ಎಷ್ಟೋ ದಿನಗಳ ಹಿಂದೆ ಸ್ನೇಹಿತ ಶ್ರೀನಿಧಿ ಬರೆದ ಲಲಿತ ಪ್ರಬಂಧವೊಂದನ್ನು ಓದಿದ್ದೆ. ತೋಡು ಎಂಬ ಪದದ ಬಗ್ಗೆ ಅದೆಷ್ಟು ಸೊಗಸಾಗಿ ಬರೆದಿದ್ದರು. ತೋಡು ಹೇಳೋಕೆ ಸಣ್ಣ ಸಣ್ಣ ಕಾಲುವೆಗಳೇ ಆದ್ರೂ ಅವುಗಳ ಮಹಿಮೆ ಅದೆಷ್ಟು ದೊಡ್ಡದಪ್ಪಾ ಅನ್ನಿಸಿತು. ಮಳೆಗಾಲದ
ಲ್ಲಿ ಗೋಚರ
ವಾಗುವ ಇವು ನಂತರ ಅದ್ಹೇಗೆ ಅಜ್ಞಾತವಾಗಿ ಬಿಡುತ್ತವೆ ಅಲ್ವಾ ಅನ್ನಿಸಿತು. ಲೇಖನ ಓದುತ್ತಾ ಓದುತ್ತಾ ನಾನು ಮಳೆ
ಗಾಲದಲ್ಲಿ ಹಸಿರ ರಾಶಿ ನಡುವೆ
ಯೇ ಕುಳಿತಂತೆ ಭಾಸವಾಯಿತು. ಜೊತೆಗೆ ಮಳೆ ಕುರಿತಂತೆ ನನ್ನ ನೆನಪಿನಂಗಳ ಸಣ್ಣದಾಗಿ ತೆರೆದುಕೊಳ್ಳತೊಡಗಿತು. ಮಳೆ ಅಂದ್ರೆ ನನಗೆಷ್ಟು ಇಷ್ಟ ಅಂತ ಬಹುಶಃ ನಾನು ಬರಹದಲ್ಲಿ ಹೇಳುವುದು ಕಷ್ಟಾನೇ...ಹಾಂ...ಮಳೆ ಅಂದ್ರೆ ಅತಿವೃಷ್ಟಿ ಬಗ್ಗೆ ಅಲ್ಲ ನಾನು ಹೇಳಹೊರಟಿರೋದು. ಹನಿಹನಿ ಚೆಲ್ಲಿ ಮನದಲ್ಲಿ ತನ್ನದೇ ಸೊಗಸಾದ ನೆನಪಿನ ಬುತ್ತಿಕಟ್ಟಿಕೊಟ್ಟಿರುವ ಮಳೆ ಬಗ್ಗೆ ನಾನು ಹೇಳ್ತಿರೋದು.
ಹಿಂದೆಲ್ಲಾ ಮಳೆ
ಅಂದ್ರೆ ನಂಗೊಂತರಾ ಅಸಹನೆ. ಯಾಕಂದ್ರೆ ಮಳೆಗಾಲ ಶುರುವಾದ್ರೆ ಹೊರಗೆ ಕಾಲಿಡೋದು ಕಷ್ಟ. ಚಪ್ಪಲಿಯೆಲ್ಲಾ ತೋಯ್ದು ಹೋಗ್ತವೆ. ಬಟ್ಟೆಯೂ ಒದ್ದೆ. ಸಾಲದ್ದಕ್ಕೆ ಚಳಿಚಳಿ ಅಂತ ನಡುಗುವ ಅವಸ್ಥೆ. ಹಾಗಾಗಿ ಮಳೆ ಅಂದ್ರೆ ಇಷ್ಟಾನೇ ಆಗ್ತಿರ್ಲಿಲ್ಲ. ಅದರಲ್ಲೂ ಮನೆಯಲ್ಲಿ ಯಾವ್ದಾದ್ರೂ ಶುಭ ಸಮಾರಂಭಗಳಿದ್ದಾಗ ಮಳೆ ಸುರಿಯಲಾರಂಭಿಸಿತಂದ್ರೆ, ಥೂ ಯಾಕಪ್ಪಾ ಈ ಮಳೆ ಬರುತ್ತೆ ಅಂತ ಶಪಿಸುತ್ತಿದ್ದೆ. ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿನ ಬಹುತೇಕ ಶುಭ ಸಮಾರಂಭಗಳು ನಡೆದದ್ದು ನನ್ನ ಅಜ್ಜಿ ಮನೆಯಲ್ಲಿ. ಅ
ಜ್ಜಿ ಮನೆಯ ಮಹಡಿ ಏರುವುದು ಇಳಿಯುವುದು ಅಂದ್ರೆ ಸಂಭ್ರಮ. ಅವತ್ತು ಹೊಸ ಬಟ್ಟೆ ತೊಟ್ಟು ಮಿಂಚೋ
ದಂತೂ ಗ್ಯಾರಂಟಿ. ಇಷ್ಟೆಲ್ಲಾ ಸಂತಸದ ಮಧ್ಯೆ ಮಳೆ ಬಂದ್ರೆ ಕೇಳ್ಬೇಕಾ? ಹೊರಗೆ ಹೋಗೋದಕ್ಕೆ ಅಮ್ಮನ ಕಡಿವಾಣ, ಇನ್ನು ಊಟಕ್ಕೆ ಹಾಕಿದ ಶಾಮಿಯಾನದಿಂದ ನೀರು ತೊಟ್ಟಿಕ್ಕುತ್ತಿದ್ರೆ ನನ್ನ ಊಟದೆಲೆಗೇ ಉದ್ದೇಶಪೂರ್ವಕವಾಗಿ ನೀರು ಸುರೀತಿದೆ ಅಂತ ಸಂಶಯ, ಮತ್ತೆ ಕೋಪ. ನ
ನಗೆ ನೆನಪಿರೋ ಹಾಗೆ ನನ್ನ ಮಾಮನ ಮದುವೆ
ನಡೆದ ಸಂದರ್ಭ. ಅದು ನೆರವೇರಿದ್ದು ಹಸಿರ ಮಡಿಲಲ್ಲಿ ಹುಟ್ಟಿದಂತಿರುವ ಸಕಲೇಶಪುರದಲ್ಲಿ. ಮದುವೆಗೆ ಮಾಮ ಬೆಂಗಳೂರಿಂದ ತಂದುಕೊಟ್ಟಿದ್ದ ನಸುಗೆಂಪು ಬಣ್ಣದ ಫ್ರಾಕ್ ತೊಟ್ಟು ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಆದ್ರೆ ಮದುವೆ ಮನೆ ಅಂದ್ಮೇಲೆ ಮಕ್ಕಳೆಲ್ಲಾ ಇಡೀ ಛತ್ರದ ತುಂ

ಬಾ ಅಡ್ಡಾದಿಡ್ಡಿ ಆಟ ಆಡುತ್ತಾ ಮಜಾ ಮಾಡೋಣಂದ್ರೆ ಮತ್ತೆ ಅಮ್ಮನ ನಿಷೇಧಾಜ್ಞೆ. ಇನ್ನು ಬಲೂನು, ಪೀಪಿ ಕೊಳ್ಳಲು ಅದರ ಖುಷಿ ಅನುಭವಿಸಲು ಆಗ್ಲೇ ಇಲ್ಲ. ಹೊರಡುವ ಘಳಿಗೆವರೆಗೂ ಜಿಟಿಜಿ
ಟಿ ಸುರಿಯುತ್ತಿದ್ದ ಮಳೆಯನ್ನು ಶಪಿಸಿದ್ದೇ ಬಂತು.
ಆದ್ರೆ ಆಗ ನಾನು ತುಂಬಾ ಚಿಕ್ಕವಳು. ಮಳೆ ಎಂಬ ಪದ ಶಾಲೆಯ ಪಠ್ಯದಲ್ಲಿನ 3 ಕಾಲಗಳಲ್ಲೊಂದು ಅಂತ ಓದಿ ಅಷ್ಟೇ ಗೊತ್ತಿತ್ತು. ಹೈಸ್ಕೂಲಿಗೆ ಬಂದಾಗ ನನ್ನ ಹತ್ರ ಸೈಕಲ್ಲಿತ್ತು. ಶಾಲೆಗೆ ಸೈಕಲಲ್ಲಿ ಹೋಗಿಬರೋದು ಅಂದ್ರೆ ಭಾರೀ ಖುಷಿ. ಆದ್ರೆ ಮಳೆಗಾಲದಲ್ಲಿ ಮಾತ್ರ ಬೆಳಬೆಳಗ್ಗೇ ಒದ್ದೆಯಾಗಿ ಹೋಗೋದಂದ್ರೆ ಕಿರಿಕಿರಿ. ಆಗ ನಮ್ಮಪ್ಪನಿಗೆ ನಂಗೊಂದು ರೈನ್ ಕೋಟ್ ಕೊಡಿಸಿ ಅಂತ ಪೀಡಿಸುತ್ತಿದ್ದೆ. ಮುಂಚಿ
ಒಂದ್ಸಲಾ ಅಂತೂ ನಮ್ಮನೆ ಹತ್ರ ಸಣ್ಣಗೆ ಮಳೆ ಶುರುವಾದದ್ದೇ ತಡ ನಮ್ಮಮ್ಮ ಬಲವಂತವಾಗಿ ರೇನ್ ಕೋಟ್ ಹಾಕಿಸಿ ಶಾಲೆಗೆ ಕಳಿಸಿದ್ರು. ಆದ್ರೆ ನನ್ನ ಸ್ಕೂಲ್ ಹತ್ರ ಬರೋವಷ್ಟರಲ್ಲಿ ಸೂರ್ಯ ನನ್ನನ್ನು ಗೇಲಿ ಮಾಡುತ್ತಿರುವಷ್ಟು ಜೋರಾಗಿ ಪ್ರಜ್ವಲಿಸುತ್ತಿದ್ದ. ಪರೀಕ್ಷೆಯ ದಿನವಾಗಿದ್ದರಿಂದ ಶಾಲೆಯ ಬಹುತೇಕ ಹುಡುಗೀರು ಶಾಲೆ
ಆವರಣದಲ್ಲೇ ಇದ್ರು. ಎಲ್ಲಾ ನನ್ನನ್ನೇ ನೋಡ್ತಿದ್ರೆ ನಾನು ಕಕ್ಕಾಬಿಕ್ಕಿ. ಒಳ್ಳೆ ಕೋಯಿ ಮಿಲ್ ಗಯಾ ಸಿನಿಮಾದ ಏಲಿಯನ್ ಜಾದೂ ಥರಾ ಕಾಣ್ತಿದ್ದೆ ಅನ್ಸುತ್ತೆ. ಥೂ ನಂಗಂತೂ ಬಾಲ್ಯದಲ್ಲಿ ಮಳೆಗಾಲದ ಸವಿನೆನಪುಗಳು ತುಂಬಾನೇ ಕಮ್ಮಿ.

ಆದ್ರೆ ಮಳೆ ಬಂದಾಗ ರಜೆ ಇತ್ತು ಅಂದ್ರೆ ನಮ್ಮ ಏರಿಯಾದಲ್ಲಿದ್ದ ನಮ್ಮ ಗ್ಯಾಂಗು ಏನೇನೋ ನಿರುಪಯುಕ್ತ ಅನ್ವೇಷಣೆಗಳಲ್ಲಿ ತೊಡಗುತ್ತಿದ್ದದ್ದು
ನೆನಪು. ಎಲ್ಲರೂ ಮಳೆ ನಿಲ್ಲೋದನ್ನೇ ಕಾಯ್ತಿದ್ವಿ. ಚಪ್ಪಲಿ ಧರಿಸಿ ಹೊರಗೆ ಬಂದ್ರೆ ಮುಗೀತು. ಹಳೇ ನೋಟ್ಸಿನ ಹಾಳೆ ಹರಿದು ದೋಣಿ ಬಿಡೋದೇ ಬಿಡೋದು. ಮನೆ ಪಕ್ಕದ ದೊಡ್ಡ ಚರಂಡಿ ತುಂಬಿ ಹರೀತಿದ್ರೆ ನಮಗೆ ಯಾವುದೋ ಭೋರ್ಗರೆಯುವ ನದಿ ಮುಂದೆ ನಿಂತಷ್ಟು ಹೆಮ್ಮೆ! ಚರಂಡಿ ನೀರು ಹರಿಯುತ್ತಾ ನಡುನಡುವೆ ಸುರುಳಿ ಸುರುಳಿಯಾಗುತ್ತಿದ್ದರೆ ನಾವು ಅದನ್ನು ನೋಡಿ ಹೊಳೆಗಳಲ್ಲಿ ಕಾಣುವ ಸುಳಿ ಥರಾನೇ ಇದೂನು ಅಂತ ಭಾವಿಸಿ ಪೇಪರ್ ತುಂಡು, ಹೂವು ,ಎಲೆ ಅದು ಇದು ಎಸೆದು ಅದು
ಸುಳಿಯೊಳಗೆ ಮಾಯವಾಗ್ತಿದ್ರೆ
ಅಚ್ಚರಿಪಡ್ತಿದ್ವಿ.
ಸ್ಕೂಲಿನ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ಕಾಲೇಜಿನ ಮೆಟ್ಟಿಲು ಹತ್ತಿಯಾಗಿತ್ತು. ಮನಸ್ಸಿನ ಅರಿವಿಗೂ ನಿಲುಕದ ಉಲ್ಲಾಸ ನೀಡುವ ವಯಸ್ಸು ಅದು. ಅದಕ್ಕೇ ಇರ್ಬೇಕು ಹರೆಯದ ಹೃದಯಗಳಿಗೆ ಮಳೆ ಅಂದ್ರೆ ಭಾರೀ ಪ್ರೀತಿ. ನನಗಂತೂ ಮಳೆ ಬರ್ತಿದ್ರೆ ಇನ್ನಿಲ್ಲದ ಸಂಭ್ರಮ. ಅಯ್ಯೋ ಮಳೆ...ನೆಂದು ತೊಪ್ಪೆ ಆಗೋ ಮೊದಲು ಎಲ್ಲಾದ್ರೂ ನಿಲ್ಲೋಣ ಅನ್ನೋ ಮಾತು ನನ್ನ ಬಾಯಿಂದ ಬಂದದ್ದು ನೆನಪೇ ಇಲ್ಲ. ನನ್ನ ಟೂ ವ್ಹೀಲರ್ ಏರಿ ಮಳೆಯಲ್ಲಿ ನೆನೆಯುತ್ತಾ ಹನಿಹನಿಯನ್ನೂ ಫೀಲ್ ಮಾಡಿಕೊಂಡು ಆದಷ್ಟು ನಿಧಾನವಾಗಿ ಡ್ರೈವ್ ಮಾಡೋದಂದ್ರೆ ನಂಗೇ
ನೋ ಖುಷಿ. ವಾವ್ ಮಳೆಯಲ್ಲಿ ನೆನೆಯೋಕೆ ಎಲ್ಲ ಯಾಕೆ ಇಷ್ಟ ಪಡ್ತಾರೆ ಅಂತ ಅರಿವಾಗಿದ್ದೇ ಆಗ. ಮಳೆಯಲ್ಲಿ ನೆನೆಯೋದಂದ್ರೆ ಅದೊಂದು ಹೇಳಲಾಗದ ವಿಶಿಷ್ಟ ಅನುಭೂತಿ.
ಬಹುಶಃ ಆ ವಯಸ್ಸೇ ಹಾಗಾ ಅಂತ...? ಸುತ್ತ ಇರುವ ನಿಸರ್ಗವನ್ನೇ ತನ್ನ ಆಪ್ತಸಂಗಾತಿಯಂತೆ ನೋಡುವ ಮನಸ್ಸು ತಾನಾಗೇ ಹುಟ್ಟಿಕೊಳ್ಳುತ್ತಾ? ಗೊತ್ತಿಲ್ಲ. ಸಂಜೆಯ ತಂಗಾಳಿ, ಕೆಂಪೇರಿದ ಆಕಾಶ, ಗೂಡು ಸೇರುವ ಹಕ್ಕಿಗಳು, ಮತ್ತೆ ಮುಂಜಾವಿನ ಸೂರ್ಯ, ತಣ್ಣನೆ ಬೆಳಗಿಗೆ ಸುಪ್ರಭಾತ ಹಾಡುವ ಬಾನಾಡಿಗಳ ಚಿಲಿಪಿಲಿ ಇವೆಲ್ಲಾ ನಿಜಕ್ಕೂ ನನಗೆ ಪ್ರಿಯವಾ
ಗುತ್ತಿದ್ದುದೇ ಕಾಲೇಜಿಗೆ ಬಂದ ದಿನಗಳಲ್ಲಿ. ನ
ಮ್ಮ ಮನೆ ಹೊರಗೆ ಕುಳಿತು ಇವನ್ನೆಲ್ಲಾ ನೋಡಿ, ಕೇಳಿ ಆಸ್ವಾದಿಸುವುದು ನನಗೆ ತುಂಬಾ ಇಷ್ಟವಾದ ಸಂಗತಿ. ಹಾಗೇ ಪ್ರಕೃತಿಯ ಈ ಎಲ್ಲಾ ವಿಸ್ಮಯಗಳ ನಡುವೆ ನನಗೇ ಅರಿವಿಲ್ಲದೆ ಮಳೆಹನಿಗಳೂ ನನ್ನ ಸಂಗಾತಿಯಾದವು ಅಂತ ಬಿಡಿಸಿ ಹೇಳಬೇಕಿಲ್ಲ.

ಆದ್ರೆ ಮಳೆಯಲ್ಲಿ ಆಚೆಗೆ ಬರಲೇಬಾರ್ದು ಅಥವಾ ನಾನು ತಲುಪಬೇಕಾದ ಸ್ಥಳ ಸೇರುವವರೆಗೂ ಮಳೆ ಸುರಿಯಬಾರ್ದು ಅಂತ ನನಗೆ ಮೊದಲ ಸಲ ಅನ್ನಿಸಿದ್ದು ನಾನು ಚೆನ್ನೈನಲ್ಲಿ ಖಾಸಗಿ ಚಾನೆಲೊಂದರಲ್ಲಿ ಕೆಲಸ ಮಾಡುವಾಗ. ಆಫೀಸು ಬಹಳ ಹತ್ತಿರವೇ ಇದ್ರೂ 25 ರೂ ತೆತ್ತು ಮಳೆ
ಬಂತು ಅಂತ ಆಟೋ ಏರಿದ್ದಿದೆ. ಅಲ್ಲಂತೂ ಬಿಡಿ, ಮಳೆ ಬಂದ್ರೆ ಇಡೀ ರಸ್ತೆಯೆಲ್ಲಾ ಕರಿ ಬಣ್ಣದ ನೀರು. ಸಾಲದಕ್ಕೆ ಅದೆಲ್ಲೆಲ್ಲೋ ಅಡಗಿರುತ್ತಿದ್ದ ಹೆಗ್ಗಣಗಳು ನಮ್ಮ ಕಣ್ಣೆದುರೇ ಸ್ವಿಮ್ಮಿಂಗ್ ಮಾಡುತ್ತಾ ಮೋಜು ಮಾಡ್ತಿದ್ರೆ....ಅಬ್ಬಬ್ಬಾ ಯಾವಾಗಪ್ಪಾ ಈ ಮಳೆ ನಿಲ್ಲೋದು ಅನ್ನಿಸ್ತಿತ್ತು. ನಾನೊಮ್ಮೆ ಹೊಸ ಶೂ ಕೊಂಡಿದ್ದೆ. ಅವತ್ತು ಆಫೀಸಿಗೆ ಧರಿಸಿದ್ದೆ. ವಾಪಸ್ಸಾಗುವ ಮುನ್ನ ಊಟಕ್ಕೆ ಹೊಟೇಲ್ ಗೆ ಹೋಗಿದ್ವಿ. ಊಟ ಮುಗಿಸಿ ಬರುವಷ್ಟರಲ್ಲಿ ಇಡೀ ರಸ್ತೆ ಹೆಚ್ಚು ಕಡಿಮೆ ಕೊಚ್ಚೆ ಗುಂಡಿ ಥರ ತುಂಬಿತ್ತು. ಶಿಟ್! ನಾನೊಂದ್ಸಲಾ ನನ್ನ ಶೂ ನೋಡ್ಕೊಂಡೆ ಅಳು ಬರೋದೊಂದು ಬಾಕಿ. ಕಣ್ಮುಚ್ಚಿ ನೀರಿಗಿಳಿದು ಮನೆ ಸೇರಿದ್ದಾಯ್ತು.
ಬೆಂಗಳೂರಲ್ಲೂ ನಾನು ಮಳೆಯಲ್ಲಿ ನೆನೆಯುತ್ತ ವಾಹನ ಸವಾರಿ ಮಾಡಿ ಮನಸಾರೆ ಮಜಾ ಮಾಡಿದ್ದಿದೆ. ಆದ್ರೆ ಒಂದಿನ ರಾತ್ರಿ 9ರ ಸಮಯದಲ್ಲಿ ಸಣ್ಣಗೆ ಮಳೆ ಶುರುವಾಯ್ತು. ವಾಹ್ ನೆನೆಯುತ್ತಾ ಆರಾಮಾಗಿ ಹಾಸ್ಟೆಲ್ ಸೇರಬಹುದು ಅನ್ನೋ ಅತಿಯಾಸೆ, ನನಗೆ ಅವತ್ತು ಎಂಥ ಅವಾಂತರ ತಂದಿತ್ತಂದ್ರೆ? ಉಫ್, ನನ್ನ ಪ್ರೀತಿಯ ಗಾಡಿ ಅರ್ಧ ದೂರದಲ್ಲೇ ಕೆಟ್ಟು ನಿಂತು ಬೇಡ ಫಜೀತಿ. ಯಾವುದೋ ಪೆಟ್ರೋಲ್ ಬಂಕ್ ನಲ್ಲಿ ಸಹಾಯ ಪಡೆಯೋ ಪ್ರಯತ್ನ ಮಾಡಿದೆ. ಗಾಡಿ ಸ್ಟಾರ್ಟ್ ಆಯ್ತು. ಆದ್ರೆ ಮುಂದಿನ ರಸ್ತೆ ಸೇರುವಷ್ಟರಲ್ಲಿ ಮತ್ತೆ ಆಫ್! ಆ ರಸ್ತೆಯಲ್ಲಿ ಜನಸಂಚಾರ ಅಷ್ಟಕ್ಕಷ್ಟೆ . ಅವತ್ತು ರಾತ್ರಿ ನಾನು ಹಾಸ್ಟೆಲ್ ಸೇರುವಷ್ಟರಲ್ಲಿ
ಬೇಡ ನನ್ನ ಪಾಡು. ಮಳೆಯಲ್ಲಿ ನೆನೆಯೋದಿರ್ಲಿ ಆ ಚಳಿಯಲ್ಲೂ ಸಣ್ಣಗೆ ಬೆವರಿದ್ದೆ.
ಇತ್ತೀಚೆಗೆ ಮಳೆಯಲ್ಲಿ ಮನದಣಿಯೆ ನೆಂದದ್ದು ಬಿಸಿಲೆ ಘಾಟಿಯಲ್ಲಿ. ನಾವೆಲ್ಲಾ ಫ್ರೆಂಡ್ಸು ಸೇರ್ಕೊಂಡು ಬಿಸಿಲೆಗೆ ಟ್ರೆಕ್ಕಿಂಗ್ ಗೆ ಅಂತ ಹೋಗಿದ್ವಿ. ಕಾಡಿನೊಳಕ್ಕೆ ಬರುವವರೆಗೂ ಮಳೆ ಇರ್ಲಿಲ್ಲ. ಹಿಂದಿನ ದಿನ ಚೆನ್ನಾಗಿ ಮಳೆ ಸುರಿದಿತ್ತು. ಆದ್ರೆ ಕಾಡಿನ ತುಂಬಾ ಬರೀ ಜಿಗಣೆಗಳದ್ದೇ ಸಾಮ್ರಾಜ್ಯ. ಕಾಲಿಟ್ಟ ಕಡೆ ಎಲ್ಲೆಲ್ಲೂ ನಾವೇ ಅಂತ ಕಾಲೇರಿ ರಕ್ತ ಹೀರಲು ಶುರುಮಾಡ್ತಿದ್ವು. ಆದ್ರೆ ಮದ್ಯಾಹ್ನ ನಾವು ಕಾಡಿನಿಂದ ಹೊರಡುವ ಸಮಯ. ಶುರುವಾಯ್ತು ನೋಡಿ ಮಳೆ. ಸರಿಸುಮಾರು 5-6 ಕಿಮೀ ನಾವು ಮಳೆಯಲ್ಲಿ ನೆನೆಯುತ್ತಲೇ ನಡೆದಿದ್ದೀವಿ. ಮಳೆ ಅಂದ್ರೆ ಅದೇನು ಕಡಿಮೆ ಪ್ರಮಾಣವಾ? ಬಿಸಿಲೆಯಂಥ ಬಿಸಿಲೇ ಬೀಳದ ಕಾಡೊಳಗೂ ಅಷ್ಟು ಜೋರಾಗಿ ಚೆಚ್ಚಿತ್ತು ಆ ಮಳೆ. ನಾವು ನಡೆದು ಬರುತಿದ್ದ ದಾರಿ ಏರು ಪ್ರದೇಶವಾಗಿದ್ದರಿಂದ ಬಲುಬೇಗ ಸುಸ್ತಾಗ್ತಿತ್ತು. ಆದ್ರೆ ಆವತ್ತು ಮಳೆ

ಸುರಿದ ರೀತಿ ಹೇಗಿತ್ತಂದ್ರೆ ಉಫ್ ಅದನ್ನ ಅಲ್ಲಿ ಫೀಲ್ ಮಾಡಿದ್ನಲ್ಲಾ? ನಂಗೆ ಮಾತ್ರ ಗೊತ್ತು ಆ ಖುಷಿ. ಸದ್ಯ ಅಷ್ಟು ಜೋರು ಮಳೆಗೆ ಜಿಗಣೆಗಳೆಲ್ಲಾ ಮಾಯ. ಸಾಲದಕ್ಕೆ ಇಡೀ ಕಾಡು ಮಳೆಗೆ ತೊಯ್ದು ಒಂಥರಾ ಘಮ್ ಅನ್ನೋ ಮಣ್ಣಿನ ಸುವಾಸನೆ. ಆಹ್..ಅದನ್ನು ಖಂಡಿತ ನಾನು ಮಾತಿನಲ್ಲಾಗಲೀ ಬರಹದಲ್ಲಾಗಲೀ ಹೇಳೋಕೆ ತುಂಬಾ ಕಷ್ಟ. ಅದು ಅಂತಹ ಅದ್ಭುತ ನಿಸರ್ಗದ ಮಡಿಲಲ್ಲಿ ಮಾತ್ರ ಸಿಗೋಕೆ ಸಾಧ್ಯ.
ಮೊದಲೇ ಹೇಳಿದ್ನಲ್ಲಾ ಅದು ಏರು ಪ್ರದೇಶ ಅಂತ. ಮಳೆ ಬೇರೆ ತುಂಬಾ ಅಂದ್ರೆ ತುಂಬಾ ಜೋರಾಗಿ ಬೀಳ್ತಿತ್ತು. ಹಾಗಾಗಿ ಮಳೆ ನೀರೆಲ್ಲಾ ನಾವು ಬರ್ತಿದ್ದ ಕಾಲುದಾರಿಯಲ್ಲೇ ಹರಿದು ಬರ್ಬೇಕಿತ್ತು. ನಿಜಕ್ಕೂ ಯಾವುದೋ ಸಣ್ಣ ಜಲಪಾತದ ಕಾಲಡಿ ನಾವು ನಡೆದುಬರ್ತಿದ್ದೀವೇನೋ ಅನ್ನೋ ಭಾವನೆ. ನಿಜ ಹೇಳ್ತೀನಿ ಈಗಲೂ ನಂಗೆ ಅಲ್ಲಿ ನಡೆದು ಬಂದ ಅನುಭವ ನೆನಪಾದ್ರೆ ಹಮ್್್್್್ am so lucky ಅನ್ಸುತ್ತೆ. ಕಾಡಿಂದ ಹೊರಗೆ ಬಂದ್ವಲ್ಲಾ. ರಸ್ತೆ ಮೇಲೆ ಬಂದಾಗ ಅಲ್ಲಿ ಮತ್ತೊಂಥರಾ ಅನುಭವ. ಸುತ್ತ ಇದ್ದ ಇಡೀ ಗಿಡಮರಗಳು ಬಿದ್ದ ವರ್ಷಧಾರೆಗೆ ತೊಳೆದ ಕನ್ನಡಿಯಂತೆ ಲಕಲಕ ಮಿನುಗುತ್ತಿದ್ದವು. ಅಲ್ಲೇ ಪಕ್ಕದಲ್ಲೇ ಒಂದು ಪುಟ್ಟ ಝರಿ! ಬಹುಶಃ ನಿಸರ್ಗದ ಪರಿಚಯ ಅದರೊಂದಿಗೆ ನಿಕಟ ಒಡನಾಟ ಇದ್ದವರಿಗೇ ಗೊತ್ತು, ಇಂತಹ ಝರಿಗಳ ಮಹಿಮೆ. ಬಾಯಾರಿದ್ದ ನಮಗೆ ಅಲ್ಲಿ ಸುರೀತಿದ್ದ ನೀರು ಕುಡೀಬೇಕು ಅಂತ ಅನ್ನಿಸ್ದಿದ್ರೂ ಅವತ್ತು ಕುಡಿದೇ ಬಿಟ್ವಿ. ಈಗಂತೂ ಸಿಟಿ ಜನ ಹೊರಗಿನ ನೀರು ಕುಡಿಯಲೇ ಹಿಂದುಮುಂದು ನೋಡೋ ಪರಿಸ್ಥಿತಿ. ಆದ್ರೆ ಅವತ್ತು ಕುಡಿದ್ದದು ಯಾವುದೋ ಬೆಟ್ಟ, ಕಾಡುದಾರಿ, ಬಂಡೆಯನ್ನು ಬಳಸಿ, ಗಿಡಮರಗಳನ್ನು ತಣಿಸಿ, ಸಣ್ಣದಾಗಿ ಝರಿಯಾಗಿ ಹರಿಯುತ್ತಿದ್ದ ನೀರನ್ನು. ವಾಹ್...ಆ ಸ್ವಾದ! ಖಂಡಿತ....ಖಂಡಿತ ಅದರ ರುಚಿಗೆ ಸರಿಸಾಟಿ ಎಲ್ಲೂ ಇಲ್ಲ. ಇಡೀ ಪ್ರಪಂಚದಲ್ಲೆಲ್ಲೂ ಸಿಗದ ಅಮಿತಾನಂದ ಆ ನೀರು ಕುಡಿದ್ರೆ. ಅದರಲ್ಲೂ ಅನುಭವಕ್ಕೆ ಸಿಗದ ಒಂದು ವಿಶಿಷ್ಟ ರುಚಿ ಇತ್ತಲ್ಲಾ? ಬಿಡಿ, ಸುಮ್ಮನೆ ಇದನ್ನು ಓದುತ್ತಿರುವವರ ಹೊಟ್ಟೆಯಲ್ಲಿ ಹೆಚ್ಚು ಕಿಚ್ಚು ಹೊತ್ತಿಸೋದು ಬೇಡ!
ಹೌದು ಮಳೆ....ಈ ಮಳೆ ಎಷ್ಟ್ ಚೆಂದ ಅಲ್ವಾ....ಬರೆದಷ್ಟು ಮುಗಿಯದ, ಮೊಗೆದಷ್ಟು ಖಾಲಿಯಾಗದ ಅನುಭವಗಳನ್ನು, ಈ ಮಳೆ ನನಗಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಕಟ್ಟಿಕೊಟ್ಟಿರುತ್ತದೆ. ಮಳೆ ಅಂದ್ರೆ ವೈರಲ್ ಫೀವರ್, ಜ್ವರ ನೆಗಡಿ ಕೆಮ್ಮು ಅಂತೆಲ್ಲಾ ಸಬೂಬು ಹೇಳಿ ಮನೆ ಸೇರುವವರನ್ನು ಕಂಡ್ರೆ ನನಗೆ ನಗು ಬರುತ್ತೆ. ಇವರೆಂಥಾ ದುರದೃಷ್ಟವಂತರು. ಅನನುಭವಿಗಳು ಅನ್ಸುತ್ತೆ. ನಮ್ಮ ಮೈ ಸೋಕುವ ಮಳೆಯ ಹನಿಹನಿಯನ್ನೂ ಫೀಲ್ ಮಾಡುತ್ತಾ ಪಡುವ ಆ ಖುಷಿ ನಿಜಕ್ಕೂ ಅವರ್ಣನೀಯ. ಓ ಮಳೆಯೇ ನಿನಗೆ ನನ್ನ ನಮನ.
6 comments:
ಸುಂದರ ಬರಹ
super amma! Bisle...every word you wrote is sooooo true! What a trek! what a rain! what a nature! every time I think of it,I fall in love with BISLE all over again...last paragraph reminded me my aunt....heheheheh :)...keep writing!
ವಾವ್!ಚೆನ್ನಾಗಿ ಬರೆದಿದ್ದೀರಾ...
mangalore male nenapayuthu
thumba channagide.... nimma e baraha nodi naanu nanna baalyada nenepige swalpa hothu jaariddanthu sathay.... keep continue madam, all the best.
- siddesh
nice, your writing is good as drizzling rain.....keep writing;;;;;;
Post a Comment