಸೊಪ್ಪು ಹಾಕದ್ದರಿಂದ ಮೊದಲ ಗ್ಯಾಂಗ್ ಸಾಕಪ್ಪಾ ಅಂತ ರಿಮೋಟ್ ಇಟ್ಮೇಲೇನೇ ಇವ್ರಿಗೆ ನೆಚ್ಚಿನ ಚಾನೆಲ್ ವೀಕ್ಷಿಸೋ ಸೌಭಾಗ್ಯ.

ಊಟದ ತಟ್ಟೆ ಖಾಲಿ ಆದ್ರೆ ಮತ್ತೆ ಅನ್ನ, ಸಾರು ಹಾಕ್ಕೊಳ್ಳೋಕೋ ಅಥವಾ ಊಟ ಮುಗಿಸಿ ಕೈತೊಳೆಯೋಕೆ ಹೋಗೋದಕ್ಕು ಮುಂಚೆ ತಮ್ಮ ಟೀಮಿನವರಲ್ಲೇ ಒಬ್ರ ಸುಪರ್ದಿಗೆ ರಿಮೋಟ್ ಕೊಟ್ಟೇ ಹೋಗೋದು. ಅದೇನಾದ್ರೂ ಬೇರೇಯವ್ರ ಕೈ ಸೇರಿತೋ ಮುಗೀತು ಕಥೆ, ರಿಮೋಟ್ ಬಿಟ್ಟು ಕೊಟ್ಟವರಿಗೆ ತಪರಾಕಿ ಶುರು!

ನಾನು ಮೊದಲು ಈ ಪಿಜಿಯಲ್ಲಿ ಇಷ್ಟೊಂದು ಆರಾಮವಾಗಿ ಟಿವಿ ನೋಡ್ಬಹುದಲ್ಲಾ ಸದ್ಯ. ಇನ್ಮೇಲೆ ನ್ಯೂಸ್ ಚಾನೆಲ್ ಗಳ ವೀಕ್ಷಣೆಗೆ ನೋ ಪ್ರಾಬ್ಲಮ್ ಅಂತ ಒಳಗೊಳಗೇ ಅದೆಷ್ಟು ಖುಷಿ ಪಟ್ಟಿದ್ದೆ?.. ! ಛೇ...ನನ್ನ ಆಸೆಗೆ ಕೆಲವೇ ದಿನಗಳಲ್ಲಿ ಒಂದು ಲೋಡು ಮಣ್ಣು ಹಾಕಿ ಸಮಾಧಿ ಮಾಡ್ಬಿಟ್ರು ಅಲ್ಲಿನ ಹುಡುಗೀರು. ಮೊದ ಮೊದಲು ಡಿಸ್ಕಷನ್ನು ಅದು ಇದು ಅಂತ ಹಾಕಿದ್ರೆ ಹೋಗ್ಲಿ ಪಾಪ ಅಂತ ನಂಜೊತೆ ಒಂದಿಬ್ರು ನೋಡ್ತಿದ್ರು. ನಮ್ಗೂ ನ್ಯೂಸ್ ಇಷ್ಟಾನಪ್ಪಾ ಅಂತ ರೈಲು ಹತ್ತಿಸಿದ್ರು. 10 ನಿಮಿಷ ಬಿಟ್ಟು ತಿರುಗಿ ನೋಡಿದ್ರೆ ಇಡೀ ಕೋಣೆ ಖಾಲಿ ನಾನೊಬ್ಳೇ ಟಿವಿ ಮುಂದೆ ಇರ್ತಿದ್ದೆ! ಯಾವಾಗ ನನ್ನ ನ್ಯೂಸ್, ಚರ್ಚೆಗಳ ವೀಕ್ಷಣೆ ದಿನಾ ಸಂಜೆ ಶುರುವಾಯ್ತೋ ಇವ್ರಿಗೆ ಪೀಕಲಾಟ! ನನಗೂ ಗೊತ್ತಾಯ್ತು. ಓಹ್! ಅವರಲ್ಲಿ ಒಬ್ರಿಗಾದ್ರೂ ಸುದ್ದಿ, ಮಾಹಿತಿ ತಿಳಿಯೋ ಕುತೂಹಲವಿರ್ಲೀ ಸಾಸಿವೆ ಕಾಳಷ್ಟು ಇಂಟ್ರೆಸ್ಟೂ ಇಲ್ಲ ಅಂತ ತಿಳಿಯೋಕ್ಕೆ ಜಾಸ್ತಿ ಟೈಮ್ ಹಿಡೀಲಿಲ್ಲ. ಆಮೇಲೆ ಹೇಳ್ತಾರೆ ಲೇ ನೀನು ಬಂದ್ಮೇಲೇನೇ ನಾವು ನ್ಯೂಸ್ ನೋಡ್ತಿರೋದು ಅಂತ. ಧನ್ಯೋಸ್ಮಿ.

ಇವ್ರಿಗೆಲ್ಲಾ ಮೆಗಾ ಸೀರಿಯಲ್ ಗಳನ್ನ ನೋಡೋ ಭೂತ ಅದ್ಯಾವ ಪರಿ ಮೆಟ್ಟಿಕೊಂಡಿದೆ ಅಂದ್ರೆ ಆ ದೇವ್ರೇ ಬಂದ್ರೂ ಆ ದೆವ್ವ ಬಿಡಿಸೋದು ಕಷ್ಟಾ ರೀ ಕಷ್ಟ ಕಷ್ಟ. ಈ ಸೀರಿಯಲ್ ಗಳನ್ನು ನೋಡೋವಾಗ ಯಾರಾದ್ರೂ ನಮ್ ಪಿಜಿ ಅಕ್ಷತಾನ ಕೂಗಿ ನೋಡಿ. ಬಿಟ್ಟ ಬಾಯಿ ಮುಚ್ಚೋದೂ ಇಲ್ಲ, ತೆರೆದ ಕಿವಿ ಕೇಳೋದೂ ಇಲ್ಲ. ನಾಲ್ಕೈದು ಸಲ ಕೂಗಿ ಸಾಕಾಗಿ ಎದುರಲ್ಲಿ ಹೋಗಿ ನಿಂತ್ಮೇಲೇನೆ ಅವಳು ರೆಸ್ಪಾನ್ಸ್ ಮಾಡೋದು. ಎಷ್ಟೋ ಸಲ ನಾನು ಆಫೀಸ್ ಮುಗಿಸಿಕೊಂಡು ವಾಪಸ್ಸಾದಾಗ ಊಟ ಶುರು ಮಾಡಿ, ಊಟ ಮುಗಿಸೋ ಹೊತ್ತಾದ್ರೂ ಅವಳಿಗೆ ನಾನು ಬಂದದ್ದೇ ಗೊತ್ತಾಗಿರೋಲ್ಲ. ಧಾರಾವಾಹಿ ನಡುವೆ ಬ್ರೇಕ್ ಬಂದಾಗಲೇ ಅವಳು ಕಣ್ಣು ಮಿಟುಕಿಸೋದು!

ಇನ್ನು ಗಾನ. ಈ ಕೂರ್ಗಿ ಹುಡುಗಿ ನಾನ್ ಹೇಳಿದ್ ಫಸ್ಟ್ ಟೀಮಿನ ಅಧಿನಾಯಕಿ ಅಂತಾನೇ ತಿಳ್ಕೊಳ್ಳಿ. ಅಕಸ್ಮಾತ್ ಆಂಧ್ರ ಹುಡುಗೀರ ಟೈಮ್ ಅಪ್ ಆದ್ಮೇಲೂ ರಿಮೋಟ್ ಕೈಗೆ ಸಿಗ್ದಿದ್ರೆ ಇವಳ ವರಸೆ ನೋಡ್ಬೇಕು! ತನ್ನ ನೆಚ್ಚಿನ ಸೀರಿಯಲ್ ‘ಬಿದಾಯಿ’ ಟೈಮ್ ಗೆ ಸರ್ಯಾಗಿ ಕರೆಂಟ್ ಕೈಕೊಟ್ರೆ ನೋಡ್ಬೇಕು ಇವ್ಳ ಪೀಕಲಾಟಾನಾ. ಊಟ ತಿಂಡೀಲಿ ಏರುಪೇರಾದ್ರೆ ಅಡ್ಜೆಸ್ಟ್ ಮಾಡ್ಕೊಂಡಾರು, ಆದ್ರೆ ಸೀರೀಯಲ್ ಮಿಸ್ ಮಾಡ್ಕೊಳ್ಳೋರಲ್ಲಾ ಇವ್ರು.

ಮೊನ್ನೆ ಕರೆಂಟ್ ಹೋಗಿದ್ದು ಒಂದೂವರೆ ಗಂಟೆ ಕಳೆದ್ರೂ ಬರ್ಲೇ ಇಲ್ಲ. ‘ಬಿದಾಯಿ’ ಮುಗಿಯೋಕೆ 3 ನಿಮಿಷ ಬಾಕಿ ಇರೋವಾಗ ಬಂತು. ಈ ಹುಡುಗೀರ ಚಡಪಡಿಕೆ ಅದ್ಯಾವ ರೇಂಜಿಗಿತ್ತು ಅಂದ್ರೆ ಬೆಸ್ಕಾಂನವರು ಪಾಪ ಪ್ರಜ್ಞೆಯಿಂದ ನರಳದಿದ್ದದ್ದೇ ದೊಡ್ಡ ವಿಷಯ! ಹಿಂದಿನ ರಾತ್ರಿ ಆದ ‘ಭಾರೀ ನಷ್ಟ‘ವನ್ನು ಸರಿದೂಗಿಸಲು ಗಾನ ಬೆಳಗ್ಗೆ ಆಫೀಸಿಗೆ 5ರೂ. ಕೊಟ್ಟು ಬಸ್ಸಲ್ಲಿ ಹೋಗಬೇಕಿದ್ದವಳು ಸೀರಿಯಲ್ ನ ಮರುಪ್ರಸಾರ ನೋಡಿ 50ರೂ. ದಂಡ ಪಾವತಿಸಿ ಆಟೋದಲ್ಲಿ ಹೋದಳು. ಸೀರಿಯಲ್ ನೋಡಿದ್ಮೇಲೆ ಅವಳ ಮುಖದಲ್ಲಿ ಅದೆಂಥಾ ‘ಧನ್ಯತಾ ಭಾವ’?...!

ಸಂಜೆ ಟೀ ಕುಡಿಯೋಕಂತ ಬಂದ್ರೆ ಆಗ್ಲೇ ರಿಮೋಟ್ ಅಕ್ಷತಾ ಕೈಲಿ ವಿರಾಜಮಾನವಾಗಿತ್ತು. ಅರೇ ಇದೇನು ಇಷ್ಟು ಬೇಗ ಬಂದಿರೋದು ಇವತ್ತು? ಅಂತ ಕೇಳಿದ್ರೆ ತಲೆ ನೋವು ಅಂತ ಬೇಗ ಬಂದೆ ಅಂದ್ಲು. ಅದೂ ಸುಳ್ಳು ಅಂತ ನಂಗೊತ್ತಿಲ್ವಾ? ರಾತ್ರಿ ಮತ್ತು ಬೆಳಗ್ಗೆ ನೋಡಲಾಗದೆ, ಮರುದಿನ 3-30ಕ್ಕೆ ರಿಪೀಟ್ ಆಗಲಿದ್ದ ಅದೇ ಸೀರಿಯಲ್ ನೋಡೋಕೆ ಧಾವಂತದಿಂದ ಬಂದಿದ್ದಳು ಅಕ್ಷತಾ. ಕೇಳಿ ನಾನು ಸುಸ್ತು.

ನಿಜವಾಗ್ಲೂ ನಮ್ ಹುಡ್ಗೀರು ಈ ಧಾರಾವಾಹಿಗಳನ್ನು ಅದೆಷ್ಟು ಸೀರಿಯಸ್ಸಾಗಿ ನೋಡ್ತಾರೆ ಅಂದ್ರೆ ಅಲ್ಲಿನ ಒಂದೊಂದು ಪಾತ್ರಗಳನ್ನೂ ತಮ್ಮ ಜೊತೆಯವರಂತೆ ಟ್ರೀಟ್ ಮಾಡ್ತಾರೆ. ಸೀರಿಯಲ್ ನ ಮುಖ್ಯಪಾತ್ರಧಾರಿಗೆ ಪದೇ ಪದೇ ಕಷ್ಟ ಕೊಡ್ತಿದ್ರೆ ಇವ್ರೂ ಹಿಡಿಶಾಪ ಹಾಕ್ತಾ ಕೂತಿರ್ತಾರೆ. ಕಥಾನಾಯಕಿಗೆ ಖುಷಿ ಆದ್ರೆ ಇವರೂ ಹಿರಿಹಿರಿ ಹಿಗ್ಗಿದ ಹೀರೇಕಾಯಿಯಂತಾಗಿರ್ತಾರೆ. ಅದೇನ್ ಜಾದೂನಪ್ಪಾ ಈ ಮಾಯಾಪೆಟ್ಟಿಗೆಯಲ್ಲಿ. ರಬ್ಬರ್ ಬ್ಯಾಂಡ್ ಥರ ಎಳೆದು ಟಿ.ಆರ್.ಪಿ ರೇಸಲ್ಲಿ ಮುನ್ನುಗ್ಗೋ ಇಂಥ ಸೀರಿಯಲ್ ಗಳು ಸುಮ್ನೇ ವರ್ಷಾನುಗಟ್ಟಲೆ ಪ್ರಸಾರವಾಗ್ತವಾ ಹೇಳಿ? ಎಲ್ಲಾ ಇಂತಹ ವೀಕ್ಷಕ ಪ್ರಿಯರ ಕೃಪೆಯಿಂದಲೇ ತಾನೇ?

3 comments:

ವಿ.ರಾ.ಹೆ. said...

well written.

ನಾನೂ ನನ್ ಫ್ರೆಂಡ್ ಜೊತೆ ಇದೇ ಮಾತಾಡ್ತಾ ಇದ್ದೆ. ಎಲ್ರೂ ಸೀರಿಯಲ್ ಗಳನ್ನ ಬೈತಾರೆ ಆದ್ರೂ ಕೂಡ ಅವುಗಳ ಟಿ.ಆರ್.ಪಿ. ಜೋರಾಗೇ ಇರುತ್ತಲ್ಲ ಯಾರು ನೋಡ್ತಾರೆ ಅಷ್ಟೆಲ್ಲಾ ಅಂತ. ಉತ್ತರ ಸಿಕ್ಕಿದೆ ನೋಡಿ. ಹೀಗೆ ದೇಶದಲ್ಲಿ ಎಷ್ಟು ಕೋಟಿ ಜನರಿದ್ದಾರೋ ಏನೋ!

**

’ಬಿಸಿಲೆ’ ಬಗ್ಗೆ ಹುಡುಕುವಾಗ ನಿಮ್ ಬ್ಲಾಗ್ ಗೆ ಬಂದೆ. ಚೆನ್ನಾಗಿದೆ. Thank you..

damodara dondole said...

hi so super anubhava kathana...sirial moha ega yellede ide..gramina pradeshadalli maneya yella sadasyarigu ondondu tv beku annisovastu karyakramaga vibhinna patti ive..adre illi kannadigara asthitvadalli remote irodu keli kushi ayithu..hats up to ur frnds and u..such a nice writing..good super..totaly soku ithnd..porlu barethar..ireg solmelu

DAMU DONDOLE

ಶ್ರೀನಿಧಿ.ಡಿ.ಎಸ್ said...

i understand this more, now!:) very nice written.