Saturday, June 26, 2010

Speed....ಆಕ್ಸಿಡೆಂಟ್....ಅಬ್ಬಾ!




ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಚಾಲನೆ ಮಾಡೋದಂದ್ರೆ ಅದೊಂದು ಸವಾಲೇ ಸರಿ. ಸದಾ ಗಿಜಿಗುಡುವ ರಸ್ತೆಗಳಲ್ಲಿ ಹುಷಾರಾಗಿ ಚಲಿಸುವುದಂದ್ರೆ ಹರಸಾಹಸ ಮಾಡಿದ ಹಾಗೆ. ನಾನು ಬೆಂಗಳೂರಿಗೆ ಬಂದ ಕೆಲ ತಿಂಗಳುಗಳ ಬಳಿಕ ಊರಿನಲ್ಲಿದ್ದ ನನ್ನ ಟೂ ವ್ಹೀಲರ್ ನ ಬೆಂಗಳೂರಿಗೆರಿಸಿಕೊಂಡೆ. ಮೊದಮೊದಲು ನನ್ನ ಅಕ್ಕಪಕ್ಕದಲ್ಲಿ ಯಾರಾದ್ರೂ ಸರ್್್್ ಅಂತ ಹಾದುಹೋಗ್ತಿದ್ರೆ ಬೆಚ್ಚುವಂತಾಗ್ತಿತ್ತು. ನಾನೆಷ್ಟೇ ಸೇಫಾಗಿ ಕಡಿಮೆ ಸ್ಪೀಡಲ್ಲಿ ಡ್ರೈವ್ ಮಾಡಿದ್ರೂ ಯಾಕೇ ಹೀಗೆ? ಅಂತ ಅನ್ಕೊಳ್ತಿದ್ದೆ. ಕ್ರಮೇಣ ಈ ರೀತಿ ಅಡ್ಡಾದಿಡ್ಡಿ ಹೋಗೋ ಸವಾರರ ಮಧ್ಯೆ ಡ್ರೈವ್ ಮಾಡೋದು ಅಭ್ಯಾಸ ಆಯ್ತು. ಒಂದ್ಸಲ ಅಂತೂ ನನ್ನ ಸಹೋದ್ಯೋಗಿ ಸುಕನ್ಯಾಳನ್ನ ಹಿಂದೆ ಕೂರಿಸಿಕೊಂಡು ಡ್ರೈವ್ ಮಾಡ್ತಿದ್ದೆ. ಅವಳೋ ಗಾಡಿ ಹತ್ತಿ ನನ್ನ ಭುಜವನ್ನು ಗಟ್ಟಿಯಾಗಿ ಹಿಡಿದು ಕೂತ್ರೆ ಇಳೀವಾಗಲೇ ಕೈ ತೇಗೀತಿದ್ದು! ಅಷ್ಟು ಹೆದರಿಕೆ ಅವಳಿಗೆ. ಆ ದಿನ ಸಂಜೆ ಇಬ್ರೂ ಆಫೀಸಿಂದ ವಾಪಸ್ಸಾಗ್ತಿದ್ವಿ. ಓಕಳಿಪುರಂ ಬ್ರಿಡ್ಜ್ ಕೆಳಗೆ ಹಾದುಹೋಗುವಾಗ ನನ್ನ ಪಕ್ಕ ಒಂದು ಅಂಬಾಸಿಡರ್ ಕಾರು, ಈ ಪಕ್ಕದಲ್ಲಿ ಒಬ್ಬ ಬುಲೆಟ್ ಸವಾರ. ಆ ಬುಲೆಟ್ ಸವಾರನಿಗೆ ಅದೆಂಥಾ ಆತುರವಿತ್ತೋ ದೇವರೇ ಬಲ್ಲ.



ನನ್ನ ಲೋ ಸ್ಪೀಡಿಗೆ ಅವನಿಗೆ ಅದೆಷ್ಟು ಕೋಪ ಬಂದಿತ್ತೋ, ನನ್ನನ್ನೇ ಗುರಾಯಿಸಿಕೊಂಡು ಹೋದ. ಇವ್ನಿಗೇನಾಯ್ತು ಹೀಗೆ ನೋಡೋಕೆ? ಅಂತ ಈ ಕಡೆ ತಿರುಗುವಷ್ಟರಲ್ಲಿ, ನಂಬಿದ್ರೆ ನಂಬಿ ನಮ್ಮ ಗಾಡಿಗೆ ಪಕ್ಕದ ಕಾರು ತಗುಲಿ ನಾವಿಬ್ರೂ ಬಿಎಂಟಿಸಿ ಬಸ್ಸೊಂದರ ಅಡಿಯಲ್ಲಿದ್ದೆವು. ನಾನು ಸತ್ತೆ ಅನ್ಕೊಂಡೇ ಬಿದ್ದೆ. ಅದೃಷ್ಟವಶಾತ್ ಹೆಲ್ಮೆಟ್ ಹಾಕಿದ್ರಿಂದ ತಲೆಗೆ ಪೆಟ್ಟಾಗಲಿಲ್ಲ. ಸುಕನ್ಯಳ ಕಾಲಿಗೆ ಸಣ್ಣ ಪೆಟ್ಟಾಯ್ತು. ಅವಳು ಬಂದು ನನ್ನ ಎತ್ತುತ್ತಿದ್ರೆ, ಆಗ ಉಸಿರು ಬಿಟ್ಟೆ, ಬ್ಬಾ! ಬದುಕಿದ್ದೀನಾ ಅಂತ. ಕೈ-ಕಾಲಿಗೆ ಸಣ್ಣದಾಗಿ ತರಚಿದ ಗಾಯವಾಗಿತ್ತು. ಮರುದಿನ ಇಬ್ರೂ ಆಫೀಸಿಗೆ ಚಕ್ಕರ್ ಹೊಡೆದು, ನಿಂಗೆಷ್ಟ್ ನೋವಾಗಿದೆ? ಗಾಯ ದೊಡ್ಡದಾಗಿದ್ಯಾ? ಅಂತೆಲ್ಲಾ ಫೋನಲ್ಲಿ ಉಭಯಕುಶಲೋಪರಿ ವಿಚಾರಿಸಿದ್ದೆವು! ಅದು ಸ್ವಂತ ವೆಹಿಕಲ್ ಕೊಂಡ 4 ವರ್ಷಗಳಲ್ಲಿ ನಾನು ಮಾಡಿದ್ದ ಮೊಟ್ಟ ಮೊದಲ ಅಪಘಾತವಾಗಿತ್ತು. ಸುಕನ್ಯ ನರಳಾಟಕ್ಕೆ ನನಗಂತೂ ಯಾಕಾದ್ರೂ ಇವ್ಳಿದ್ದಾಗ ಆಕ್ಸಿಡೆಂಟ್ ಆಯ್ತೋ ಅನ್ನಿಸಿಬಿಡ್ತು.



ಮೊನ್ನೆ ಬೆಳಗಿನ ಶಿಫ್ಟ್ ಇತ್ತು. ನಾನು ಬರೋ ದಾರಿಯಲ್ಲಿ ಬೆಳ್ಳಂಬೆಳಗ್ಗೆ ಆದ್ದರಿಂದ ಅಷ್ಟೊಂದು ವಾಹನ ಸಂಚಾರ ಇರ್ಲಿಲ್ಲ. ಆರಾಮವಾಗಿ ಬರ್ತಿದ್ದೆ. ಹಿಂದಿನಿಂದ ಯಾರೋ ಒಬ್ಬ ತನ್ನ ಕಿತ್ತು ಹೋದ ಬೈಕ್ ನಿಂದ ಕೆಟ್ಟ ಸೌಂಡ್ ನಲ್ಲಿ ಹಾರ್ನ್ ಬಜಾಯಿಸುತ್ತಲೇ ಇದ್ದ. ಅವನಿಗೆ ಮುಂದೆ ಹೋಗೋಕೆ ದಾರಿ ಇತ್ತು. ಆದ್ರೂ ಎದುರಲ್ಲಿ ಒಂದು ಹುಲ್ಲುಕಡ್ಡಿ ಇದ್ರೂ ಹಾರ್ನ್ ಹೊಡ್ಕೊಂಡೇ ಹೋಗೋ ಜಾಯಮಾನದವ್ರೂ ಇರ್ತಾರಲ್ಲ? ಇವ್ನು ಆ ವರ್ಗಕ್ಕೆ ಸೇರಿದವ್ನಿರ್ಬೇಕು ಅನ್ಕೊಂಡು ನನ್ನ ಪಾಡಿಗೆ ನಾನು ಮುಂದುವರಿದೆ. ಬಿರುಗಾಳಿ ಥರ ಮುನ್ನುಗ್ಗಿದ ಆ ಹುಡ್ಗ. ಥೂ ಇವ್ನ ಅಂತ ಬಯ್ಕೊಂಡೆ. ಎದುರಿದ್ದ ಸಿಗ್ನಲ್ ಜಂಪ್ ಮಾಡಿ ಬಿರುಗಾಳಿ ಥರ ಹೋಗೇಬಿಟ್ಟ. ಅಲ್ಲಿಂದ ಮುಂದಕ್ಕೊಂದು ಸಿಗ್ನಲ್. ಅವನಾಗ್ಲೇ ಆ ಸಿಗ್ನಲ್ಲೂ ದಾಟಿ ಪಕ್ಕದ ರಸ್ತೆಯಿಂದ ಮತ್ತಿನ್ನೆರಡು ಮಂಗಗಳನ್ನು ಹಿಂದೆ ಕೂರಿಸಿಕೊಂಡು ಮತ್ತದೇ ದರಿದ್ರ ವೇಗದಲ್ಲಿ ಹೋದ. ನಾನು ಮನಸಲ್ಲೇ ಅವನಿಗೆ ಶಪಿಸುತ್ತಾ ಗ್ರೀನ್ ಸಿಗ್ನಲ್ ಬಿದ್ಮೇಲೆ ಮುಂದಕ್ಕೆ ಹೋದೆ. ಮಲ್ಯ ಆಸ್ಪತ್ರೆ ಮುಂಭಾಗದಿಂದ ಹಾದು, ಕಂಠೀರವ ಕ್ರೀಡಾಂಗಣದ ಬಳಿ ಬರ್ಬೇಕು, ಅಲ್ಲೊಂದು ಬೈಕು ಉಲ್ಟಾ ಹೊಡೆದು ಬಿದ್ದಿತು. ತಕ್ಷಣ ಆ ಹುಡುಗ ನೆನಪಾ. ಓಹ್ ಇವನೇನಾ? ಅನ್ಕೊಂಡು ಹತ್ತಿರ ಹೋಗೋವಷ್ಟರಲ್ಲೇ ಅವ್ನು ಅಲ್ಲೇ ಪಕ್ಕದಲ್ಲಿ ಕಂಡ.



ಪಾಪಿ. ಯಾರೋ ಸಭ್ಯ ವ್ಯಕ್ತಿ ಹುಷಾರಾಗಿ ಹೋಗ್ತಿದ್ರೆ ಈ ತಲೆಕೆಟ್ಟ ಹುಡುಗ ಹಂಪ್ ಹಾರಿಸಿ ಡಿಕ್ಕಿ ಕೊಟ್ಟು ಬೀಳಿಸಿದ್ದಾನೆ. ಸಾಲದಕ್ಕೆ ಪಕ್ಕದಲ್ಲಿ ನಿಂತು ಕೆಟ್ಟದಾಗಿ ನಗುತ್ತಿದ್ದ. ನಾನು ಬೇಗ ಅತ್ತ ಹೋಗಿ ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವ್ನು ತನ್ನ ಲಟಕಾಸಿ ಗಾಡಿ ಸ್ಟಾರ್ಟ್ ಮಾಡ್ಕೊಂಡು ಮತ್ತದೇ ವೇಗದಲ್ಲಿ ಹೊರಟ. ಪಾಪ ಬೈಕ್ ನಿಂದ ಬಿದ್ದ ವ್ಯಕ್ತಿಗೆ ಕೈ ತರಚಿ ಗಾಯವಾಗಿತ್ತು. ಬೈಕ್ ನ ಮಿರರ್ ಒಡೆದಿತ್ತು. ಆ ವ್ಯಕ್ತಿಯ ತಪ್ಪೇನೂ ಇಲ್ಲದೆ ಈ ಘಟನೆ ನಡೆದದಕ್ಕೋ ಏನೋ ಅವ್ರು ದಂಗಾಗಿ ನಡುರಸ್ತೆಯಲ್ಲಿ ಬಿದ್ದಿದ್ದ ಬೈಕನ್ನೇ ನೋಡುತ್ತಾ ನಿಂತಿದ್ದರು. ನಾನು ಗಾಡಿ ನಿಲ್ಲಿಸಿ ಅವ್ರನ್ನು ಮಾತಾಡಿಸಿದೆ. ಯಾಕೆ ಅವ್ನನ್ನ ಹಾಗೇ ಬಿಟ್ರಿ? ತೆಗೆದು ನಾಲ್ಕು ತಟ್ಟಬಾರ್ದಾ? ಅಂತ ಕೇಳಿದೆ. ಅವ್ರು "ನೋಡಿ ಮೇಡಮ್ ನನ್ನ ಮಕ್ಳು ಈ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡೋಕೆ ಬರ್ತಾರೆ. ಅವರನ್ನು ವಾಪಾಸ್ ಕರ್ಕೊಂಡ್ ಹೋಗೋಣ. ಪಾಪ ಮಕ್ಕಳು ಕಾಯ್ತಿರ್ತಾರೇನೋ, ಏನ್ ಮಾಡ್ತಿದ್ದಾರೋ ಅಂತೆಲ್ಲಾ ಕಾಳಜಿಯಿಂದ ಬರ್ತಿದ್ರೆ ಈ ಹುಡುಗ ಹೀಗಾ ಮಾಡೋದು?" ಅಂತ ಒಂದೇ ಸಮ ಅಲವತ್ತುಕೊಂಡರು. ಪದೇ ಪದೇ "ನನ್ನ ಮಕ್ಕಳನ್ನು ಹುಷಾರಾಗಿ ಕರ್ಕೊಂಡ್ ಹೋಗೋಣ ಅಂತ ಬಂದಿದ್ದೆ ಮೇಡಮ್" ಅಂತ ಬೇಸರದಿಂದ ಹೇಳುತ್ತಿದ್ದರು. ಸರಿ ಸರ್ ಮೊದಲು ನಿಮ್ಮ ಬೈಕನ್ನು ಎತ್ತಿ ಸೈಡಿಗೆ ಹಾಕಿ ಅಂತ ಹೇಳಿದೆ. ನೀವು ಅವನು ಬಂದು ಗುದ್ದಿದಾಗ ಅವ್ನ ಮೂತಿಗೆರಡು ಗುದ್ದಿ ಕಳಿಸೋದು ಬಿಟ್ಟು ಹಾಗೇ ಬಿಟ್ರಲ್ಲಾ ಅಂದೆ. ಬೈಕ್ ಪಕ್ಕಕ್ಕಿಟ್ಟು ಮತ್ತೆ ವ್ಯಥೆಯಿಂದ ಮಾತನಾಡಿದ್ರು. ಆ ಕಮಂಗಿ ಆಗ್ಲೇ ಜಾಗ ಖಾಲಿ ಮಾಡಿದ್ದ. ಸರಿ ಇನ್ನೇನು ಮಾಡೋದು? ಅವರಿಗೆ ಸಮಾಧಾನ ಮಾಡಿ ಆಫೀಸಿನ ಕಡೆ ಹೊರಟೆ.



ಬೆಂಗಳೂರಲ್ಲಂತೂ ಈ ಟೂ ವ್ಹೀಲರ್ ನಲ್ಲಿ ಹೋಗೋ ಕೆಲವು ಪುಂಡರಿಗೆ ಲಗಾಮು ಹಾಕೋರೇ ಇಲ್ಲ. ಈ ಕಬ್ಬನ್ ಪಾರ್ಕ್ ಕಂಠೀರವ ನಡುವಿನ ಕಸ್ತೂರ ಬಾ ರಸ್ತೆ ಬಳಿ ಕೆಲವೊಮ್ಮೆ ಟ್ರಾಫಿಕ್ ಪೊಲೀಸರ ಇಂಟರ್ಸೆಪ್ಟರ್ ನಿಂತಿರೋದನ್ನ ನೋಡಿರ್ತೀರಿ. ಅತಿ ವೇಗದಲ್ಲಿ ಬರೋ ವಾಹನಗಳನ್ನ ಸುಮಾರು 1 ಕಿಮೀ ದೂರದಿಂದಲೇ ಪತ್ತೆ ಹಚ್ಚಿಬಿಡುತ್ತೆ ಇದು. ಅಂತಹ ವಾಹನಗಳು ಸಮೀಪಕ್ಕೆ ಬಂದಾಗ ಪೊಲೀಸರು ಈ ಸವಾರರನ್ನು ನಿಲ್ಲಿಸಿ ಫೈನ್ ಹಾಕಿ ಬುದ್ಧಿ ಹೇಳಿ ಕಳಿಸ್ತಾರೆ. ಅದೊಂದು ದಿನ ಕಂಠೀರವ ಸ್ಟೇಡಿಯಂ ರಸ್ತೆ ಬಳಿ ತಿರುವಿನಲ್ಲಿ ಹೋಗುವಾಗ ಕಾರ್ಪೊರೇಷನ್ ಕಡೆಯಿಂದ ಆರೆಕ್ಸ್ ಬೈಕ್ ನಲ್ಲೊಬ್ಬ ಬಿರುಗಾಳಿ ವೇಗದಲ್ಲಿ ಭರ್್್್ ಅಂತ ಹೋದ. ಯಾರಪ್ಪಾ ಇವ್ನು ಅನ್ಕೊಂಡು ಮುಂದೆ ನೋಡಿದೆ. ಸ್ವಲ್ಪ ಮುಂದಕ್ಕೆ ಹೋದ್ರೆ ಅಲ್ಲೇ ಇಂಟರ್ಸೆಪ್ಟರ್ ನಿಂತಿತ್ತು. ಪಕ್ಕದಲ್ಲೇ ಆ ಆರೆಕ್ಸ್ ರಾಜನ ಹತ್ರ ಫೈನ್ ಕಲೆಕ್ಷನ್ ಮಾಡ್ತಿದ್ರು! ನನಗಾದ ಪರಮಾನಂದ ಅಷ್ಟಿಷ್ಟಲ್ಲ!


ಆದ್ರೆ, ''spiid ill ಅಂದ್ರೆ ಲೈಫಲ್ಲಿ ಥ್ರಿಲ್ಲೇ ಇಲ್ಲ'' ಅನ್ನೋ ಭಂಡ ಸ್ಟೇಟ್ಮೆಂಟ್ ಕೊಡೋ ಇಂಥವ್ರು ಒಂದೋ ಹೀಗೆ ಫೈನ್ ತೆರ್ತಾರೆ, ಇಲ್ಲಾ ಕಂಡವರ ಜೀವಕ್ಕೆ ಎರವಾಗ್ತಾರೆ, . ಇಂತಹವರಿಗೆ ಬುದ್ಧಿ ಹೇಳಿ ತಿದ್ದೋರು ಯಾರು?



5 comments:

Anonymous said...

sakkath story...innu yavattu accident agadirali..shoki madorge bereyavara novu artha agalla..anthavarige buddi barbeku andre avru swathaha bilbeku..adre horn hakodu tappalla...

Anonymous said...

Damu Dondole

ವಿ.ರಾ.ಹೆ. said...

ಈ ಭರ್ರ್.. ಅಂತ ಬರೋರಿಗೆ ಬೇಕಂತಲೇ ಅಡ್ಡ ಹಾಕಿ ತೊಂದರೆ ಕೊಟ್ಟು ನೋಡಿ , ಏನ್ ಮಜಾ ಸಿಗತ್ತೆ ಗೊತ್ತಾ, ನಾನಂತೂ ಹಾಗೇ ಮಾಡೋದು.

But on the serious side of this, ಇಂತವರನ್ನ ಹಿಡಿದು ಫೈನ್ ಹಾಕ್ಬೇಕು , ಇಲ್ಲಾಂದ್ರೆ ಸರಿಯಾಗಿ ಚಚ್ಚಬೇಕು. ಹೋಗಿ ಮಾಡೋದು ಏನೂ ಇರಲ್ಲ, ಸುಮ್ನೆ ಸ್ಪೀಡ್ ಅಷ್ಟೆ ಇವರದ್ದು.

Siddesh Kumar H. P. said...

ಹೌದು... ನಾನು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿರುವಾಗ ನಾಲ್ಕೈದು ಬಾರಿ ಇಂತಹ ಥ್ರಿಲ್ಲರ್ ಗಳನ್ನ ನೋಡಿದ್ದೇನೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಅವರ ಜೊತೆಯಲ್ಲಿ ಬೇರೇಯವರ ಜೀವಕ್ಕೂ ಸಂಚಕಾರ ತಂದಿರುತ್ತಾರೆ.

ಇದೇ ರೀತಿ ನಮ್ಮ ಕಚೇರಿಯ ಹತ್ತಿರದ ನಂಜಪ್ಪ ಸರ್ಕಲ್ ಬಳಿ... ಸ್ಪೀಡಾಗಿ ಬಂದ ಒಬ್ಬ ಮಹಾಶಯ ಫುಟ್ ಪಾತ್ ನಲ್ಲಿ ನಡೆದು ಹೋಗುತ್ತಿದ್ದ ಒಬ್ಬ ಬಡ ಮಹಿಳೆಗೆ ಅಪಘಾತ ಮಾಡಿದ... ಪಾಪ ಅವಳು ನಾಲ್ಕೈದು ಮನೆಗೆಲಸ ಮಾಡಿ ತನ್ನ ಸಂಸಾರ ನಡೆಸುತ್ತಿದ್ದಳು. ಅಂದು ಅವಳಲ್ಲದ ತಪ್ಪಿಗೆ ಕಾಲು ಮುರಿಯುವಂತಾಯ್ತು.... ಇಂತಹ ಜಾಲಿ ರೈಡ್ ಮಾಡೋ ವಂತಹವರು ಇರೋ ಬದಲು ದಿನ ನಿತ್ಯ ಅಪಘಾತಗಳಾಗಿ ಸಾಯುವುದೇ ಮೇಲು....

Unknown said...

Usharrrrrrr, neevu a thappu madakke endduu hogabedi.