Monday, February 22, 2010

ತಾತ ಮಾಡಿದ ಅವಾಂತರ...!

ಬಹಳ ದಿನಗಳ ಬಳಿಕ ಬ್ಲಾಗ್ ಅಪ್ಡೇಟ್ ಮಾಡೋ ಮನಸ್ಸಾಗಿದೆ!

ಕಳೆದ ತಿಂಗಳು ಊರಿಗೆ ಹೋಗಿದ್ದೆ. ನಾನು ಬರ್ತಿದ್ದೇನೆ ಅಂತ ನನ್ನ ಆಂಟಿಯ ಮಗ ಕಾರ್ತಿಕ್ ಕೂಡ ಬಂದಿದ್ದ. ಇನ್ನು ನನ್ನ ತಂಗಿ. ನಾವೆಲ್ಲಾ ಸೇರಿಬಿಟ್ರೆ ಮುಗೀತು ಕಥೆ! ಸರಿ ೩ ದಿನ ರಜೆ ಇತ್ತು. ಎಲ್ಲಾದ್ರೂ ಸುತ್ತಕ್ ಹೋಗೋಣ. ಏನಾದ್ರು ಪ್ಲಾನ್ ಮಾಡು ಅಂತ ಮೊದ್ಲೇ ಹೇಳಿದ್ರು. ನಾನು ಕೂಡ ಧರ್ಮಸ್ಥಳಕ್ಕೆ ಹೋಗ್ಬೇಕು ಅಂತ ತುಂಬಾ ದಿನಗಳಿಂದ ಅನ್ಕೊಂಡಿದ್ದೆ. ಸರಿ ಮನೆಯವರೆಲ್ಲ ಹೊರಡೋದು ಅಂತ ಆಯ್ತು. ಸಂಜೆನೇ ಅಪ್ಪ ಗಾಡಿ ಬುಕ್ ಮಾಡ್ಸಿ, ಬರೋಕೆ ಹೇಳಿದ್ರು. ಆದ್ರೆ ನಾವು ಹೊರಡೋ ದಿನ ಮಾಮನ ಮಗ ಬಂದ ಅವನನ್ನು ಸಖತ್ ಫೋರ್ಸ್ ಮಾಡಿ ಹೊರ್ಡ್ಸಿದ್ ಆಯ್ತು. ಅವ್ನು ಮನೇಗ್ ಬಂದಾಗ ನಮ್ ತಾತ ಕೂಡ ಇದ್ರು. ನೀವೂ ಬನ್ನಿ ತಾತ ಅಂತ ಗಂಟು ಬಿದ್ವಿ. ನಮ್ ತಾತನ್ನ ಒಪ್ಪಿಸೋವಷ್ಟ್ರಲ್ಲಿ ಸಾಕು ಸಾಕಾಯ್ತು. ಅವ್ರು ಯಾರಿಗೋ ಏನೋ ಮಾಲು ಕೊಡ್ಬೇಕು ಅಂತ ಗೊಣಗುಡಲು ಶುರುಮಾಡಿದ್ರು. ನಾಳೆ ತಲುಪಿಸಿದರೆ ಆಯ್ತು ಬನ್ನಿ ಅಂತ ಸಮಾಧಾನ ಮಾಡಿದ್ವಿ. ಮನೆಗೆ ಹಿರಿಯರು. ಅವ್ರೆದುರೆ ನಾವು ನಾವೇ ಹೊರಟರೆ ಚೆನ್ನಾಗಿರಲ್ಲ. ಬೇಸರ ಮಾಡ್ಕೋಬಹುದು ಅನ್ನೋದು ನಮ್ ಉದ್ದೇಶ ಆಗಿತ್ತು ಅಷ್ಟೇ.


ಸರಿ ಸಂಜೆ ೭ರ ವೇಳೆಗೆ ಮನೆ ಮುಂದೆ ಗಾಡಿ ರೆಡಿ ಇತ್ತು. ದಾರಿ ಮಧ್ಯೆ ನಮ್ಮ ಬಾಲಿವುಡ್ ಹಾಡುಗಳ ಮಸ್ತಿ ಜೋರಾಗೆ ಇತ್ತು ಅನ್ನಿ. ಸಕಲೇಶಪುರದಲ್ಲಿ ತಾತನ ಮಾಮೂಲಿ ಅಡ್ಡ ಇದೆ. ಅಲ್ಲಿ ಬಿಸಿ ಬಿಸಿ ಅಕ್ಕಿ ರೊಟ್ಟಿ ಬೆಣ್ಣೆ ಚಪ್ಪರಿಸಿ ಬರೋದು ಅವ್ರಿಗೆ ಇಷ್ಟ. ಅವತ್ತು ರಾತ್ರಿ ನಮಗೆಲ್ಲ ಅಲ್ಲೇ ಊಟ. ಸರಿಯಾಗಿ ಬ್ಯಾಟಿಂಗ್ ಮಾಡಿದ್ವಿ. ರಾತ್ರಿ ಧರ್ಮಸ್ಥಳ ತಲುಪಿ ರೆಸ್ಟ್ ಮಾಡಿದ್ಮೆಲೇನೆ ಸ್ವಲ್ಪ ನೆಮ್ದಿ ಅನ್ಸಿದ್ದು. ಸರಿ ಬೆಳಗ್ಗೆ ೬-೪೫ಕ್ಕೆ ಸರಿಯಾಗಿ ದೇವಸ್ಥಾನದಲ್ಲಿ ದರ್ಶನ ಮಾಡೋದು ನಮ್ ಪ್ಲಾನ್ ಆಗಿತ್ತು. ಆದ್ರೆ ನಮ್ ತಾತ ಎದ್ದು ನಿಧಾನವಾಗಿ ರೆಡಿ ಆದ್ರು. ಟೈಮು ೭-೧೫! :( ದೇವರ ದಯೆ, ಬೇಗ ದರ್ಶನ ಆಯ್ತು. ಆದ್ರೆ ಆ ನೂಕು ನುಗ್ಗಲಲ್ಲಿ ನಮಗೆಲ್ಲ ನಮ್ ತಾತನ ಮೇಲೆ ನಿಗಾ ಇಡೋದೇ ದೊಡ್ಡ ಕೆಲಸ ಆಗ್ಬಿಟ್ಟಿತ್ತು.


ಅಷ್ಟೊತ್ತಿಗಾಗಲೇ ಬಿಸಿಲು ತನ್ನ ಕಾವು ಹೆಚ್ಚು ಮಾಡಿತ್ತು. ರಸ್ತೆಯಲ್ಲಿ ಕಾಲಿಟ್ರೆ ಸುಡು ಸುಡುವ ಅನುಭವ. ಮಧ್ಯಾಹ್ನ ಊಟಕ್ಕೆ ಹೋದಾಗಲೂ ನಮ್ ತಾತ ಆ ಗುಂಪಿನಲ್ಲಿ ನಮಗಿಂತ ೨-೩ ಸಾಲು ಹಿಂದೇನೆ ಸೇರಿ ಕುಳಿತಿದ್ರು. ಕೈ ತೊಳೆದು ಹೊರಡುವಾಗ ಅವ್ರು ನಮ್ ಜೊತೇನೆ ಇರ್ಬೇಕು ಕಣ್ರೋ. ಹುಷಾರು ಅಂತ ನಾವೆಲ್ಲ ಮೊದ್ಲೇ ತಾತನ ಮೇಲೊಂದು ಕಣ್ಣಿಟ್ಟೇ ಪ್ರಸಾದ ಸ್ವೀಕಾರ ಮುಗಿಸಿದ್ವಿ. ಆದ್ರೆ ನಮ್ ತಾತ ಇದ್ದಾರಲ್ಲ? ಅವ್ರು ಈ ಜಗತ್ತಿನ ಅತಿ ಕಿರಿಕ್ ವ್ಯಕ್ತಿಗಳಲ್ಲಿ ಟಾಪ್ ೧೦ ನಲ್ಲಿ ನಿಸ್ಸಂಶಯವಾಗಿ ಸ್ಥಾನ ಗಿಟ್ಟಿಸೋ ಅರ್ಹತೆ ಇರುವಂತಹವರು! ಅಲ್ಲೂ ಹೊರಗೆ ಹೋಗಲು ಎಲ್ಲರಿಗೂ ಇರುವ ಮಾರ್ಗ ಬಿಟ್ಟು ಕಾವಲಿನವರ ಹತ್ತಿರ ಹೋಗಿ short cut root ನಲ್ಲೆ ಹೊರ ನಡೆದರು. ನಾನು ಓಡಿ ಹೋಗಿ ಅವ್ರು ನಮ್ ತಾತ ಸ್ವಲ್ಪ ನಂಗು ಬಿಡಿ ಇಲ್ದಿದ್ರೆ ಮಿಸ್ ಆಗ್ತಾರೆ ಅಂದ್ರೆ, ಆತ ಇಲ್ರಿ ಆಗಲ್ಲ ಅಂತ ಖಡಕ್ ಆಗಿ ಹೇಳ್ಬಿಟ್ಟ . ಸರಿ ಬೇಗ ಹೊರ ನಡೆದು ತಾತನ್ನ ಕರ್ಕೊಂಡು ನಮ್ vehicle ಇದ್ದ ಕಡೆ ಹೊರಟ್ವಿ.


ಮೊದಲೇ ಚಪ್ಪಲಿ ಧರಿಸದೆ ಕಾಲು ಸುಡುತ್ತಿದ್ವು. ನೆರಳಿರೋ ಕಡೆ ಹಾಗೆ ಎಲ್ರು ಹೊರಟ್ವಿ. ಹಿಂದೇನೆ ಬರ್ತಿದ್ದ ತಾತ ನಾಪತ್ತೆ! ಇನ್ನೇನು ಇಲ್ಲೇ ಎಲ್ಲೋ ಇರ್ತಾರೆ ಅಂತ ಹುಡುಕೋಕೆ ನನ್ನ cousin ಹೋದ. ಎಲ್ಲೂ ಸಿಗ್ಲಿಲ್ಲ
ಅಂತ ಬರೋದಾ?...! ಇದೇನ್ ಹೀಗ್ ಹೇಳ್ತಿದಾನೆ ಅಂತ ನಮಪ್ಪ ಹೊರಟ್ರು ಹುಡ್ಕೋಕೆ. ಅವ್ರ ಕಣ್ಣಿಗೂ ನಮ್ ತಾತ ಕಾಣಲೊಲ್ಲರು!

ಹೇಳಿ ಕೇಳಿ ನಮ್ ತಾತ ಯಾವ್ದಾದ್ರು functions ಅಂತ ಒಟ್ಟಾಗಿ ಹೋದ್ರೆ ಊಟ ಮುಗ್ಸಿ ಕಾಲಿಗೆ ಬುದ್ಧಿ ಹೇಳೋ ಆಸಾಮಿ! ಆದ್ರೆ ತಮ್ಮ commitments ಅಂತ ಏನಾದ್ರು ಇದ್ರೆ ಮರೆಯೋ ಜಾಯಮಾನವೇ ಅಲ್ಲ ಅವ್ರದ್ದು. ಇದು ಕೆಲವೇ ವರ್ಷಗಳ ಹಿಂದಿನ ಮಾತು. ಪಟಪಟ ನಡೆಯುತ್ತಿದ್ರೆ ಬಿಸಿರಕ್ತದ ನಾವೂ ಅವ್ರನ್ನ ನಡಿಗೆಯಲ್ಲಿ ಸೋಲಿಸಲು ಉಸ್ಸಪ್ಪಾ ಅಂತಿದ್ವಿ. ಯಾಕೋ ಅವರನ್ನು ಹುಡುಕುತ್ತಾ ನಮ್ಗೆ ಇವೆಲ್ಲಾ ನೆನಪಾಯ್ತು. ನನ್ನ ಆಂಟಿ ಮಗ ಕಾರ್ತಿಕ್ ಅಂತೂ ಲೇ ಅವ್ರು ಬರೋದಿಲ್ಲಾ ಅಂತ ಎಷ್ಟು ಹೇಳಿದ್ರು ನಾವೇ ಬಲವಂತ ಮಾಡಿ ಕರ್ಕೊಂಡು ಬಂದ್ವಿ. ಈಗ ಹೀಗಾಯ್ತಲ್ಲೇ? ಥೂ ಅಂತ ತಲೆ ಚೆಚ್ಕೊಂಡ್ ಕೂತ! ಇದೆಲ್ಲಾ ಸಾಲ್ದು ಅಂತ ನನ್ನ ಸಹೋದ್ಯೋಗಿ ದಾಮು ತಮ್ಮ ಬೇರೆ ನಮ್ ಸ್ಥಿತಿ ಕೇಳಿ ಓಡೋಡಿ ಬಂದ್ರು ಸಹಾಯ ಮಾಡೋಕೆ. ಅವ್ರು ದೇವಸ್ಥಾನದ ಬಳಿ ಕಳೆದು ಹೋದವ್ರ ಪತ್ತೆಗೆ announce ಮಾಡೋವಲ್ಲಿಗೆ ಹೋಗಿ ಅದನ್ನೂ ಮಾಡ್ಸಿದ್ರು. ಆದ್ರೆ ನಮ್ ತಾತ ಕೇಳಿಸ್ಕೊಂಡ್ರೆ ತಾನೇ ಬರೋಕೆ?

ಸರಿ ನಾವು 3-30ರ ತನಕ ನೋಡಿದ್ವಿ. ನಮ್ ತಾತ ಬಿಲ್ ಕುಲ್ ಸಿಗೋ ಹಾಗೇ ಕಾಣ್ಲಿಲ್ಲ. ಏನೇ ಆಗ್ಲಿ ನಾವು ಅಂಥ ತಾತನ ಮೊಮ್ಮಕ್ಕಳು. ಹುಟ್ಟಿದಾಗಿಂದ ಇಲ್ಲಿವರ್ಗೂ ಅವರ ಇಂಥ ಅದೆಷ್ಟೋ ವರಸೆಗಳನ್ನು ನೋಡಿದ್ದೀವಿ! ಯಾಕೋ ಅವ್ರು ಈ ಧರ್ಮಸ್ಥಳದಲ್ಲಿ ಇರೋದೇ ಡೌಟು ಅನ್ಸೋಕ್ ಶುರುವಾಯ್ತು. ನನ್ cousins ಅಂತೂ ತಾತನ್ನ ನೆನಪು ಮಾಡ್ಕೊಂಡು ಬಿದ್ದು ಬಿದ್ದು ನಗ್ತಾರೆ ಬೇರೆ. ಇನ್ನು ಹುಡ್ಕಿ ಪ್ರಯೋಜನ ಇಲ್ಲಾ ಅನ್ಸಿ ನಾವು ವಾಪಸ್ ಹೊರಟೇ ಬಿಟ್ವಿ. ಅದೂ ಒಲ್ಲದ ಮನಸಲ್ಲಿ. ನಮ್ ಅಪ್ಪನಿಗೆ ಬಂದಿದ್ದ ಕೋಪ ಅಷ್ಟಿಷ್ಟಲ್ಲ. ನಿಮ್ ತಾತ ಕೈಗೆ ಸಿಕ್ರೆ.... ಅಂತ ಗೊಣಗುತ್ತಿದ್ದದ್ದು ಕೇಳಿಸಿದ್ರೂ ತೆಪ್ಪಗೆ ಕೂತಿದ್ವಿ. ಊರಿಗ್ ಹೋದ್ಮೇಲೆ ಅಲ್ಲೂ ನಮ್ ತಾತ ಬಂದಿಲ್ಲ ಅಂದ್ರೆ ಏನ್ ಉತ್ತರ ಕೊಡೋದು ಅಂತ ನಮ್ ಚಿಂತೆ. ಮಾರ್ಗ ಮಧ್ಯೆ ಸುರ್ಯ ದೇವಾಲಯಕ್ಕೊಂದು ವಿಸಿಟ್ ಕೊಟ್ವಿ. ಆದ್ರೆ ಯಾಕೋ ಮನಸ್ಸಿಗೆ ನೆಮ್ಮದಿ ಅನ್ನಿಸದು.

ಅಂತೂ ಸಂಜೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ದರ್ಶನ ಮುಗಿಸಿ ದೇವಾಲಯದ ಆವರಣದಲ್ಲಿ ಕುಳಿತ್ವಿ. ಯಾಕೋ ಬೇಜಾರು, ಹೀಗಾಯ್ತಲ್ಲಾ ಅಂತ. ಆದ್ರೆ ನನ್ ಕಸಿನ್ಸು ಲೇ ತಲೆ ಕೆಡಿಸ್ಕೋಬೇಡ ಕಣೇ. ನಮ್ ತಾತ ನಮ್ಗಿಂತಾ ಮುಂಚೇನೇ ಮನೆ ಸೇರೋ ಗಿರಾಕಿ. ಕೈಲಿ ದುಡ್ಡಿತ್ತು. ಯಾರಿಗೋ ಅದೇನೋ ತಲುಪಿಸ್ಬೇಕು ಅಂತ ಹಾರಾಡ್ತಿರ್ಲಿಲ್ವಾ? ಎಲ್ಲಿ ತನ್ ವ್ಯವಹಾರ ಕೈ ತಪ್ಪುತ್ತೋ ಅಂತ ಬೇಗ ಹೇಳ್ದೆ ಕೇಳ್ದೆ ಓಡೋಗಿದೆ ಅಷ್ಟೇ ಅಂತ ನಗೋಕೆ ಶುರು ಮಾಡಿ ರಿಲ್ಯಾಕ್ಸ್ ಮಾಡ್ತಿದ್ರು. ಸರಿ ಸಂಜೆ 5-30 ವೇಳೆಗೆ ಸುಮ್ನೆ ಮನೇಗೊಂದು ಕಾಲ್ ಮಾಡು ಅಂತ ಮಾಮನ ಮಗನಿಗೆ ಹೇಳ್ದೆ. ಅವ್ನು ಡೌಟಲ್ಲೇ ಫೋನ್ ಮಾಡಿ ಅವರಮ್ಮನ್ನ ವಿಚಾರಿಸಿದ್ರೆ ನಿಮ್ ತಾತ ಅರ್ಧ ಗಂಟೆ ಮೊದಲೇ ಬಂದು ಆರಾಮಾಗಿ ನಿದ್ರೆ ಮಾಡ್ತಿದ್ದಾರೆ ಅಂತ ಹೇಳಿದ್ರು ಅತ್ತೆ!

ಇದು ತಾನೇ ವರಸೆ? ನಮ್ ಸಂಕಟ ನಮ್ಗೆ, ನಮ್ ತಾತ ಕೊಟ್ಟ ತಾಪತ್ರಯಕ್ಕೆ ಬಂದಿದ್ದ ಕೋಪವೆಲ್ಲ ಮಂಗಮಾಯ! ಆದ್ರೂ ಊರಿಗ್ ಹೋದ್ಮೇಲೆ ನಮ್ದೇ ತಪ್ಪು ಅಂತ ವಾದಿಸೋ ನಮ್ ತಾತನ ಮತ್ತೊಂದು ಮುಖ ನೆನಪಿಸಿಕೊಂಡು ನಾವೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬಿಟ್ವಿ. ಮತ್ತಿನ್ನೆಲ್ಲೂ ಅವ್ರನ್ನ ಕರ್ಕೊಂಡು ಹೋಗೋ ಉಸಾಬರಿಗೆ ಕೈ ಹಾಕೋದು ಬೇಡ ಅಂತ ಸುಬ್ರಹ್ಮಣ್ಯದಲ್ಲಿ ಆಣೆ ಮಾಡಿಬಿಟ್ವಿ.

3 comments:

damodara dondole said...

thumba mast maja anubhava...idu manjunathana sannidiyalli tathana mahathme...yene agli nim thatha really full bindaas..i like u r thatha...super..pechige silukodu andre higrbeku..writing super..kelavu sentence thumba huidistu

sapna said...

thank u damu...

karthik said...

ha ha ha nange tumba nagu bartide mam...ede samaya dalli tatanige ondu song dedicate madtidini.....
"Aaramagi edde naanu neeve taane karkond hoggiddu".....
"Aare en aaeytu(tata) namge kopa bandittu.....