Friday, August 28, 2009

ಮತ್ತೆ ಬಂದ ಗಣೇಶ ...

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ, ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ...ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ, ಮಂಗಳವಾ ತರುತಲಿರುವ ಶುಭದ ಚತುರ್ಥಿ... ಹೌದು, ಮತ್ತೆ ಗಣೇಶ ಚತುರ್ಥಿ ಬಂದಿದೆ. ಗಣೇಶನ ಹಬ್ಬ ಅಂದ್ರೆ ಎಲ್ಲರಿಗೂ ಖುಷಿ ಕೊಡುವ ಹಬ್ಬ. ಹಿರಿಯರಿಂದ ಹಿಡಿದು ಮನೆಯ ಪುಟ್ಟ ಪುಟ್ಟ ಮಕ್ಕಳೂ ಗಣೇಶನ ಹಬ್ಬ ಬಂತೂಂದ್ರೆ ಸಂಭ್ರಮಿಸುತ್ತಾರೆ. ತಮ್ಮ ಮನೆಗೆ ಗಣಪನ ಮೂರ್ತಿ ತರುವುದೇ ಅವರಿಗೆ ಅತಿ ಸಂತಸದ ಸಂಗತಿ. Even ನಂಗೂ ಗಣೇಶನ ಹಬ್ಬ ಅಂದ್ರೆ ತುಂಬಾ ಇಷ್ಟ. ಈಸಲ ಅಂತೂ ನಾನು ಮನೆಯನ್ನು ತುಂಬಾ ಮಿಸ್ ಮಾಡ್ಕೊತಿದೀನಿ. ಬೇರೆ ಹಬ್ಬಗಳಿಗೆ ರಜೆ ಸಿಗದಿದ್ರೆ ಸ್ವಲ್ಪ ಬೇಜಾರಾದ್ರೂ ಸುಮ್ಮನಾಗ್ತಿದ್ದೆ. ಆದ್ರೆ ಈ ಸಲ ಗೌರಿ-ಗಣೇಶ ಹಬ್ಬಕ್ಕೆ ಮನೆಗೆ ಹೋಗೋ ಅವಕಾಶ ಸಿಗದಿದ್ದಕ್ಕೆ ತುಂಬಾ ಫೀಲ್ ಆಗ್ತಿದೆ. ಹಬ್ಬದ ದಿನದಂದು ಬಿಕೋ ಅನ್ನೋ ಆಫೀಸಿನ ವಾತಾವರಣದಲ್ಲಿ ಕೆಲಸ ಮಾಡೋ ಸಂಕಟ ನನಗೆ ಚೆನ್ನಾಗಿ ಗೊತ್ತು.

ಇತರೆ ಎಲ್ಲಾ ಹಬ್ಬಗಳಿಗೂ ಹೋಲಿಸಿದರೆ ಗಣೇಶನ ಹಬ್ಬದ ಖದರ್ರೇ ಬೇರೆ ಬಿಡಿ. ಊರಲ್ಲಂತೂ ಗಣೇಶ ಚತುರ್ಥಿ ಬರಲು ಇನ್ನೂ 15 ದಿನಗಳಿವೆ ಎಂಬಂತೇ ನಮ್ಮ ಏರಿಯಾ ಹುಡುಗರ ತಂಡಗಳು ಸಿದ್ಧತೆಯಲ್ಲಿ ತೊಡಗುತ್ತಿದ್ದವು. ಮನೆ ಮನೆಗಳಿಗೂ ಹೋಗಿ ಗಣೇಶನನ್ನು ಕೂರಿಸಲು ಚಂದಾ ಎತ್ತುತ್ತಿದ್ದರು. ಅಲ್ಲೂ ಪೈಪೋಟಿ. ಯಾಕಂದ್ರೆ ಏರಿಯಾಗೊಂದೇ ಗಣಪತಿ ಆದ್ರೆ ಓಕೆ, ಇಲ್ಲಿ ಹಾಗಲ್ಲವಲ್ಲ. ಏರಿಯಾಗೆ 2ರಿಂದ 3 ಕಡೆ ಗಣೇಶನನ್ನು ಕೂರಿಸ್ತಿದ್ರು. ಎಲ್ಲರಿಗೂ ಚಂದಾ ಕೊಟ್ಟು ಕೊಟ್ಟು ಸಾಕಾಗಿ ಎಷ್ಟೋ ಮನೆಗಳಲ್ಲಿ ಇವರ ಗ್ಯಾಂಗುಗಳು ಬರ್ತಿವೆ ಅಂದ್ರೆ ಸಾಕು ಮಕ್ಕಳ ಹತ್ರ ಮನೇಲಿ ಯಾರೂ ದೊಡ್ಡೋರು ಇಲ್ಲ ಅಂತ ಹೇಳಿಸೋ ಪರಿಪಾಠ ಶುರುವಾಗಿಬಿಡ್ತು! ನಮ್ಮ ಮನೆಯಲ್ಲೂ ಅಪ್ಪ ಇಲ್ಲದ ಸಮಯದಲ್ಲಿ ಇದೇ ಡೈಲಾಗು! ಆದ್ರೆ ನಮಗೆ ಹೀಗೆಲ್ಲಾ ಹೇಳೋಕೋ ಮುಜುಗರ. ಅದಕ್ಕೇ ಅಪ್ಪನಿಗೆ ದಬಾಯಿಸಿ ಮಾಮೂಲಾಗಿ ಚಂದಾ ಕೇಳಲು ಬರ್ತಿದ್ದ ಗುಂಪಿನವರಿಗೆ ಬೆಳಗ್ಗೆಯೇ ವಸೂಲಿ ಮಾಡಿಟ್ಟುಕೊಂಡು ಸಂಜೆ ಬಂದಾಗ ಅವರಿಗೆ ಕೊಡ್ತಿದ್ದೆವು. ಹೀಗೆ ಶುರುವಾಗ್ತಿತ್ತು ಗಣೇಶನ ಹಬ್ಬದ ಅಬ್ಬರ. ನಮಗಂತೂ ಗೌರಿ ಹಬ್ಬದಂದು ಹೊಸ ಬಟ್ಟೆ, ಬಳೆ ತೊಟ್ಟು ಸಂಭ್ರಮಿಸೋದೇ ಖುಷಿ. ನಾನಂತೂ ಅವತ್ತು ಬೆಳ್ಳಂಬೆಳಗೆ ಅಮ್ಮನ ಕೂಗಿಗೆ ಎದ್ದರೆ, ಸ್ನಾನ ಮಾಡಿ ಮಡಿಯುಟ್ಟು ಮಾಡಬೇಕಿದ್ದ ಮೊದಲ ಕಾರ್ಯ ಮನೆ ಮುಂದೆ ರಂಗುರಂಗಿನ ರಂಗೋಲಿ ಬಿಡಿಸೋದು. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಹಬ್ಬದ ದಿನ ನಾನು ಬಿಡಿಸುತ್ತಿದ್ದ ರಂಗೋಲಿ ಯಾವುದು ಹೇಗೆ ಕಲರ್ ತುಂಬಿಸಿದ್ದೇನೆ ಅಂತ ನೋಡೋಕೆ ಬೆಳಗ್ಗೆ 8ರ ಹೊತ್ತಿಗೆ ನನ್ನ ಗೆಳೆಯರು ಮನೆ ಮುಂದೆ ಜಮಾಯಿಸುತ್ತಿದ್ರು!

ಇನ್ನು ಮನೆಯೊಳಗಿನ ಕೆಲಸದಲ್ಲಿ ಪೂಜೆ ಪುನಸ್ಕಾರವೆಲ್ಲಾ ಅಮ್ಮನ ವಿಭಾಗ. ಅಪ್ಪ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿದ್ರೆ, ಅಡುಗೆ ಮನೆಯಲ್ಲಿ ಹೂರಣ ರುಬ್ಬಿ ಹೋಳಿಗೆ ಬೇಯಿಸುವುದು ನನ್ನ ಪಾಲು. ನನ್ನ ತಂಗಿಯೂ ಬೇಯಿಸುವುದು ಕಲಿಯಲಿ ಅಂತ ಕೂರಿಸಿದ್ರೆ ಅವಳು ಕೈಯಿಟ್ರೆ ಹೋಳಿಗೆಗಳು ಹರಿದು ಚಿಂದಿ ಚಿಂದಿ ಆಗ್ತಿದ್ವು! ಮತ್ತೆ ಆ ಕೆಲಸ ನನ್ನ ತಲೆಗೇ ಬರ್ತಿತ್ತು. ಅಬ್ಬಾ ಹೋಳಿಗೆ, ಕಾಯಿಹಾಲು, ನಿಂಬೆಹಣ್ಣಿನ ಚಿತ್ರಾನ್ನ, ಪಲ್ಯ, ಹೋಳಿಗೆ ಸಾರು, ನೆನಪಾದ್ರೆ ಬಾಯಲ್ಲಿ ನೀರೂರುತ್ತೆ, ಜೊತೆಗೆ ಕಣ್ಣಲ್ಲೂ ಕೂಡ. ಯಾಕಂದ್ರೆ ಹಬ್ಬದ ದಿನ ನನ್ನ ಪಾಲಿಗೆ ಆಫೀಸೇ ಗತಿ. ಗಣೇಶನ ಹಬ್ಬದಂದು ಚಿಕ್ಕವರಿದ್ದಾಗ ಬಟ್ಟಲಲ್ಲಿ ಅಕ್ಷತೆ ತೆಗೆದುಕೊಂಡು ಮನೆ ಮನೆಗಳಿಗೂ ಹೋಗಿ ನಿಮ್ ಮನೇಲಿ ಗಣಪತಿ ಇಟ್ಟಿದ್ದೀರಾ? ‘ ಅಂತ ಕೇಳಿ ಕೇಳಿ ಅಕ್ಷತೆ ಹಾಕಿ ಬರ್ತಿದ್ವಿ. ಆದ್ರೆ ಮನೆ ಬದಲಾಯಿಸಿ ಹೊಸ ಏರಿಯಾಗೆ ಬಂದ್ಮೇಲೆ ಈ ಕೆಲಸಕ್ಕೆ ಪೂರ್ಣ ವಿರಾಮ ಬಿತ್ತು. ಗಣೇಶ ಚತುರ್ಥಿಯಂದು ನಾನು ನಮ್ಮ ಮನೆ ಮುಂದೆ ಪ್ರತಿವರ್ಷವೂ ಭಿನ್ನ ಭಿನ್ನ ಮಾದರಿಯ ಗಜಮುಖನನ್ನು ರಂಗೋಲಿಯಲ್ಲಿ ಬಿಡಿಸುತ್ತಿದ್ದುದು ನೆನಪು. ಗಣೇಶನ ಹೆಸರಲ್ಲಿ ರುಚಿಯಾದ ಕಾಯಿ ಕಡುಬು, ಪಾಯಸ ಚಪ್ಪರಿಸದ್ದಂತೂ ಮರೆಯೋ ಹಾಗೇ ಇಲ್ಲ. ಇನ್ನು ನಾವಂತೂ ಕಾತರದಿಂದ ಕಾಯ್ತಿದ್ದದ್ದು ಸಂಜೆಗೆ. ಸಂಜೆ ನಮ್ಮೆಲ್ಲರ ಮನೆಗಳಿಗೆ ಬಂದು ಚಂದಾ ಕೇಳ್ತಿದ್ದ ಹುಡುಗರೆಲ್ಲಾ ಸಖತ್ ಗ್ರಾಂಡ್ ಆಗಿ ಗಣೇಶನನ್ನು ಕೂರಿಸಿ 3 ದಿನ ವೈಭವಯುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಮಾರುತಿ ಯುವಕರ ಸಂಘ ಅಂದ್ರೆ ನಮ್ಮ ಏರಿಯಾದಲ್ಲಿ ಫೇಮಸ್ಸು. ಚಂದಾ ಪಡೆದು ಎಲ್ಲಿ ಗಣೇಶನನ್ನು ಕೂರಿಸ್ತಿದ್ದೀವಿ ಅಂತ ಹೇಳದೇ ಮಾಯವಾಗ್ತಿದ್ದ ಹುಡುಗರಂತಲ್ಲ ಅವ್ರೆಲ್ಲಾ. ಹಿರಿಯರು ಕಿರಿಯರಿಗೆಲ್ಲಾ ವಿಭಿನ್ನವಾದ ಸ್ಪರ್ಧೆಗಳನ್ನು ಆಯೋಜಿಸಿ ಮೆಚ್ಚುಗೆ ಪಡೆಯುತ್ತಿದ್ರು. ಒಂದಿನ ಮುಂಚೆಯೇ ಬಂದು ಪಾಂಪ್ಲೆಟ್ ಗಳನ್ನು ಹಂಚಿ ಹೋಗ್ತಿದ್ರು. ನಾವು ಯಾವ್ಯಾವ ಕಾಂಪಿಟೇಷನ್ ಗಳಲ್ಲಿ ಭಾಗವಹಿಸೋದು ಅಂತ ಸ್ಕೆಚ್ ಹಾಕ್ತಾ ಕೂರ್ತಿದ್ವಿ. ಪ್ರತಿ ವರ್ಷ ರಂಗೋಲಿ ಕಾಂಪಿಟೇಶನ್ ನಲ್ಲಿ ನನಗೊಂದು ಬಹುಮಾನ ಗ್ಯಾರಂಟಿ. ಇನ್ನು ಹಾಡು, ನೃತ್ಯ, pick n speak ಅಂತೆಲ್ಲಾ ಬೇರೆ ಬೇರೆ ವಿಭಾಗಗಳಲ್ಲೂ ಬಹುಮಾನಗಳು ಬರ್ತಿದ್ವು. ಮೊದಲ ವರ್ಷವಂತೂ ನನ್ನದೂ ತಂಗಿಯದ್ದೂ ಸೇರಿ 8 ಬಹುಮಾನಗಳು ಬಂದಿದ್ದವು. ನನ್ನದೇ 5 ಇದ್ದವು. ಎಲ್ಲರದ್ದೂ ಒಂದೇ ಕಂಪ್ಲೇಂಟು. ನಾವೂ ಚಂದಾ ಕೊಟ್ಟಿರ್ಲಿಲ್ವಾ ನಮ್ಮ ಮಕ್ಕಳಿಗೂ ಪ್ರೈಜ್ ಕೊಡಿ ಅಂತ. ಕಡೆಗೆ ಬರುವ ವರ್ಷದಿಂದ ಒಬ್ಬರಿಗೆ ಮ್ಯಾಕ್ಸಿಮಮ್ ಮೂರೇ ಬಹುಮಾನಗಳು ಅಂತ ಕಾನೂನು ಜಾರಿಯಾಯ್ತು!

ಗಣೇಶನನ್ನು ಬಿಡುವ ಕೊನೆಯ ದಿನವಂತೂ ಇಡೀ ಏರಿಯಾದಲ್ಲಿ ಮೆರವಣಿಗೆ ಮಾಡ್ತಿದ್ದದನ್ನು ನೋಡೋಕೆ ಕಾದು ನಿಲ್ತಿದ್ವಿ. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಗಣೇಶನನ್ನು ಹೂವುಗಳಿಂದ ಅಲಂಕರಿಸಿ ಜಯಘೋಷಗಳೊಂದಿಗೆ ಮೆರವಣಿಗೆ ಮಾಡ್ತಿದ್ರು. ನಾವು ಶಾಲೆಗೆ ಹೋಗಿ ನಿಮ್ ಏರಿಯಾದಲ್ಲಿ ಎಷ್ಟ್ ದೊಡ್ಡ ಗಣಪತಿ ಕೂರ್ಸಿದ್ರು ಅಂತ ಕೇಳಿಕೊಂಡು ಕಡೆಗೆ ನಮ್ಮ ಏರಿಯಾದೇ ದೊಡ್ದು ಅಂತ ಸಾಬೀತು ಮಾಡಿಕೊಳ್ತಿದ್ವಿ! ಈಗ ಈ ನೆನಪುಗಳನ್ನೆಲ್ಲಾ ಆ ದಿನಗಳು ಪ್ರತಿಕ್ಷಣ ನನ್ನ ಒಳಗೆ, ಹಸಿರಾಗಿದೆ.... ಅಂತ ಮೆಲುಕು ಹಾಕಬೇಕು ಅಷ್ಟೇ. ಆಫೀಸಿನಲ್ಲಿ ಹಬ್ಬದ ದಿನ ಅಂತ ಸೀರೆಯುಟ್ಟು ಕೈತುಂಬಾ ಬಳೆ ತೊಟ್ಟು ಸಂಭ್ರಮಿಸಿದ್ರೆ ಅಲ್ಲಿಗೆ ಹಬ್ಬ ಮುಗೀತು. ಮನೆಯಿಂದ as usual ಒಂದು ಫೋನ್ ಕಾಲ್ ಬರುತ್ತೆ. ನಿನ್ನನ್ನ ಮಿಸ್ ಮಾಡ್ಕೊತಿದೀವಿ ಅಂತಾರೆ. ಏನೇನು ಅಡಿಗೆ ಅಂತ ಹೇಳಿ ಒಂದಷ್ಟು ಹೊಟ್ಟೆ ಉರಿಸಿ ಫೋನ್ ಇಟ್ರೆ, ಇಲ್ಲಿ ನನ್ನ ಸಂಕಟ ಅವರಿಗೆಲ್ಲಿ ಅರ್ಥವಾಗ್ಬೇಕು?

ಗಣೇಶನ ಹಬ್ಬದ ಹಿಂದಿನ ರಾತ್ರಿ ಕುಳಿತು ಈ ಎಲ್ಲಾ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತ ಈ ಲೇಖನವನ್ನು ಬರಿತಿದ್ದೀನಿ. ವಾಹ್ ಹಬ್ಬಗಳಂದ್ರೆ ಎಷ್ಟು ಚೆನ್ನ ಅಲ್ವಾ? ನನ್ನ ಪಿಜಿ ಹಿಂದಿನ ರಸ್ತೆಯೇ ಸಣ್ಣ ಮಾರ್ಕೆಟ್ ಆಗ್ಬಿಟ್ಟಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ರಸ್ತೆ ತುಂಬಾ ತುಂಬಿ ಹೋಗಿವೆ. ಅಲ್ಲಿ ಕಾಲಿಟ್ರೆ ಹೂಗಳ ಘಮ ಮನಸ್ಸಿಗೆ ಆಹ್ಲಾದ ನೀಡುತ್ತೆ. ನೂರು ರೂಪಾಯಿ ಗಡಿದಾಟಿರೋ ಹೂಮಾಲೆಗಳು ನಮ್ಮೂರಲ್ಲಿ ಎಷ್ಟು ಕಮ್ಮಿ ಅಲ್ವಾ ಅನ್ಸುತ್ತೆ. ಹಸಿರು ತೋರಣಕ್ಕಿಟ್ಟ ಮಾವಿನ ಎಲೆಗಳು ಮನೆಯಲ್ಲಿ ಅಪ್ಪ ತೋರಣ ಕಟ್ಟುವ ದೃಶ್ಯ ಕಣ್ಮುಂದೆ ತರಿಸುತ್ತವೆ. ಎಲ್ಲಾ ನೆನಪಾದ್ರೆ ಕಣ್ಣಂಚಲ್ಲೊಮ್ಮೆ ನೀರಾಡುವಂತೆ ಮಾಡಿಬಿಡ್ತವೆ. ಅದೇ ನಮ್ಮ ಮನೆಯ ಹಬ್ಬದ ಸೊಬಗಿನಲ್ಲಿರೋ ಸಂಭ್ರಮ ಕಣ್ರೀ. ಯಾರ್ಯಾರು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸಿದ್ರೋ ನೀವೇ ಅದೃಷ್ಟವಂತರು ಬಿಡಿ. ನನ್ನ ಅದೃಷ್ಟಕ್ಕೆ ನಮ್ಮ ಪಿಜಿಯಲ್ಲಿ ಕಡೇಪಕ್ಷ ಊಟಕ್ಕೆ ಹೋಳಿಗೆ ಮಾಡಿದ್ರೆ ಹೆಚ್ಚು. ಇಲ್ದಿದ್ರೆ ಇದ್ದೇ ಇದ್ಯಲ್ಲಾ? ಊರಿಂದ ಬರೋವಾಗ ನನ್ನ ಗೆಳತಿ ಅನುಷಾಳ ಅಮ್ಮ ಮರೆಯದೇ ನನಗೋಸ್ಕರ ಸಿಹಿತಿಂಡಿ ಮರೆಯದೇ ಕಳಿಸಿರ್ತಾರೆ. ಅದನ್ನೇ ಚಪ್ಪರಿಸೋದು.

ಬೆನಕ ಬೆನಕ ಏಕದಂತ, ಪಚ್ಚೆ ಕಲ್ಲು ಪಾಣಿ ಮೆಟ್ಲು, ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ, ಗುಡ್ಡಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಘ್ನೇಶ ದೇವನಿಗೆ 21 ನಮಸ್ಕಾರಗಳನ್ನು ಅರ್ಪಿಸುತ್ತಾ ನನ್ನ ಗಣೇಶನ ಹಬ್ಬದ ನೆನಪಿನ ಬುತ್ತಿಯನ್ನು ಪೂರ್ಣಗೊಳಿಸುತ್ತಿದ್ದೇನೆ. ಗಣೇಶ ನಿಮಗೆ ಶುಭವನ್ನೇ ಮಾಡಲಿ ಅಂತ ಹಾರೈಸುತ್ತೇನೆ.

3 comments:

karunesh said...

nice script... i remembered my school days., Thx

anusha said...

machi.....ondu copy namma PG auntige kalsbeku...

sapna said...

sure kalsana bidu!!!!