Thursday, September 9, 2010

ಮತ್ತೊಂದ್ ಆಕ್ಸಿಡೆಂಟು... :(

ಬೆಂಗಳೂರಲ್ಲಿ ಗಾಡಿ ಓಡಿಸೋದು ಒಂದು ಸವಾಲಿನ ಕೆಲ್ಸ ಬಿಡೀಪ್ಪಾ. ನಾವೆಷ್ಟೇ ಹುಷಾರಾಗಿ ರೈಡ್ ಮಾಡಿದ್ರೂ ಅಪಘಾತಗಳು ಬೆಂಬತ್ತಿ ಬರ್ತವೆ. ಕಳೆದ ಲೇಖನದಲ್ಲಿ ಯಾರೋ ಹುಚ್ಚು ಹುಚ್ಚಾಗಿ ಬೈಕ್ ಓಡಿಸಿ ಪಾಪದ ವ್ಯಕ್ತಿಗೆ ಪೆಟ್ಟು ಮಾಡಿ ಹಿಡಿ ಶಾಪ ಹಾಕಿಸಿಕೊಂಡಿದ್ದು, ನನಗೇ ಹಿಂದೊಮ್ಮೆ ಆದ ಅಪಘಾತದ ಬಗ್ಗೆ ಬರ್ದಿದ್ದೆ. ಆದ್ರೆ ಮತ್ತದೇ ಆಕ್ಸಿಡೆಂಟ್ ಬಗ್ಗೆ ಮುಂದಿನ ಲೇಖನ ಇರುತ್ತೆ ಅಂತ ನಾನ್ ಅಂದ್ಕೊಂಡೇ ಇರ್ಲಿಲ್ಲ!

ನೈಟ್ ಶಿಫ್ಟ್ ಗೆ ತಯಾರಾಗಿ ಮೊನ್ನೆ ಆಫೀಸಿಗೆ ಹೊರಟೆ. ಆದ್ರೆ ಸಿದ್ಧಳಾಗೋ ಹೊತ್ತಲ್ಲಿ ಅವತ್ಯಾಕೋ ಮನಸ್ಸು ಅಷ್ಟು ಖುಷಿಯಿಂದ ಇದ್ದ ಹಾಗೆ ಇರ್ಲಿಲ್ಲ. ಏನೋ ಒಂಥರಾ ಬೇಸರ ಅನ್ನಿಸ್ತಿತ್ತು. ಒಳಗೊಳಗೇ ಕಾರಣವಿಲ್ಲದೆ ದುಗುಡ. ಯಾಕೇ ಇವತ್ ಈ ಥರಾ ಅನ್ಕೊಂಡೆ. ಕೆಲವೊಮ್ಮೆ ಹೀಗಾಗುತ್ತೆ ಅಂತ ನನ್ನನ್ನ ನಾನೇ ಸಮಾಧಾನಿಸಿಕೊಂಡೇ ಹೊರಟಿದ್ದೆ. ಆಫೀಸಿಂದ ಅಬ್ಬಬ್ಬಾ ಅಂದ್ರೆ ಅರ್ಧ ಕಿ.ಮೀ ದೂರವಿದ್ದ ಸಿಗ್ನಲ್ ಬಳಿ ಕೆಂಪು ದೀಪ ನಿಲ್ಲು ಅಂತ ಆಜ್ಞಾಪಿಸಿತ್ತು. ಬ್ರೇಕ್ ಹಾಕಿ ಹಸಿರು ನಿಶಾನೆಗೆ ಕಾಯುತ್ತಾ ನಿಂತೆ. ಸಿಗ್ನಲ್ ಬೀಳಲು ಇನ್ನೂ ಹತ್ತಿಪ್ಪತ್ತು ಸೆಕಂಡ್ ಗಳು ಬಾಕಿಯಿದ್ದವು. ಕಬ್ಬನ್ ಪಾರ್ಕ್ ಬಳಿಯ ಮಂಜುಳ ಮಂಟಪದ ಪಕ್ಕದ ಸಿಗ್ನಲ್ ಬಳಿ ನಾನಿದ್ದೆ. ನಮಗೂ, ನಮ್ ಎದುರಿಗಿದ್ದ ಕಡೆಯ ಸಿಗ್ನಲ್ ಬೀಳೋದೂ ಏಕಕಾಲಕ್ಕೇ ಆದ್ರೂ ಹತ್ತೋ ಹದಿನೈದೋ ಸೆಕೆಂಡ್ ಅಂತರವಿರುತ್ತೆ. ಸುಂದರಂ ಮೋಟಾರ್ಸ್ ಕಡೆಯಿಂದ ಬಂದ ವಾಹನಗಳಲ್ಲಿ, ಕಬ್ಬನ್ ಪಾರ್ಕ್ ಕಡೆ ಬಲ ತಿರುವು ತೆಗೆದುಕೊಳ್ಳೋರಿಗೆ ಅವಕಾಶ ಸಿಗಲೆಂದೋ ಏನೋ ಈ ರೀತಿ ಮಾಡಿರಬಹುದು. ಹಾಗಾಗಿ ನಾನಿದ್ದ ಕಡೆ ಹಿಂದಿನವರು ಮುಂದೆ ನಿಂತಿರೋ ವಾಹನ ಚಾಲಕರಿಗೆ ಮುಂದೆ ಚಲಿಸುವಂತೆ ಜೋರಾಗಿ ಹಾರ್ನ್ ಬಜಾಯಿಸೋದು ಇದ್ದದ್ದೇ.

ಆವತ್ತೂ ಅದೇ ನಡೆದಿತ್ತು. ಟೈಮ್ ರಾತ್ರಿ 9-45 ಇರ್ಬಹುದು. ನನ್ ಹಿಂದಿನ ವೆಹಿಕಲ್ ಗಳವರು ಕೆಟ್ಟದಾಗಿ ಹಾರ್ನ್ ಹೊಡೀತಿದ್ರೂ ನಾನು ಗ್ರೀನ್ ಸಿಗ್ನಲ್ ಗಾಗಿ ಪ್ರಾಮಾಣಿಕಳಾಗಿ ಕಾಯ್ತಿದ್ದೆ. ಅಫ್ಕೋರ್ಸ್ ನಾನ್ಯಾವಾಗ್ಲೂ ಅದನ್ನೇ ಮಾಡೋದು. ಅಷ್ಟರಲ್ಲೇ ಕೆಂಡದ ಮೇಲೆ ನಿಂತವರಂತೆ ಎಷ್ಟೋ ಮಂದಿ ಸುಂಯ್ ಅಂತ ಸಿಗ್ನಲ್ ಜಂಪ್ ಮಾಡಿ ಮುಂದೆ ಹೋಗಿಯಾಗಿತ್ತು. ನಾನು ಹಸಿರು ನಿಶಾನೆ ಬಿದ್ದದ್ದು ಖಾತ್ರಿ ಮಾಡ್ಕೊಂಡೇ ಮುಂದಕ್ಕೆ ಹೊರಟೆ. ಅದೇನು ಗ್ರಹಚಾರವೋ ಯುಬಿ ಸಿಟಿ ಕಡೆಯಿಂದ ರೆಡ್ ಸಿಗ್ನಲ್ ಇದ್ರೂ ವಾಯುವೇಗದಲ್ಲಿ ಬಂದ ಬೈಕೊಂದು ಡಿಕ್ಕಿ ಕೊಟ್ಟೇ ಬಿಡ್ತು. ನಾನು ಬ್ರೇಕ್ ಹಿಡಿಯೋವಷ್ಟರಲ್ಲಿ ಅವರೇ ನನ್ನ ಗಾಡಿಗೊಂದು ಗತಿ ಕಾಣಿಸಿದ್ರು. ಅಷ್ಟು ವೇಗದಲ್ಲಿ ನುಗ್ಗಿದ್ರು. ಕ್ಷಣಮಾತ್ರದಲ್ಲಿ ನನ್ನ ವೆಹಿಕಲ್ ಒಂದ್ಕಡೆ ನಾನೊಂದ್ಕಡೆ. ಬಿದ್ದ ರಭಸಕ್ಕೆ ತಲೆ ನೆಲಕ್ಕೆ ಜೋರಾಗಿ ಬಡಿಯಿತು. ಸತ್ಯವಾಗಿಯೂ ನನ್ನ ಆವತ್ತು ಕಾಪಾಡಿದ್ದು ನಾನು ತೊಟಿದ್ದ ಒಳ್ಳೆ ಗುಣಮಟ್ಟದ ಹೆಲ್ಮೆಟ್. ತಕ್ಷಣ ಸಾವರಿಸಿಕೊಂಡು ಎದ್ದು ನಿಂತೆ. ಸುತ್ತಲೂ ಜನ ಜಮಾಯಿಸಿದ್ರು. ಢಿಕ್ಕಿ ಕೊಟ್ಟಿದ್ದ ಭೂಪರೂ sorry sorry ಅನ್ನುತ್ತಾ ಅಲ್ಲೇ ನಿಂತಿದ್ರು. ಒಂದಷ್ಟು ಹೊತ್ತು ವಾದ ನಡೀತು. ಇಷ್ಟೆಲ್ಲಾ ಆಗ್ತಿದ್ರೂ ಹುಡುಕಿದ್ರೂ ಒಬ್ಬೇ ಒಬ್ಬ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಇರ್ಲಿಲ್ಲ ಅನ್ನೋದು ಪಾಯಿಂಟ್ ಟು ಬಿ ನೋಟೆಡ್!

ಕೋಪದಿಂದ ಕೆಲವರು ಆ ಹುಡುಗರನ್ನು ಬೈಯ್ಯೋರು ಬೈದ್ರು. ನನಗೇನಾದ್ರೂ ಗಾಯ ಅಥವಾ ಫ್ರಾಕ್ಚರ್ ಆಗಿದ್ಯಾ ನೋಡ್ಕೊಳ್ಳಿ ಅಂತ ಇದ್ದವರೆಲ್ಲಾ ಹೇಳಿದ್ರು. ನನಗೆ ಸ್ವಲ್ಪ ತರಚು ಗಾಯವಾಗಿತ್ತಷ್ಟೇ. ಏನಿಲ್ಲ ಬಿಡಿ ಅಂದೆ. ಆದ್ರೆ ಒಳಗೊಳಗೇ ಸಖತ್ತಾಗೇ ಪೆಟ್ಟಾಗಿತ್ತು. ನನಗೆ ತಡ್ಕೊಳಕ್ ಆಗ್ಲೇ ಇಲ್ಲ, ಕಣ್ಣಲ್ಲಿ ನೀರು ಗಳಗಳ ಸುರಿಯಲಾರಂಭಿಸಿತು. ನಂಗೆ ನೋವಾಯ್ತಂತಲ್ಲ. ನಾನು ಅಷ್ಟು ಪ್ರೀತಿಯಿಂದ ಕಾಳಜಿ ಮಾಡೋ ನನ್ನ ಟೂ ವ್ಹೀಲರ್ ನ ಒಂದು ಬ್ರೇಕ್ ಮುರಿದು ನೇತಾಡ್ತಿತ್ತು. ವೆಹಿಕಲ್ ನ ಒಂದು ಬದಿ ಉಜ್ಜಿ ಹೋಗಿತ್ತು. Funny ಅನ್ನಿಸಿದ್ರೂ ನನಗೆ ನನ್ನ ವೆಹಿಕಲ್ ಮೇಲೆ ಅಷ್ಟು ಸೆಂಟಿಮೆಂಟ್. ನಾನಂತಲ್ಲ, ಬಹುತೇಕರಿಗೆ ಇಂತಹ ಭಾವವಿರುತ್ತೆ. ತಮ್ಮ ವಾಹನಗಳನ್ನು ಮಕ್ಕಳಂತೆ ನಾಜೂಕಾಗಿ ನೋಡಿಕೊಳ್ತಾರೆ. ಅದಕ್ಕೊಂದು ಸ್ಕ್ರ್ಯಾಚ್ ಆದ್ರೆ ನಮಗೇ ಯಾರೋ ಗೀರಿದಂತೆ ಫೀಲ್ ಆಗುತ್ತೆ. ನನಗೂ ಆವತ್ತು ಹಾಗೇ ಅನ್ನಿಸ್ತಿತ್ತು. ಎಷ್ಟು ನೋವಾಯ್ತೋ ಇದಕ್ಕೆ ಅಂತ. ಅಲ್ಲಿದ್ದವರು ನಿಮ್ಗೇನೂ ಆಗ್ಲಿಲ್ವಲ್ಲ ಬಿಡಿ ಮೇಡಂ, ಗಾಡಿ ಹೋದ್ರೆ ಹೋಗ್ಲಿ ಇಂಥ 10 ಗಾಡಿ ತಗೋಬಹುದು ಅಂತ ಬುದ್ಧಿ ಹೇಳೋಕ್ ಶುರುವಿಟ್ಕೊಂಡ್ರು. ಅವ್ರು ಹೇಳೋದೂ ಸರಿಯಾಗೇ ಇತ್ತು. ಆದ್ರೂ ಗಾಡಿ ಅವಸ್ಥೆ ನೋಡಿ ನಿಜವಾಗ್ಲೂ ಸಂಕಟ ಅನ್ನಿಸ್ತಿತ್ತು.

ಛೇ...ಎಂಥಾ ಜನ. ನಿಧಾನವಾಗಿ ವಾಹನ ಚಲಾಯಿಸಿದ್ರೆ ಅಥವಾ ಸಿಗ್ನಲ್ ಬೀಳೋ ತನಕ ಕಾಯೋ ಒಂದೆರಡು ನಿಮಿಷದಲ್ಲಿ ಕಳೆದುಕೊಳ್ಳೋದಾದ್ರೂ ಏನು? ಇಂಥ ಅನಾಹುತಗಳನ್ನು ತಡೆಗಟ್ಟಲು ನಮ್ಮ ಟ್ರಾಫಿಕ್ ಪೊಲೀಸ್ನೋರು ಏನೇನೋ ಸರ್ಕಸ್ ಮಾಡ್ತಾರೆ. ಆದ್ರೂ ತಲೆಕೆಟ್ಟವರಂತೆ ವಾಹನ ಚಲಾಯಿಸೋ ಇಂಥ ಜನಕ್ಕೆ ಅದೆಷ್ಟ್ ರೂಲ್ಸ್ ತಂದ್ರೂ ಬುದ್ಧಿ ಕಲಿಯೋಲ್ವೇನೋ ಅನ್ಸುತ್ತೆ.