Sunday, October 18, 2009

ಹ್ಯಾರಿ ಪಾಟರ್ ಜಾದೂ ಜಗತ್ತಿಗೆ ಸ್ವಾಗತ...

ಮನುಷ್ಯ ಕಲ್ಪನಾಜೀವಿ. ಅವನ ಕಲ್ಪನೆಗಳಿಗೆ ಇತಿಮಿತಿಯೇ ಇಲ್ಲ. ಕಲ್ಪಿಸಿಕೊಂಡಷ್ಟೂ ಹೊಸತನ್ನು ಸೃಷ್ಟಿಸುತ್ತದೆ. ಯಾಕಂದ್ರೆ ಕಲ್ಪನೆ ಎಂಬುದೇ ಹಾಗೆ. ಇಲ್ಲಿ ಸುಂದರವಾದ ಕನಸಿನ ಲೋಕ, ಮಾಯಾ ಕಿನ್ನರಿ, ಊಹೆಗೂ ನಿಲುಕದಂತಹ ವಿಚಿತ್ರ ಮಾದರಿಯ ಜೀವಿಗಳು, ಹಾರುವ, ತೇಲುವ ಗಗನ ನೌಕೆಗಳು, ಮ್ಯಾಜಿಕ್ ಮಹಾಪೂರಗಳಿಂದ ಹಿಡಿದು ಭಯಾನಕ ಸನ್ನಿವೇಶಗಳು, ವಿಷಕಾರುವ ಹಾವುಗಳು, ಕಣ್ಣ ಮುಂದೆ ಕಾಡುವ ರಕ್ಕಸನ ಪ್ರಾಣವನ್ನು ಹಿಡಿದು ಮತ್ತೆಲ್ಲೋ ಅವಿತು ಕೂತ ಹಕ್ಕಿ ಹೀಗೆ ಹರಿಯುವ ಬಗೆಬಗೆಯ ಕಲ್ಪನಾ ಲಹರಿಗೆ ಕೊನೆಮೊದಲಿಲ್ಲ. ಇಂತಹ ಬಹಳಷ್ಟು ಕಥೆಗಳನ್ನು ಎಲ್ಲರೂ ಓದಿರ್ತೀವಿ, ಕೇಳಿರ್ತೀವಿ. ಇವುಗಳನ್ನು ಓದಿದಷ್ಟು ಸರಾಗವಾಗಿ ದೃಶ್ಯರೂಪದಲ್ಲಿ ನಿರೂಪಿಸಿ ಗೆಲ್ಲುವುದು ಸುಲಭವಲ್ಲ. ಆದ್ರೆ ಅದನ್ನು ಕಣ್ಣಿಗೆ ಕಟ್ಟುವಂತೆ ಅಕ್ಷರಗಳಲ್ಲಿ ಸೃಷ್ಟಿಸಿದ್ದನ್ನು ದೃಶ್ಯೀಕರಿಸಿ ಗೆದ್ದು ಮನೆಮಾತಾದ ಸಿನಿಮಾಗಳಲ್ಲಿ ಹ್ಯಾರಿ ಪಾಟರ್ ಗೆ ಅಗ್ರಸ್ಥಾನ. ಮೂಲತಃ ಪುಸ್ತಕ ರೂಪದಲ್ಲಿದ್ದ ಹ್ಯಾರಿ ಪಾಟರ್ ಕಾದಂಬರಿಯನ್ನು, ಅದು ಗಳಿಸಿದ ಜನಪ್ರಿಯತೆಯಿಂದ ದೃಶ್ಯರೂಪಕ್ಕೆ ತರಲಾಯಿತು. ನಿಜ ಹೇಳಬೇಕಂದ್ರೆ ಹ್ಯಾರಿ ಪಾಟರ್ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನ ಪಾತ್ರ.


ಹ್ಯಾರಿ ಪಾಟರ್ ಮೇಲೆ ಅಭಿಮಾನಿಗಳ ಪ್ರೀತಿಯನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟವೇ. ನನಗೂ ಹ್ಯಾರಿ ಪಾಟರ್ ಬಗ್ಗೆ ತಿಳಿಯುವ ಕುತೂಹಲ ಉಂಟಾಗಿದ್ದು ತೀರಾ ಇತ್ತೀಚೆಗೆ. ಇದಕ್ಕೂ ಮುನ್ನ ಸುದ್ದಿಗಾಗಿ ಸ್ಕ್ರಿಪ್ಟ್ ಬರೆಯಬೇಕೆಂಬ ಕಾರಣಕ್ಕಾಗಿ ಅದೊಂದು ಹಾಲಿವುಡ್ ಮೂವಿ ಅಂತ ಅಲ್ಪಸ್ವಲ್ಪ ತಿಳಿದುಕೊಂಡಿದ್ದೆ. ಆದ್ರೆ ಹ್ಯಾರಿ ಪಾಟರ್ ಎಂಬ ಜಗದ್ವಿಖ್ಯಾತ ಮಾಯಾಲೋಕದ ಬಗ್ಗೆ ನನ್ನ ಜ್ಞಾನ ಅತ್ಯಲ್ಪ ಅಂತ ಗೊತ್ತಾದದ್ದೇ ಆ ಸಿನಿಮಾ ನೋಡಿದ ಮೇಲೆ, ಪ್ರತಿಯೊಂದು ಪಾತ್ರವನ್ನು ಅದರ ಹಿನ್ನೆಲೆಯನ್ನು ತಿಳಿದ ಮೇಲೆ. ಅರೇ ಎರಡೂವರೆ ಗಂಟೆಯ ಸಿನಿಮಾ ವಿಷಯ, ಜ್ಞಾನದವರೆಗೂ ಬಂತಲ್ಲ! ಅದೇನು ಅಷ್ಟೊಂದು ಪ್ರಾಮುಖ್ಯತೆ ಅದಕ್ಕೆ ಅಂತ ನೀವು ಹುಬ್ಬೇರಿಸಬಹುದು. ಆದ್ರೆ ಈ ಹ್ಯಾರಿ ಪಾಟರ್ ಅನ್ನೋ ಕಾದಂಬರಿ/ಸಿನಿಮಾವನ್ನು, ಓದಿದ/ನೋಡಿದ ಮೇಲೆ ನಿಮಗೇ ತಿಳಿಯುತ್ತೆ ಅದೆಂತಹ ಮಾಯಾಲೋಕ ಅಂತ. ಯಾಕಂದ್ರೆ ಇದು ಬರೀ ಎಂಡೂವರೆ ಗಂಟೆ ನೋಡಿ ಎದ್ದು ಹೋಗುವ ಸಿನಿಮಾ ರೀತಿ ಅಲ್ಲ. ನಿಮ್ಮನ್ನು ತನ್ನೊಂದಿಗೇ ಆ ಲೋಕದೊಳಕ್ಕೆ ವಿಹರಿಸುವಂತೆ ಮಾಡುವ ಯಕ್ಷಲೋಕ. ಅಲ್ಲೊಮ್ಮೆ ಹೊಕ್ಕರೆ ಆ ಮಜವೇ ಬೇರೆ ಬಿಡಿ!

ಹ್ಯಾರಿ ಪಾಟರ್ ಬಗ್ಗೆ ಅಂತರ್ಜಾಲದಲ್ಲಿ ಒಮ್ಮೆ ಜಾಲಾಡಿದರೆ ಸುಸ್ತಾಗುವಷ್ಟು ಮಾಹಿತಿ ಮಹಾಪೂರವೇ ನಿಮ್ಮ ಮುಂದೆ ತಡವಿ ಬೀಳುತ್ತವೆ. ಆದ್ರೆ ಎಲ್ಲಾ ಇಂಗ್ಲಿಷ್ ನಲ್ಲೇ ಇರೋದ್ರಿಂದ ಕನ್ನಡದಲ್ಲಿ ತಿಳಿಯಲಿಚ್ಛಿಸುವವರಿಗೆ ಸ್ವಲ್ಪ ನಿರಾಶೆ ಖಂಡಿತ, ಆ ನಿರಾಶೆ ನನಗೆ ಸಾಕಷ್ಟು ಸಲ ಆಗಿದ್ದಕ್ಕೇ ಹೀಗೆ ಬರೆಯಲು ಮನಸ್ಸಾಯಿತು. ನಿಜವಾಗಿ ಹ್ಯಾರಿ ಪಾಟರ್ ಬಗ್ಗೆ ಏನಾದರೂ ಬರೆಯಬೇಕೆಂದು ತುಂಬಾ ಅನ್ನಿಸಿದ್ದು ಇದುವರೆಗೂ ಕನ್ನಡದಲ್ಲಿ ಹೆಚ್ಚಿನವರ್ಯಾರು ಆ ಪ್ರಯತ್ನ ಮಾಡದಿದ್ದದ್ದು. ಬರೆಯೋಕೆ ಇನ್ನೂ ಅತಿಮುಖ್ಯ ಸಂಗತಿಗಳು ಜಗತ್ತಿನಲ್ಲಿ ಸಾಕಷ್ಟಿವೆಯಲ್ಲ ಅನ್ನಿಸಿದ್ರೂ, ಹ್ಯಾರಿ ಪಾಟರ್ ಬಗ್ಗೆಯೂ ತಿಳಿಸುವ ಹಂಬಲ ನನ್ನ ಬ್ಲಾಗ್ ನಲ್ಲಿ ಈಡೇರುತ್ತಿದೆ ಅನ್ನೋ ಖುಷಿ ನನಗುಂಟು. ಈ ಮೂಲಕ ಹ್ಯಾರಿ ಮತ್ತು ಗೆಳೆಯರ ಮಾಯಾಪ್ರಪಂಚವನ್ನು ನಾನು ಅಕ್ಷರ ರೂಪದಲ್ಲಿ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.

ಈ ಹ್ಯಾರಿ ಪಾಟರ್ ಹುಟ್ಟು ಒಂದು ಕುತೂಹಲಕಾರಿ ಕಥೆ. ನೇರವಾಗಿ ಹ್ಯಾರಿ ಬಗ್ಗೆ ಹೇಳುವ ಮುನ್ನ ಲೇಖಕಿಯ ಬಗ್ಗೆ ಮೊದಲು ತಿಳಿಸುತ್ತೇನೆ. ಬ್ರಿಟನ್ ಮೂಲದ ಜೆ.ಕೆ.ರೋಲಿಂಗ್ ಕನಸಿನ ಕೂಸು ಹ್ಯಾರಿ ಪಾಟರ್. ಜೋನ್ ಜೋ ಮುರ್ರೀ ಇವರ ಪೂರ್ಣ ಹೆಸರು. ಆದ್ರೆ ಎಲ್ರಿಗೂ ಜೆ.ಕೆ.ರೋಲಿಂಗ್ ಅಂತಲೇ ಪರಿಚಿತರು. ರೋಲಿಂಗ್ ಜನಿಸಿದ್ದು 1965ರ ಜುಲೈ 31ರಂದು ಇಂಗ್ಲೆಂಡ್ ನ ಗ್ಲೌಸ್ಟರ್ ಶೈರ್ ಬಳಿಯ ಯೇಟ್ ನಲ್ಲಿ. ಪೀಟರ್ ಜೇಮ್ಸ್ ರೋಲಿಂಗ್ ಮತ್ತು ಆನಿ ರೋಲಿಂಗ್ ಇವರ ತಂದೆ ತಾಯಿ. ಡ್ಯಾನಿ ಎಂಬ ಓರ್ವ ತಂಗಿಯಿದ್ದು ರೋಲಿಂಗ್ ಅವರ ಪ್ರೈಮರಿ ಶಿಕ್ಷಣ ಸೆಂಟ್ ಮೈಕೆಲ್ಸ್ ಪ್ರೈಮರಿ ಶಾಲೆಯಲ್ಲಾಯ್ತು. ಪ್ರೌಢಶಿಕ್ಷಣ ವೀಡೀನ್ ಸ್ಕೂಲ್ ಆಂಡ್ ಕಾಲೇಜ್ ನಲ್ಲಾಯಿತು. ಎಕ್ಸೆಟರ್ ಯೂನಿವರ್ಸಿಟಿಯಲ್ಲಿ ಫ್ರೆಂಚ್ ಮತ್ತು ಸಾಹಿತ್ಯದಲ್ಲಿ ಬಿ.ಎ ಮಾಡಿದರು.